ಜ್ಞಾನವು ಭಾರತದ ಹೆಸರಿನಲ್ಲೇ ಅಡಕಗೊಂಡಿರುವ ಒಂದು ಮಹತ್ತ್ವದ ಸಂಗತಿ.

ಬೆಳಕಿನ ಅರ್ಥವಿರುವ ‘ಭಾ’ ಅಕ್ಷರವು ಸೂಚಿಸುವುದು ಜ್ಞಾನವನ್ನೇ ತಾನೇ. ಅದರಲ್ಲಿ ರಮಿಸುವ ದೇಶ ಎಂಬ ಧ್ವನಿ ಇರುವುದಲ್ಲವೆ ‘ಭಾರತ’ದಲ್ಲಿ!

ಜಗದೆಲ್ಲೆಡೆ ಆಧುನಿಕ ಜ್ಞಾನಶಾಖೆಗಳು ಬಹುವಿಸ್ತಾರವಾಗಿ ಹಬ್ಬಿ ದೊಡ್ಡ ಪಲ್ಲಟವನ್ನೇ ಉಂಟುಮಾಡುತ್ತಿವೆ.

ಭಾರತವೂ ಹಿಂದೆಬಿದ್ದಿಲ್ಲ. ಜ್ಞಾನಕ್ಷೇತ್ರದಲ್ಲಿ ಇಲ್ಲಿಯೂ ಉಳಿದೆಡೆಯೂ ಭಾರತೀಯರು ಗೈಯುತ್ತಿರುವ ಸಾಧನೆಯೇ ಭಾರತದ ಕುರಿತು ಮಾತಾಡುತ್ತಿದೆ.

ಜ್ಞಾನಕ್ಷೇತ್ರವು ಬೆಳೆದೂ ಬೆಳೆದೂ ದೇಶದ ಒಟ್ಟಾರೆ ಚಹರೆಯೇ ಬದಲಾದಂತಿದೆ. ಕೃಷಿಪ್ರಧಾನ ದೇಶವೆಂದು ಮಾನ್ಯವಾಗಿದ್ದ ಭಾರತದಲ್ಲಿ ಕೃಷಿಯ ಇಂದಿನ ಸ್ಥಿತಿ ನಿರಾಶಾದಾಯಕವಾಗಿಯೇ ಇದೆ.

