ಮರೆಯದಿರೋಣ ಮೇಲುಕೋಟೆಯ ಮಾರಣ ಹೋಮ
ಆ ದಿವಸ ಎಲ್ಲ ವಿದ್ಯಮಾನಗಳ ಜೊತೆಗೆ ನನಗೆ ಸ್ಪಷ್ಟ ಬಿಡುವಿತ್ತು. ಸಾಮಾನ್ಯವಾಗಿ ನನ್ನೊಳಗಿನ ಕುತೂಹಲಗಳು, ಆಗಾಗ ಒಡಮೂಡುವ ಪ್ರಶ್ನೆಗಳ ಕುರಿತು ಅವಲೋಕನಕ್ಕೆ ಮುಂದಾಗುವ ಹಿರಿಯರ ಮುಂದೆ ಕುಳಿತುಬಿಟ್ಟೆ.
“ಭಾರತದಲ್ಲಿ ಅಪ್ರತಿಮ ವೀರರೂ,ಶೂರರೂ, ದೇಶಭಕ್ತರೂ ಆಗಿದ್ದ ಅಸಂಖ್ಯಾತ ರಾಜರುಗಳು ಆಳಿದ್ದ ಬಗ್ಗೆ ಕೇಳಿದ್ದೇವೆ, ಆದರೆ ಅವರೆಲ್ಲರೂ ಪರಕೀಯ ದಾಳಿಕೋರ ವಿರುದ್ಧ ಸೋತು ತಮ್ಮ ನೆಲವನ್ನು ಕಳೆದುಕೊಂಡಿದ್ದು ಏಕೆ” ಎಂದು ಹಿರಿಯರೊಬ್ಬರ ಮುಂದೆ ಪ್ರಶ್ನೆಯಿರಿಸಿದ್ದೆ. ಈ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು:
“ಭಾರತವನ್ನು ಅಪ್ರತಿಮ ವೀರರೂ,ಶೂರರೂ, ದೇಶಭಕ್ತರೂ,ದೈವಭಕ್ತರೂ ಆಗಿದ್ದ ಅಸಂಖ್ಯಾತ ರಾಜರುಗಳು ಆಳಿದ್ದು ನಿಜ. ಆದರೆ ಆ ಪರಕೀಯರ ದಾಳಿ ಅವರೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇತ್ತು. ಅವರ ಯುದ್ಧ ಭಾರತೀಯರು ಅದುವರೆಗೂ ಊಹಿಸದ ರೀತಿಯಲ್ಲಿ ಇತ್ತು. ಅವರು ಕೇವಲ ಸೈನಿಕರ ಜೊತೆ ಯುದ್ಧ ಮಾಡಲಿಲ್ಲ. ಮಕ್ಕಳನ್ನು,ವೃದ್ಧರನ್ನು ಹೀನಾಯವಾಗಿ ಕೊಂದು ಹಾಕುತ್ತಿದ್ದರು, ರುಂಡ- ಮುಂಡಗಳನ್ನು ಕತ್ತರಿಸಿ ನೇತುಹಾಕುತ್ತಿದ್ದರು, ಮಹಿಳೆಯರನ್ನು ಕಂಡ ಕಂಡಲ್ಲಿ ಅತ್ಯಾಚಾರಗೈಯುತ್ತಿದ್ದರು, ಹೊಲ-ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಪುರಾಣಗಳಲ್ಲಿ ಕೇಳಿದ ರಾಕ್ಷಸರುಗಳಿಗಿಂತಲೂ ಭೀಭತ್ಸವಾಗಿ ಅವರು ವರ್ತಿಸಿದ್ದರು. ಪ್ರಪಂಚದ ಒಂದು ಮೂಲೆಯಲ್ಲಿ ಅಷ್ಟೊಂದು ಕ್ರೂರ ಮನಃಸ್ಥಿತಿಯ ಮಾನವ ಜನಾಂಗವೊಂದು ಹುಟ್ಟಿಕೊಂಡಿದೆ ಎನ್ನುವುದನ್ನು ನಮ್ಮ ರಾಜರು ಊಹಿಸಿಕೊಳ್ಳುವುದಕ್ಕೂ ಕೂಡ ಸಿದ್ಧರಿರಲಿಲ್ಲ. ಭಾರತೀಯ ದೊರೆಗಳಿಗೆ ಯುದ್ಧ ಒಂದು ಶಾಸ್ತ್ರ, ಯುದ್ಧ ಒಂದು ಧರ್ಮ, ಅದನ್ನು ಮೀರಿ ಅವರು ಹೋಗುತ್ತಿರಲಿಲ್ಲ. ಅಂತಿಮವಾಗಿ ಸೋಲು ಎದುರಾಗಲೂ, ಸಾವೇ ಎದುರಾದಾಗಲೂ ನಮ್ಮ ರಾಜರುಗಳು ಸಾವನ್ನೇ ಆರಿಸಿಕೊಂಡರೇ ಹೊರತೂ ದಾಳಿಕೋರರ ಹಾಗೆ ಅಧರ್ಮದ ಕೃತ್ಯಕ್ಕೆ ಕೈ ಹಾಕಲಿಲ್ಲ, ಅವರಷ್ಟು ಕ್ರೌರ್ಯವನ್ನು ಮೆರೆಯಲು ಆಗಲೇ ಇಲ್ಲ. ಇದರಿಂದಾಗಿ ಭಾರತದ ನೆಲ ಆ ಪರಕೀಯ ದಾಳಿಕೋರರ ಪಾಲಾಗಬೇಕಾಯಿತು.”
ನಿರ್ವಿವಾದವಾಗಿ ಅಷ್ಟು ಕ್ರೂರವಾಗಿ ವರ್ತಿಸುವುದು ಭಾರತ ಸ್ವಾತಂತ್ರ್ಯಗೊಳ್ಳುವ ವರೆಗೂ ಇದ್ದ ಭಾರತ ಮೂಲದ ಯಾವ ದೊರೆಗಳಿಗೂ ಸಾಧ್ಯವಾಗಲೇ ಇಲ್ಲ. ಈ ನೆಲದಲ್ಲೇ ಹುಟ್ಟಿ ಅಷ್ಟೊಂದು ಪೈಶಾಚಿಕ ಕೃತ್ಯವನ್ನು ಅನುಸರಿಸಿ ಯಶಸ್ವಿಯಾದ ದಕ್ಷಿಣ ಭಾರತದಲ್ಲಾಳಿದ ದೊರೆಯೆಂದರೆ ಅದು ಟಿಪ್ಪು ಸುಲ್ತಾನ್ ಮಾತ್ರ. ದುರದೃಷ್ಟವೆಂದರೆ ಆತನ ಆ ಎಲ್ಲಾ ಕುಕೃತ್ಯಗಳನ್ನೂ ಇಂದಿನ ಪೀಳಿಗೆಗೆ ತಿಳಿಯದ ರೀತಿಯಲ್ಲಿ ಮುಚ್ಚಿಹಾಕುತ್ತಾ ಬರಲಾಗಿತ್ತು. ಆದರೆ ಈ ಹಿಂದಿನ ಸರ್ಕಾರದ ವತಿಯಿಂದ ಟಿಪ್ಪು ಜಯಂತಿಯನ್ನು ಆಚರಿಸಲು ಪ್ರಾರಂಭಿಸಿದಾಗ ಟಿಪ್ಪುವಿನ ಇನ್ನೊಂದು ಮುಖ ಜನಸಾಮಾನ್ಯರೆದುರು ತೆರೆದುಕೊಳ್ಳಲು ಅವಕಾಶ ದೊರೆತಂತಾಯಿತು.
ಟಿಪ್ಪುವಿನ ಅಮಾನವೀಯ ಕೃತ್ಯಗಳು ಸಾಮಾನ್ಯ ಮನುಷ್ಯನ ಊಹೆಗೂ ನಿಲುಕದ್ದಾಗಿವೆ. ‘ದೇವಾಲಯಗಳ ನಾಶ, ಭಯಗೊಳಿಸುವ ಮೂಲಕ ಮತಾಂತರ ಮತ್ತು ಸಾಮೂಹಿಕ ನರಮೇಧ’ ಇವು ಟಿಪ್ಪು ಸುಲ್ತಾನನ ಜೀವನದ ಪರಮೋಚ್ಚ ಕಾರ್ಯಗಳಾಗಿದ್ದವು. ಆತನ ಖಡ್ಗದಲ್ಲಿ ಏನು ಬರೆಯಲಾಗಿತ್ತೋ ಅದುವೇ ಆತನ ಆ ಎಲ್ಲಾ ಕೃತ್ಯಗಳ ಹಿಂದಿನ ಪ್ರೇರಣೆಯಾಗಿತ್ತು.
