ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತದ 2023 ನೇ ಇಸವಿಯ, ಪ್ರಥಮ ವರ್ಷ ಸಂಘಶಿಕ್ಷಾ ವರ್ಗವು ಮಂಡ್ಯದ ಕೊಮ್ಮೇರಹಳ್ಳಿಯಲ್ಲಿರುವ ವಿಶ್ವಮಾನವ ವಿದ್ಯಾಸಂಸ್ಥೆಯಲ್ಲಿ ಸಂಪನ್ನಗೊಂಡಿತು. ಈ ಸಮಾರೋಪ ಸಮಾರಂಭದಲ್ಲಿ ಕಳೆದ 21 ದಿನಗಳಿಂದ ಶಿಕ್ಷಾರ್ಥಿಗಳು ಕಲಿತ ವಿವಿಧ ಸಾಮೂಹಿಕ ಪ್ರದರ್ಶನವನ್ನು ಪ್ರಸ್ತುತಪಡಿಸಿದರು. ವೇದಿಕೆಯಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಗೌರವ ಕಾರ್ಯದರ್ಶಿ ಪುರುಷೋತ್ತಮಾನಂದ ನಾಥ ಸ್ವಾಮೀಜಿಯವರು, ಸಿದ್ಧಲಿಂಗೇಶ್ವರ ಆಶ್ರಮದ ಶಿವಾನಂದ ಪುರಿ ಸ್ವಾಮೀಜಿಯವರು, ವಿಶ್ರಾಂತ ನ್ಯಾಯಾಧೀಶರಾದ ಕೆ. ನಿಂಗೇಗೌಡ, ಪ್ರೊ.ಸ್ವಾಮೀಗೌಡ ಉಪಸ್ಥಿತರಿದ್ದರು. ಪ್ರಾಂತ ಸಹಕಾರ್ಯವಾಹರಾದ ಪಟ್ಟಾಭಿರಾಮ್ ಬೌದ್ಧಿಕ್ ಮಾಡಿದರು.

ನಿಂಗೇಗೌಡರು ಮಾತನಾಡುತ್ತಾ ಡಾ.ಹೆಡಗೇವಾರರ ಸಂಕಲ್ಪ ‘ಈ ಸಂಘಟಿತ ಸರಳ ಜೀವನ, ಸತ್ಚಾರಿತ್ರ್ಯಾ, ಉನ್ನತ ಧ್ಯೇಯ ಇರುವ ಸ್ವಯಂಸೇವಕರ ನಿರ್ಮಾಣ’ ಎನ್ನುತ್ತಾ; ಒಡಕಿಲ್ಲದೇ ತೊಡಕಿಲ್ಲದೇ ನಿರಂತರ ನಡೆಯುತ್ತಿರುವುದೇ ವಿಶೇಷ, ನಿಸ್ವಾರ್ಥ ಇದರ ವೈಶಿಷ್ಟ್ಯ ಎಂದರು.
ಕಾರ್ಯಕ್ರಮದಲ್ಲಿ ಪಟ್ಟಾಭಿರಾಮ ಅವರು ಮಾತನಾಡಿ ಸಂಘ ಕಾರ್ಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸಿ ಅವರೆಲ್ಲರೂ ಸಂಘಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂಬ ಅಪೇಕ್ಷೆ ಇದೆ ಎನ್ನುತ್ತಾ ಸಂಘದ ಸ್ಥಾಪನೆಯ ಉದ್ದೇಶ ಮತ್ತು ಸಂಸ್ಥಾಪಕ ಡಾ.ಹೆಡಗೇವಾರರ ದೃಷ್ಟಿಕೋನವನ್ನು ವ್ಯಕ್ತಪಡಿಸಿದರು. ದಾಸ್ಯಕ್ಕೆ ಕಾರಣವಾದ ಹಿಂದು ಸಮಾಜದ ಅಸಂಘಟಿತ ಸ್ಥಿತಿ ಮತ್ತು ಆತ್ಮ ವಿಸ್ಮೃತಿಯ ಸ್ಥಿತಿಗಳನ್ನು ವಿವರಿಸಿದರು.