ಕೃಷಿಗಿಲ್ಲದ ಒತ್ತು

ಕೃಷಿಯ ಈ ನಿರಾಶಾದಾಯಕ ಸ್ಥಿತಿಗೆ ಸರಕಾರದ ಉದ್ಯಮಪ್ರಧಾನ ನೀತಿಯೂ ಕಾರಣವಿದೆ ಎನ್ನುವುದು ವಾಸ್ತವವೇ. ಕೃಷಿಪ್ರಧಾನ ದೇಶದ ಆರ್ಥಿಕನೀತಿ ಕೃಷಿಕೇಂದ್ರಿತವಾಗಿರಬೇಕಾದುದು ಅತ್ಯಂತ ಸಹಜ. ಆದರದು ದಿನೇದಿನೇ ರೂಪುಗೊಳ್ಳತೊಡಗಿದ್ದು ಉದ್ಯಮಕೇಂದ್ರಿತವಾಗಿ. ಇದೀಗ ಮುಂದಿನ ಏಳೆಂಟು ವರ್ಷಗಳಲ್ಲಿ ದೇಶವು ಪ್ರಪಂಚದ ಎರಡನೆಯ ಅತಿದೊಡ್ಡ ಆರ್ಥಿಕಶಕ್ತಿಯಾಗಿ ರೂಪುಗೊಳ್ಳುವ ಸಾಧ್ಯತೆಯನ್ನು ತರ್ಕಿಸಲಾಗುತ್ತಿದೆ. ಇದೊಂದು ಹೆಮ್ಮೆಯ ವಿಷಯವೇ. ಆದರೆ ಇದರಲ್ಲಿ ಕೃಷಿಯ ಪಾಲು ಎಷ್ಟು ಎನ್ನುವುದು ತೌಲನಿಕವಾಗಿ ನಿರಾಸೆಯನ್ನೇ ಮೂಡಿಸಬಲ್ಲುದು. ಹದಿನೆಂಟನೆಯ ಶತಮಾನದಲ್ಲಿ ಭಾರತ ಜಗತ್ತಿನ ಪ್ರಬಲ ಆರ್ಥಿಕಶಕ್ತಿಯಾಗಿಯೂ ಮೈದೋರಿತ್ತು. ಮತ್ತಿದು ಒಂದೆರಡು ವರ್ಷಗಳ ವಿದ್ಯಮಾನವಾಗಿರದೆ ನಿರಂತರವಾಗಿ ಕಾಪಾಡಿಕೊಂಡು ಬರಲಾದ ಸ್ಥಿತಿಯಾಗಿತ್ತು. ಆ ಸ್ಥಿತಿಗೆ ದೊಡ್ಡ ಕೊಡುಗೆ ಸಂದುದು ಕೃಷಿಕ್ಷೇತ್ರದಿಂದ, ಗುಡಿಕೈಗಾರಿಕೆಗಳಿಂದ. ಆ ದಿನಗಳಲ್ಲಿ ಇದ್ದುದು ಆಹಾರದ ಬೆಳೆಯೇ ಪ್ರಧಾನವಾದ ಬೆಳೆ. ಆಂಗ್ಲರಿಂದ ಶಕ್ತಿಮೀರಿ ದೋಚಲ್ಪಟ್ಟ ಭಾರತವು ಸ್ವತಂತ್ರಗೊಂಡ ಬಳಿಕ ಇಂದು ಮತ್ತೆ ಆರ್ಥಿಕವಾಗಿ ಬಲಿಷ್ಠಗೊಳ್ಳತೊಡಗಿದೆ. ಅದರಲ್ಲಿ ಕೃಷಿಯ ಪಾಲು ತೌಲನಿಕವಾಗಿ ಕಡಮೆ ಇದೆ. ಅದರಲ್ಲಿಯೂ ಆಹಾರದ ಬೆಳೆಯ ಯೋಗದಾನವು ನಿಸ್ತೇಜವಾದುದು. ಸ್ವತಂತ್ರ ಉತ್ಪನ್ನಗಳನ್ನು ತಯಾರಿಸುವ ಗುಡಿಕೈಗಾರಿಕೆಗಳನ್ನು ಕೇಳುವವರೇ ಇಲ್ಲವಾಗಿದೆ.

ಕೃಷಿಕ್ಷೇತ್ರವು ನಿಸ್ತೇಜಗೊಂಡಿರುವುದಕ್ಕೂ ಜ್ಞಾನಕ್ಷೇತ್ರವು ಬಲಿಷ್ಠಗೊಂಡಿರುವುದಕ್ಕೂ ಒಂದು ಸಂಬಂಧ ಇದೆ.

ಬಿಡಿಸಬೇಕಾದ ನಂಟು

ಆಧುನಿಕ ಜ್ಞಾನಕ್ಷೇತ್ರವು ಪಶ್ಚಿಮದಿಂದ ಪ್ರಭಾವಿತವಾದುದು. ಆಧುನಿಕ ಉದ್ಯೋಗಕ್ಷೇತ್ರ ಕೂಡಾ.

ಇವೆರಡರ ನಡುವಿನ ನಂಟಿನಲ್ಲೇ ಇವೆರಡರ ಅಸ್ತಿತ್ವ ಇದೆಯೆಂಬಂತೆ ಇವೆರಡೂ ಇಂದು ಬೆಳೆದಿವೆ. ಬೃಹದಾಕಾರವಾಗಿ ಬೆಳೆದಿವೆ.

ಉದ್ಯಮವೂ ಬೃಹದಾಕಾರದ್ದು. ಜ್ಞಾನಕ್ಷೇತ್ರವೂ ಬೃಹದಾಕಾರದ್ದು.

ಬೃಹತ್ತು ಬೃಹತ್ತನ್ನೇ ಅಪ್ಪಿಕೊಳ್ಳುತ್ತದೆ ಎಂಬಂತೆ. ಉಳಿದದ್ದರ ಕಡೆ ದೃಷ್ಟಿಯನ್ನೇ ಹರಿಸದು ಎಂಬಂತೆ.

ಬೃಹತ್ತನ್ನು ಅಪ್ಪಿಕೊಂಡವನ ಲಕ್ಷ್ಯವೂ ಬೃಹತ್ತೇ.

