– ದೀಕ್ಷಿತ್ ನಾಯರ್‌, ಮಂಡ್ಯ, ಹವ್ಯಾಸಿ ಬರಹಗಾರರು


ಇಂದು ಪ್ರಸಿದ್ಧ ಲೇಖಕಿ ಎಂ.ಕೆ ಇಂದಿರಾ ಅವರ ಜನ್ಮದಿನದ ಅಂಗವಾಗಿ ಸಂಸ್ಮರಣಾ ಲೇಖನ

“ಒಂದು ಹೆರಿಗೆ ಮಾಡಿದರೆ ಒಂದು ಸಾರಿ ಕಾಶೀ ಯಾತ್ರೆ ಮಾಡಿದ ಪುಣ್ಯ. ಯಾರಾದರೇನು ಜೀವ ಎನ್ನುವುದು ದೊಡ್ಡದಲ್ಲವೇ?” ಈ ತೆರನಾದ ವೈಚಾರಿಕ ಪ್ರಜ್ಞೆ ಮತ್ತು ಮಾನವೀಯ ಸ್ಪಂದನದ ಮಾತುಗಳು ಹೊರ ಹೊಮ್ಮಿದ್ದು ಫಣಿಯಮ್ಮ ಎಂಬ ಕಾದಂಬರಿಯೊಳಗಿನ ಜೀವಂತ ಪಾತ್ರದ ಬಾಯಿಯಿಂದ. ಫಣಿಯಮ್ಮ ಮಡಿ ಹೆಂಗಸಾದರೂ ಮಡಿವಂತಿಕೆಯನ್ನು ಮೀರಿ ಹೃದಯ ವೈಶಾಲ್ಯತೆ ತೋರಿದವಳು. ತುಂಗಾ ನದಿಯಂತೆಯೇ ಶಾಂತವಾಗಿ ಹರಿದವಳು. ಕಟ್ಟುಪಾಡಿನ ಸಮಾಜದ ಎದುರು ಟೊಂಕ ಕಟ್ಟಿ ನಿಂತು ಪ್ರಗತಿಪರ ವಿಚಾರಗಳಿಗೆ ಶತಮಾನಗಳ ಹಿಂದೆಯೇ ನಾಂದಿ ಹಾಡಿದವಳು. ಫಣಿಯಮ್ಮ ಇಂದಿಗೂ ಓದುಗರನ್ನು ನಿಬ್ಬೆರಗಾಗಿಸುತ್ತಾ ಬಿಟ್ಟೂ ಬಿಡದೆ ಕಾಡುತ್ತಾಳೆ.

