ಪಟಾಕಿಯ ಸಂಭ್ರಮವಿಲ್ಲದೆ ದೀಪಾವಳಿ ಆಚರಿಸಿದರೆ ಏನಾಗುತ್ತದೆ?

ಕೇಳಿ, ಎಲ್ಲರೂ ಗಮನವಿಟ್ಟು ಕೇಳಿ. ಇಡೀ ಪ್ರಪಂಚದಲ್ಲೇ ಭಯಾನಕವಾದ, ಆಘಾತಕಾರಿಯಾದ ಹಬ್ಬ ಬಂದಿದೆ. ವರ್ಷದಲ್ಲಿ ಒಮ್ಮೆ ಬರುವ ಈ ಒಂದು ಹಬ್ಬದಿಂದ ಮಾತ್ರವೇ ಇಡೀ ವರ್ಷ ಭೂಮಂಡಲದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಅಪ್ಪಿ-ತಪ್ಪಿಯೂ ಹೊರಗೆ ಕಾಲಿಡಬೇಡಿ. ಯಾವಾಗ, ಎಂತಹ ಅಚಾತುರ್ಯವಾಗುವುದೋ ಏನೋ! ನಿಮ್ಮ ಮನೆಯ ಎಲ್ಲಾ ಕಿಟಕಿ-ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ಸುರಕ್ಷಿತವಾಗಿರಿ. ಒಂದು ವೇಳೆ ನೀವೇನಾದರೂ ಈ ಹಬ್ಬವನ್ನು ಆಚರಿಸುತ್ತೀರಿ ಎಂದರೆ ನಿಮಗೆ ಬಡವಿದ್ಯಾರ್ಥಿಗಳ ಬಗೆಗೆ ಕನಿಕರ ಇಲ್ಲದ ವ್ಯಕ್ತಿ, ಪರಿಸರ ಸಂರಕ್ಷಣೆಯ ಬಗೆಗೆ ಕಾಳಜಿ ಇಲ್ಲದ ವ್ಯಕ್ತಿ, ಸಾಂಪ್ರದಾಯಿಕ ಸಂಘ ಪರಿವಾರದ ವ್ಯಕ್ತಿ ಹೀಗೆ ಮುಂತಾದ ಹಣೆಪಟ್ಟಿಗಳು ದೊರೆಯುವ ಸಾಧ್ಯತೆ ಇದೆ. ನೀವು ದೊಡ್ಡ ಸೆಲೆಬ್ರಿಟಿಯಾಗಿ ಎಷ್ಟೇ ಅದ್ಧೂರಿಯಾದ ಜೀವನ ನಡೆಸುತ್ತಿರಿ ಅಥವಾ ನೀವು ನಿಮ್ಮ ಖಾಸಗಿ ಕಾರ್ಯಕ್ರಮಗಳಲ್ಲಿ, ವೃತ್ತಿಕಾರ್ಯಗಳಲ್ಲಿ ಎಷ್ಟೇ ದುಂದುವೆಚ್ಚ ಮಾಡುತ್ತಿರಿ ಅಥವಾ ನೀವು ಜಾತ್ಯಾತೀತತೆಯ ಮುಖವಾಡವನ್ನು ಖರೀದಿಸಿ ಹೇಗಾದರೂ ಬೇಜವಾಬ್ದಾರಿಯಿಂದ ಖರ್ಚು ಮಾಡುತ್ತಾ ಮಾನವೀಯತೆಯ ಭೋದನೆ ಮಾಡುತ್ತಿರಿ, ನಿಮ್ಮನ್ನು ಯಾರೂ ಪ್ರಶ್ನಿಸುವುದಿಲ್ಲ.

ಆದರೆ ನೀವೇನಾದರೂ ಭಾರತೀಯ ಹಿಂದೂ ಸಂಸ್ಕೃತಿಯ ಹಬ್ಬಗಳಲ್ಲಿ ಸ್ವಲ್ಪವೇ ಸ್ವಲ್ಪ ವೆಚ್ಚ ಮಾಡಿದರೂ ನಿಮ್ಮ ಎದುರು ಪರಿಸರವಾದಿಗಳು, ಜಾತ್ಯಾತೀತವಾದಿಗಳು, ಪ್ರಭಾವಿ ವ್ಯಕ್ತಿಗಳು, ಸರ್ಕಾರಿ ವರ್ಗದವರು, ನ್ಯಾಯಾಧೀಶರು ಸಾಲು-ಸಾಲು ಪ್ರಶ್ನೆ ಮಾಡುತ್ತಾರೆ. ಏಕೆಂದರೆ, ನೀವು ಆ ಹಬ್ಬಗಳಲ್ಲಿ ಮಾಡುತ್ತಿರುವ ದುಂದುವೆಚ್ಚಗಳಿಂದ ಬಡವರಿಗೆ ಊಟ ಸಿಗುತ್ತಿಲ್ಲ, ಪ್ರಾಣಿಗಳು ಸ್ವಚ್ಛಂದವಾಗಿ ಜೀವಿಸಲಾಗುತ್ತಿಲ್ಲ, ಮಹಿಳೆಯರು ಸ್ವತಂತ್ರವಾಗಿ ಬದುಕಲಾಗುತ್ತಿಲ್ಲ, ಜಾಗೃತ ಯುವಪಡೆಯನ್ನು ನಿಯಂತ್ರಿಸಲಾಗುತ್ತಿಲ್ಲ, ಪರಿಸರ ಸಂರಕ್ಷಣೆಯನ್ನು ಮಾಡಲಾಗುತ್ತಿಲ್ಲ, ಶಬ್ದ ಮಾಲಿನ್ಯವನ್ನು ತಡೆಯಲಾಗುತ್ತಿಲ್ಲ. ಅರ್ಥವಾಯ್ತಾ!? ನೀವು-ನಾವು ಮಾಡುವ ಈ ಹಬ್ಬಗಳ ಆಚರಣೆಯಿಂದ ಸಮಾಜದಲ್ಲಿ ಎಷ್ಟೊಂದು ಶೋಷಣೆಗಳಾಗುತ್ತಿವೆಯೆಂದು! ಅದರಲ್ಲೂ ಈ ದೀಪಾವಳಿ ಹಬ್ಬವನ್ನು ಆಚರಿಸುತ್ತೀವಲ್ಲ, ಈ ಹಬ್ಬವನ್ನು ನಾವು ಹೇಗೆ ಆಚರಿಸಬೇಕೆಂದು ಭೋದಿಸಲು ಸೆಲೆಬ್ರಿಟಿಗಳು ಸಾಲು-ಸಾಲಾಗಿ ಬರುತ್ತಾರೆ. ಅವರ ವೃತ್ತಿಕ್ಷೇತ್ರದ ಕಾರ್ಯಗಳು ಎಷ್ಟೇ ಕ್ಷೀಣವಾಗುತ್ತಿರಲಿ, ಪರಾಭವಗೊಳ್ಳುತ್ತಿರಲಿ ಅದರ ಬಗ್ಗೆ ಅವರಿಗೆ ಚಿಂತೆಯೇ ಇಲ್ಲ. ಅವರಿಗೆ ನಾವು ದೀಪಾವಳಿ ಹಬ್ಬದಿಂದ ತಂದೊಡ್ಡುತ್ತಿರುವ ಅಪಾಯಗಳ ಬಗ್ಗೆಯೇ ಚಿಂತೆ. ಉದಾಹರಣೆಗೆ, ನಮ್ಮ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ತೆಗೆದುಕೊಳ್ಳಿ. ಕಳೆದ ಎರಡು ವರ್ಷಗಳಿಂದ ಒಂದೇ ಒಂದು ಶತಕವನ್ನು ಬಾರಿಸದೆ, ಐಪಿಎಲ್ ನಲ್ಲಿ ತಮ್ಮ ಆರ್.ಸಿ.ಬಿ ತಂಡಕ್ಕೆ ಒಂದೇ ಒಂದು ಗೆಲುವನ್ನೂ ತಂದುಕೊಡದೆ ತಮ್ಮ ವೃತ್ತಿ ಜೀವನದ ಬಗ್ಗೆ ಅಭಿಮಾನಿಗಳಿಂದ ಆಕ್ರೋಶಕ್ಕೆ ಗುರಿಯಾಗಿದ್ದರೂ ಅವರಿಗೆ ನಮ್ಮ ದೀಪಾವಳಿ ಹಬ್ಬದ ಬಗ್ಗೆಯೇ ಚಿಂತೆ. ನಾವು ಹೇಗೆ ದೀಪಾವಳಿಯನ್ನು ಆಚರಿಸಬೇಕೆಂದು ಪಾಠ ಮಾಡುತ್ತಾರೆ. ಈ ದೇಶದ ಬಹುಸಂಖ್ಯಾತ ಹಿಂದೂಗಳಿಗೆ ಅವರ ಹಬ್ಬಗಳ ಆಚರಣೆಯ ಬಗ್ಗೆ ಪಾಠ ಮಾಡುವ ಇವರು ಕ್ರಿಕೆಟ್ ತಂಡದ ಅಭಿಮಾನಿಗಳು ದೇಶಪ್ರೇಮದಿಂದ ಅವರ ತಂಡದ ಸೋಲನ್ನು ಪ್ರಶ್ನಿಸಿ ಪಾಠ ಹೇಳಿದರೆ ಮಾತ್ರ ಸಹಿಸಿಕೊಳ್ಳುವುದಿಲ್ಲ. ಅವರ ಪ್ರಕಾರ ‘ಇಟ್ ಇಸ್ ಜಸ್ಟ್ ಎ ಮ್ಯಾಚ್’. ಹೌದೆ? ಯಾವ ಕಾಲದಲ್ಲಿ ಭಾರತ-ಪಾಕಿಸ್ತಾನ ದೇಶಗಳ ನಡುವೆ ನಡೆಯುತ್ತಿದ್ದ ಪಂದ್ಯಗಳು ಕೇವಲ ಪಂದ್ಯಗಳಾಗಿದ್ದವು? ಇದು ಕೇವಲ ಪಂದ್ಯವಾಗಿದ್ದರೆ ಪಾಕಿಸ್ತಾನದ ಕ್ರಿಕೆಟಿಗರು ವಿಜೇತರಾದ ನಂತರ ಮೈದಾನದಲ್ಲೇ ನಮಾಜ್ ಅನ್ನು ಏಕೆ ಮಾಡಿದರು? ಭಾರತದಲ್ಲೇ ಇರುವ ದೇಶದ್ರೋಹಿ ಪಾಕ್ ಪ್ರೇಮಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಏಕೆ ಕೂಗಿದರು? ಈ ರೀತಿಯ ದಾರುಣ ದೃಶ್ಯಗಳನ್ನು ನೋಡಲೆಂದು ನಮ್ಮ ಸೈನಿಕರು ಗಡಿಯಲ್ಲಿ ಹುತಾತ್ಮರಾಗುತ್ತಿದ್ದಾರಾ? ಅಯ್ಯೋ, ಕೊಹ್ಲಿ ಅವರ ಕ್ಯಾಪ್ಟನ್ ಗಿರಿಯನ್ನು ಪ್ರಶ್ನಿಸುವ ಅಧಿಕಾರ ನಮ್ಮಂತಹ ಸಾಮಾನ್ಯ ಪ್ರಜೆಗಳಿಗೆಲ್ಲಿದೆ? ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಅಂತಹ ಕ್ರಿಕೆಟ್ ದಿಗ್ಗಜರ ಮೇಲೂ ಕಠಿಣ ಕ್ರಮವನ್ನು ಕೈಗೊಂಡಿದ್ದ ಬಿಸಿಸಿಐ ಕೂಡ ಕೊಹ್ಲಿ ಅವರ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲವಲ್ಲ! ನಮ್ಮ ದೇಶದ ಕ್ರಿಕೆಟ್ ಅಭಿಮಾನಿಗಳ ಹೃದಯಕ್ಕೆ ಇಷ್ಟೊಂದು ದುಃಖವನ್ನು ನೀಡಿದ ಮೇಲೂ ಒಮ್ಮೆ ಕ್ಷಮೆ ಯಾಚಿಸದ ಅಥವಾ ಭರವಸೆಯನ್ನು ನೀಡದ ಕ್ಯಾಪ್ಟನ್ ಸರ್ ಅವರು ಮೊಹಮ್ಮದ್ ಶಮ್ಮಿಗೆ ನಿಂದನೆ ಮಾಡಿದ ಕೆಲವು ನಕಲಿ ಖಾತೆಗಳನ್ನು(ಪಾಕಿಸ್ತಾನಿಗಳ ಖಾತೆ) ನಿಜವಾದ ಭಾರತೀಯರ ಖಾತೆಗಳೆಂದು ಪರಿಗಣಿಸಿ, ಅವರನ್ನೇ ನಿಂದಿಸುತ್ತಿರುವುದು ಅವರ ಮಾನಸಿಕತೆ ಯಾವ ಹಂತ ತಲುಪಿದೆ ಎಂಬುದನ್ನು ಪ್ರದರ್ಶಿಸುತ್ತದೆ. ಕಳೆದ ಎರಡು ಪಂದ್ಯಗಳಿಂದ ನಮ್ಮ ದೇಶದ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಆರ್. ಸಿ.ಬಿ ತಂಡದ ಅಭಿಮಾನಿಗಳ ನೋವು ಹೇಗಿರುತ್ತದೆ ಎಂಬ ಅಂದಾಜು ಸಿಕ್ಕಿರಬಹುದು.

ಹೀಗೆ ಪ್ರತಿಬಾರಿಯೂ ನಮ್ಮ ಹಬ್ಬಗಳ ಬಗ್ಗೆ ಜ್ಞಾನವನ್ನು ನೀಡಲು ಸೆಲೆಬ್ರಿಟಿಗಳು ಮುಂದೆ ಬರುವಂತೆ ನಮ್ಮ ಸೈನಿಕರೊ ಅಥವಾ ಆರಕ್ಷಕರೊ ಮುಂದೆ ಬಂದರೆ ಜನರ ಪ್ರತಿಕ್ರಿಯೆ ಹೇಗಿರಬಹುದು ಯೋಚಿಸಿದ್ದೀರಾ? ಇನ್ನಾದರೂ ನಮ್ಮ ಕ್ರಿಕೆಟ್ ಕ್ಯಾಪ್ಟನ್ ಅವರು ಪ್ರಿಯಾಂಕಾ ಚೋಪ್ರಾ, ಗ್ರೆಟಾ ಥನ್ಬರ್ಗ್ ರೊಂದಿಗೆ ಸ್ಪರ್ಧೆ ಮಾಡುವ ಬದಲು ಅನ್ಯ ದೇಶಗಳ ಕ್ರಿಕೆಟ್ ಕ್ಯಾಪ್ಟನ್ ರೊಂದಿಗೆ ಸ್ಪರ್ಧೆ ಮಾಡುವ ಮೂಲಕ ತಮ್ಮ ಹಿಂದಿನ ವಿರಾಟ ಪ್ರದರ್ಶನಗಳನ್ನು ಪುನರ್ ನಿರ್ಮಿಸಲಿ. ಇನ್ನು ನಮ್ಮ ಸರ್ಕಾರಗಳು ಯಾವ ಯಾವ ರೀತಿಯಲ್ಲಿ ಪಟಾಕಿ ಸಂಭ್ರಮಕ್ಕೆ ಷರತ್ತುಗಳನ್ನು ವಿಧಿಸಿವೆ ತಿಳಿಯೋಣ. ಮೊದಲನೆಯದಾಗಿ ದೆಹಲಿ ಸರ್ಕಾರ. ಅದರ ಕಥೆಯಂತೂ ನಮಗೆಲ್ಲರಿಗೂ ತಿಳಿದೇ ಇದೆ. ಅರವಿಂದ್ ಕೇಜ್ರಿವಾಲ್ ಎಂಬ ಮುಖ್ಯಮಂತ್ರಿಯನ್ನು ಪಡೆದಿರುವ ದೆಹಲಿಯಲ್ಲಿ ಪಟಾಕಿ ಸಂಭ್ರಮಕ್ಕೆ ಅವಕಾಶವೇ ಇಲ್ಲ. ಹಲವಾರು ವರ್ಷಗಳಿಂದ ತಮ್ಮ ಸರ್ಕಾರದ ವಾಯುಮಾಲಿನ್ಯ ನಿಯಂತ್ರಣದ ವೈಫಲ್ಯವನ್ನು ಮರೆ ಮಾಡಲು ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ದೂಷಿಸಿ, ನಿಷೇಧ ಮಾಡುತ್ತಾರೆ. ಇವರು ಅನುಸರಿಸುತ್ತಿರುವ ಈ ವಿಧಾನವು ಎಲ್ಲಾ ಸರ್ಕಾರಗಳಿಗೂ ತಾವು ಪರಿಸರ ಮಾಲಿನ್ಯ ನಿಯಂತ್ರಣದ ಕಾರ್ಯವನ್ನು ಮಾಡುತ್ತಿರುವಂತೆ ತೋರ್ಪಡಿಸಿಕೊಳ್ಳಲು ಅತ್ಯಂತ ಸುಲಭಕರವಾಗಿದೆ. ಆದ್ದರಿಂದಲೇ ಛತ್ತೀಸ್ ಗಢ ಸರ್ಕಾರವು ರಾತ್ರಿ8ರಿಂದ 10ರವರೆಗೆ ಮಾತ್ರ ಪಟಾಕಿಗಳನ್ನು ಹೊಡೆಯುವಂತೆ ಆದೇಶಿಸಿದೆ. ಪಂಜಾಬ್ ಸರ್ಕಾರವು ಹಸಿರು ಪಟಾಕಿಯ ಹೊರತು ಉಳಿದೆಲ್ಲಾ ಪಟಾಕಿಗಳ ನಿರ್ಮಾಣ, ಮಾರಾಟ, ವಿತರಣೆಯನ್ನು ನಿಷೇಧಿಸಿದೆ. ಹಾಗೆಯೇ ಹರಿಯಾಣ ಸರ್ಕಾರವು ರಾಷ್ಟ್ರ ರಾಜಧಾನಿ ಭಾಗದಲ್ಲಿ ಬರುವ 14 ಜಿಲ್ಲೆಗಳಲ್ಲಿ ಪಟಾಕಿಯನ್ನು ನಿಷೇಧಿಸಿದೆ.

ಕಳೆದ 2 ವರ್ಷಗಳ ಹಿಂದೆ ಅಮೆರಿಕಾದ ನಾಸಾ ಸಂಸ್ಥೆಯು ದೆಹಲಿಯ ವಾಯುಮಾಲಿನ್ಯಕ್ಕೆ ಕಾರಣ ಪಂಜಾಬ್, ಹರಿಯಾಣ ಭಾಗಗಳಲ್ಲಿ ಹೆಚ್ಚುವರಿ ಬೆಳಸಸಿಗಳನ್ನು ಸುಡುವುದು ಎಂಬ ವರದಿಯನ್ನು ನೀಡಿದೆ. ಸರ್ಕಾರಗಳ ಷರತ್ತಿನ ಜೊತೆಗೆ ಅದೆಷ್ಟೇ ಅಗಾಧವಾದ ಬಗೆಹರಿಯದ ಕೇಸ್ ಗಳನ್ನು ಒಳಗೊಂಡಿದ್ದಾಗ್ಯು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗಳು ದೀಪಾವಳಿಯ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಬಗೆಗೆ ಕಾಳಜಿ ವಹಿಸುತ್ತವೆ. ಕೊಲ್ಕತ್ತಾ ಹೈಕೋರ್ಟ್ ಎತ್ತಿಹಿಡಿದಿದ್ದ ಸಂಪೂರ್ಣ ಪಟಾಕಿ ನಿಷೇಧದ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಧ್ವನಿಯೆತ್ತಿ ಹಸಿರು ಪಟಾಕಿಗಳಿಗೆ ಅನುಮತಿ ನೀಡಿರುವುದು ಸಮಾಧಾನ ತಂದಿದೆ. ಆದರೂ ಇಷ್ಟೆಲ್ಲಾ ವಿಶ್ಲೇಷಿಸಿದ ಮೇಲೆ ಕಾಡುವುದೇನೆಂದರೆ ವಾಯು ಮಾಲಿನ್ಯ, ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಉದ್ಯಮವಲಯದ ಅವ್ಯವಸ್ಥೆಗಳು, ಸೆಲೆಬ್ರಿಟಿಗಳ ಐಷಾರಾಮಿ ಜೀವನ ಶೈಲಿಯಿಂದಾಗುವ ಹಾನಿಗಳು, ಮಾಲಿನ್ಯ ನಿಯಂತ್ರಣದಲ್ಲಿ ವೈಫಲ್ಯವನ್ನು ಅನುಭವಿಸುತ್ತಿರುವ ಸರ್ಕಾರಗಳ ಯೋಜನೆಗಳು, ಜನ-ಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸದ ಅಧಿಕಾರಿಗಳು ಇತ್ಯಾದಿಗಳನ್ನು ಬಿಟ್ಟು ದೀಪಾವಳಿ ಹಬ್ಬವನ್ನು ಗುರಿ ಮಾಡಿಕೊಂಡು ಎಲ್ಲರ ಸಂಭ್ರಮಕ್ಕೂ ಕಲ್ಲು ಹಾಕುತ್ತಿರುವುದು.ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ವರ್ಗದವರು ಉದ್ಯಮವಲಯ, ಅಧಿಕಾರವರ್ಗಗಳೊಂದಿಗೆ ಸೆಣಸಾಡಿ ಅಸಂಖ್ಯ ಕಾರ್ಯ-ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾದ, ಅಂತಹ ದಕ್ಷತೆಯಿಂದ ಪರಿಸರ ಸಂರಕ್ಷಣೆಯನ್ನು ಮಾಡಬೇಕಾದ ಕಾಠಿಣ್ಯದ ವಿವಶತೆಯಿಂದ ತಪ್ಪಿಸಿಕೊಳ್ಳುವ ನಿರಾಯಾಸದ ಮಾರ್ಗವಾಗಿ ಉದಾರವಾದಿ ಹಿಂದೂಗಳ ಹಬ್ಬವಾದ ದೀಪಾವಳಿಯನ್ನು ಗುರಿ ಮಾಡುವ ಕಾಯಕವನ್ನು ಕಂಡುಕೊಂಡರಾ? ಹಾಗಾದರೆ ಪಟಾಕಿರಹಿತ ದೀಪಾವಳಿ ಮಾತ್ರ ಏಕೆ? ರಕ್ತರಹಿತ ಬಕ್ರೀದ್ ಹಾಗೂ ವೃಕ್ಷರಹಿತ ಕ್ರಿಸ್ಮಸ್ ಏಕಿಲ್ಲ? ಜಾತ್ಯಾತೀತತೆಯ ಹೆಸರಿನಲ್ಲಿ ಇನ್ನೆಷ್ಟು ಪ್ರಮಾದಗಳನ್ನು ಈ ದೇಶದಲ್ಲಿ ಕಾಣಬೇಕಾಗುವುದೋ ಏನೋ!