ಜ್ಞಾನಪಡೆಯುವುದು ಉದ್ಯೋಗಕ್ಕಾಗಿ, ಉದ್ಯೋಗಮಾಡುವುದು ಸಂಬಳಪಡೆಯುವುದಕ್ಕಾಗಿ: ಇದೊಂದು ಮುಮ್ಮೊಗ ನಂಟು.

ಅಧಿಕಮೊತ್ತದ ಸಂಬಳಕ್ಕಾಗಿ ಬೃಹದುದ್ಯೋಗ, ಬೃಹದುದ್ಯೋಗಕ್ಕಾಗಿ ಪೂರಕವಾದ ಜ್ಞಾನ: ಇದು ಹಿಮ್ಮೊಗ ನಂಟು.

ಹೀಗೆ ಇಲ್ಲಿ ಕಲಿಕೆಗೂ ದುಡಿಮೆಗೂ ದೊಡ್ಡ ಮೊತ್ತದ ಬಯಕೆಗೂ ಒಂದು ಬಿಡಿಸಲಾಗದ ನಂಟಿದೆ.

ಈ ನಂಟನ್ನು ಬಿಡಿಸದೆ ಮೂರೂ ತಮ್ಮ ನಿಜವನ್ನು ಕಂಡುಕೊಳ್ಳುವುದು ಕಷ್ಟಸಾಧ್ಯವೇ ಸರಿ.

ಸಮಾಜಕೇಂದ್ರಿತ ವ್ಯವಸ್ಥೆ

ಬೃಹತ್ ಅಂದೆವು.

ಯಾವುದರಲ್ಲಿ ಬೃಹತ್; ಸೂತ್ರದಲ್ಲೇ, ಗಾತ್ರದಲ್ಲೇ, ಬಾಹ್ಯದಲ್ಲೇ, ಆಂತರ್ಯದಲ್ಲೇ, ಜ್ಞಾನದಲ್ಲೇ, ಮಾಹಿತಿಯಲ್ಲೇ..?

ಈಗಿನ ಜ್ಞಾನಕ್ಷೇತ್ರವು ನೀಡುವ ಜ್ಞಾನವನ್ನು ಪಡೆಯಲು ಭಾರೀ ರೊಕ್ಕವನ್ನು ತೆರಲೇಬೇಕು. ಎಷ್ಟೆಷ್ಟು ರೊಕ್ಕ ತೆರಲು ಸಾಧ್ಯವೋ ಅಷ್ಟಷ್ಟು ದೊಡ್ಡ ರೊಕ್ಕದ ಉದ್ಯೋಗವು ಲಭಿಸಲೂ ಸಾಧ್ಯ.

ಅಂದರೆ; ಕಲಿಯುವುದೇ ದುಡಿಯುವುದಕ್ಕಾಗಿ, ದುಡಿಯುವುದು ವೇತನಪಡೆಯುವುದಕ್ಕಾಗಿ ಎಂಬ ಸರಳ ಸಮೀಕರಣ.

ಕಲಿಕೆಯ ಉದ್ದೇಶ ಸತ್ಯವನ್ನು ಕಂಡುಕೊಳ್ಳಬಲ್ಲ ಜ್ಞಾನವನ್ನು ಪಡೆಯಲು. ದುಡಿಮೆಯ ಉದ್ದೇಶ ಸಮಾಜದಲ್ಲಿರುವ ಆವಶ್ಯಕತೆಗಳನ್ನು ಪೂರೈಸಲು. ತಾನೂ ಸಮಾಜದ ಒಂದಂಗವಾಗಿ, ತನ್ನ ದುಡಿಮೆಯೂ ಸೇರಿದಂತೆ ಎಲ್ಲರ ದುಡಿಮೆಯಿಂದ ಪೂರೈಸಲ್ಪಡುವ ಸಮಾಜದ ಆವಶ್ಯಕತೆಗಳಲ್ಲಿ ತನ್ನದೂ ಸೇರಿಕೊಳ್ಳುತ್ತದೆ ಎಂಬ ವಿಶ್ವಾಸವೇ ಬದುಕಾಗಿ ದಕ್ಕಬೇಕಾದುದು.