ಫಣಿಯಮ್ಮ ಎಂಬ ಅದ್ಭುತ ಪಾತ್ರವನ್ನು ಸೃಷ್ಟಿಸಿದ ಎಂ ಕೆ ಇಂದಿರಾ ಅವರನ್ನು ಮರೆಯುವುದುಂಟೆ? ಸತ್ಯತೆಯ ಕಥೆ ಮತ್ತು ಅಂತಃಕರಣದ ಸಂಭಾಷಣೆಗಳಿಂದ ಫಣಿಯಮ್ಮ ಎಂಬ ವಿಶಿಷ್ಟ ಕಾದಂಬರಿಯನ್ನು ಬರೆದು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ಶತಮಾನದ ಪ್ರಾತಃ ಸ್ಮರಣೀಯ ಲೇಖಕಿಯಾದ ಎಂ.ಕೆ ಇಂದಿರಾ ಅವರು ಇಂದಿಗೂ ಫಣಿಯಮ್ಮ ಎಂಬ ಪಾತ್ರವಾಗಿಯೇ ನಮ್ಮ ನಡುವೆ ಜೀವಂತವಾಗಿದ್ದಾರೆ. ಇಂದಿನ ಬಹುತೇಕರಿಗೆ ಎಂ ಕೆ ಇಂದಿರಾ ಅವರ ಪರಿಚಯವಿರಲಿಕ್ಕಿಲ್ಲ (?) ಇಂದಿರಾ ಅವರ ಪರಿಚಯವಿದ್ದು ಅವರ ಕೃತಿಗಳನ್ನು ಓದಿಕೊಂಡವರಿದ್ದರೆ ಅವರು ನಿಜಕ್ಕೂ ಅಪ್ಪಟ ಓದುಗರೆಂದೇ ಅರ್ಥ. ಕನ್ನಡ ಕಾದಂಬರಿ ಮತ್ತು ಕಥಾ ಪರಂಪರೆ ಎಂದೊಡನೆ ಎಂ ಕೆ ಇಂದಿರಾ ಅವರ ಹೆಸರನ್ನು ಪ್ರಸ್ತಾಪಿಸದೆ ನಾವು ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲ. ಎಂ ಕೆ ಇಂದಿರಾ ಅವರು ಮಹತ್ವಕಾಂಕ್ಷೆಯ ಲೇಖಕಿ ಅಲ್ಲದಿದ್ದರೂ ಮಹತ್ತರವಾದ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಿದವರು. ಅವರು ಬರೆದ ಫಣಿಯಮ್ಮ ಮತ್ತು ಗೆಜ್ಜೆಪೂಜೆ ಕೃತಿಗಳಂತೂ ಕೇವಲ ಕನ್ನಡದ ಓದುಗರನ್ನಷ್ಟೇ ಅಲ್ಲದೆ ದೇಶ ವಿದೇಶದ ಓದುಗರನ್ನು ಸೆಳೆದಿದೆ. ಆ ಎರಡು ಕೃತಿಗಳು ಚಲನಚಿತ್ರವಾಗಿಯೂ ತೆರೆಯ ಮೇಲೆ ಕಾಣಿಸಿಕೊಂಡು ಅಸಂಖ್ಯಾತರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗಂತ ಎಂ ಕೆ ಇಂದಿರಾ ಅವರನ್ನು ಕೇವಲ ಆ ಎರಡು ಕೃತಿಗಳಿಗೆ ಸೀಮಿತ ಮಾಡುವ ಹಾಗೇ ಇಲ್ಲ. ಅವರು ಪ್ರಾರಂಭದ ದಿನಗಳಲ್ಲಿ ಬರೆದ ಸದಾನಂದಾ, ಚಿದ್ವಿಲಾಸ, ಪೂರ್ವಾಪರ, ಆತ್ಮಸಖಿ, ಸ್ಪೂರ್ತಿ, ಜಾತಿ ಕೆಟ್ಟವಳು, ಹಸಿವು,ಡಾಕ್ಟರ್, ಶಾಂತಿಧಾಮ, ಜಾಲ, ಗಿರಿಬಾಲೆ ಹೀಗೆ ಇಂದಿರಾ ಅವರ ಅರವತ್ತಕ್ಕೂ ಹೆಚ್ಚು ಕೃತಿಗಳು ಕನ್ನಡ ಸಾಹಿತ್ಯ ಲೋಕದೊಳಗೆ ಒಂದು ವಿಭಿನ್ನ ಪ್ರಯೋಗ ಎಂತಲೇ ಕರೆಸಿಕೊಂಡಿದೆ.

ಎಂ ಕೆ ಇಂದಿರಾ ಅವರಲ್ಲಿದ್ದ ವಿಚಾರವಂತಿಕೆ, ಹೊಸತನಕ್ಕೆ ತೆರೆದುಕೊಳ್ಳಲು ಸಿದ್ಧವಿದ್ದ ಅವರ ಮನಸ್ಥಿತಿ, ಹೇಳಬೇಕೆನಿಸಿದ್ದನ್ನು ನೇರ ಮತ್ತು ನಿಷ್ಠುರವಾಗಿ ಯಾವ ಮುಲಾಜಿಲ್ಲದೆ ನಿರ್ಭಿಡೆಯಿಂದ ಬರವಣಿಗೆಯ ಮೂಲಕ ಹೊರ ಹಾಕುತ್ತಿದ್ದ ರೀತಿಯೇ ಅವರಿಗೇ ಆದ ಒಂದು ಓದುಗ ವರ್ಗವನ್ನು ಸೃಷ್ಟಿಸಿ ಕೊಟ್ಟಿತ್ತು ಎಂದರೂ ತಪ್ಪಾಗಲಿಕ್ಕಿಲ್ಲ. ಎಂ ಕೆ ಇಂದಿರಾ ಅವರ ಪ್ರತಿ ಕೃತಿಯಲ್ಲೂ ಸಮಾಜ ಮತ್ತು ಸ್ತ್ರೀ ಪರ ಕಾಳಜಿ ಇದೆ. ನಿರಭ್ರ ಪ್ರೀತಿಯ ಕುರಿತಾದ ವಿಶ್ಲೇಷಣೆ ಇದೆ. ಅಂದಿನ ಕಾಲದಲ್ಲಿ ಸಮಾಜದಲ್ಲಿ ಬೇರೂರಿದ್ದ ಮೌಢ್ಯತೆ, ಕಂದಾಚಾರ ಮತ್ತು ಅನೇಕ ಅನಿಷ್ಠ ಪದ್ಧತಿಗಳ ವಿರುದ್ಧದ ಕೂಗು ಇದೆ ಮತ್ತು ವಿಡಂಬನೆ ಇದೆ. ಒಟ್ಟಾರೆ ಒಬ್ಬ ಓದುಗ ಏನೆಲ್ಲ ಬಯಸುವನೊ ಅದೆಲ್ಲವನ್ನು ಇಂದಿರಾ ಅವರು ತಮ್ಮ ಕೃತಿಗಳಲ್ಲಿ ತೋರಗೊಟ್ಟಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಎಂ ಕೆ ಇಂದಿರಾ ಅವರು ಬರವಣಿಗೆ ಪ್ರಾರಂಭ ಮಾಡಿದ್ದೆ ತಮ್ಮ 46ನೇ ವಯಸ್ಸಿನಲ್ಲಿ. ಸುದೀರ್ಘ 34 ವರ್ಷಗಳ ಸಾಂಸಾರಿಕ ಜೀವನದಲ್ಲಿ ತೊಡಗಿಕೊಂಡು ಅಂದಿನ ಸಮಾಜದಲ್ಲಿನ ಪ್ರತಿಯೊಂದು ಸನ್ನಿವೇಶಗಳನ್ನು ಬಹಳ ಹತ್ತಿರದಿಂದ ನೋಡಿ ತುಂಬು ಆತ್ಮ ವಿಶ್ವಾಸದಿಂದ ಲೇಖನ ಹಿಡಿದು ದಣಿವರಿಯದವರಂತೆ ಅವರು ಇರುವ ಕಾಲಕ್ಕೂ ಬರೆದವರು. ಬರವಣಿಗೆಯಲ್ಲಿಯೇ ಬಿಡುಗಡೆ ಬಯಸಿದವರು. ತಮ್ಮ ಪಾಡಿಗೆ ಬರೆಯುತ್ತಲೇ ಹಲವರಿಗೆ ಅಕ್ಕ, ಅಮ್ಮ ಮತ್ತು ಗುರುವಾಗಿ ಸಲಹಿದವರು. ಎಲ್ಲವನ್ನು ಮಾಡಿ ಏನು ಮಾಡದವರಂತೆಯೇ ಉಳಿದು ಬಿಟ್ಟವರು. ಹೆಮ್ಮೆಯ ಸಂಗತಿ ಎಂದರೆ ಆಗೆಲ್ಲಾ ಎಂ ಕೆ ಇಂದಿರಾ ಅವರ ಪ್ರತಿಯೊಂದು ಕೃತಿಗಳು ಐದಾರು ಬಾರಿ ಮುದ್ರಣವಾಗುತ್ತಿತ್ತು. ಹಾಗೆ ಆ ದಿನಗಳಲ್ಲಿ ಕೇವಲ ಬರೆವಣಿಗೆಯ ಮೂಲಕವೇ ಸ್ಟಾರ್ ವ್ಯಾಲ್ಯು ಪಡೆದಿದ್ದ ಮತ್ತು ಅತೀ ಹೆಚ್ಚು ಹಣ ಗಳಿಸುತ್ತಿದ್ದ ಲೇಖಕಿ ಎಂದರೆ ಅದು ಎಂ ಕೆ ಇಂದಿರಾ ಅವರು.
ಒಮ್ಮೆ ಯೋಚಿಸಿ; ಇಂದಿರಾ ಅವರ ಬರಹ ಅದ್ಯಾವ ಪರಿ ಓದುಗರ ಎದೆಯನ್ನು ನಾಟಿರಬಹುದು? ಸಮಾಜ ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುವಂಥದ್ದನ್ನು ಬರೆದು ಬೆರಗು ಮೂಡಿಸಿದ ಎಂ ಕೆ ಇಂದಿರಾ ಅವರು ಸಾಕ್ಷಾತ್ ಅಕ್ಷರ ಸರಸ್ವತಿ. ಕೇವಲ ಓದುಗರಷ್ಟೇ ಅಲ್ಲದೆ ಚಲನಚಿತ್ರದ ಅಭಿಮಾನಿಗಳು ಕೂಡ ಎಂ ಕೆ ಇಂದಿರಾ ಅವರನ್ನು ಪ್ರೀತಿಸುತ್ತಿದ್ದದ್ದು ವಿಶೇಷತೆ. ಸಾಹಿತ್ಯ ಲೋಕದಲ್ಲಿ ಸುಪ್ರಸಿದ್ಧ ಲೇಖಕಿಯಾಗಿ ಗುರುತಿಸಿಕೊಂಡಿದ್ದ ಎಂ ಕೆ ಇಂದಿರಾ ಅವರು ನಮ್ಮನ್ನು ಅಗಲಿ 30 ವರ್ಷ ಕಳೆದಿದ್ದರೂ ಅವರ ಕೃತಿಗಳನ್ನು ಹುಚ್ಚು ಬಿದ್ದು ಓದುವವರಿದ್ದಾರೆ. “ನೀನು ಎಂ ಕೆ ಇಂದಿರಾ ಅವರ ಕೃತಿಗಳನ್ನು ಓದು ಇಲ್ಲವಾದರೆ ನಿನ್ನ ಓದು ಪೂರ್ಣಗೊಳ್ಳುವುದಿಲ್ಲ” ಎಂದು ಸಲಹೆ ಕೊಡುವವರಿದ್ದಾರೆ. ಒಬ್ಬ ಲೇಖಕಿ ಈ ಮಟ್ಟಿಗೆ ನಮ್ಮೊಳಗೆ ಉಳಿದುಬಿಡುತ್ತಾರೆ ಎಂದರೆ ಅದು ನಿಜಕ್ಕೂ ಅವರಿಗೆ ಸಂದ ಅತೀ ದೊಡ್ಡ ಗೌರವ ಎಂದೇ ಭಾವಿಸಬೇಕು.

