Narada Jayanti-July-2017-Bengaluru

ನಾರದ ಜಯಂತಿ ವರದಿ:
——————–
ವಿಶ್ವ ಸಂವಾದ ಕೇಂದ್ರದಿಂದ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಆದ್ಯ ಪತ್ರಕರ್ತ ದೇವರ್ಷಿ ನಾರದ ಜಯಂತಿಯ ಅಂಗವಾಗಿ ಮಾಧ್ಯಮ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ “ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ” ಈ ವಿಷಯದ ಕುರಿತು ಪ್ರಸಾರ ಭಾರತಿಯ ಮುಖ್ಯಸ್ಥ ಮತ್ತು ಹಿರಿಯ ಪತ್ರಕರ್ತ ಶ್ರೀ ಅರಕಲಗೂಡು ಸೂರ್ಯಪ್ರಕಾಶ ಉಪನ್ಯಾಸ ಹಾಗು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Narada Jayanti-July-2017-Bengaluru

ಇದೇ ಸಂದರ್ಭದಲ್ಲಿ ವಿಶ್ವ ಸಂವಾದ ಕೇಂದ್ರದ ಸಂಸ್ಥಾಪಕ ಸದಸ್ಯ ಶ್ರೀ ಚಂದ್ರಶೇಖರ ಭಂಡಾರಿಯವರಿಂದ ಕರ್ಮವೀರ ವಾರಪತ್ರಿಕೆಯ ಸಂಪಾದಕ ಶ್ರೀ ಅನಿಲ್ ಕುಮಾರ್ ಇವರಿಗೆ ನಾಡಿನ ಹಿರಿಯ ಪತ್ರಕರ್ತ ದಿ|| ಬೆ.ಸು.ನಾ. ಮಲ್ಯರ ಸ್ಮರಣೆಯಲ್ಲಿ ಮತ್ತು ಹೊಸ ದಿಗಂತ ದಿನಪತ್ರಿಕೆಯ ಹಿರಿಯ ವ್ಯಂಗ್ಯಚಿತ್ರಕಾರ ಶ್ರೀ ರಾಮಧ್ಯಾನಿಯವರಿಗೆ ಶ್ರೀ ತಿ.ತಾ.ಶರ್ಮರ ನೆನಪಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್, ಆದ್ಯ ಪತ್ರಕರ್ತ ದೇವರ್ಷಿ ನಾರದರ ಜಯಂತಿಯ ಕಲ್ಪನೆಯೇ ವಿಶಿಷ್ಟ.
ದೇವರ್ಷಿಗಳು ದೇವ ದಾನವರಾದಿಯಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಅಜಾತಶತ್ರುಗಳು ಮತ್ತು ಸಮಸ್ತ ಲೋಕದ ಹಿತವನ್ನೇ ತಮ್ಮ ಕಾರ್ಯೋದ್ದೇಶ್ಯವಾಗಿ ಹೊಂದಿದ್ದವರು. ವ್ಯಕ್ತಿತ್ವದ ಸಮಗ್ರತೆ, ಪ್ರಾಮಾಣಿಕತೆ ಮತ್ತು ವಸ್ತುನಿಷ್ಠತೆಗೆ ನಾರದರೇ ಆದರ್ಶ.
ಇಂತಹ ಆದರ್ಶಗಳೇ ಎಲ್ಲ ಪತ್ರಕರ್ತರಲ್ಲಿಯೂ ಅಡಕವಾಗಿರಲೇಬೇಕಾದ ಗುಣವಿಶೇಷಗಳು. ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯಲ್ಲಿ ಹಾಸುಹೊಕ್ಕಾಗಿರುವ ಇಂತಹ ಚರಿತ್ರೆಗಳನ್ನೇ ಹೊರಜಗತ್ತಿಗೆ ಪರಿಚಯಿಸಬೇಕಾಗಿರುವದು ಇಂದಿನ ಅಗತ್ಯತೆ ಎಂದು ಅಭಿಪ್ರಾಯಪಟ್ಟರು.

ತಮಗೆ ಸಂದ ಗೌರವಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತ ಮತ್ತೊಬ್ಬ ಪತ್ರಕರ್ತ ಶ್ರೀ ರಾಮಧ್ಯಾನಿಗಳು ದೇವರ್ಷಿ ನಾರದರ
ಕಥಾಪ್ರಸಂಗಗಳು ಮತ್ತು ಚರಿತ್ರೆಯ ಚಿತ್ರಣಗಳು ಬಾಲ್ಯಕಾಲದಿಂದಲೂ ಮನಸ್ಸಿನ ಮೇಲೆ ಉಂಟುಮಾಡಿದ್ದ ಪರಿಣಾಮಗಳಿಂದಾಗಿಯೇ ವಿಶಿಷ್ಟ ಸಂದರ್ಭಗಳನ್ನು ಚಿತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಲು ಪ್ರೇರಣೆದೊರಕಿತು ಎಂಬ ಅನಿಸಿಕೆ ಹಂಚಿಕೊಂಡರು.