ಮಲಬಾರ್ ಹತ್ಯಾಕಾಂಡ, ಮಂಗಳೂರಿನ ಕ್ರಿಶ್ಚಿಯನ್ ಸಮುದಾಯದವರ ಹತ್ಯಾಕಾಂಡ, ಕೊಡವರ ಹತ್ಯಾಕಾಂಡ ಮುಂತಾಗಿ ತನ್ನ ಜೀವನದುದ್ದಕ್ಕೂ ಹಲವು ಲಕ್ಷ ಜನರ ಹತ್ಯೆಗಳನ್ನು ನಡೆಸಿ ಮನುಷ್ಯಕುಲವನ್ನೇ ನಾಚಿಸಿದ್ದು ಟಿಪ್ಪು ಸುಲ್ತಾನ್!
ಮೈಸೂರು ಪ್ರಾಂತ್ಯದ ಶ್ರೀರಂಗಪಟ್ಟಣದ ಆಸುಪಾಸಿನಲ್ಲಿ ಆತನ ಹೆಸರಿನಲ್ಲಿರುವ 17 ಶಾಸನಗಳಲ್ಲಿ ಹದಿನಾರರಲ್ಲಿ ನಾನು ಮತಾಂದ ಎಂದು ಸ್ವತಹ ಬರೆದುಕೊಂಡಿದ್ದಾನೆ.
ಇಡೀ ದೇಶ ದೀಪಾವಳಿಯ ಸಿದ್ಧತೆಯಲ್ಲಿ ತೊಡಗಿರುವ ಈ ಸಮಯದಲ್ಲಿ ಮತ್ತೆ ಅದೇ ‘ಮೈಸೂರು ಹುಲಿ’ ಎಂಬ ಬಿರುದಾಂಕಿತ ಟಿಪ್ಪು ನೆನಪಾಗುತ್ತಿದ್ದಾನೆ. ಆದರೆ ಅದಕ್ಕೆ ಕಾರಣ ಮಾತ್ರ ಹುಲಿಯಂತಹ ಶೌರ್ಯದ ಕಾರಣಕ್ಕಲ್ಲ; ಬದಲಾಗಿ ಕ್ರೌರ್ಯದ ಕಾರಣಕ್ಕೆ, ಮತಾಂಧತೆಯ ಕಾರಣಕ್ಕೆ.
ಮೈಸೂರು ಅರಸು ಮನೆತನದ ಬೆಂಬಲಿಗರು ಎನ್ನುವ ಕಾರಣಕ್ಕೆ ಒಂದಿಡೀ ಸಮುದಾಯದ ಮೇಲೆ ಆತ ನಡೆಸಿದ ಅತ್ಯಾಚಾರ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಅಮಾನವೀಯ ಕ್ರೌರ್ಯಗಳಲ್ಲೊಂದು. ಅದು ‘ನರಕ ಚತುರ್ದಶಿ’ಯ ದಿವಸ. ಇಡೀ ಮೇಲುಕೋಟೆ ಹಬ್ಬದ ಸಂಭ್ರಮದಲ್ಲಿತ್ತು. ಶ್ರೀರಂಗ ಪಟ್ಟಣದಲ್ಲಿಯೂ ಹಬ್ಬದ ಸಂಭ್ರಮ ಮನೆಮಾಡಿತ್ತು. ನರಸಿಂಹಸ್ವಾಮಿಗೆ ನಡೆಯುವ ಅಭಿಷೇಕದಲ್ಲಿ ಪಾಲ್ಗೊಳ್ಳಲು ಅನೇಕ ಶ್ರೀವೈಷ್ಣವರು ಮಂಡ್ಯ ಮತ್ತು ಅಕ್ಕಪಕ್ಕದ ಊರುಗಳಿಂದ ಬಂದು ಸೇರಿದ್ದರು. ಅವರಲ್ಲಿ ಮಂಡಯಂ ಅಯ್ಯಂಗಾರರು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಾಫೀರರ ಹಬ್ಬದ ದಿನಕ್ಕಾಗಿಯೇ ಕಾದಿದ್ದವನಂತೆ ಟಿಪ್ಪು ತನ್ನ ಸೈನ್ಯದೊಂದಿಗೆ ನುಗ್ಗಿ, ಮೈಸೂರು ರಾಣಿಯವರಿಗೆ ನಿಷ್ಠರಾಗಿದ್ದ ಅಯ್ಯಂಗಾರ್ ಸಮುದಾಯದ ಮೇಲೆ ಆಕ್ರಮಣ ನಡೆಸಿದ. ನೋಡು ನೋಡುತ್ತಿದ್ದಂತೆಯೇ ಹಬ್ಬದ ಮನೆಗಳು ಸ್ಮಶಾನಗಳಾಗಿ ಬದಲಾದವು. ದೀಪಾವಳಿಯ ದೀಪಗಳು ಆರಿ ಹೋದವು. ರಸ್ತೆಯ ಮೇಲೆ ಮನುಷ್ಯರ ನೆತ್ತರ ಹೊಳೆ ಹರಿಯತೊಡಗಿತು. ಹುಣಸೆ ಮರಗಳ ಮೇಲೆ ಛಿದ್ರಗೊಂಡ ದೇಹಗಳು ನೇತಾಡತೊಡಗಿದವು. ಅದೊಂದೇ ದಿನ ಸುಮಾರು 800 ಜನ ಅಯ್ಯಂಗಾರ್ ಬ್ರಾಹ್ಮಣರು ಟಿಪ್ಪು ನಡೆಸಿದ ಆ ನರಮೇಧದಲ್ಲಿ ಸಾವನ್ನಪ್ಪಿದರು.
ಗರ್ಭಿಣಿ ಹೆಂಗಸರ ಮೇಲೆ ನಡೆಸಿದ ಅತ್ಯಾಚಾರ ಪ್ರಕರಣವನ್ನು ಹೇಳುವಾಗ ನನ್ನ ಎದುರುಗಿದ್ದ ಹಿರಿಯರ ಕಣ್ಣುಗಳು ಅಲ್ಲಿಯವರೆಗೂ ಮಡುಗಟ್ಟಿ ಬರುತ್ತಿದ್ದ ದುಃಖದ ಅಲೆಗಳನ್ನು ತಡೆಯಲು ಶಕ್ತವಾಗಿದ್ದವು. ಆ ಬೀಭತ್ಸ ಘಟನೆ ಹೊರಹಾಕುವಾಗ ಹೃದಯಾಳದ ಕಿಚ್ಚು ಕಣ್ಣು ಮೀರಿನಿಂತದ್ದು ವಾಸ್ತವ.
ಹಬ್ಬದ ಆಚರಣೆಯಲ್ಲಿ ಮನೆಯೊಳಗಿದ್ದ ನೂರಾರು ಮಕ್ಕಳ ಮೇಲೆ ಕತ್ತಿ ಜಳುಪಿಸಿದ್ದು ಇತಿಹಾಸದ ಪುಟಗಳಲ್ಲಿ ಹೊರತೆಗೆಯಲಾಗದೇ ಅಂತೆ ದಾಖಲಾಗಿದೆ
ಅಳಿದುಳಿದ ನೂರಾರು ಕುಟುಂಬಗಳು ಜೀವಭಯದಿಂದ ಊರು ಬಿಟ್ಟು ಓಡಿಹೋಗಬೇಕಾಯಿತು. ಟಿಪ್ಪುವಿನ ಕ್ರೂರ ದಾಳಿಯಿಂದ ಮೃತಪಟ್ಟ ಕುಟುಂಬಗಳು ಅಂದಿನಿಂದ ಇಂದಿನ ವರೆಗೂ ನರಕಚತುರ್ದಶಿ ಹಬ್ಬದ ಆಚರಣೆಯನ್ನೇ ನಿಲ್ಲಿಸಿದವು. ಕೇವಲ ಮೇಲುಕೋಟೆಯಲ್ಲಷ್ಟೇ ಅಲ್ಲದೆ, ಶ್ರೀರಂಗಪಟ್ಟಣ, ಮಂಡ್ಯ, ಬೆಂಗಳೂರು ಸೇರಿದಂತೆ ಹಲವಾರು ಊರುಗಳಲ್ಲಿ ನೆಲೆ ನಿಂತಿರುವ ಆ ಸಮುದಾಯದ ಸಂತ್ರಸ್ಥ ಕುಟುಂಬಗಳು ಇಂದಿಗೂ ಹಬ್ಬವನ್ನು ಆಚರಿಸುತ್ತಿಲ್ಲ. ತಮ್ಮವರ ನರಮೇಧದ ಇತಿಹಾಸವನ್ನು ನೆನಪಿಸುವ ದಿನದಲ್ಲಿ ಹಬ್ಬವನ್ನಾಚರಿಸಲು ಸಾಧ್ಯವಾಗುವುದಾದರೂ ಹೇಗೆ?