ಕೊನೆಗೂ ಅದ್ಯಾಕೊ ಗೊತ್ತಿಲ್ಲ. ಎಂ ಕೆ ಇಂದಿರಾ ಅವರು ಬಾಯಿ ಮೇಲೆ ಬೆರಳಿಟ್ಟುಕೊಂಡು ಬೆರಗುಗಣ್ಣುಗಳಿಂದ ನೋಡುವ ಮತ್ತು ಅನೇಕರ ವಿಮರ್ಶೆಗೆ ಒಳಪಡುವ ಸಾಕಷ್ಟು ಕೃತಿಗಳನ್ನು ಬರೆದಿದ್ದರೂ ಜೀವದ ಹಂಗು ತೊರೆದು ತುಂಬಿದ ನದಿಯ ಪ್ರವಾಹದಲ್ಲಿ ಅಂಜದೆ ನಡುರಾತ್ರಿ ವಾಲಾಡುತ್ತಿದ್ದ ದೋಣಿ ಒಳಗೆ ಕುಳಿತು ಊರಾಚೆಗೆ ಪ್ರಯಾಣಿಸಿ ಹಲಸರ (ಅಸ್ಪೃಶ್ಯ) ಕೇರಿಗೆ ಹೋಗಿ ಸಿಂಕಿ ಎಂಬ ಹೆಂಗಸಿನ ಹೆರಿಗೆ ಮಾಡಿ ತೃಪ್ತತೆ ಕಂಡುಕೊಳ್ಳುವ ತಲೆಯ ಮೇಲೆ ಸೆರಗು ಹೊದ್ದುಕೊಂಡಿದ್ದ ಬೋಳು ತಲೆಯ ಫಣಿಯಮ್ಮ ಪಾತ್ರದ ಮೂಲಕವೇ ನನಗೆ ನೆನಪಾಗುತ್ತಾರೆ. ಎಂ.ಕೆ ಇಂದಿರಾ ಅವರು ಫಣಿಯಮ್ಮ ಕೃತಿಯಲ್ಲಿ ಹೆಣೆದಿರುವುದು ಬರಿಯ ಕಥೆಯಲ್ಲವಲ್ಲ. ಅಲ್ಲಿ ನಿಜವಾದ ಎದೆಯ ದನಿ ಮತ್ತು ಶುದ್ಧ ಮಾನವೀಯತೆ ಇದೆ. ಫಣಿಯಮ್ಮನಿಗೆ ನಮಸ್ಕಾರ. ಫಣಿಯಮ್ಮನನ್ನು ಸೃಷ್ಟಿಸಿದ ಎಂ ಕೆ ಇಂದಿರಾ ಎಂಬ ಈ ನಾಡು ಎಂದೂ ಮರೆಯದ ಲೇಖಕಿಗೆ ನಮಸ್ಕಾರ.