ಪ್ರಸಾರ ಭಾರತಿಯ ಮುಖ್ಯಸ್ಥ ಮತ್ತು ಹಿರಿಯ ಪತ್ರಕರ್ತ ಶ್ರೀ ಅರಕಲಗೂಡು ಸೂರ್ಯಪ್ರಕಾಶರು “ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ” ಎಂಬ ವಿಷಯದ ಕುರಿತಾಗಿ ಸ್ವಾತಂತ್ರ ನಂತರದಿಂದ ಇಂದಿನ ದಿನಮಾನಗಳವರೆಗೂ ದೇಶದ ಪತ್ರಿಕೋದ್ಯಮವು ಸವೆಸಿದ ಹಾದಿಯನ್ನು ಮತ್ತು ಕ್ರಮಿಸಿದ ವಿವಿಧ ಮಜಲುಗಳನ್ನು ಅಂಕಿಅಂಶಗಳ ಸಮೇತವಾಗಿ ಪ್ರದರ್ಶಿಕೆಯೊಂದರ ಮೂಲಕ ವಿಶಿಷ್ಟವಾಗಿ ವಿವರಿಸಿದರು.

ಸ್ವಾತಂತ್ರ್ಯಾನಂತರದ ಕಾಲದಿಂದ ಇಂದಿನವರೆಗೂ ದೇಶದಲ್ಲಿ ಅಕ್ಷರಸ್ಥರ ಸಂಖ್ಯೆ ೪೦% ದಿಂದ ೭೫% ರಷ್ಟು ಏರಿಕೆಕಂಡಿದೆ. ಅದರೊಡನೆ ದೇಶದ ಆರ್ಥಿಕತೆಯೂ ಅಪಾರ ಬೆಳವಣಿಗೆಹೊಂದಿದೆ. ಇದು ದೇಶದಲ್ಲಿ ಪತ್ರಿಕೆಗಳನ್ನು ಕೊಂಡು ಓದುವ ದೊಡ್ಡ ವರ್ಗವೊಂದನ್ನು ಹುಟ್ಟುಹಾಕಿದೆ. ಇದೇ ಹಂತದಲ್ಲಿ ಮಾಧ್ಯಮವೂ ಸಹಿತ ವಿದ್ಯುನ್ಮಾನ, ದೂರದರ್ಶನ , ರೇಡಿಯೋ ಮತ್ತು ಅಂತರ್ಜಾಲಗಳಂತಹ ವಿವಿಧ ರೂಪಗಳಲ್ಲಿ ಮಾರ್ಪಾಡಾಗುತ್ತ ದೇಶದ ಆರ್ಥಿಕ, ಸಾಮಾಜಿಕ , ರಾಜಕೀಯ ಹೀಗೆ ಅನೇಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತ ಬೆಳೆದುಬಂದಿದೆ.

೧೯೭೦-೮೦ ರ ದಶಕದ ಮುದ್ರಣ, ಸರ್ಕಾರಿ ದೂರದರ್ಶನ ಹಾಗೂ ಬಾನುಲಿ ಸೇವೆಗಳಿಗೆ ಸೀಮಿತವಾಗಿದ್ದ ಪತ್ರಕಾರಿತೆ ಮತ್ತು ಅಂತರ್ಜಾಲ ಆಧಾರಿತ ಫೇಸ್ಬುಕ್ , ಟ್ವಿಟರ್, ವ್ಹಾಟ್ಸಪ್ ಗಳ ಇಂದಿನ ಕಾಲಮಾನದಲ್ಲಿ ಸುದ್ದಿ ಪ್ರಸಾರಿತೆಯ ವೇಗದಲ್ಲಾದ ಗಣನೀಯ ಪ್ರಗತಿಯನ್ನು ಕಾಣಬಹುದಾಗಿದೆ. ಇಂತಹ ಆಧುನಿಕ ಸಾಧನಗಳು ಸುದ್ದಿಯನ್ನು ತಲುಪಿಸುವ ವೇಗದ ಮಾಧ್ಯಮ ಮಾತ್ರವಾಗಿ ಅಲ್ಲದೆ ಜನಸಾಮಾನ್ಯರೂ ದೇಶದ ಆಗುಹೋಗುಗಳ ಕುರಿತಾಗಿ ತಮ್ಮ ವಯುಕ್ತಿಕ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದಾದ ಮಾರ್ಗಗಳಾಗಿ ಪರಿಣಮಿಸಿವೆ.

