ರಾಷ್ಟ್ರೀಯ ಸ್ವಯಂಸೇವಕ ಸಂಘ
ಸಂಘನಿಕೇತನ, ಮಣ್ಣಗುಡ್ಡೆ, ಪ್ರತಾಪನಗರ, ಮಂಗಳೂರು
ದಿನಾಂಕ : 26-01-2013
ಪತ್ರಿಕಾ ಪ್ರಕಟಣೆ
ಭಾರತೀಯ ಜನಮಾನಸದಲ್ಲಿ ದೇಶಭಕ್ತಿ, ಸ್ವಾಭಿಮಾನದ ಜಾಗೃತಿಗಾಗಿ ಸಂಘಟಿತ ಪ್ರಯತ್ನವಾಗಿ ಆರಂಭವಾದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ. ೧೯೨೫ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಆರಂಭವಾದ ಸಂಘದ ಕಾರ್ಯಚಟುವಟಿಕೆ ೧೯೪೦ರ ದಶಕದಲ್ಲೇ ಮಂಗಳೂರು ಪ್ರದೇಶವನ್ನು ಪ್ರವೇಶಿಸಿತ್ತು. ೮ ದಶಕಗಳ ನಿರಂತರ ಪರಿಶ್ರಮದ ತಪಸ್ಸಿನ ಫಲವಾಗಿ ಮಂಗಳೂರು, ಉಡುಪಿ, ಪುತ್ತೂರು, ಕಾಸರಗೋಡು, ಕೊಡಗು ಪ್ರದೇಶದಲ್ಲಿ ಸಂಘಶಕ್ತಿ ಅಸಾಧಾರಣವೆಂಬಂತೆ ಹೊರಹೊಮ್ಮಿದೆ. ಬೈಂದೂರಿನ ಶಿರೂರು ಹೊಳೆಯಿಂದ ಕುಶಾಲನಗರದ ಕಾವೇರಿ ತಟದವರೆಗೆ ಹಬ್ಬಿರುವ ಸಂಘದ ಈ ಮಂಗಳೂರು ವಿಭಾಗದಲ್ಲಿನ ಶೇ. ೮೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಘದ ಕಾರ್ಯಚಟುವಟಿಕೆಯಿದೆ.
ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಾಸರಗೋಡು, ಮಂಜೇಶ್ವರ, ಮೂಡಬಿದ್ರೆ, ಬ್ರಹ್ಮಾವರ, ಮಂಗಳೂರು ಗ್ರಾಮಾಂತರ, ಮುಲ್ಕಿ ಸೇರಿದಂತೆ ಅನೇಕ ತಾಲೂಕುಗಳಲ್ಲಿ ಸಂಘದ ಕಾರ್ಯಚಟುವಟಿಕೆ ಎಲ್ಲ ಗ್ರಾಮಗಳಿಗೆ ಹಬ್ಬಿದೆ. ಪಶ್ಚಿಮ ಪಟ್ಟದ ತಪ್ಪಲಿನಲ್ಲಿರುವ ಬಾಂಜಾರು, ಎಳನೀರು, ಕೋಲೋಡಿ, ಈದು, ಹಳ್ಳಿಹೊಳೆಯಂತಹ ವನವಾಸಿ ಹಾಡಿಗಳಲ್ಲೂ ಸಂಘದ ’ನಮಸ್ತೇ ಸದಾ ವತ್ಸಲೇ…’ ಪ್ರಾರ್ಥನೆ ಅನುರಣಿಸುತ್ತಿದೆ.
ಸಂಘಟಿತ ಸಮಾಜ ಕಟ್ಟುವುದರೊಂದಿಗೆ2೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಲವು ರೀತಿಯ ಸಮಾಜಮುಖಿ ಚಟುವಟಿಕೆಗಳಿವೆ. ಸಂಪೂರ್ಣ ಜಲಸಾಕ್ಷರ ಗ್ರಾಮದ ಖ್ಯಾತಿಯ ಇಡ್ಕಿದು ಸೇರಿದಂತೆ ಕನ್ಯಾಡಿ, ಪಾಲ್ತಾಡಿ, ಗೋಳ್ತಮಜಲು, ನೇರಳಕಟ್ಟೆ ಇತ್ಯಾದಿ ಗ್ರಾಮಗಳು ಗ್ರಾಮವಿಕಾಸದ ಮುಂಚೂಣಿಯಲ್ಲಿವೆ.
