ರಾಷ್ಟ್ರ ಸೇವಿಕಾ ಸಮಿತಿಯ ಸುಕೃಪಾ ಟಸ್ಟ್ ವತಿಯಿಂದ ರಾಷ್ಟ್ರ ಸೇವಿಕಾ ಸಮಿತಿಯ ದ್ವಿತೀಯ ಸಂಚಾಲಿಕಾ ವಂದನೀಯ ಸರಸ್ವತೀ ತಾಯಿ ಆಪ್ಟೆ (ತಾಯೀಜಿ) ಅವರ ಬದುಕು ಹಾಗೂ ಉನ್ನತ ವ್ಯಕ್ತಿತ್ವವನ್ನು ಕುರಿತು ಲೇಖಕಿ ಮೃಣಾಲಿನಿ ಜೋಷಿಯವರ ‘ಕೃತಾರ್ಥಮೀ ಕೃತಜ್ಞಮೀ’ ಮೂಲ ಮರಾಠೀ ಪುಸ್ತಕದ ಕನ್ನಡ ಅನುವಾದ ‘ನಾನು ಕೃತಾರ್ಥಳು ನಾನು ಕೃತಜ್ಞಳು’ ಪುಸ್ತಕವನ್ನು ಮೈಸೂರಿನಲ್ಲಿ ನಡೆದ ರಾಷ್ಟ್ರ ಸೇವಿಕಾ ಸಮಿತಿ ದ್ವಿತೀಯ ಅರ್ಧ ವಾರ್ಷಿಕ ಬೈಠಕ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಮುಖ್ಯ ಅತಿಥಿ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಡಾ. ಬಿ.ವಿ. ಸುಧಾಮಣಿಯವರು ಮಾತನಾಡುತ್ತಾ
ಈ ಪುಸ್ತಕ ವಂದನೀಯ ತಾಯೀಜಿಯವರ ಜೀವನದ ಆದರ್ಶಗಳನ್ನು ಸಾರಿದೆ, ಮೂಲ ಪುಸ್ತಕದ ಆಶಯ ಹಾಗೂ ಭಾವನೆಗಳನ್ನು ಪುಸ್ತಕ ಯಶಸ್ವಿಯಾಗಿ ಹೊರತಂದಿದೆ. ಇದನ್ನು ಎಲ್ಲಾ ಮಹಿಳೆಯರೂ ಓದಲೇಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪುಸ್ತಕದ ಲೇಖಕಿ ಶ್ರೀಮತಿ ಎಸ್. ಉಮಾದೇವಿ ಮೂಲ ಪುಸ್ತಕವನ್ನು ಓದಿದ ನಂತರ ಕನ್ನಡ ಅನುವಾದ ಮಾಡುವ ಹಂತದಲ್ಲಿ ವಂದನೀಯ ಸರಸ್ವತಿ ತಾಯಿ ಅವರ ಜೀವನಗಾಥೆ ತಮ್ಮ ಮೇಲೆ ಅಪಾರ ಪ್ರಭಾವ ಬೀರಿತೆಂದು ತಿಳಿಸಿದರು.

ಹೊಯ್ಸಳ ಪ್ರಾಂತ ಕಾರ್ಯವಾಹಿಕಾ ಮಾ. ವಸಂತಾ ಸ್ವಾಮಿಯವರು ಪುಸ್ತಕ ಪರಿಚಯ ಮಾಡಿ ವಂದನೀಯ ಸರಸ್ವತಿ ತಾಯೀಜಿಯವರ ಪ್ರೇರಣಾದಾಯಿ ವ್ಯಕ್ತಿತ್ವ ಮತ್ತು ಸಮಾಜಮುಖೀ ಚಿಂತನೆ ಹಾಗೂ ಸೇವಾಕಾರ್ಯ ಕುರಿತು ಮಾತನಾಡಿ ಈ ಪುಸ್ತಕದ ಅಧ್ಯಯನದಿಂದ ಎಲ್ಲಾ ಕಾರ್ಯಕರ್ತೆಯರೂ ಸ್ಫೂರ್ತಿ ಪಡೆದು
ರಾಷ್ಟ್ರ ಕಾರ್ಯದಲ್ಲಿ ಕೈಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹಿಕಾ ಹಾಗೂ ಸುಕೃಪಾ ಟ್ರಸ್ಟ್ ಅಧ್ಯಕ್ಷರಾದ ಮಾ. ಸಾವಿತ್ರಿ ಸೋಮಯಾಜಿ, ದಕ್ಷಿಣ ಮಧ್ಯ ಕ್ಷೇತ್ರ ಸಹ ಕಾರ್ಯವಾಹಿಕಾ ಶ್ರೀಮತಿ ಮಾ. ಅಂಬಿಕಾ ನಾಗಭೂಷಣ್ ಹಾಗೂ ಪ್ರಾಂತ ಸಹ ಕಾರ್ಯವಾಹಿಕಾ ಮಾ. ಪೂರ್ಣಿಮಾ ರವಿಶಂಕರ್ ಉಪಸ್ಥಿತರಿದ್ದರು.