ಪ್ರಾಯಶಃ ಇದು ಸಂಕೀರ್ಣ ಸಮೀಕರಣ. ಹಿಂದೆ ಇದೇ ಬದುಕಾಗಿದ್ದಿರಬೇಕು. ಅಂಥ ಬದುಕು ಸರಳವಾಗಿತ್ತು. ಈಗ ಇದೆಲ್ಲ ಅಕಲ್ಪನೀಯ ಎನ್ನುವಷ್ಟು ಕಾಲ ಸರಿದಿದೆ.

ಬೃಹತ್ತಾಗಿರುವುದು ಬಯಕೆಗಳು. ಅವು ಬಾಹ್ಯ ಬದುಕನ್ನು ಬೃಹತ್ತಾಗಿಸಿಯಾವು, ಆಂತರ್ಯವನ್ನು ಸುತರಾಂ ಅಲ್ಲ.

ಅಹಂಕಾರದ ಕಟ್ಟೋಣ

ತಾನು ದೊಡ್ಡ ಮೊತ್ತದ ರೊಕ್ಕವನ್ನು ಸಂಪಾದಿಸಬಲ್ಲೆ, ಸಂಪಾದನೆಯ ದಾರಿ ತೋರಿಸಬಲ್ಲೆ ಎಂಬ ಅಹಂಕಾರ ಜ್ಞಾನಕ್ಷೇತ್ರಕ್ಕೆ. ತಾನು ದೊಡ್ಡ ಮೊತ್ತದ ರೊಕ್ಕವನ್ನು ನೀಡಬಲ್ಲೆ ಎಂಬ ಅಹಂಕಾರ ಉದ್ದಿಮೆಗೆ. ದೊಡ್ಡ ರೊಕ್ಕದ ಬಯಕೆಯುಳ್ಳವನದು ಇವೆರಡರ ಜತೆಗೆ ಗಾಢ ನಂಟು.

ಅಹಂಕಾರದ ಈ ಬೃಹತ್ ಕಟ್ಟೋಣದಲ್ಲಿರುವುದು ಒಂದು ಸಲ್ಲದ ಮೇಲರಿಮೆ.

ಒಂದರ ಮೇಲರಿಮೆ ಸ್ಥಾಪಿತವಾಗುವುದೇ ಮತ್ತೊಂದರ ಕೀಳರಿಮೆಯ ಮೇಲೆ.

ಯಾವುದು ಮೊದಲು, ಯಾವುದು ನಂತರ ಎಂಬುದಕ್ಕಿಂತ ಒಂದರಿಂದಾಗಿ ಮತ್ತೊಂದು ಎಂಬ ಚಿತ್ರಣ ಇಲ್ಲಿ ಸ್ಪಷ್ಟವಿದೆ.

ದೊಡ್ಡ ರೊಕ್ಕ ತಂದುಕೊಡುವುದಕ್ಕೆ ಮೇಲರಿಮೆ ಅಡರಿದಾಗ ಕನಿಷ್ಠ ರೊಕ್ಕ ತಂದುಕೊಡುವುದಕ್ಕೆ ಕೀಳರಿಮೆ ಉಂಟಾಗಲಿಕ್ಕೇ ಬೇಕು.

ಉದ್ದಿಮೆ ದೊಡ್ಡ ರೊಕ್ಕ ತಂದುಕೊಡುತ್ತದೆ. ಕೃಷಿಯಿಂದ ಸಾಧ್ಯವಾಗುವುದು ಅಲ್ಪ ಸಂಪಾದನೆ.

ಉದ್ಯಮದ ನುಂಗಣ್ಣನೀತಿ

ಕೆಲವು ಸಮಯದ ಹಿಂದೆ ಒಂದು ಸಲ್ಲದ ನಂಬಿಕೆ / ಅಂತರ ಮನೆಮಾಡಿತ್ತು; ಅದು ನಗರ ಮತ್ತು ಹಳ್ಳಿಗಳಿಗೆ ಸಂಬಂಧಿಸಿ. ನಗರಿಗರು ತಿಳಿದವರು, ಹಳ್ಳಿಗರು ತಿಳಿಯದವರು ಎಂಬ ನಂಬಿಕೆ! ನಗರಿಗರಲ್ಲಿ ಒಂದು ಸಲ್ಲದ ಮೇಲರಿಮೆ. ಹಳ್ಳಿಗರಲ್ಲಿ ಒಂದು ಅನವಶ್ಯ ಕೀಳರಿಮೆ.

ಇದರ ಅಡಿಪಾಯವಾಗಿದ್ದುದು ದುಡ್ಡಿದ್ದವರು ತಿಳಿದವರು, ಇಲ್ಲದವರು ಅಜ್ಞರು ಎಂಬ ಮೂರ್ಖ ನಂಬಿಕೆ.

ಕಾಲಕ್ರಮದಲ್ಲಿ ಅದೇನೋ ಕನಿಷ್ಠಗೊಂಡಿತು. ಇದೀಗ ಅದೇ ರೋಗ ಮತ್ತೊಂದು ರೂಪದಲ್ಲಿ ವಕ್ಕರಿಸಿದೆ. ಉದ್ದಿಮೆಗಳಲ್ಲಿ ದುಡಿಯುವುದು ಶ್ರೇಷ್ಠ, ಕೃಷಿಯಲ್ಲಿ ತೊಡಗುವುದು ಕನಿಷ್ಠ ಎಂಬ ಮನೋರೋಗವದು.

ಈ ರೋಗಕ್ಕೂ ಅಡಿಪಾಯ ಮತ್ತದೇ ರೊಕ್ಕದ ಪ್ರಮಾಣ.

ಕಾಕತಾಳೀಯ ಎಂಬಂತೆ ಉದ್ದಿಮೆಗಳು ನಗರಕೇಂದ್ರಿತವಾಗಿವೆ, ಕೃಷಿಯಿರುವುದು ಹಳ್ಳಿಗಳಲ್ಲಿ. ಒಂದೊಮ್ಮೆ ಉದ್ದಿಮೆಗಳು ಹಳ್ಳಿಗಳನ್ನು ನುಂಗಿ ಕೆಲಸಕ್ಕೆ ತೊಡಗಿದರೂ ಅವುಗಳ ನಿರ್ವಹಣೆ ನಗರದಿಂದಲೇ ಆಗುತ್ತಿರುತ್ತದೆ. ಅವು ಹಳ್ಳಿಗಳಿಗೆ ಸರಿಯುವುದು ಕೇವಲ ಸ್ಥಳಾವಕಾಶವನ್ನು ಕಂಡುಕೊಳ್ಳಲಷ್ಟೆ.

ಉದ್ದಿಮೆಗಳು ಒಂದೋ ಕೃಷಿಭೂಮಿಯನ್ನು ನುಂಗುತ್ತಿವೆ ಇಲ್ಲವೇ ಕೃಷಿಯನ್ನು ತಮಗೆ ಅನುಕೂಲವಾಗಿ ಬದಲಿಸಿವೆ.

ರೊಕ್ಕಕ್ಕೆ ಎಂಥವರನ್ನೂ ಬದಲಿಸುವ ಸಾಮರ್ಥ್ಯ ಇದೆ. ರೊಕ್ಕದ ಅಹಂಕಾರವುಳ್ಳ ಉದ್ದಿಮೆಗಳು ತಮಗೆ ಬೇಕಾದುದನ್ನು ಬೆಳೆಯುವಂತೆ ಕೃಷಿಕರಿಗೆ ಆಮಿಷವನ್ನೂ ಒತ್ತಡವನ್ನೂ ಒಡ್ಡುವುದು ಸಹಜವೇ ಇದೆಯಷ್ಟೆ.

ಉದ್ದಿಮೆಯಿಂದ ಪ್ರೇರಿತವಾಗಿಯೋ ಆಯ್ಕೆ-ಅವಕಾಶಗಳ ಕಾರಣದಿಂದಾಗಿಯೋ ಕೃಷಿ ಅರ್ಥಮುಖಿಯಾಗಿದೆ.

ರೊಕ್ಕದ ಕೃಷಿ!

ಕೃಷಿ ಎಂದರೆ, ನಿಜಕ್ಕಾದರೆ ಆಹಾರದ ಬೆಳೆಯನ್ನು ಬೆಳೆಯುವ ಒಂದು ಪ್ರಕ್ರಿಯೆ.

