– ಪಂಚಮಿ ಬಾಕಿಲಪದವು, ಪತ್ರಿಕೋದ್ಯಮ ವಿದ್ಯಾರ್ಥಿ, ಅಂಬಿಕಾ ಮಹಾವಿದ್ಯಾಲಯ ಪುತ್ತೂರು

ಲೋಕಗಳಿಗೆಲ್ಲ ಪಿತಾಮಹನಾದ ಬ್ರಹ್ಮ ಪ್ರಜಾಸೃಷ್ಟಿಯನ್ನು ಮಾಡುವ ಉದ್ದೇಶದಿಂದ ಪ್ರಾರಂಭದಲ್ಲಿ ಹತ್ತು ಮಂದಿ ಋಷಿಗಳನ್ನು ಸೃಷ್ಟಿಸಿದನು.‌ ಬ್ರಹ್ಮಮಾನಸಪುತ್ರರೆಂದು ಪ್ರಸಿದ್ಧರಾದ ಈ ಹತ್ತು ಮಂದಿಯಲ್ಲಿ ನಾರದರು ಕೊನೆಯವರಾದರು. ಬಹ್ಮವೈವರ್ತಪುರಾಣದ ಪ್ರಕಾರ ಬ್ರಹ್ಮನ ನರದ್ ಎಂಬ ಕಂಠದಿಂದ ನಾರದರು ಜನಿಸಿದರು.