ರಾಜದ್ರೋಹದ ನಡೆಗಾಗಿ ಟಿಪ್ಪು ಅವರೆಲ್ಲರನ್ನೂ ಹತ್ಯೆ ಮಾಡಿಸಿದ ಎನ್ನುವ ತೇಪೆ ಹಚ್ಚುವ ಮಾತುಗಳು ಆಗಾಗ ಕೆಲವರಿಂದ ಕೇಳಿಬರುತ್ತವೆ. ಮಾಡಿರುವ ಕ್ರೌರ್ಯಕ್ಕೆ ಆದರೆ ಟಿಪ್ಪುವನ್ನು ಹೊರತುಪಡಿಸಿ ಯಾವ ದೊರೆಗಳು ಕೂಡ ರಾಜ ದ್ರೋಹದ ಆರೋಪವನ್ನು ಹೊರಿಸಿ, ಹಬ್ಬದ ದಿನವೇ ಒಂದಿಡೀ ಸಮುದಾಯದ ನರಮೇಧ ನಡೆಸಿದ್ದು ಇತಿಹಾಸದಲ್ಲೇ ಇಲ್ಲ. ಜೊತೆಗೆ ನಂಜನಗೂಡು, ಶೃಂಗೇರಿ ದೇವಾಲಯಗಳಿಗೆ ಆತ ಮಹದುಪಕಾರ ಮಾಡಿರುವ ಪರಧರ್ಮ ಸಹಿಷ್ಣು ಎಂದು ಬಿಂಬಿಸುವ ಕೆಲಸಗಳೂ ಕೆಲವರಿಂದ ನಡೆಯುತ್ತಿವೆ. ಆದರೆ ಆ ಪರಧರ್ಮ ಸಹಿಷ್ಣುತೆಯ ಕಥೆಗಳನ್ನು ಶ್ರೀರಂಗ ಪಟ್ಟಣದ ಮಸೀದಿಯೊಳಗಿನಿಂದ ಇಣುಕುತ್ತಿರುವ ಆಂಜನೇಯ ದೇವಾಲಯದ ಕಂಬಗಳೇ ನುಚ್ಚುನೂರು ಮಾಡುತ್ತವೆ.
ಪಠ್ಯ ಪುಸ್ತಕಗಳೂ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಇದುವರೆಗೂ ಟಿಪ್ಪುವಿನ ಮುಖದ ಒಂದು ಮಗ್ಗುಲನ್ನು ಮಾತ್ರ ತೋರಿಸಲಾಗುತ್ತದೆ. ಇದು ಕೇವಲ ಕಾಕತಾಳೀಯ ಇರಲಾರದು. ಟಿಪ್ಪುವಿನ ಕ್ರೌರ್ಯದ ಮುಖವನ್ನು ಮರೆಮಾಚುವುದೇ ಅದರ ಹಿಂದಿನ ಉದ್ದೇಶವಾಗಿರಬಹುದು. ಕ್ರೌರ್ಯವೆಲ್ಲವನ್ನೂ ಅದೆಷ್ಟೇ ಮರೆಸಿದರೂ, ನರಕ ಚತುರ್ದಶಿಯ ದಿನವನ್ನು ಮಾನವಕುಲದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನವನ್ನಾಗಿಸಿದ ಕೃತ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಮತ್ತದನ್ನು ಮರೆಯಲೂ ಕೂಡದು.