ವಿಜ್ಞಾನಿಗಳೂ ಊಹಿಸುವುದೇನೆಂದರೆ; ಆದಿಮಾನವ ಗೆಡ್ಡೆಗೆಣಸು ಹಣ್ಣು ಇತ್ಯಾದಿ ನಿಸರ್ಗದಲ್ಲಿ ಲಭ್ಯವಾಗುತ್ತಿದ್ದ ಹಸಿಯಾದ ಆಹಾರವಸ್ತುಗಳನ್ನೇ ಸ್ವೀಕರಿಸುತ್ತಿದ್ದ. ಕ್ರಮೇಣ ಆಹಾರಬೆಳೆಗಳನ್ನು ಬೆಳೆಯಲು ಕಲಿತ, ಬೇಯಿಸಿ ತಿನ್ನಲು ಕಲಿತ..

ಕೃಷಿಯ ಉಪಕ್ರಮವಾದುದೇ ಆಹಾರದ ಬೆಳೆಯನ್ನು ಬೆಳೆಯಲು. ಇದರಲ್ಲಿ ಮುಖ್ಯ ಆಹಾರದ ಬೆಳೆ, ಉಪಬೆಳೆ, ಕಾಯಿಪಲ್ಲೆ ಇತ್ಯಾದಿ ವಿಂಗಡಣೆಗಳಿದ್ದೇ ಇವೆ. ಕ್ರಮೇಣವಾಗಿ ಆಹಾರಕ್ಕೆ ಬಳಕೆಯಾಗುವ ಎಲ್ಲ ಬೆಳೆಗಳ ಕೃಷಿಯೂ ಸಾಧ್ಯವಾಗಿರಬೇಕು.

ಆಹಾರಕ್ಕೆ ಬಳಕೆಯಾಗದ ಯಾವುದೇ ಬೆಳೆಯನ್ನು ಕೃಷಿಯೆಂದು ಪರಿಗಣಿಸುವ ಮಾನಸಿಕತೆ ರೂಪುಗೊಂಡುದು ತೀರಾ ಈಚೆಗೆ ಇರಬೇಕು.

ಈಗಂತೂ ಈ ನಿಟ್ಟಿನಲ್ಲಿ ಮಾಡಿಕೊಂಡ ಕೃಷಿಬೆಳೆಯ ವಿಂಗಡಣೆಯು ಅಚ್ಚರಿಯನ್ನು ಮೂಡಿಸುತ್ತದೆ; ಆಹಾರದ ಬೆಳೆ ಮತ್ತು ವಾಣಿಜ್ಯ ಬೆಳೆ. ವಾಣಿಜ್ಯ ಬೆಳೆ ಎಂಬ ನಾಮಕರಣದಲ್ಲೇ ಅದು ರೊಕ್ಕತಂದುಕೊಡುವ ವಾಸನೆ ಇದೆ. ಅದಕ್ಕೆ ಪರ್ಯಾಯವೆಂಬಂತೆ ಬಿಂಬಿತವಾದ ಆಹಾರದ ಬೆಳೆಯು ಯಾವುದೇ ರೊಕ್ಕವನ್ನು ತಂದೀಯಲಾರದು ಎಂಬ ಧ್ವನಿಯೂ ಜತೆಜತೆಗೇ ಇದೆ. ಮತ್ತದು ಸರಕಾರಗಳ ಕುನೀತಿಯಿಂದಾಗಿ ವಾಸ್ತವವೂ ಆಗಿದೆ.

ಕೃಷಿಕಾರ್ಯಕ್ಕೆ ರೊಕ್ಕವೇ ಆಧಾರವಾದಾಗ ಕೃಷಿಕ ಯಾವ ಬೆಳೆಯ ಹಿಂದೆ ಹೋಗುತ್ತಾನೆ ಎಂದು ಊಹಿಸಲು ಯಾವುದೇ ತರ್ಕತಜ್ಞತೆ ಬೇಕಿಲ್ಲವಷ್ಟೆ.