ನಾರದ ವ್ಯಾಸಮಹರ್ಷಿಯ ಪೂರ್ವಜನ್ಮವೃತ್ತಾಂತವು ವಿಶೇಷವಾಗಿದೆ. ಪೂರ್ವಕಲ್ಪದಲ್ಲಿ ವೇದಜ್ಞರಾದ ಬ್ರಾಹ್ಮಣರ ಮನೆಯಲ್ಲಿ ಅಶಿಕ್ಷಿತಳೂ ಒರಟು ಸ್ವಭಾವದವಳೂ ಆದ ದಾಸಿಯೊಬ್ಬಳಿದ್ದಳು. ಅವಳಿಗೆ ಒಬ್ಬನೇ ಮಗ. ವಿಶೇಷ ವಾತ್ಸಲ್ಯದಿಂದ ಅವಳು ಈ ಬಾಲಕನನ್ನು ಬೆಳೆಸಿದಳು. ಎಷ್ಟೇ ಅಕ್ಕರೆಯಿದ್ದರೂ ಅವಳು ದಾಸಿಯಾದುದರಿಂದ ಮಗನನ್ನು ಇನ್ನೊಬ್ಬರಲ್ಲಿ ಸೇವೆಗೆ ನೇಮಿಸುವುದು ಅವಳಿಗೆ ಕರ್ತವ್ಯವಾಗಿತ್ತು. ಒಮ್ಮೆ ಚಾತುರ್ಮಾಸ್ಯವ್ರತನಿಷ್ಠರಾದ ಯೋಗಿಗಳ ಬಳಿ ಬಾಲಕನನ್ನು ತಾಯಿ ಸೇವೆಗೆ ನೇಮಿಸಿದಳು. ಗುರು ಶ್ರುಶೂಷೆಯಲ್ಲಿ ನಿರತನಾದ ಬಾಲಕನು ಅಡುಗೆ ಪಾತ್ರೆಯಲ್ಲಿ ಉಳಿದ ಆಹಾರವನ್ನು ಮಾತ್ರ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದನು. ಕ್ರಮೇಣ ಬಾಲಕನ ಮನಸ್ಸು ವೇದಿಗಳ ಸಂಸರ್ಗದಿಂದಾಗಿ ಯೋಗಧರ್ಮದಲ್ಲಿ ಆಸಕ್ತಿಯನ್ನು ತಳೆಯಿತು. ಬ್ರಾಹ್ಮಣರು ಹೇಳುತ್ತಿದ್ದ ಭಗವತ್ಕಥಾನಕದಿಂದ ಅವನು ಪರಬ್ರಹ್ಮದಲ್ಲಿ ನಿಶ್ಚಲಭಕ್ತಿಯನ್ನು ಮೈಗೂಡಿಸಿಕೊಂಡನು. ಶರದೃತುವಿನ ಎರಡು ತಿಂಗಳು ಮತ್ತು ವರ್ಷ ಋತುವಿನ ಎರಡು ತಿಂಗಳು ಹೀಗೆ ನಾಲ್ಕು ತಿಂಗಳು ತ್ರಿಸಂಧ್ಯೆಗಳಲ್ಲಿ ವೇದಭ್ಯಾಸಿಗಳು ಮಾಡುತ್ತಿದ್ದ ಹರಿನಾಮ ಸಂಕೀರ್ತನ ಶ್ರವಣದಿಂದ ಬಾಲಕನು ತ್ರಿಕರಣಶುದ್ಧಿಯನ್ನು ಪಡೆದನು. ಯೋಗಿಗಳು ಚಾತುರ್ಮಾಸ್ಯವ್ರತವನ್ನು ಪೂರೈಸಿ ನಿರ್ಗಮಿಸುವಾಗ ಬಾಲಕನಿಗೆ ಹರಿಯಿಂದ ತಾವು ಪಡೆದ ಪರಮಜ್ಞಾನವನ್ನು ಉಪದೇಶಿಸಿದರು. ಈ ಉಪದೇಶದಿಂದ ಬಾಲಕ ಹರಿಯ ಅನಾದಿಯೂ ಅನಂತವೂ ಆದ ಮಹಿಮೆಯನ್ನು ಅರಿತನು. ಬಾಲಕನಿಗೆ ಐದು ವರ್ಷದ ಸಂದರ್ಭದಲ್ಲೇ ತಾಯಿಯು ಅಸುನೀಗಿದಳು. ಆತ ದೃಢಮನಸ್ಕನಾಗಿ ಉತ್ತರದಿಕ್ಕಿನತ್ತ ಪ್ರಯಾಣಿಸಿದಾಗ, ಅವನ ದೇಹ ಬಳಲಿತು. ಒಂದು ಅರಳೀಮರದ ಬುಡದಡಿಯಲ್ಲಿ ಕುಳಿತು ಮನಸ್ಸನ್ನು ಏಕಾಗ್ರಗೊಳಿಸಿ ಆತ್ಮದಲ್ಲಿ ಅಂತರ್ಯಾಮಿಯಾಗಿರುವ ಹರಿಯನ್ನು ಧ್ಯಾನಿಸತೊಡಗಿದನು. ತತ್‌ಕ್ಷಣ ಶ್ರೀಹರಿ ಅವನೆದುರು ಕಾಣಿಸಿಕೊಂಡಂತಾಗಿ ಮಿಂಚಿ ಮರೆಯಾದನು. ಭಗವಂತನ ದರ್ಶನದಿಂದ ರೋಮಾಂಚಿತನಾದ ಬಾಲಕ ರೋಗಿಷ್ಟರಂತೆ ಹರಿಗಾಗಿ ನರಳಿದನು. ಶ್ರೀಹರಿಯು ಮತ್ತೆ ಕಾಣಿಸಿಕೊಂಡು “ನನ್ನನ್ನು ಪಡೆಯಲೇಬೇಕೆಂಬ ಹೆಬ್ಬಯಕೆ ನಿನ್ನ ಮನಸ್ಸಿನಲ್ಲಿ ಮೂಡಲೆಂದು ಹೀಗೆ ಮಾಡಿದೆ. ನೀನಿನ್ನು ನನ್ನ ಪರಿಷತ್ತಿನ ಸದಸ್ಯ” ಎಂದು ನುಡಿದು ಅದೃಶ್ಯನಾದ.