ಶಿಕ್ಷಣ, ಸೇವೆ, ಸಹಕಾರ, ಧಾರ್ಮಿಕ, ರಾಜಕೀಯ ರಂಗಗಳಲ್ಲಿ ಸಂಘದ ಸ್ವಯಂಸೇವಕರು ಮಂಚೂಣಿಯಲ್ಲಿದ್ದು ಕಾರ್ಯನಿರತರಾಗಿದ್ದಾರೆ.
ವಿಜ್ಞಾನದಿಂದ ಆಧ್ಯಾತ್ಮದವರೆಗೆ ನಮ್ಮ ಅಸ್ಖಲಿತ ವಿಚಾರಗಳಿಂದ ಭಾರತವನ್ನು ಅನನ್ಯವಾಗಿ ಪ್ರಭಾವಿಸಿರುವ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮ ವರ್ಷಾಚರಣೆಯನ್ನು ವಿಶಿಷ್ಟ ರೂಪದಲ್ಲಿ ಸಂಘಟಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಳೆದ ಆರು ತಿಂಗಳಿಂದ ಸಿದ್ಧತೆ ನಡೆಸಿದೆ.
ಇದೇ ಫೆ. 3 ರಂದು ನಡೆಯಲಿರುವ ’ಸಾಂಘಿಕ್’ ರೂಪಗೊಂಡಿರುವುದು ಈ ಹಿನ್ನೆಲೆಯಲ್ಲಿ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ಜೀ ಭಾಗವತರವರು ‘ಸಾಂಘಿಕ್’ನಲ್ಲಿ ಪಾಲ್ಗೊಳ್ಳುತ್ತಿರುವುದು ಉತ್ಸಾಹದ ಸಿದ್ಧತೆ ಇಮ್ಮಡಿಗೊಳ್ಳಲು ಕಾರಣವಾಗಿದೆ.
ಯಾವುದೇ ಕರಪತ್ರ, ಬ್ಯಾನರ್, ಪೋಸ್ಟರ್ಗಳ ಮುದ್ರಣವಿಲ್ಲದೆ ಮನೆ, ಮನೆಯ ಭೇಟಿಯ ಮೂಲಕ ಈ ಬೃಹತ್ ಸಾಂಘಿಕ್ ರೂಪಗೊಳ್ಳುತ್ತಿದೆ. ಸಾಂಘಿಕ್ನಲ್ಲಿ ಪಾಲ್ಗೊಳ್ಳುವ ಸ್ವಯಂಸೇವಕರು ತಮ್ಮದೇ ವೆಚ್ಚದಲ್ಲಿ ’ಗಣವೇಷ’ ಎಂದೇ ಪರಿಚಿತವಾಗಿರುವ ಸಂಘದ ಸಮವಸ್ತ್ರ ಹೊಂದಿರಬೇಕು. ಈಗಾಗಲೇ ಬೈಂದೂರಿನಿಂದ ಕುಶಾಲನಗರದವರೆಗಿನ ಮಂಗಳೂರು ವಿಭಾಗದ ಎಲ್ಲ ೧೧೫೨ ಗ್ರಾಮಗಳನ್ನು ಸಂಘದ ಕಾರ್ಯಕರ್ತರು ತಲುಪಿದ್ದಾರೆ. ನೂರಾರು ಗ್ರಾಮಗಳಲ್ಲಿ ಪ್ರತಿ ಮನೆಯಿಂದಲೂ ಸ್ವಯಂಸೇವಕರು ಸಿದ್ಧಗೊಳ್ಳುತ್ತಿರುವುದು ವಿಶೇಷವೆನಿಸಿದೆ.
