ಬೆಂಗಳೂರು: ಭಾರತೀಯ ಜೀವನಪದ್ಧತಿ ಸರ್ವ ಜನರ ಸರ್ವ ಹಿತವನ್ನು ಬಯಸುವುದಾಗಿದೆ. ಆದ್ದರಿಂದ ಭಾರತೀಯ ಜೀವನಮೌಲ್ಯಗಳನ್ನು ಕಲಿಸಿಕೊಡುವ ನಾಲ್ಕು ಕೇಂದ್ರಗಳಾದ ಮನೆ, ಶಾಲೆ, ಮಂದಿರ ಮತ್ತು ಸಮಾಜ ಸಮರ್ಥವಾಗಿ ಭಾರತೀಯ ಜೀವನಮೌಲ್ಯಗಳನ್ನು ಪಸರಿಸುವ ಕಾರ್ಯಮಾಡಬೇಕು ಎಂದು ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಮಂಥನ ಹೆಬ್ಬಾಳದ ರಜತ ಮಹೋತ್ಸವದ ಸಂದರ್ಭದಲ್ಲಿ ಗಂಗಾನಗರದ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿರುವ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ 301 ನೇ ತಿಂಗಳ ಕಾರ್ಯಕ್ರಮದಲ್ಲಿ ‘ಹಿಂದುತ್ವ – ಭಾರತೀಯ ಜೀವನದೃಷ್ಟಿ’ ವಿಷಯದ ಕುರಿತು ಅವರು ಮಾತನಾಡಿದರು.
ಭಾರತೀಯ ದೃಷ್ಟಿ ನಮ್ಮಿಂದ ನಮ್ಮ ಮಕ್ಕಳಿಗೆ ಸಿಗಬೇಕು. ಶಾಲೆಯಲ್ಲಿ ಮೌಲ್ಯಗಳನ್ನು ಅರಳಿಸುವ ಪ್ರಕ್ರಿಯೆಯಾಗಬೇಕು. ನಮ್ಮ ಮಂದಿರಗಳು ಜೀವನಮೌಲ್ಯಗಳನ್ನು ದಯಪಾಲಿಸುವ ಕೇಂದ್ರಗಳಾಗಬೇಕು. ಯಾವುದೇ ವ್ಯಕ್ತಿ ತಪ್ಪು ಮಾಡಿದಾಗ ಆತನನ್ನು ತಿದ್ದುವ ಕೆಲಸವನ್ನು ಸಮಾಜವೂ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ವೇದಗಳು, ಸ್ಮೃತಿಗಳು, ರಾಮಾಯಣ ಮಹಾಭಾರತದಂತಹ ಇತಿಹಾಸ ಗ್ರಂಥಗಳು ಸದಾಚಾರಕ್ಕೆ ಬೇಕಾದ ದೃಷ್ಟಿಕೊಡುತ್ತವೆ. ಸ್ಮೃತಿಗಳಲ್ಲಿನ ಕೆಲವು ವಿಷಯಗಳು ಇಂದಿಗೆ ಅಪ್ರಸ್ತುತವಾಗಿದ್ದರೂ ಹಲವು ವಿಷಯಗಳು ಸಾರ್ವಕಾಲಿಕ ಮಾರ್ಗದರ್ಶಿಯಾಗಿವೆ ಎಂದರು.
ಭಾರತೀಯ ವಿಕಾಸವಾದ ಪ್ರಕೃತಿಗೆ ಪೂರಕವಾಗಿದೆ. ಪಂಚಭೂತಗಳು, ನಮ್ಮ ಭಾಷೆಯ ಬೆಳವಣಿಗೆ ಇದಕ್ಕೆ ಉತ್ತಮ ಉದಾಹರಣೆ. ನಮ್ಮಲ್ಲಿರುವ ಚಿನ್ನದಂತಹ ಮೌಲ್ಯಗಳನ್ನು ಬಿಟ್ಟು ಉಳಿದವರೆಡೆಗೆ ನಾವು ಆಕರ್ಷಿತರಾಗುತ್ತಿದ್ದೇವೆ ಎಂದರೆ ನಮ್ಮ ಧರ್ಮದ ವಿಶ್ಲೇಷಣೆಯಲ್ಲಿ ತಪ್ಪಾಗಿದೆ ಎಂದರ್ಥ. ಕಲಿಯುಗದಲ್ಲಿ ಧರ್ಮ ಉಳಿಯಬೇಕಾದರೆ ಸಂಘಟನೆಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್ ಮಾತನಾಡಿ ನಮ್ಮ ವಿಜ್ಞಾನಿಗಳು ಸಕಲವನ್ನೂ ಸಾಧಿಸಬಲ್ಲ ಸಮರ್ಥರು. ಇಡೀ ಜಗತ್ತು ಯುದ್ಧದಲ್ಲಿ ಮೇಲುಗೈ ಸಾಧಿಸಲು ಬಾಹ್ಯಾಕಾಶ ಕ್ಷೇತ್ರವನ್ನು ಬಳಸಿಕೊಳ್ಳುತ್ತಿದ್ದಾಗ ಭಾರತ ಮಾತ್ರ ಜನರ ಏಳ್ಗೆಗಾಗಿ ಕಾರ್ಯನಿರ್ವಹಿಸಿತು ಎಂದು ನುಡಿದರು.
ಭಾರತ ದೇಶದ ಚಿಂತನೆಯ ಕ್ಷಮತೆಯಲ್ಲಿ ಕೊರತೆ ಇಲ್ಲ. ಕೋವಿಡ್ ಸಂದರ್ಭದಲ್ಲಿ ಭಾರತದ ಗಮನಾರ್ಹ ಸಾಧನೆ, ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಯೇ ಇದಕ್ಕೆ ನಿದರ್ಶನಗಳು. ತಂತ್ರಜ್ಞಾನದ ಅಭಿವೃದ್ಧಿಯ ಜೊತೆಗೆ ಅದರ ಉಪಯೋಗವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮನುಕುಲದ ಸಕಲ ಬೆಳವಣಿಗೆಯ ಮೂಲ ಪ್ರಕೃತಿ ಎನ್ನುವುದನ್ನು ಅರಿತು ಭಾರತ ಮತ್ತೆ ವಿಶ್ವಗುರುವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಂಥನ ಹೆಬ್ಬಾಳದ ಸಂಚಾಲಕ ಡಾ. ದೇವದಾಸ್ ಬಾಳಿಗ, ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಎಂ ಜಯಪ್ರಕಾಶ್, ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ಪ್ರಾಂತ ವ್ಯವಸ್ಥಾ ಪ್ರಮುಖ್ ವಾಮನ್ ನಾಯಕ್, ಸಹವ್ಯವಸ್ಥಾ ಪ್ರಮುಖ್ ಕಾ.ಶಂ. ಶ್ರೀಧರ್, ಬೆಂಗಳೂರು ಉತ್ತರ ವಿಭಾಗ ಸಂಘಚಾಲಕ ದ್ವಾರಕಾನಾಥ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
1998ರ ಅಕ್ಟೋಬರ್ ನಲ್ಲಿ ಪ್ರಾರಂಭಗೊಂಡ ಮಂಥನ ಹೆಬ್ಬಾಳ ವೈಚಾರಿಕ ವೇದಿಕೆಯು ನಿರಂತರವಾಗಿ ಪ್ರತಿ ತಿಂಗಳು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದೆ.