20 ಫೆಬ್ರವರಿ 2021, ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಸೂರ್ಯನಗರದಲ್ಲಿರುವ ಎಡಿಫೈ ಸ್ಕೂಲ್ ನಲ್ಲಿ ವಿಶಿಷ್ಟ ರೀತಿಯ ‘ದತ್ತ ಅಮೃತವನ’ದ ಉದ್ಘಾಟನೆ ಇಂದು ನಡೆಯಿತು. ಜಪಾನ್ ನ ಮಿಯಾವಾಕಿ ಮಾದರಿಯಲ್ಲಿ ಕಡಿಮೆ ಜಾಗದಲ್ಲಿ ಗಿಡಗಳನ್ನು ಒತ್ತು ಒತ್ತಾಗಿ ಬೆಳೆಸಿ ದಟ್ಟ ಅರಣ್ಯ ಮಾಡುವ ವಿಧಾನವನ್ನು ಜಪಾನಿನ ಮಿಯಾವಾಕಿ ಎನ್ನುತ್ತಾರೆ. ದಶಕಗಳ ಹಿಂದೆ ಪ್ರಾರಂಭಿಸಿದ ಈ ಮಾದರಿಯ ವನಗಳು ಹೆಚ್ಚು ಖಾಲಿ ಜಾಗ ಸಿಗದಿರುವ ನಗರ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಎಡಿಫೈ ಶಾಲೆಯ ಆವರಣದಲ್ಲಿ 50 ಅಡಿ ಉದ್ದ 50 ಅಡಿ ಅಗಲದ ಜಾಗದಲ್ಲಿ ಸುಮಾರು 625 ರಷ್ಟು ಗಿಡಗಳನ್ನು ನೆಟ್ಟು ಅದಕ್ಕೆ ‘ದತ್ತ ಅಮೃತ ವನ’ ಎಂದು ನಾಮಕರಣ ಮಾಡಲಾಯಿತು.
ಆರೆಸ್ಸೆಸ್ಸಿನ ಪರ್ಯಾವರಣ ವಿಭಾಗ ಹಾಗೂ ಎಡಿಫೈ ಶಾಲೆಯ ಸಹಯೋಗದಲ್ಲಿ ನಿರ್ಮಾಣವಾದ ಈ ವನವನ್ನು ಚಿತ್ರದುರ್ಗದ ಸಂಸದ ನಾರಾಯಣ ಸ್ವಾಮಿ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಅವರು ಮಾತನಾಡಿ ಇಂತಹ ವನಗಳು ಎಲ್ಲೆಡೆ ಹೆಚ್ಚು ಹೆಚ್ಚು ನಿರ್ಮಾಣವಾಗಲಿ. ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ನಗರಪ್ರದೇಶಗಳಲ್ಲಿ ಇಂತಹ ವನಗಳನ್ನು ನಿರ್ಮಿಸುತ್ತಿರುವುದು ಪ್ರಶಂಸನೀಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಅಧಿಕಾರಿ ಮದನ್ ಗೋಪಾಲ್ ಅವರು ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಪ್ರತಿ ಗಿಡಮರಗಳನ್ನು ಗೌರವಿಸುವ ಪದ್ಧತಿ ಇದೆ. ಪ್ರಕೃತಿಯೇ ನಮಗೆ ದೇವರು. ಅದನ್ನು ಸಂರಕ್ಷಿಸಿದರೆ, ಅದು ನಮ್ಮನ್ನು ಸಂರಕ್ಷಿಸುತ್ತದೆ. ಆ ಹಿನ್ನೆಲೆಯಲ್ಲಿಯೇ ಪ್ರಕೃತಿಯನ್ನು ಪೂಜಿಸುವ ಪರಂಪರೆ ನಮ್ಮಲ್ಲಿ ಬೆಳೆದಿದೆ ಎಂದರು. ಇತ್ತೀಚೆಗೆ ಹೆಚ್ಚುತ್ತಿರುವ ಪ್ರಕೃತಿ ವಿಕೋಪಗಳಿಗೆ ಪ್ರಕೃತಿಯ ಮೇಲಿನ ದೌರ್ಜನ್ಯವೇ ಕಾರಣ ಎಂದು ಅಭಿಪ್ರಾಯಪಟ್ಟರು. ತಾನು ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾಗ ಅರಣ್ಯ ಇಲಾಖೆ ನೆಟ್ಟು ಬೆಳೆಸಿದ ಗಿಡದಲ್ಲಿ 40% ಬದುಕಿದ್ದರೆ, ಜನರಿಗೇ ಪ್ರೋತ್ಸಾಹ ಕೊಟ್ಟು ಅರಣ್ಯ ಬೆಳೆಸಿದಾಗ 92% ಗಿಡಗಳು ಬದುಕಿದ್ದು ಗಮನಿಸಿದ್ದೇನೆ. ಸರ್ಕಾರವೇ ಎಲ್ಲವನ್ನೂ ಮಾಡದೇ ಜನರನ್ನು ತೊಡಗಿಸಿಕೊಂಡು ಮಾಡಿದಾಗ ಯಶಸ್ಸು ಸಾಧ್ಯ ಎಂದರು.
ವಿಕ್ರಮ ವಾರಪತ್ರಿಕೆ ಮತ್ತು ಸಂವಾದ ಚಾನೆಲ್ ನ ಸಂಪಾದಕ ಹಾಗೂ ಅಮೃತವನದ ಪರಿಕಲ್ಪನೆಯನ್ನು ಶಾಲೆಗೆ ಪರಿಸಿಚಯಿಸಿದ ವೃಷಾಂಕ ಭಟ್ ಮಾತನಾಡಿ, ಪರಿಸರ ಸಂರಕ್ಷಣೆ ಎನ್ನುವುದು ನಾವು ಯಾರಿಗೋ ಮಾಡುವ ಉಪಕಾರವಲ್ಲ. ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದರೆ ಪ್ರಕೃತಿಯ ರಕ್ಷಣೆ ಅಗತ್ಯ ಎಂದರು. ಜಪಾನಿನ ಈ ಮಾದರಿಯ ವನ ಇತ್ತೀಚೆಗೆ ‘ಅಮೃತವನ’ ಎಂಬ ಹೆಸರಿನಲ್ಲಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಈ ವನವನ್ನು ನಿರ್ಮಾಣ ಮಾಡುವಲ್ಲಿ ಎಡಿಫೈ ಶಾಲೆಯ ಅಶೋಕ್ ಗೌಡ ಅವರ ಪ್ರಯತ್ನ ಇತರ ಶಾಲೆಗಳಿಗೂ ಮಾದರಿ ಎಂದು ಪ್ರಶಂಸಿಸಿದರು. ಯಾವುದೇ ಶಾಲೆ, ದೇವಸ್ಥಾನ, ಸಂಘ ಸಂಸ್ಥೆಗಳು ತಮ್ಮ ಜಾಗದಲ್ಲಿ ಇಂತಹ ಅಮೃತವನಗಳನ್ನು ನಿರ್ಮಾಣ ಮಾಡಲು ಮುಂದೆ ಬಂದರೆ ತಾವು ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದರು.
(ಆಸಕ್ತರು ವೃಷಾಂಕ ಭಟ್ ಅವರನ್ನು 99640 00635 ಸಂಖ್ಯೆಯಲ್ಲಿ ಸಂಪರ್ಕಿಸಬಹುದು)