ಫೆ. 3ರ ಸಾಂಘಿಕ್ ಮಂಗಳೂರು ಸಮೀಪದ ಬಜ್ಪೆ ವಿಮಾನ ನಿಲ್ದಾಣದ ಮುಂಭಾಗ ಕೆಂಜಾರಿನ 65 ಎಕರೆ ಪ್ರದೇಶದಲ್ಲಿ ಮಧ್ಯಾಹ್ನ 3ಕ್ಕೆ ಸಮಾವೇಶಗೊಳ್ಳಲಿದೆ. ಮೈದಾನವನ್ನು ಸಮತಟ್ಟು ಮಾಡುವ ಕಾರ್ಯ ಪೂರ್ಣಗೊಂಡಿದ್ದು ಉಳಿದ ಸಿದ್ಧತೆಗಳು ಭರದಿಂದ ಸಾಗಿವೆ.
ಫೆ. 3 ರಂದು ಉಡುಪಿ, ಮಂಗಳೂರು, ಕಾಸರಗೋಡು, ಪುತ್ತೂರು, ಕೊಡಗು ಪ್ರದೇಶಗಳಿಂದ ಪ್ರವಾಹದಂತೆ ಹರಿದು ಬರಲಿರುವ ಸ್ವಯಂಸೇವಕರಿಗೆ ಹೊರವಲಯದಲ್ಲಿ ಪ್ರತ್ಯೇಕ ಭೋಜನ ಶಾಲೆ, ವಾಹನ ನಿಲುಗಡೆ ಸೇರಿದಂತೆ ಇಡೀ ಕಾರ್ಯಕ್ರಮದ ವಿವರವಾದ ನೀಲನಕ್ಷೆ ಸಿದ್ಧಪಡಿಸಲಾಗಿದೆ.
ಪತ್ರಕರ್ತರಿಗೆ ಆಮಂತ್ರಣ
ಫೆ. 3ರ ಈ ಸಾಂಘಿಕ್ ಹಾಗೂ ಸರಸಂಘಚಾಲಕರಾದ ಶ್ರೀ ಮೋಹನಭಾಗವತ್ರವರ ವಿಚಾರವನ್ನು ವರದಿ ಮಾಡಲು ಪತ್ರಕರ್ತರಿಗೆ ಈ ಮೂಲಕ ಆಮಂತ್ರಿಸಲಾಗಿದೆ. ಫೆ. 3ರಂದು ಮಧ್ಯಾಹ್ನ 2.30 ಹೋಟೆಲ್ ವುಡ್ಲ್ಯಾಂಡ್ಸ್ನಿಂದ ಪತ್ರಕರ್ತರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ.
ಫೆ. 1 ರಂದು ಮಧ್ಯಾಹ್ನ 3.30ಕ್ಕೆ ವಿಮಾನ ನಿಲ್ದಾಣದ ಎದುರಿನ ಕೆಂಜಾರು ಮೈದಾನದಲ್ಲಿನ ಸಿದ್ಧತೆ ಹಾಗೂ ಸಾಂಘಿಕ್ನ ವಿಶೇಷತೆಗಳನ್ನು ವಿವರಿಸಲು ಪತ್ರಿಕಾಗೋಷ್ಠಿ ಏರ್ಪಡಿಸಲಾಗಿದೆ. ಹೋಟೆಲ್ ವುಡ್ಲ್ಯಾಂಡ್ಸ್ನಿಂದ ವಾಹನ ವ್ಯವಸ್ಥೆ ಮಧ್ಯಾಹ್ನ 2.30ಕ್ಕೆ ಇರುತ್ತದೆ.
ದಯವಿಟ್ಟು ಬನ್ನಿ
ನಿಮ್ಮ ಸಹಕಾರ, ಸಹಯೋಗದ ನಿರೀಕ್ಷೆಯಲ್ಲಿ
(ಡಾ| ವಾಮನ ಶೆಣೈ)
ವಿಭಾಗ ಸಂಘಚಾಲಕ
ಸಂಪರ್ಕ ದೂರವಾಣಿ : 9480582027 / 9880621824