
ಅರವಿಂದರಾವ್ ದೇಶಪಾಂಡೆ ಅಭಿಮತ
ʼವಿಕ್ರಮʼ ಕಾಫಿ ಟೇಬಲ್ ಪುಸ್ತಕ ಲೋಕಾರ್ಪಣೆ
ವಿಜಯಪುರ: ಅನಾದಿಕಾಲದಿಂದ ನಡೆದುಕೊಂಡು ಬಂದಿರುವ ಆಚಾರ, ವಿಚಾರ, ಕಲೆ, ಸಂಸ್ಕೃತಿಗಳನ್ನು ಇಂದಿಗೂ ಸಂಭ್ರಮದಿಂದ ಆಚರಿಸುತ್ತಿರುವ ಬಂಜಾರ ಸಮುದಾಯ, ಹಿಂದೂ ಸಂಸ್ಕೃತಿಯನ್ನು ಜೀವಂತವಾಗಿ ಇರಿಸಿಕೊಂಡು ಬಂದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅರವಿಂದರಾವ್ ದೇಶಪಾಂಡೆ ಅಭಿಪ್ರಾಯಪಟ್ಟರು.
ವಿಕ್ರಮ ವಾರಪತ್ರಿಕೆಯ ವತಿಯಿಂದ ಶ್ರೀ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ʼನಾಡಿನ ಬಂಗಾರ- ಗೋರ ಬಂಜಾರʼ ಕಾಫಿ ಟೇಬಲ್ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಿಂದೂ ಸಮಾಜದ ಇತರೆ ಸಮುದಾಯದಲ್ಲಿ ಅನೇಕರು ಸಾಂಪ್ರದಾಯಿಕ ಉಡುಗೆ, ತೊಡುಗೆ, ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂಬ ಬೇಸರವಿದೆ. ಆದರೆ ಬಂಜಾರ ಸಮುದಾಯದಲ್ಲಿ ಇದೆಲ್ಲವನ್ನೂ ಇಂದಿಗೂ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲೂ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲೇ ಭಾಗವಹಿಸಿರುವುದೇ ಇದಕ್ಕೆ ಸಾಕ್ಷಿ.

ಬಂಜಾರ ಸಮುದಾಯದ ಪಂಚಾಯತಿ ವ್ಯವಸ್ಥೆಯು ಇಂದಿಗೂ ಇದ್ದು, ನ್ಯಾಯಾಲಯದ ಮೆಟ್ಟಿಲು ಹತ್ತುವವರ ಸಂಖ್ಯೆ ಬಹಳ ಕಡಿಮೆ. ಈ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಬೇಕು. ಮತಾಂತರದ ಪಿಡುಗು ಸಮುದಾಯಕ್ಕೆ ಮೊದಲ ಸವಾಲಾಗಿದೆ. ಈ ಕುರಿತು ಸಮುದಾಯದ ಸಾಧು ಸಂತರು ಗಮನ ಹರಿಸಬೇಕು. ವಿಕ್ರಮ ಹೊರತಂದಿರುವ ಈ ಮಹತ್ವದ ಕೃತಿಯನ್ನು ಸಮುದಾಯದ ಎಲ್ಲರೂ ಓದುವ ಮೂಲಕ ತಮ್ಮ ಇತಿಹಾಸ, ಸಂಸ್ಕೃತಿಯ ಕುರಿತು ಹೆಮ್ಮೆ ಮೂಡಿಸಿಕೊಳ್ಳಬಹುದು ಎಂದರು.
ರಾಯಚೂರು ಲಿಂಗಸಗೂರಿನ ಇಳಕಲ್ ಮಹಾಂತ ಶಿವಯೋಗಿ ಶಾಖಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಂತ ಸೇವಾಲಾಲರಿಂದ ಆರಂಭಗೊಂಡು ಬಂಜಾರ ಸಮುದಾಯದ ಸಮಗ್ರ ವಿಚಾರಗಳನ್ನು ಕಟ್ಟಿಕೊಡುವ ಕೆಲಸವನ್ನು ಈ ಕಾಫಿ ಟೇಬಲ್ ಪುಸ್ತಕದ ಮೂಲಕ ಮಾಡಲಾಗಿದೆ. ಇಂತಹ ಮಹತ್ವದ ಕಾರ್ಯವನ್ನು ಅತ್ಯಂತ ಪ್ರೀತಿ ಹಾಗೂ ಶ್ರದ್ಧೆಯಿಂದ ಕೈಗೊಂಡು ಪೂರ್ಣಗೊಳಿಸಿರುವ ವಿಕ್ರಮ ವಾರಪತ್ರಿಕೆ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಬೇಕಿದೆ ಎಂದರು.