೧೯೭೦ ರ ದಶಕದಲ್ಲಿ ದೇಶದ ಮೇಲೆ ಇಂದಿರಾಗಾಂಧಿಯವರು ಹೇರಿದ್ದ ತುರ್ತುಪರಿಸ್ಥಿತಿ ಎಂಬ ವಿಕಟ ಸಮಯದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯದ ಮೇಲಾದ ಆಘಾತವನ್ನು ಈ ದೇಶ ನೋಡಿದೆ. ಪೋಲಿಸ್ ಅಧಿಕಾರಗಳ ಒಪ್ಪಿಗೆ ಇಲ್ಲದೆ ಯಾವುದೇ ಸಂಪಾದಕೀಯ, ಸುದ್ದಿಯೂ ಪ್ರಕಟಗೊಳ್ಳದ ವೈಚಾರಿಕ ದಬ್ಬಾಳಿಕೆಯ ಕಾಲವನ್ನೂ ಈ ದೇಶ ಅನುಭವಿಸಿದೆ. ತುರ್ತುಪರಿಸ್ಥಿತಿಯ ಕರಾಳ ಸಂದರ್ಭದಲ್ಲೇ ದೇಶದ ನ್ಯಾಯಾಲಯದ ತೀರ್ಪುಗಳು ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದಲ್ಲಿ ಅಂತಹ ತೀರ್ಪುಗಳನ್ನೇ ಧಿಕ್ಕರಿಸುವ, ದೇಶದ ಸಂವಿಧಾನವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಕುಲಗೆಡಿಸಿದ ಉದಾಹರಣೆಗಳಿವೆ.

ದೇಶದಲ್ಲಿ ವಿರೋಧ ಪಕ್ಷದ ಅಸ್ತಿತ್ವವನ್ನೇ ಇಲ್ಲವಾಗಿಸಿ , ಜನಾಭಿಪ್ರಾಯವನ್ನು ಗಾಳಿಗೆ ತೂರಿ ತಮಗೆ ತೋಚಿದಂತೆ ಒಂದೇ ಪಕ್ಷ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಾಗುವಂತೆ ನಡೆದ ಇಂತಹ ಕೆಲಸಗಳೇ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತವೆ. ಅಭಿವ್ಯಕ್ತಿ ಸ್ವಾತಂತ್ರವೇ ಅಲ್ಲದೆ ಈ ದೇಶದ ನಾಗರಿಕನಾಗಿ ಸ್ವತಂತ್ರವಾಗಿ ಜೀವಿಸುವ ಮೂಲಭೂತವಾದ ಅಧಿಕಾರವನ್ನೇ ಹತ್ತಿಕ್ಕುವ ಕೆಲಸ ತುರ್ತುಪರಿಸ್ಥಿತಿಯ ಸಮಯದಲ್ಲಿ ನಡೆದಿದೆ.

ದೇಶಕ್ಕೆ ಸ್ವಾತಂತ್ರ ದೊರಕಿದ ಹೊಸತರಲ್ಲೇ ಎಲ್.ಐ.ಸಿ ಮತ್ತು ಮುಂದ್ರಾ ಹಗರಣ ಹಾಗೆಯೇ ತೀರಾ ಇತ್ತೀಚಿನ ಅಂದರೆ ೨೦೦೦ದ ದಶಕದಲ್ಲಿ ಹಣಕ್ಕೆ ಬದಲಾಗಿ ಪ್ರಶ್ನೆಗಳನ್ನು ಕೇಳುವ ಸಂಸದರನ್ನು ತನಿಖಾ ಪತ್ರಿಕೋದ್ಯಮದ ಮೂಲಕ ಬಯಲಿಗೆಳೆದ ಪ್ರಸಂಗಗಳು ನಡೆದಿವೆ. ಇಂತಹ ವಸ್ತುನಿಷ್ಠತೆ ಮತ್ತು ಸತ್ಯಪರತೆಗಳೇ ನಮ್ಮ ದೇಶದ ಪತ್ರಕಾರಿತೆಗೆ ಸಲ್ಲಬೇಕಾದ ಗೌರವವನ್ನು ಗಳಿಸಿಕೊಟ್ಟಿದ್ದು.

