ವಿಭಿನ್ನ ಆಚಾರಗಳು ನಮ್ಮಲ್ಲಿದ್ದರೂ ನಾವೆಲ್ಲರೂ ಹಿಂದುಗಳೇ,ನಾವೆಲ್ಲರೂ ಒಂದೇ ಎಂಬ ಅರಿವು ನಮಗೆ ಮೂಡಬೇಕು.ನಮ್ಮ ರಾಷ್ಟ್ರೀಯತೆಯಿಂದಲೇ ನಮ್ಮನ್ನು ನಾವು ಗುರುತಿಸುವಂತೆ ಆಗಬೇಕು.ಆ ರೀತಿಯ ಚಿಂತನೆಯನ್ನು ನಮ್ಮಲ್ಲಿ ಮೂಡಿಸುವ ಉದ್ದೇಶದಿಂದ ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂಬುದಾಗಿ ಮಂಗಳೂರು ವಿಭಾಗ ಸಹ ಸಂಪರ್ಕ ಪ್ರಮುಖ ಶ್ರೀ ಗೋಪಾಲಕೃಷ್ಣ ಅವರು ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಭೆಯಲ್ಲಿ ಅವರು ಮಾತನಾಡುತ್ತಾ ಜಾತಿ ಪಂಥಗಳ ಭೇದಗಳನ್ನು ಬದಿಗೊತ್ತಿ ರಾಷ್ಟ್ರದ ಉನ್ನತಿಗಾಗಿ ತಮ್ಮನ್ನು ಸಮರ್ಪಿಸಿದ ಅನೇಕರು ನಮಗೆ ಪ್ರೇರಣೆ. ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಿದ ಸಂಘದ ಮೂರನೆಯ ಸರಸಂಘಚಾಲಕರಾದ ಬಾಳಾ ಸಾಹೇಬ್ ದೇವರಸ್ ಅವರ ಜನ್ಮ ಶತಾಬ್ದಿಯ ಸಂದರ್ಭದಲ್ಲಿ ಅವರ ಚಿಂತನೆಯನ್ನು ಸಾಕಾರ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.ನಮ್ಮ ಹಿರಿಯರ ಕನಸನ್ನು ನನಸು ಮಾಡುವ ಮಹತ್ವದ ಜವಾಬ್ದಾರಿ ಸಂಘದ ಸ್ವಯಂಸೇವಕರಾದ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ಕಾರ್ಯ ಮಾಡುವ ಸಂಕಲ್ಪವನ್ನು ತೊಡೋಣ ಎಂದು ಹೇಳಿದರು.
ಮಂಜೇಶ್ವರ ಎಸ್ ಎ ಟಿ ಪ್ರೌಢ ಶಾಲೆಯಲ್ಲಿ ನಡೆದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದ ಅಧ್ಯಕ್ಷತೆಯನ್ನು ಮಂಜೇಶ್ವರದ ಅನಂತೇಶ್ವರ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಡಾ|| ಅನಂತ ಕಾಮತ್ ವಹಿಸಿದ್ದರು. ಈ ಸಂದರ್ಭದಲ್ಲಿ ಶಿಬಿರಾಧಿಕಾರಿಗಳಾಗಿ ಎಸ್ ಎ ಟಿ ಪ್ರೌಢ ಶಾಲೆಯ ಶಿಕ್ಷಕರಾದ ಶ್ರೀ ಕಿರಣ್ ಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಗ್ರಾಮಾಂತರ ಜಿಲ್ಲೆಯ ಒಟ್ಟು 91ಸ್ವಯಂಸೇವಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.ಸಮಾರೋಪ ಸಭೆಯ ಆರಂಭದಲ್ಲಿ ಶಿಬಿರಾರ್ಥಿಗಳಿಂದ ಪಥಸಂಚಲನ ಹಾಗೂ ಆಕರ್ಷಕ ಶಾರೀರಿಕ ಪ್ರದರ್ಶನ ನಡೆಯಿತು