ಚೌಡಾಪುರದ ಶ್ರೀ ಮುರಾರಿ ಮಹಾರಾಜ್ ಮಾತನಾಡಿ, ಇತರೆ ಸಮುದಾಯಗಳು ರಾಮ ಎಂದು ಒಮ್ಮೆ ಮಾತ್ರ ಹೇಳಿದರೆ ಬಂಜಾರ ಸಮುದಾಯ ರಾಮ್ರಾಮ್ ಎಂದು ಎರಡು ಬಾರಿ ಹೇಳುವಂತೆ ಪ್ರೇರಣೆ ನೀಡಿದವರು ಸಂತ ಸೇವಾಲಾಲರು. ಸಮುದಾಯವು ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತಷ್ಟು ಸದೃಢವಾಗುವುದರ ಮೂಲಕ ಸೇವಾಲಾಲರ ಸಂದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದರು.
ಕಾಫಿ ಟೇಬಲ್ ಪುಸ್ತಕ ಸಿದ್ಧತೆಯಲ್ಲಿ ಸಹಕರಿಸಿದ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ. ಬಾಬು ರಾಜೇಂದ್ರ ನಾಯಿಕ, ಮಾಜಿ ಶಾಸಕ ಪಿ. ರಾಜೀವ್ ಅವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಗೌರವಿಸಲಾಯಿತು. ಕಾಫಿ ಟೇಬಲ್ ಪುಸ್ತಕದ ಅಭ್ಯಾಗತ ಸಂಪಾದಕ ಡಾ. ಲಕ್ಷ್ಮೀಶ ಹೆಗಡೆ ಸೋಂದಾ, ವಿಕ್ರಮ ಸಂಪಾದಕ ರಮೇಶ ದೊಡ್ಡಪುರ, ವ್ಯವಸ್ಥಾಪಕ ಸಂಪಾದಕ ಸು. ನಾಗರಾಜ್, ಗೌರವ ಸಂಪಾದಕ ನ. ನಾಗರಾಜ್, ವ್ಯವಸ್ಥಾಪಕ ಸತೀಶ್, ಉಪಸಂಪಾದಕಿ ದಿವ್ಯಾ ಹೆಗಡೆ ಉಪಸ್ಥಿತರಿದ್ದರು.
ಮನಸೆಳೆದ ನೃತ್ಯ
ಹಿರಿಯ ಕಲಾವಿದೆ ಶಾರದಾ ಬಾಯಿ ಅವರ ನೇತೃತ್ವದ ತಂಡವು ಬಂಜಾರ ನೃತ್ಯವನ್ನು ಪ್ರದರ್ಶಿಸಿತು. ಸಾಂಪ್ರದಾಯಿಕ ವಸ್ತ್ರದಲ್ಲಿ ಲಯಬದ್ಧ ನೃತ್ಯವು ನೆರೆದವರ ಮನಸೂರೆಗೊಂಡಿತು. ಬಂಜಾರ ಸಮುದಾಯದ ಕಲೆಯ ವೈಭವವನ್ನು ತೆರೆದಿಟ್ಟಿತು.


ಬಂಗಾರದ ಪ್ರತೀಕ
ಬಂಜಾರ ಸಮುದಾಯದ ಸಂಸ್ಕೃತಿಯು ಚಿನ್ನದಷ್ಟೇ ವೈಭವಯುತವಾಗಿದೆ. ಹಾಗಾಗಿಯೇ ಈ ಪುಸ್ತಕಕ್ಕೆ ʼನಾಡಿನ ಬಂಗಾರ-ಗೋರ ಬಂಜಾರʼ ಎಂದು ಹೆಸರಿಟ್ಟಿರುವುದು ಅನ್ವರ್ಥವಾಗಿದೆ ಎಂದು ಈ ಕಾಫಿ ಟೇಬಲ್ ಪುಸ್ತಕದ ಅಭ್ಯಾಗತ ಸಂಪಾದಕ ಡಾ. ಲಕ್ಷ್ಮೀಶ ಹೆಗಡೆ ಸೋಂದಾ ಅಭಿಪ್ರಾಯಪಟ್ಟರು. ಬಂಜಾರ ಸಮುದಾಯದ ನೋವು, ನಲಿವು, ಅಪಮಾನಗಳನ್ನೂ ಅನುಭವಿಸಿದೆ. ಇದೀಗ ಕಾಫಿ ಟೇಬಲ್ ಪುಸ್ತಕದ ಮೂಲಕ ಗೌರವವನ್ನೂ ಪಡೆಯುತ್ತಿದೆ ಎಂದು ಹೇಳಿದರು.
ವಿಕ್ರಮಕ್ಕೆ ಆಭಾರಿ
ಮಾಜಿ ಶಾಸಕ ಪಿ. ರಾಜೀವ್ ಮಾತನಾಡಿ, ನಾವು ಸಮುದಾಯದವರಾಗಿ ಈ ರೀತಿಯ ಕಾಫಿ ಟೇಬಲ್ ಪುಸ್ತಕದ ಆಲೋಚನೆ ಬಂದಿರಲಿಲ್ಲ. ಆದರೆ ವಿಕ್ರಮ ವಾರಪತ್ರಿಕೆಯು ಇಷ್ಟು ಆಸ್ಥೆಯಿಂದ ಅತ್ಯಂತ ಶ್ರಮವಹಿಸಿ ಸುಂದರವಾದ ಕೃತಿಯನ್ನು ಹೊರತಂದಿದೆ. ನಮ್ಮ ಶಕ್ತ್ಯಾನುಸಾರ 10-20-100 ಕೃತಿಗಳನ್ನು ಖರೀದಿಸಿ ಸಮಾಜದ ಪ್ರತಿಯೊಂದು ಮನೆಗೂ ತಲುಪುವಂತೆ ಮಾಡಬೇಕಿದೆ ಎಂದು ತಿಳಿಸಿದರು.