೧೯೭೦-೮೦ ರ ದಶಕ ಮಾಧ್ಯಮಗಳ ಬಾಹುಳ್ಯ ಮತ್ತು ಜನರಲ್ಲಿ ಸುದ್ದಿ ತಲುಪುವ ತೀವ್ರತೆ ಸೀಮಿತವಾಗಿದ್ದ ಕಾಲವದು. ಕರ್ನಾಟಕ, ಆಂಧ್ರಗಳಲ್ಲಿ ಆಗಿನ ಅಧಿಕಾರಾರೂಢ ಸರ್ಕಾರದ ಮತ್ತು ಪತ್ರಿಕಾರಂಗದ ಮಧ್ಯೇ ಭುಗಿಲೆದ್ದಿದ್ದ ಅನೇಕ ಭಿನ್ನಾಭಿಪ್ರಾಯದ ಸಂದರ್ಭಗಳಿಗೆ ವಿಧಾನಸಭೆಯಲ್ಲಿಯೇ ತೀರ್ಪುಗಾಣುವಂತಹ ಅನೇಕ ಸಂದಿಗ್ಧದ ಪರಿಸ್ಥಿತಿಗಳು ಎದುರಾಗಿದ್ದವು. ಆಗ ದೇಶದ ನ್ಯಾಯಪ್ರನಾಳಿಯು ಸಹಜವಾಗಿರಲು ಮತ್ತು ಸಾಮಾಜಿಕ ನ್ಯಾಯವು ಜೀವಂತವಾಗಿರಿಸಲು ಪತ್ರಿಕಾರಂಗದ ಸಹಾಯಕ್ಕೆ ಬಂದ ಈ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅದರ ನಿಷ್ಪಕ್ಷ ಮತ್ತು ಪ್ರಜಾಪ್ರಭುತ್ವಪರವಾದ ಕ್ರಮಗಳನ್ನು ಮರೆಯುವಂತಿಲ್ಲ. ಶಾಸಕಾಂಗ ಮತ್ತು ಪತ್ರಿಕಾರಂಗದ ನಡುವಿನ ಇಂತಹ ವಿವಾದಗಳನ್ನು ಬಗೆಹರಿಸಿ ಅನೇಕ ಸಂದರ್ಭಗಳಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಬೇಕಾದ ಅಗತ್ಯ ವಾತಾವರಣವನ್ನು ಉಳಿಸುವಂತೆ ಮಾಡಲು ನಮ್ಮ ದೇಶದ ನ್ಯಾಯಾಂಗವೇ ಧಾವಿಸಿದೆ.

೯೦ರ ದಶಕದಲ್ಲಿ ಶಿವರಾಜ್ ಪಾಟೀಲರು ಲೋಕಸಭೆಯ ಅಧ್ಯಕ್ಷರಾಗಿದ್ದ ಕಾಲಕ್ಕೆ ಸದನದ ಕಾರ್ಯಕಲಾಪಗಳನ್ನು ದೂರದರ್ಶನದ ಮೂಲಕ ಬಿತ್ತರಗೊಳ್ಳುವಂತೆ ಅನುಮತಿ ನೀಡಿದರು. ಆಧುನಿಕ ಯುಗದಲ್ಲಿ ಯಾವುದೇ ಅಡೆತಡೆಗಳಿಲ್ಲದೆ, ಮುಸುಕುಗಳಿಲ್ಲದೆ
ಸುದ್ದಿಪ್ರಸಾರಕ್ಕೆ ಕಾರಣವಾದ ಕ್ರಮಗಳು ಸಾಧ್ಯವಾಗಿದ್ದು ಅನೇಕಾನೇಕ ನಿಷ್ಪಕ್ಷ ಪತ್ರಕರ್ತರ ಸತತ ಪ್ರಯತ್ನಗಳಿಂದಾಗಿಯೇ.

ಹೀಗೆ ನಮ್ಮ ದೇಶದ ಸಂವಿಧಾನವು ಎಲ್ಲ ನಾಗರಿಕರಿಗೆ ಸಮನಾಗಿ ಕೊಡಮಾಡುವ ಅಭಿವ್ಯಕ್ತಿ ಸ್ವಾತಂತ್ರ್ಯವು ದೇಶದ ಪ್ರಜಾಪ್ರಭುತ್ವ ಪದ್ಧತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವಾಗಲೇ ಇದೇ ಹಕ್ಕಿನ ಮುಸುಕಿನಲ್ಲಿ “ಭಾರತ್ ತೇರೇ ತುಕಡೆ ಹೋಂಗೆ” ಎಂಬ ದೇಶ ವಿಭಜಕ, ಸಮಾಜ ಭಂಜಕ ಪ್ರಲಾಪಗಳು ಇಂದು ದೆಹಲಿಯ ಜವಾಹರ್ಲಾಲ್ ನೆಹರು , ಪಶ್ಚಿಮ ಬಂಗಾಳದ ಜಾಡವ್ ವಿಶ್ವವಿದ್ಯಾಲಯಗಳ ಅಂಗಳಗಳಿಂದ ಕೇಳಿಬರುತ್ತಿರುವದು ಆಘಾತಕಾರಿ ಬೆಳವಣಿಗೆಯಾಗಿದೆ.