ದಿಗಿಲುಗೊಳ್ಳುವ ಕ್ರಾಂತಿ

ಕೃಷಿಯು ಆಹಾರದ ಬೆಳೆಯಿಂದ ವಿಮುಖಗೊಂಡು ವಾಣಿಜ್ಯಮುಖಿಯಾಗಿ ಆಕರ್ಷಣೆಯನ್ನು ಪಡೆದರೂ ಅದು ಬೇಡುವ ಕನಿಷ್ಠಮಟ್ಟದ ಶ್ರಮವೂ ಉದ್ಯಮಕ್ಷೇತ್ರದಲ್ಲಿ ಇಲ್ಲದಿರುವುದರಿಂದ ಉದ್ಯಮದ ಆಕರ್ಷಣೆಯನ್ನು ವಾಣಿಜ್ಯಕೃಷಿಯು ಹೊಂದುವುದು ಅಸಾಧ್ಯದ ಮಾತಾಯಿತು. ಇದೀಗ ಉದ್ಯಮವು ಡಿಜಿಟಲೀಕರಣಗೊಂಡು ಎಲ್ಲವೂ ಕುಳಿತಲ್ಲಿಯೇ ಸಾಧ್ಯವಾಗುವ ಸನ್ನಿವೇಶ ವಿಜೃಂಭಿಸಿದೆ. ಮನೆಯಿಂದಲೇ ಉದ್ಯೋಗವು ಸಾಧ್ಯವಾಗುವ ಹಂತಕ್ಕೆ ಬಂದು ತಲುಪಿದೆ.

ಆಧುನಿಕ ಜ್ಞಾನಕ್ಷೇತ್ರವು ಗೈಯುತ್ತಿರುವ ಕ್ರಾಂತಿಗೆ ಸಾಟಿಯಿರಲಾರದು.

ಈ ಮಟ್ಟದ ಕ್ರಾಂತಿಯನ್ನಂತೂ ಎಷ್ಟೇ ಯಾಂತ್ರೀಕರಣಗೊಂಡರೂ ಕೃಷಿಯಲ್ಲಿ ಆಗಮಾಡುವುದು ಅಸಾಧ್ಯ.

ಇದರ ಪರಿಣಾಮ ಏನಾಗುತ್ತಿದೆ ಎಂದರೆ; ಕೃಷಿಕನ ಮಗ ಕೃಷಿಕನಾಗುತ್ತಿಲ್ಲ, ಉದ್ಯಮದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಿದ್ದಾನೆ. ಹಳ್ಳಿಗನ ಮುಂಪೀಳಿಗೆ ಹಳ್ಳಿಯಲ್ಲಿ ಉಳಿಯಬಯಸುತ್ತಿಲ್ಲ, ನಗರದ ಕೊಂಪೆಯಾದರೂ ಲೇಸೇ ಎಂಬ ನಿರ್ಣಯವನ್ನು ತಾಳುತ್ತಿದೆ. ಹಳ್ಳಿಯೂ ಒಂದೆಡೆ ನಗರೀಕರಣದ ಸುಳಿಗೆ ಸಿಲುಕುತ್ತಿದೆ. ಮತ್ತೊಂದೆಡೆ ಮಕ್ಕಳಿಲ್ಲದ, ತರುಣಪೀಳಿಗೆಯೇ ಇಲ್ಲದ ಹಾಳುಹಳ್ಳಿಯಾಗಿ ಗೋಚರಿಸುತ್ತಿದೆ.

ಇಂಥ ‘ಕ್ರಾಂತಿ’ಯನ್ನೂ ಸಾಧಿಸಿದ್ದು ಆಧುನಿಕ ಜ್ಞಾನಕ್ಷೇತ್ರವೇ ಹೌದಷ್ಟೆ.

ಜ್ಞಾನದ ದಾರಿ

ಇದೀಗ ಮುಂದಿರುವ ಸವಾಲು ಹೇಗಿದೆ ಎಂದರೆ; ಎಲ್ಲ ಕ್ಷೇತ್ರಗಳೂ ಕಾಯಕಲ್ಪಕ್ಕಾಗಿ ಬೇಡಿಕೆ ಇಟ್ಟಂತಿವೆ. ಸುಧಾರಣೆಗಾಗಿ ಯಾವುದೋ ಒಂದನ್ನು ಮಾತ್ರ ಸ್ಪರ್ಶಿಸುವಂತಿಲ್ಲ, ಅದಕ್ಕೆ ತಗುಲಿಕೊಂಡ ಎಲ್ಲವುಗಳ ಬಗೆಗೂ ಯೋಚಿಸಲೇಬೇಕು. ಎಲ್ಲವೂ ಪರಸ್ಪರ ತಗುಲಿಕೊಂಡೇ ಇವೆಯಷ್ಟೆ.