ಇಂದು ಎಂ ಕೆ ಇಂದಿರಾ ಅವರ ಜನ್ಮದಿನದ ಸವಿನೆನಪು. ಇಷ್ಟೆಲ್ಲಾ ಬರೆಯಬೇಕೆನಿಸಿತು. ನಾನು ಹುಟ್ಟುವ ಒಂದು ದಶಕದ ಮೊದಲೇ ತೀರಿಕೊಂಡಿದ್ದ ಲೇಖಕಿ ಈ ಪರಿ ಹಿಡಿದಿಡುತ್ತಾರೆ ಎಂದರೆ ಅದು ಬರಹ ಎಂಬ ಮಾಂತ್ರಿಕತೆಗೆ ಇರುವ ಶಕ್ತಿ! ಎಂ ಕೆ ಇಂದಿರಾ ಅವರನ್ನು ನಮ್ಮ ಇಂದಿನ ಮತ್ತು ಮುಂದಿನ ಪೀಳಿಗೆ ನೆನಪಿಟ್ಟುಕೊಂಡು ಅವರ ಕೃತಿಗಳನ್ನು ಓದಿದರೆ ಅದಕ್ಕಿಂತ ದೊಡ್ಡ ಸಂಭ್ರಮ ಮತ್ತೊಂದು ಇಲ್ಲ.

ಎಂ ಕೆ ಇಂದಿರಾ ಅವರ ಬಗ್ಗೆ ಮತ್ತಷ್ಟು ಮಾಹಿತಿ

ಜನನ : 1917 ಜನವರಿ 5
ಸ್ಥಳ : ತೀರ್ಥಹಳ್ಳಿ

ತಮ್ಮ 12 ನೇ ವಯಸ್ಸಿನಲ್ಲಿ ಮದುವೆಯಾದ ಎಂ.ಕೆ ಇಂದಿರಾ ಅವರು ಓದಿದ್ದು ಎರಡನೇ ತರಗತಿಯವರೆಗೆ ಮಾತ್ರ. ತಮ್ಮ ಜೀವನದ ಮಧ್ಯಾರ್ಧದಲ್ಲಿ ಬರಹವನ್ನು ಪ್ರಾರಂಭಿಸಿ ಜನಮಾನಸ ತಲುಪಿದವರು. ಅಷ್ಟೇ ಅಲ್ಲದೆ ಅವರ ಹತ್ತಾರು ಕೃತಿಗಳು ತೆಲುಗು, ಮಲಯಾಳಂ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ಹಾಗೆ ಒಂದಿಷ್ಟು ಕೃತಿಗಳು ಚಲನ ಚಿತ್ರವಾಗಿ ತೆರೆಯ ಮೇಲೆ ಕಾಣಿಸಿಕೊಂಡು ಅವರಿಗೆ ಅಪಾರವಾದ ಹೆಸರನ್ನು ತಂದು ಕೊಟ್ಟಿದೆ. 60ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಎಂ ಕೆ ಇಂದಿರಾ ಅವರ ಸಾಧನೆಗೆ ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಲಭಿಸಿದೆ. ಎಂ ಕೆ ಇಂದಿರಾ ಅವರ ಅಭಿಮಾನಿ ಬಳಗ ಅವರಿಗಾಗಿಯೇ ಸುರಗಿ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿತ್ತು. ಒಂದು ತಲೆಮಾರಿನ ಜನರನ್ನು ಓದಿನ ಗೀಳಿಗೆ ಹಚ್ಚಿದ ಎಂ ಕೆ ಇಂದಿರಾ ಅವರು 1994 ರಲ್ಲಿ ಇಹಲೋಕವನ್ನು ತ್ಯಜಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.