ನಮ್ಮ ಸಂವಿಧಾನವು ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ ಎಲ್ಲ ನಾಗರಿಕರಿಗೆ ಸಮನಾಗಿ ಸಿಗುವಂತಾಗಲು ಕೊಡಮಾಡುವ ಹಕ್ಕುಗಳನ್ನೇ ಗುರಾಣಿಯಾಗಿಸುವ ಸಮಾಜ ವಿರೋಧಿತತ್ವಗಳು ಅದೇ ಸಂವಿಧಾನವು ಎಲ್ಲರಿಗೂ ಅನ್ವಯವಾಗುವ ಮೂಲಭೂತ ಕರ್ತವ್ಯಗಳನ್ನೂ ವಿಧಿಸಿರುವದನ್ನು ಮರೆತುಬಿಡುತ್ತವೆ.ವಯುಕ್ತಿಕ ಸ್ವಾತಂತ್ರ್ಯ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ಸಂಪ್ರುಭುತ್ವ,ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಪ್ರಶ್ನಿಸುವ ಇಂತಹ ವಿಧ್ವಂಸಕ ತತ್ವಗಳು ಹೂಡುವ ವಾದಗಳು ಯಾವುದೇ ಕಾಲಕ್ಕೂ ಸಮರ್ಥನೀಯವಲ್ಲ . ದೇಶದ ಲಾಂಛನ ಮತ್ತು ನಾಮಗಳ ಅನುಚಿತ ಬಳಕೆಯ ನಿಗ್ರಹ ಕಾನೂನು (೧೯೫೦ರ ಕಾಯ್ದೆ), ದೇಶದ ಗೌರವವನ್ನು ಸಂರಕ್ಷಿಸುವ ಕಾನೂನುಗಳು (೧೯೭೧ರ ಕಾಯ್ದೆ ) ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಸೂರ್ಯಪ್ರಕಾಶರು ತಮ್ಮ ಉಪನ್ಯಾಸದಲ್ಲಿ ವಿಶದವಾಗಿ ತಿಳಿಸಿದರು.

ಸುಮಾರು ಎರಡು ಗಂಟೆಗಳ ಅವಧಿಗೆ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ್ ಭಂಡಾರಿ, ನಾಡೋಜ ಮಹೇಶ ಜೋಷಿ, ವಿಜಯಲಕ್ಷಿ ಬಾಳೆಕುಂದ್ರಿ, ಜಿ.ಗಂಗಾಧರ್, ಜಿ.ಶ್ರೀಧರ್ ಮತ್ತು ಅನೇಕ ಗಣ್ಯರು , ಪತ್ರಿಕಾಕರ್ಮಿಗಳು, ಅಂಕಣಕಾರರು, ಸಾಮಾಜಿಕ ಜಾಲತಾಣಿಗರು ಅಲ್ಲದೆ ಪತ್ರಿಕೊದ್ಯಮ ವಿದ್ಯಾರ್ಥಿಗಳೂ ಉಪಸ್ಥಿತರಿದ್ದದ್ದು ವಿಶೇಷವಾಗಿತ್ತು. ಸಮಾರಂಭವು ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಚಾರ ಪ್ರಮುಖ್ ಶ್ರೀ ವಾದಿರಾಜರ ಪ್ರಾಸ್ತಾವಿಕದೊಂದಿಗೆ ಮೊದಲಾಗಿ ಶ್ರೀ ನರೇಂದ್ರರ ವಂದನಾರ್ಪಣೆಗಳೊಂದಿಗೆ ಸಮಾಪನೆಗೊಂಡಿತು.

ಅದೇ ದಿನ ರಾಮಧ್ಯಾನಿಯವರ ಆಯ್ದ ವ್ಯಂಗ್ಯ ಚಿತ್ರಗಳ ಪ್ರದರ್ಶಿನಿಯನ್ನೂ ಏರ್ಪಡಿಸಲಾಗಿತ್ತು.

Leave a Reply

Your email address will not be published.

This site uses Akismet to reduce spam. Learn how your comment data is processed.