ಬೆಂಗಳೂರು : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಸಭಾಂಗಣದಲ್ಲಿ ಗುರುವಾರ ಪ್ರಜ್ಞಾ ಪ್ರವಾಹ,ಬೆಂಗಳೂರಿನ ವತಿಯಿಂದ ‘ಲೋಕ್,ಬಿಯಾಂಡ್ ಫೋಕ್’ ಪುಸ್ತಕವು ಲೋಕಾರ್ಪಣೆಗೊಂಡಿತು. ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಯೋಜಕರಾದ ಜೆ.ನಂದಕುಮಾರ್‌ರವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ.

“ಪೋಕ್ ಅನ್ನುವುದನ್ನು ಜಾನಪದ ಎಂದು ಅನುವಾದ ಮಾಡಲಾಗುವುದಿಲ್ಲ. ಲೋಕ ಅಥವಾ ಜಾನಪದ ಎನ್ನುವುದು ಬಹಳ ವಿಶಾಲ ಅರ್ಥ ಹೊಂದಿದೆ.ಅದನ್ನು ಫೋಕ್ ಎನ್ನುವ ಪದದಲ್ಲಿ ಕಟ್ಟಿಕೊಡುವುದು ಅಸಾಧ್ಯ. ಎಲ್ಲ ಭಾರತೀಯ ಭಾಷೆಗಳನ್ನು ಇಂಗ್ಲೀಷಿಗೆ ಅನುವಾದ ಮಾಡುವುದು ಸಾಧ್ಯವಿಲ್ಲ, ಅದು ತರವೂ ಅಲ್ಲ. ಉದಾಹರಣೆಗೆ ಧರ್ಮ ಎನ್ನುವುದನ್ನು ಅನುವಾದ ಮಾಡಲು ಸಾಧ್ಯವೇ?” ಎಂದರು.

ಅವರು ಮುಂದುವರೆದು ಮಾತನಾಡುತ್ತಾ “ಫೋಕ್ ಎನ್ನುವುದು ಕಲ್ಚರಲ್ ಮಾರ್ಕ್ಸಿಯನ್ ಟರ್ಮ್, ಅದರ ಯೂರೋಪಿನಲ್ಲಿ ಹುಟ್ಟನ್ನು ಗಮನಿಸಿದಾಗ ಆಳಕ್ಕೆ ತಿಳಿಯಬಹುದು. ಜರ್ಮನ್‌ ಭಾಷೆಯಲ್ಲಿರುವ ವೋಕ್‌ನ ಅರ್ಥ ನೇಷನ್.ಆದರೆ ಭಾರತದಲ್ಲಿ ಈ ಫೋಕ್ ಎನ್ನುವ ಪರಿಭಾಷೆಯನ್ನು ನೀಡಿ ವಸಾಹತುಸಾಹಿಗಳು ನಮ್ಮನ್ನು ಜಾನಪದ ಸಂಸ್ಕೃತಿಯಿಂದ ಒಡೆಯಲು ಭಾಗ ಮಾಡಿದರು. ನಮ್ಮ ಲೋಕ ಎನ್ನುವ ವಿಚಾರ ಫೋಕ್‌ಗಿಂತಲೂ ವಿಸ್ತಾರವಾದುದು.”

“ಲೋಕ್ ಅಥವಾ ಜಾನಪದ ಎನ್ನುವುದಕ್ಕೆ ಯಾವುದೇ ಜಾತಿ,ಮತ,ಪಂಥ,ಸ್ಥಳಗಳ ಹಂಗು ಇಲ್ಲ.ಯಾರು ಯಾವುದೇ ಪುಸ್ತಕಕ್ಕೆ ತೊಡಗಿಸಿಕೊಳ್ಳದೇ ಬದುಕುತ್ತಾರೋ ಅವರು ಜಾನಪದರು ಎಂದು ಹಿರಿಯ ಜಾನಪದ ಚಿಂತಕ ಹರಿಪ್ರಸಾದ್ ದ್ವಿವೇದಿ ಹೇಳುತ್ತಾರೆ. ಜಾನಪದರು ನಿಜವಾದ ಸಂಸ್ಕೃತಿಯ ಅಡಿಪಾಯ.ಇವರನ್ನು ಬರೀ ಫೋಕ್ ಎಂದು ಕರೆದರೆ ಇದೊಂದು ರೀತಿ ಭಾರತವನ್ನು ಇಂಡಿಯಾ ಎಂದು ಕರೆದಂತೆ.ಅದರಲ್ಲಿ ಸತ್ವ ಉಳಿಯುವುದಿಲ್ಲ.”

“ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನದಂದು ಪಂಚ ಪ್ರಾಣಗಳ ಕುರಿತು ಮಾತನಾಡಿದರು.ಅದರಲ್ಲಿ ಎರಡನೆಯದರ ಮೇಲೆ ಗಮನ ಸೆಳೆಯಲು ಬಯಸುತ್ತೇನೆ. ನಾವು ಭಾರತದಲ್ಲಿ,ನಮ್ಮೊಳಗೆ ಉಳಿದಿರುವ ಗುಲಾಮೀತನದ ವಸಾಹತುಶಾಹಿ ಮಾನಸಿಕತೆಯ ಸಣ್ಣ ಅಂಶವನ್ನು ಹೊರಗೋಡಿಸಬೇಕು.ಭಾರತವನ್ನು ಭಾರತವನ್ನಾಗಿ ರೂಪಿಸಲು ಇಂಗ್ಲೆಂಡ್‌ ನಮ್ಮ ವಿಚಾರಗಳಲ್ಲಿ ಇದ್ದರೆ ಸಾಧ್ಯವಿಲ್ಲ,ಹಾಗಾದರೆ ಇಂಡಿಯಾ ಸಮೃದ್ಧವಾಗಬಹುದು,ಆದರೆ ಭಾರತ ಸಮೃದ್ಧವಾಗಲು ಸಾಧ್ಯವಿಲ್ಲ. ಆದ್ದರಿಂದ ವಸಾಹತುಶಾಹಿ ಪ್ರಜ್ಞೆಯ ಲವಲೇಶವೂ ಉಳಿಯದಂತೆ ಕಳಚಬೇಕಿದೆ.”

“ವಸಾಹತುಶಾಹಿ ಪ್ರಜ್ಞೆ ನಮ್ಮೊಳಗೆ ಜಾಗೃತವಾದರೆ ಏನಾಗುತ್ತದೆ? ನಮ್ಮೊಳಗೆ ಅತ್ಯಂತ ಅಪಾಯಕಾರಿಯಾದ 6 ‘I’ಗಳು ಬಂದುಬಿಡುತ್ತದೆ. ಮೊದಲನೆಯದಾಗಿ ನಾವು ‘insensible’ಆಗಿಬಿಡುತ್ತೇವೆ. ಜೊತೆಗೆ ನಾವು ‘Ignorant’ ನಾವು ಅಜ್ಞಾನದ ದಾಸರಾಗಿ ಬಿಡುತ್ತೇವೆ.ಮೂರನೆಯದಾಗಿ ನಾವು ಭಾರತದ ಎಲ್ಲ ವಿಚಾರಗಳ ಕುರಿತು’ irrelevant’ ಆಗಿಬಿಡುತ್ತೇವೆ.ನಾಲ್ಕನೆಯದು ನಾವು ಭಾರತದ ಕುರಿತು ‘Illwilled’ಗಳಾಗಿ ಬಿಡುತ್ತೇವೆ.ಇದೆಲ್ಲದರ ಪರಿಣಾಮವಾಗಿ ನಮ್ಮೊಳಗೊಂದು ನಿಷ್ಕ್ರಿಯತೆ ‘inaction’ ಆರಂಭವಾಗುತ್ತದೆ.ಅದರ ಪರಿಣಾಮ ಸ್ವರೂಪವಾಗಿ ನಾವು ‘incompetent’ ನಿರ್ಬಲರೂ ಆಗಿ ಉಳಿದು ಬಿಡುತ್ತೇವೆ. ಹಾಗಾಗಿ ವಸಾಹತುಶಾಹಿ ಪ್ರಜ್ಞೆಯಿಂದ, ಆಕ್ರಮಣಕಾರರ ಪ್ರಭಾವದಿಂದ ಹೊರಬರಬೇಕಿದೆ.” ಎಂದು ಕರೆ ನೀಡಿದರು.

ಪುಸ್ತಕವನ್ನು ಕುರಿತು ಮಹಾದೇವಯ್ಯ ಅವರು ಪರಿಚಯ ಮಾಡಿಕೊಟ್ಟರು. ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಭಾಸ್ಕರನ್ , ಸಂಸ್ಕಾರ ಭಾರತಿಯ ರಾಜ್ಯ ಕಾರ್ಯದರ್ಶಿಗಳಾದ ಗುಬ್ಬಿಗೂಡು ರಮೇಶ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಹಿರಿಯ ಜಾನಪದ ಕಲಾವಿದರಾದ ಅಪ್ಪಗೆರೆ ತಿಮ್ಮರಾಜು,ಪ್ರಜ್ಞಾ ಪ್ರವಾಹದ ಕ್ಷೇತ್ರೀಯ ಸಂಯೋಜಕರಾದ ಶ್ರೀ ರಘುನಂದನ, ಶ್ರೀ ಪುನೀತ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.