ಕಾಂಗ್ರೆಸ್ ತಮ್ಮ ಎಂದಿನ ಗಾಂಧಿ ಪರಿವಾರದ ನಿಷ್ಠೆಯ ಅನುಸಾರವಾಗಿಯೇ ಈ ಬಾರಿಯೂ ದೇಶದಾದ್ಯಂತ ಬೃಹತ್ತಾದ ಪ್ರತಿಭಟನೆಗಳನ್ನು ನಡೆಸುತ್ತಿದೆ.ನ್ಯಾಷನಲ್ ಹೆರಾಲ್ಡ್‌‌ನಲ್ಲಿ ನಡೆದಿದೆ ಎನ್ನಲಾದ ಮನಿ ಲಾಂಡರಿಂಗ್ ಕೇಸ್‌ಗೆ ಸಂಬಂಧಿಸಿದಂತೆ ಎನ್ಫೋರ್ಸ್‌ಮೆಂಟ್ ಡೈರೆಕ್ಟೋರೇಟ್‌ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹಾಗು ರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಬುಲಾವ್ ನೀಡಿತ್ತು. ಈ ಕುರಿತಂತೆ 2013ರಿಂದಲೂ ಪ್ರಜರಣ ನಡೆಯುತ್ತಲೇ ಬಂದಿದೆ.

2,000ಕೋಟಿ ಮೌಲ್ಯದ ಆಸ್ತಿಯನ್ನು ಕೇವಲ 50ಕೋಟಿಗಳಿಗೆ ವಿಲೇವಾರಿ ಮಾಡಿರುವ ಮೊಕದ್ದಮೆ ದಾಖಲಾಗಿದ್ದು ‘prevention of money laundering act’ನ ಅಡಿಯಲ್ಲಿ ವಿಚಾರಣೆಯ ಹೇಳಿಕೆ ದಾಖಲಾಗಲಿದೆ.

ಆದರೆ ಇಲ್ಲಿನ ಪ್ರಶ್ನೆ ಕೇವಲ ಭ್ರಷ್ಟಾಚಾರದ ಆರೋಪದ ಮೇಲಲ್ಲ.ಬದಲಾಗಿ ಸಂವಿಧಾನ ಸಮ್ಮತವಾಗಿ ಸಂಯೋಜನೆಗೊಂಡಿರುವ, ಪ್ರಜಾತಾಂತ್ರಿಕ ಆಶಯಗಳನ್ನು ಸಾಂಸ್ಥಿಕ ರೂಪದಲ್ಲಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಎನ್‌ಫೋರ್ಸ್‌ಮೆಂಟ್ ಡೈರೆಕ್ಟೋರೇಟ್ (ಇಡಿ)ಯು, ಈ ಮೇಲೆ ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಆದೇಶಿಸಿದೆ.ಅಂದರೆ ಇದೊಂದು ಪ್ರಕ್ರಿಯೆ? ಇದರಲ್ಲಿ ಅವಮಾನ,ಷಡ್ಯಂತ್ರ ಇವುಗಳಿಗೆ ಅವಕಾಶವೆಲ್ಲಿದೆ?

ಅಂದರೆ ಇಡಿ ಸಂವಿಧಾನ ಬದ್ಧವಾಗಿ ಕಾನೂನಿನ ಅಡಿಯಲ್ಲಿ ವಿಚಾರಣೆ ನಡೆಸುವ ಪ್ರಕ್ರಿಯೆಯೊಂದನ್ನು ತನ್ನ ಅಧಿಕಾರದ ಮಿತಿಯಲ್ಲೇ ನಡೆಸುತ್ತಿದೆ. ಸಂವಿಧಾನದ ಎದುರಿಗೆ ಬಡ ಕೂಲಿ ಕಾರ್ಮಿಕ, ಸರಕಾರೀ ಗುಮಾಸ್ತ, ಪ್ರಭಾವಿ ರಾಜಕಾರಣಿ ಎಂಬ ಭೇದವಿಲ್ಲ. ಕೇವಲ ದೂರನ್ನು ಆಧರಿಸಿ ಕೇಸು ದಾಖಲು ಮಾಡಿ ತನಿಖೆ ನಡೆಸುತ್ತಿದೆ. ಇದು ಶ್ರೀಮತಿ ಸೋನಿಯಾ ಮತ್ತು ರಾಹುಲ್‌ರಿಗೂ ಅನ್ವಯವಾಗುತ್ತದೆ.ಆದರೆ ಹೀಗೆ ಕಾನೂನು ಬದ್ಧವಾದ ನೋಟಿಸ್ ಜಾರಿ ಮಾಡಿದಾಗಲೂ ರಾಜಕೀಯ ಹುಡುಕುವುದು ಸಂವಿಧಾನಕ್ಕೆ ಮಾಡಿರುವ ಅಪಚಾರವೇ ಸರಿ.