ನಗರವನ್ನು ಕುರಿತು ಯೋಚಿಸುವುದೆಂದರೆ ಹಳ್ಳಿಯನ್ನು ಕುರಿತೂ ಯೋಚಿಸುವುದಾಗುತ್ತದೆ. ಯಾಕೆಂದರೆ ನಾನಾ ಬಗೆಗಳಲ್ಲಿ ಅವೆರಡೂ ಪರಸ್ಪರ ಅವಲಂಬಿಗಳೇ ಆಗಿವೆ. ಕೃಷಿ ಮತ್ತು ಹಳ್ಳಿ ನಡುವೆ ಬಿಡಿಸಲಾಗದ ನಂಟಿದೆ ಸರಿ; ಕೃಷಿಯಿಲ್ಲದೆ, ಅದರಲ್ಲಿಯೂ ಆಹಾರದ ಬೆಳೆಯ ಕೃಷಿಯಿಲ್ಲದೆ ನಗರವೂ ಇರಲಸಾಧ್ಯ, ಉದ್ಯಮವೂ ನಡೆಯಲಸಾಧ್ಯ, ಶಿಕ್ಷಣ ಮತ್ತಿತರ ಯಾವುದೇ ಕ್ಷೇತ್ರ ಮುಂಬರಿಯಲಸಾಧ್ಯ. ಎಲ್ಲ ಕ್ಷೇತ್ರಗಳೂ ಪರಸ್ಪರ ಕೊಡುಕೊಳ್ಳುವಿಕೆಯ ರೀತಿಯ ನಂಟನ್ನು ಹೊಂದಿದ್ದರೆ, ಕೃಷಿಯ ಜತೆಗಿನ ಅವೆಲ್ಲವುಗಳ ನಂಟು ತಾಯಿ-ಮಗುವಿನದು.

ಎಲ್ಲ ಕ್ಷೇತ್ರಗಳಿಗೂ ಆಮ್ಲಜನಕದಂತೆ ಇರುವುದು ಕೃಷಿಕ್ಷೇತ್ರ. ಅಂದರೆ ಆಹಾರದ ಬೆಳೆಯ ಕೃಷಿ.

ಪ್ರಾಣವನ್ನು ರಕ್ಷಿಸುವ ಯಾವುದೇ ಸಂಗತಿಯನ್ನು ಭಗವಂತನೆಂದು ಆರಾಧಿಸುವ ದೈವೀಕೃತಜ್ಞತೆಯನ್ನುಳ್ಳ ಪರಂಪರೆ ಇಲ್ಲಿಯದು. ಆಹಾರದ ಆಮ್ಲಜನಕವನ್ನು ನೀಡುವ ಕೃಷಿಯನ್ನಾಗಲೀ ಕೃಷಿಕನನ್ನಾಗಲೀ ಕುರಿತಾಗಿ ಇರಬೇಕಾದುದು ಇದೇ ದೈವೀ ಆಗ್ರಹವಲ್ಲವೇ!

ಎಲ್ಲರನ್ನೂ ಜಾಗರಿಸುವ ಜಾಗದಲ್ಲಿರುವ ಜ್ಞಾನಕ್ಷೇತ್ರವು ತನ್ನ ನಿಜವನ್ನು ಕಂಡುಕೊಳ್ಳುವ ಒಂದು ದಾರಿಯಾಗಿ, ಆಹಾರದ ಬೆಳೆಯ ಕೃಷಿಯಲ್ಲಿ ಹೆಮ್ಮೆಯನ್ನು ಕಾಣಬಲ್ಲಂತೆ ಶಿಕ್ಷಾರ್ಥಿಯ ಮನಸ್ಸನ್ನು ಸಂಪನ್ನಗೊಳಿಸುವ ಪ್ರೇರಣಾದ್ರವ್ಯವನ್ನು ತನ್ನ ಪಾಠ್ಯದಲ್ಲಿ ಹೊಂದಬೇಕೆನಿಸುತ್ತದೆ. ("ವಿಕ್ರಮ"ಕ್ಕಾಗಿ ಬರೆದುದು)

Leave a Reply

Your email address will not be published.

This site uses Akismet to reduce spam. Learn how your comment data is processed.