ಧರ್ಮ ಎಂದರೆ ಎಲ್ಲವನ್ನೂ ಮತ್ತು ಎಲ್ಲರನ್ನೂ ಒಳಗೊಳ್ಳುವುದು. ಒಳ್ಳೆಯ, ಜಾಗೃತ, ಸಂಘಟಿತ ಸಮಾಜದ ನಿರ್ಮಾಣದ ಸಂಘದ ಗುರಿ. ಅವತಾರ ಪುರುಷರೂ ಮಾಡುತ್ತಿದ್ದ ನಿತ್ಯ ಉಪಾಸನೆಯನ್ನು ಸಂಘದ ನಿತ್ಯಕಾರ್ಯಕ್ಕೆ ತಳಕು ಹಾಕಿದ್ದು ನಿತ್ಯ ಶಾಖೆಯಲ್ಲಿ ಸಾಧನೆ ಮಾಡುತ್ತಿರುವ ಸ್ವಯಂಸೇವಕರ ಬದ್ಧತೆ. 98 ವರ್ಷಗಳಲ್ಲಿ ಮೂಡುತ್ತಾ ಬೆಳೆಯುತ್ತಾ ಬಂದ ಹಿಂದೂ ರಾಷ್ಟ್ರೀಯ ಕಲ್ಪನೆಯನ್ನು ವಿವರಿಸಿದರು; ಸಮಾಜದ ವಿವಿಧ ಸಾಂಸ್ಕೃತಿಕ- ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಿಂಬಿತವಾಗುತ್ತಿರುವ ಹಿಂದು ಸಂಕೇತಗಳು ಸಂಘಕಾರ್ಯದ ಪ್ರಭಾವ ಎಂದು ಅಭಿಪ್ರಾಯಪಟ್ಟರು.
ಸಂಘಟನಾತ್ಮಕ ಕ್ರಿಯಾಶೀಲ ಹಿಂದು ಸಮಾಜ ನಿರ್ಮಾಣ ಆಗುತ್ತಿರುವುದು ಸಂಘದ ಇನ್ನೊಂದು ಸಾಧನೆ. ಸ್ವಯಂಸೇವಕರು 1.75 ಲಕ್ಷ ಸೇವೆ ಮಾಡುತ್ತಿದ್ದಾರೆ; ಎಲ್ಲಾ ಸಾಮಾಜಿಕ ಕ್ಷೇತ್ರಗಳನ್ನು ತಲುಪಿದ್ದಾರೆ.
ಇನ್ನೂ ಉಳಿದಿರುವ ಕೆಲವು ಸಮಾಜದ ಅಸಂಘಟಿತ ಬಿಂದುಗಳನ್ನು ಜಾಗೃತಗೊಳಿಸಿ, ಸಂಘಟಿಸಿ, ಶಕ್ತಿಶಾಲಿಯನ್ನಾಗಿ ಮಾಡಬೇಕಿದೆ ಎಂದರು.

ಸಂಘಟಿತ ಸಮಾಜವೇ ಜಾಗತಿಕ ಸ್ಥಾನ ಪಡೆದುಕೊಂಡು ಎಲ್ಲ ಮುಖಗಳಲ್ಲಿ ವಿಕಾಸಗೊಳ್ಳುತ್ತಿದೆ.
ಭಾರತವನ್ನು ದುರ್ಬಲಗೊಳಿಸುವ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ವಿವಿಧ ಗಣ್ಯರು ವ್ಯಕ್ತಪಡಿಸಿದ ಸಂಘದ ಕಾರ್ಯಪರಿಣಾಮಗಳನ್ನು ಶ್ಲಾಘಿಸಿದರು.
ವಿಜ್ಞಾನ, ತಂತ್ರಜ್ಞಾನ, ಸೈನಿಕ ಶಕ್ತಿಯ ವಿಕಾಸವೂ ಸಂಘಟನಾತ್ಮಕ ಶಕ್ತಿಯ ಹೆಮ್ಮೆಯ ಸ್ವರೂಪ ಎಂದರು. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರದ ನಿರ್ಮಾಣ ನಮ್ಮ ಉದ್ದೇಶ ಎಂದು ವಿವಿಧ ಉದಾಹರಣೆಗಳಿಂದ ವಿವರಿಸಿದರು.
ಭಾರತ ಶಕ್ತಿಯಿಂದ ವಿಶ್ವಕಲ್ಯಾಣ ಮಾಡಲು ಸಾಧ್ಯ, ಇದು ಭಗವಂತನ ಕಾರ್ಯ ಎಂದರು.