ಅಷ್ಟಕ್ಕೂ ಹಿಂದೂವಿರೋಧಿ ಮಾನಸಿಕತೆಯಿಂದ ಭ್ರಮಿತರು ಮಾಡುತ್ತಿರುವ ಈ ಅಜ್ಞಾನದ ಕಾರ್ಯಗಳಿಗೆ ನಮ್ಮ ಮುಂದಿನ ಜನಾಂಗದವರು ಬೆಲೆ ತೆತ್ತಬೇಕಾಗುತ್ತದೆಯೇ? ಖಂಡಿತಾ ಹೌದು. ಹೇಗೆಂಬುದನ್ನು ವಿಶ್ಲೇಷಿಸೋಣ ಬನ್ನಿ. ಭಾರತೀಯ ಪರಂಪರೆಯಲ್ಲಿ ನಡೆದುಕೊಂಡು ಬರುತ್ತಿರುವ ಹಬ್ಬಗಳು ಮಾನವ ಜೀವನದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ.ಹಬ್ಬಗಳು ನಮ್ಮ ಜೀವನದ ಸಂತೋಷ, ಉತ್ಸಾಹ, ಆಧ್ಯಾತ್ಮ ಹಾಗೂ ಅವೆಲ್ಲಕ್ಕಿಂತ ಮಿಗಿಲಾಗಿ ಧರ್ಮರಕ್ಷಣೆಯ ಮಹತ್ತರವಾದ ಜವಾಬ್ದಾರಿಯನ್ನು ನಿರ್ವಹಿಸಲು ಹಾಗೂ ಅದರ ಮೂಲಕ ಮಾನವ ಸಮಾಜದ ಕಲ್ಯಾಣವನ್ನು ಸಾಧಿಸಲು ಮಾಡಬೇಕಾಗಿರುವ ಆಚರಣೆಗಳಾಗಿವೆ. ಹೌದು, ನಮ್ಮ ಸನಾತನ ಹಿಂದೂ-ಧರ್ಮದ ಹಬ್ಬಗಳೆಂದರೆ ಕೇವಲ ಹೊಸ ವಸ್ತ್ರ ಧರಿಸುವುದು, ಸಿಹಿ ತಿನ್ನುವುದು, ಖುಷಿಯಾಗಿರುವುದು ಅಷ್ಟೇ ಅಲ್ಲ. ಈ ಹಬ್ಬಗಳ ಆಚರಣೆಗಳು ವಿಧ-ವಿಧದ ಪ್ರಕ್ರಿಯೆಗಳನ್ನು ಹೊಂದಿದ್ದರೂ ಅವುಗಳ ಮೂಲ ಉದ್ದೇಶ ಒಂದೇ ಆಗಿದೆ. ಅದುವೇ ಧರ್ಮರಕ್ಷಣೆಯ ಮೂಲಕ ಮಾತ್ರವೇ ಸಾಧಿಸಬಹುದಾದ ಸಮಸ್ತ ಮಾನವಜನಾಂಗದ ಕಲ್ಯಾಣ. ಸನಾತನ ಧರ್ಮದ ಪ್ರತಿಯೊಂದು ಹಬ್ಬಗಳು ಆಚರಣೆಗೊಳ್ಳುವ ಸಂದರ್ಭ ಹಾಗೂ ಅದರ ಪರಿಗಳು ವೈಜ್ಞಾನಿಕ ಕಾರಣದೊಂದಿಗೆ ಸಮ್ಮಿಳಿತವಾಗಿದೆ. ಉದಾಹರಣೆಗೆ ದೀಪಾವಳಿ ಹಬ್ಬವು ಚಳಿಗಾಲದ ಋತುವಿನಲ್ಲಿ ಆಚರಿಸುವ ಹಬ್ಬವಾಗಿದೆ. ಈ ಋತುವಿನಲ್ಲಿ ಸಮಸ್ತ ವಿಶ್ವದ ಜೀವಜಗತ್ತು