ಹರಿಯ ಅಂತರ್ಧಾನವಾದ ಕೂಡಲೇ ಬಾಲಕನ ಶರೀರ ನಿಶ್ಚಲವಾಯಿತು. ಅವನ ಆತ್ಮ ಪರಮಾತ್ಮನಲ್ಲಿ ಲೀನವಾಯಿತು. ಬ್ರಹ್ಮನು ಹರಿಯ ದೇಹವನ್ನು ಪ್ರವೇಶಿಸಿ ಅವನೊಡನೆ ಒಂದಾಗಿ ಸೃಷ್ಟಿಕಾರ್ಯವನ್ನು ಸಂಕಲ್ಪಿಸಿದಾಗ ನವಬ್ರಹ್ಮರಲ್ಲಿ ಕೊನೆಯವನಾಗಿ ಮರು ಹುಟ್ಟನ್ನು ಪಡೆದ ಬಾಲಕರೇ ನಾರದರು. ಮೂರುಲೋಕಗಳಲ್ಲೂ ನಿರಾತಂಕವಾಗಿ ಸಂಚರಿಸುವ ಶಕ್ತಿಯನ್ನು ಪರಬ್ರಹ್ಮ ನಾರದರಿಗೆ ಅನುಗ್ರಹಿಸಿದನು. ಸೂರ್ಯನಂತೆ ಸಂಚರಿಸುವ ಮತ್ತು ಯೋಗಬಲದಿಂದ ಪ್ರಾಣವಾಯುವಿನಂತೆ ಎಲ್ಲರಲ್ಲೂ ಎಲ್ಲ ಕಡೆಯೂ ವ್ಯಾಪಿಸುವ ಶಕ್ತಿಯನ್ನು ದಯಪಾಲಿಸಿದನು. ಮೂರುಲೋಕಗಳಲ್ಲೂ ಭಗವಂತನ ಮಹಿಮೆಯನ್ನು ಕೀರ್ತಿಸಲು ‘ಮಹತೀ’ ಎಂಬ ವೀಣೆಯನ್ನೂ ನೀಡಿದನು. ತಾನು ಮೊದಲ್ಗೊಂಡು ರುದ್ರಾದಿ ದೇವತೆಗಳು, ಯಕ್ಷಗಂಧರ್ವರು, ರಾಕ್ಷಸರು, ಮಾನವರು ಎಲ್ಲರೂ ಗೌರವಾದರದಿಂದ ಕಾಣುವಂತೆಯೂ ಬ್ರಹ್ಮನು ನಾರದರಿಗೆ ಅನುಗ್ರಹಿಸಿದ. ಮುಂದೆ ಶ್ರೀಹರಿಯು ಈ ಬ್ರಹ್ಮಚಾರಿ ನಾರದರಿಗೆ ಉಪದೇಶವನ್ನು ನೀಡಿ ಅವರನ್ನು ವೇದಪಾರಂಗತನನ್ನಾಗಿಸಿದರು. ಜೊತೆಗೆ ಬ್ರಹ್ಮಜ್ಞಾನವನ್ನೂ ಧಾರೆಯೆರೆದರು.