ಅಷ್ಟೇ ಅಲ್ಲದೆ ಮಲ್ಲಿಕಾರ್ಜುನ ಖರ್ಗೆ,ರಣದೀಪ್ ಸುರ್ಜೇವಾಲಾ,ಪಿ.ಚಿದಂಬರಂರಂತಹ ನಾಯಕರೂ ದೆಹಲಿಯ ಇಡಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದು ಸಂವಿಧಾನಕ್ಕೆ ಮಾಡಿದ ಅಣಕದಂತಿತ್ತು.ಅಷ್ಟೇ ಅಲ್ಲದೆ ದೇಶದ ಎಲ್ಲ 25 ಇಡಿ ಕಚೇರಿಗಳ ಎದುರು ಪ್ರತಿಭಟನೆ ಮಾಡಲು ಕಾಂಗ್ರೆಸ್ ಕರೆ ನೀಡಿತ್ತು. ಅಪರಾಧ ನಡೆದಿದ್ದರೆ ಶಿಕ್ಷೆ ಖಂಡಿತ.ಅಪರಾಧ ಸಾಬೀತಾಗದಿದ್ದರೆ ಆರೋಪಮುಕ್ತವಾಗಿ ಹೊರಬರಲು ಸಂವಿಧಾನ ಎಲ್ಲ ಬಗೆಯ ಅವಕಾಶಗಳನ್ನು ಎಲ್ಲ ವ್ಯಕ್ತಿಗು ನೀಡಿದೆ‌. ಅಂದರೆ ಇಲ್ಲಿ ಪ್ರತಿಭಟನೆಗೆ ಎರಡು ಅಂಶಗಳಷ್ಟೇ ಕಾರಣವಾಗಬಲ್ಲವು ಒಂದೋ ಅಪರಾಧ ಮಾಡಿದ್ದಲ್ಲಿ ಸಾಬೀತಾಗುವ ಭಯ,ಇಲ್ಲದಿದ್ದಲ್ಲಿ ಸಂವಿಧಾನದ ಮೇಲಿನ ಅಪನಂಬಿಕೆ.

ಸಂವಿಧಾನದ ಮೇಲೆ ವಿಶ್ವಾಸವಿದ್ದಾಗ ಯಾಕೆ ಈ ರೀತಿಯ ಪ್ರತಿಭಟನೆಗಳು ವ್ಯಕ್ತವಾಗುತ್ತದೆ? ಈ ರೀತಿ ಭ್ರಷ್ಟಾಚಾರದ ಆರೋಪ ಬಂದಾಗ ಅದು ಮುಕ್ತವಾಗುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಶಪಥ ಮಾಡಿದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಭಾರತದ ರಾಜಕೀಯ ಪರಿಪೇಕ್ಷದಲ್ಲೇ ಇದೆ. ಆದರೆ ಕೇವಲ ವಿಚಾರಣೆಯ ಪ್ರಕ್ರಿಯೆಗೆ ಕಾಂಗ್ರೆಸ್ ಯಾಕಿಷ್ಟು ಪ್ರತಿರೋಧ ಒಡ್ಡುತ್ತಿದೆ?

ಅಷ್ಟಲ್ಲದೆ ಪ್ರತಿಭಟನೆಯ ಸ್ವರೂಪವೂ ಕೂಡ ಸಾರ್ವಜನಿಕರಿಗೆ ಅತ್ಯಂತ ಅನಾನುಕೂಲವಾಗುವ ರೀತಿಯಲ್ಲಿದ್ದು, ಮೆರವಣಿಗೆಗಳ ಮೂಲಕ ತೆರಳಿದ್ದು ಸಂಚಾರ,ಸಾರಿಗೆಗೆ ಅಡ್ಡಿ ಉಂಟಾಗಿದ್ದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ಈ ದೇಶದ ಅತ್ಯಂತ ಪೂಜನೀಯವಾದ ಗ್ರಂಥ. ಅದು ಈ ದೇಶದ ಅಸ್ಮಿತೆಯ ವಿಚಾರ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಾನತೆಯ ಆಶಯಗಳನ್ನು ಒಳಗೊಂಡಿದ್ದು ಈ ದೇಶದ ಜನರ ಬದುಕಿನ ಮೌಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆದರೆ ಕಾಂಗ್ರೆಸ್ ತನ್ನ ರಾಜಕೀಯ ನಾಯಕರನ್ನು ರಕ್ಷಿಸುವ ನೆಪವೊಡ್ಡಿ ಸಂವಿಧಾನಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಿದೆಯೇ ಎಂಬುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.