ನಿಸ್ತೇಜವಾಗುತ್ತಾ ಬರುತ್ತದೆ. ಈ ಸಂದರ್ಭದಲ್ಲಿ ಜೀವಜಗತ್ತು ನಿಷ್ಕ್ರಿಯವಾಗಿರುವ ಕಾರಣ ಹೊಸ ಮೊಳಕೆಯೊಡಲು ಸಾಧ್ಯವಿಲ್ಲವೆಂದು ಬಿತ್ತನೆಯನ್ನು ಸಹ ಮಾಡಲಾಗುವುದಿಲ್ಲ. ಇದೇ ರೀತಿ ಮಾನವರು ಈ ಋತುವಿನ ವಾತಾವರಣದಂತೆ ನಿಸ್ತೇಜರಾಗಿ, ನಿರುತ್ಸಾಹವನ್ನು ಅನುಭವಿಸುತ್ತಾ, ನಿವೃತ್ತಿ ಮನೋಭಾವವನ್ನು ಸಮೀಪಿಸುತ್ತಿರುತ್ತಾರೆ. ಆದ್ದರಿಂದ ಜನರು ಇಂತಹ ದುರ್ಬಲ ಸಮಯದಲ್ಲಿ ಈ ಎಲ್ಲಾ ನಕಾರಾತ್ಮಕತೆಗಳನ್ನು ಮೆಟ್ಟಿ ಭಕ್ತಿ, ಪ್ರೀತಿ, ಸಂತಸ, ಜೀವನೋತ್ಸಾಹದಂತಹ ಸಕಾರಾತ್ಮಕತೆಗಳನ್ನು ತಮ್ಮ ಜೀವನದಲ್ಲಿ ಮತ್ತೆ ತುಂಬಿಕೊಳ್ಳಲು ದೀಪ ಹಾಗೂ ಪಟಾಕಿಗಳ ಮೊರೆ ಹೋಗುತ್ತಾರೆ. ಈಗ ಹೇಳಿ, ಸಾವಿರಾರು ವರ್ಷಗಳ ತಪಸ್ಸಿನ ಫಲವಾಗಿ ಅರಿತು ಕೊಂಡಿರುವ ಅತ್ಯಂತ ಶ್ರೇಷ್ಠ ಮಾನವ ಜೀವನ ಪದ್ಧತಿಯಾದ ಸನಾತನ ಧರ್ಮದ ಆಚರಣೆಗಳನ್ನು ಅರ್ಥೈಸಿಕೊಳ್ಳದ ಅಥವಾ ಅರ್ಥೈಸಿಕೊಂಡಿಯೂ ಜಾಣಕುರುಡರಾಗಿ ನಟಿಸುವ ಲೋಭಗೊಂಡ ಜನರು ಇದೇ ರೀತಿಯಲ್ಲಿ ತಮ್ಮ ಸ್ವಾರ್ಥ-ಹಿತಾಸಕ್ತಿಗಳಾಗಿ ಈ ತೆರನಾದ ಸಮಸ್ತ ಮಾನವ ಜನಾಂಗ ಕಲ್ಯಾಣದ ಆಚರಣೆಗಳನ್ನು ವಿರೋಧಿಸುತ್ತಾ ಬಂದರೆ ಈ ಲೋಕ ಉಳಿಯುವುದೇ? ಈ ಸಮಾಜದಲ್ಲಿ ಮಾನವರ ಬದುಕು ಅರ್ಥಗರ್ಭಿತವಾಗುವುದೇ? ನೀವೇ ಸ್ವಯಂ ಚಿಂತಿಸಿ.

Leave a Reply

Your email address will not be published.

This site uses Akismet to reduce spam. Learn how your comment data is processed.