ಮಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ‘ಹಿಂದೂ’ ಅಥವಾ ‘ಹಿಂದುತ್ವ’ ವನ್ನು ಸಂಕುಚಿತ ಭಾವದಿಂದ ನೋಡುಲಾಗುತ್ತಿದೆ. ‘ಹಿಂದೂ’ ಎಂದರೆ ಒಂದು ಜಾತಿವಾಚಕ ಅಥವಾ ಧರ್ಮ ಸೂಚಕ ಪದವಲ್ಲ. ‘ಹಿಂದೂ’ ಎಂಬುದು ಜೀವನ ಪದ್ಧತಿ ಎನ್ನುವುದನ್ನು ಭಾರತದ ಉಚ್ಚ ನ್ಯಾಯಾಲಯ ಉಲ್ಲೇಖಿಸಿದೆ ಎಂದು ಉಪನ್ಯಾಸಕ ಮತ್ತು ಸಾಮಾಜಿಕ ಕಾರ್ಯಕರ್ತ ಸುರೇಶ್ ಹೆಜಮಾಡಿ ಅವರು ಹೇಳಿದರು.

ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಡೆದ ‘ಮಂಥನ’ ವೈಚಾರಿಕ ವೇದಿಕೆಯ ಕಾವೂರು ನಗರದ ನಾಲ್ಕನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮಲ್ಲಿ ಅನೇಕ ಮಹನೀಯರು ಆಧ್ಯಾತ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದೂ ಆಚರಣೆಗಳ ಮಹತ್ವ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಒಂದು ವೇಳೆ ಹಿಂದುತ್ವ ಮತೀಯ ಆಗಿದ್ದರೆ ಏಕ ದೇವ ಉಪಾಸಕರನ್ನು ಒಳಗೊಂಡ೦ತೆ, ಪಾರ್ಸಿಗಳು, ಯಹೂದಿಗಳು, ಡಚ್ಚರು, ಫ್ರೆಂಚರು, ಬ್ರಿಟೀಷರಂತಹ ವಿವಿಧ ಸಂಸ್ಕೃತಿಯವರನ್ನು ಭಾರತದ ಒಳಗೆ ಬಿಡುತ್ತಲೇ ಇರಲಿಲ್ಲ ಎಂದರು.

ಹಿಂದೂ ಯಾವತ್ತೂ ಉದಾರಿಯಾಗಿರುವುದರಿಂದಲೇ ಹಿಂದುತ್ವ ಎಲ್ಲರನ್ನೂ ತನ್ನಲ್ಲಿ ಸೇರಿಸಿಕೊಂಡು ಬಹುತ್ವವಾಗಿ ಇಡೀ ಜಗತ್ತಿನಲ್ಲಿ ವಿಶೇಷವಾಗಿ ಗುರುತಿಸಿ ಕೊಂಡಿದೆ. ದುರಾದೃಷ್ಟವಶಾತ್ ಹಿಂದುತ್ವವನ್ನು ರಾಜಕೀಯ ಲಾಭಕ್ಕೆ, ಒಂದು ವರ್ಗದ ಓಲೈಕೆಗೆ ಮತ್ತು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವುದಕ್ಕೋಸ್ಕರ, ಹಿಂದುತ್ವ ಎನ್ನುವ ಪದವನ್ನು ಕೋಮು ಪ್ರಚೋದಿತ ಅಥವಾ ಒಂದು ಧರ್ಮಕ್ಕೆ ಸೀಮಿತಗೊಳಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟರು.

ಕೂಳೂರು ಬೀಡಿನ ಆಶಿಕ್ ಬಲ್ಲಾಳ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಾವೂರಿನ ಆರ್ ಎಸ್ ಎಸ್ ಸಂಘಚಾಲಕ ಬಿ.ಕೆ.ಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.