ಹೀಗೆ ನಾರದರು ತ್ರಿಕಾಲಜ್ಞರಾಗಿ ಲೋಕಪೂಜಿತರಾದರು. ಪುರಾಣೇತಿಹಾಸಗಳಲ್ಲಿ ನಿಷ್ಣಾತರಾದರು. ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪ ಈ ವೇದಾಂಗಗಳಲ್ಲಿ ವಿಶಾರದರಾದರು. ಸಾಂಖ್ಯಾ ಮತ್ತು ಯೋಗಶಾಸ್ತ್ರಗಳಲ್ಲಿ ನಿಪುಣರಾದರು. ಸರ್ವವಿದ್ಯೆಗಳಲ್ಲೂ ಅಪ್ರತಿಹತ ಎಂಬ ಕೀರ್ತಿಗೆ ಭಾಜನರಾದರು. ಚತುರ್ದಶಭುವನಗಳ ಪ್ರತ್ಯಕ್ಷದರ್ಶಿಯಾಗಿ ಲೋಕಸಂಚಾರಿ ಎಂಬ ಕೀರ್ತಿಯನ್ನು ಪಡೆದುಕೊಂಡರು. ಧರ್ಮ ಮತ್ತು ನೀತಿಶಾಸ್ತ್ರದಲ್ಲಿ ‘ಇದಮಿತ್ಥಂ’ ಎಂದು ಹೇಳಬಲ್ಲ ನಿಶ್ಚಯಜ್ಞಾನಿಯಾದರು! ಮಾನಸೋತ್ತರಪರ್ವತದಲ್ಲಿದ್ದಾಗ ಗಾನಬಂಧು ಎಂಬ ಉಲೂಕಪಕ್ಷಿಯಿಂದ ಗಾನಾಭ್ಯಾಸ ಮಾಡಿದರು. ನರನನ್ನು ನರಕದಿಂದ ಪಾರುಮಾಡುವ ನಾರಾಯಣನ ಕೆಲಸವನ್ನು ತಾವೇ ಮಾಡಿದರು. ದುಷ್ಪಶಿಕ್ಷಣ-ಶಿಷ್ಟ ಸಂರಕ್ಷಣದ ಕಾರ್ಯದಲ್ಲಿ ತಾವು ದೇವತಾ ಪ್ರತಿನಿಧಿಯಾದರು. ಮನುಷ್ಯರು, ದೇವತೆಗಳು ಮತ್ತು ರಾಕ್ಷಸರಿಗೆ ಮಾರ್ಗದರ್ಶಕರಾದರು.”ನಾರದ ಪಾಂಚರಾತ್ರ” ಎಂಬ ತಂತಗ್ರಂಥವನ್ನೂ ವರ್ಣೋಚ್ಚಾರವನ್ನು ತಿಳಿಸುವ ‘ನಾರದಶಿಕ್ಷಾ’ ಎಂಬ ಗ್ರಂಥವನ್ನೂ ಅವರು ರಚಿಸಿದರು.

ನಾರದರಿಗೆ ಸನತ್ಕುಮಾರರು ಮಾಡಿದ ಉಪದೇಶ ‘ನಾರದೀಯ ಪುರಾಣ’ ಎಂದು ಲೋಕಪ್ರಸಿದ್ಧಿ ಪಡೆದಿದೆ. ವಾಲ್ಮೀಕಿ ಮಹರ್ಷಿಗಳಿಗೆ ರಾಮಾಯಣ ಕಾವ್ಯರಚನೆಗೆ ಹಾಗೂ ವ್ಯಾಸ ಮಹರ್ಷಿಗಳಿಗೆ ಭಾಗವತಪುರಾಣರಚನೆಗೆ ಪ್ರೇರಣೆ ನೀಡಿದವರೂ ನಾರದರೇ. ಎಂಬತ್ತನಾಲ್ಕು ಸೂತ್ರಗಳನ್ನೊಳಗೊಂಡ ಇವರ ‘ಭಕ್ತಿಸೂತ್ರ’ ಭಕ್ತಿತತ್ತ್ವದ ಕುರಿತು ವೇದಾಂತಸೂತ್ರಗಳನ್ನೊಳಗೊಂಡ ಸರ್ವಶ್ರೇಷ್ಠಕೃತಿಯಾಗಿದೆ.

ಮಹರ್ಷಿಯಾಗಿ ಹೆಗ್ಗಳಿಕೆಯನ್ನು ಪಡೆದ, ಪೂಜೆಗೆ ಪಾತ್ರನಾದ ನಾರದ ಮಹರ್ಷಿಯನ್ನು ಇಂದು ಸಿನೆಮಾ ರಂಗದಲ್ಲಿ ಹಾಸ್ಯಾಸ್ಪದ ಪಾತ್ರವಾಗಿ ಪರಿಕಲ್ಪಿಸುತ್ತಿರುವುದು ಖೇದನೀಯ. ಯಾವುದೇ ಪಾತ್ರವನ್ನು ಹಾಸ್ಯದ ಪಾತ್ರವಾಗಿ ಬಿಂಬಿಸುವ ಮುನ್ನ ಹಿನ್ನಲೆಯ ಬಗೆಗೆ ಅಧ್ಯಯನ ಮಾಡುವ ಗಂಭೀರತೆಯು ಮೂಡಬೇಕಾದುದು ಅವಶ್ಯವಾಗಿದೆ.‌

Leave a Reply

Your email address will not be published.

This site uses Akismet to reduce spam. Learn how your comment data is processed.