ಕುಂದಾಪುರ November 07, 2012 : ಅಖಂಡ ಭಾರತ ನಿರ್ಮಾಣಕ್ಕಾಗಿ ಹಾಗೂ ಗ್ರಾಮ ವಿಕಾಸಕ್ಕಾಗಿ ಮತ್ತು ಗ್ರಾಮಗಳಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವ ಸಲುವಾಗಿ ಆರೆಸ್ಸೆಸ್ಸ್ನ ಅಖಿಲ ಭಾರತೀಯ ಸೇವಾ ಪ್ರಮುಖ ಸೀತಾರಾಮ ಕೆದಿಲಾಯ ಆರಂಭಿಸಿರುವ ಭಾರತ ಪರಿಕ್ರಮ ಯಾತ್ರೆ ಬುಧವಾರ ನಾವುಂದ ಪುರ ಪ್ರವೇಶ ಮಾಡಿದೆ.
ಗಂಗೊಳ್ಳಿಯಿಂದ ಬೆಳಿಗ್ಗೆ 6.೦೦ ಗಂಟೆಗೆ ಹೊರಟ ಪಾದಯಾತ್ರೆ ನಾಯಕವಾಡಿ ತ್ರಾಸಿ ಮಾರ್ಗವಾಗಿ ಮರವಂತೆ ಗ್ರಾಮ ಪ್ರವೇಶಿಸಿದಾಗ ಮಹಾರಾಜ ಸ್ವಾಮಿ ದೇವಸ್ಥಾನ ಎದುರುಗಡೆ ದೇವಳದ ಆಡಳಿತ ಮೊಕ್ತೇಸರ ರಾಮಚಂದ್ರ ಹೆಬ್ಬಾರ್ ಮತ್ತು ರಾಜು ಕುರು ರಾಮದಾಸ್ ಖಾರ್ವಿ ಹೂಮಾಲೆ ಹಾಕಿ ಸ್ವಾಗತಿಸಿದರು. ಮುಂದೆ ಮರವಂತೆ ಸುಬ್ರಹ್ಮಣ್ಯ ದೇವಸ್ಥಾನ ಧರ್ಮದರ್ಶಿ ತಿಮ್ಮ ದೇವಾಡಿಗ ದಂಪತಿ ಕೆದಿಲಾಯರನ್ನು ಸ್ವಾಗತಿಸಿದರು. ಮರವಂತೆಯ ಶ್ರೀ ರಾಮಮಂದಿರದಲ್ಲಿ ಕೆದಿಲಾಯರನ್ನು ಗೌರವಿಸಲಾಯಿತು.
ಯಾತ್ರೆಯು ನಾವುಂದ ಗ್ರಾಮವನ್ನು ಪ್ರವೇಶಿಸಿದ ಸಂದರ್ಭ ನಾವುಂದ ಜುಮ್ಮಾ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಬಿ. ಎಸ್. ಮೊಹಿದ್ದಿನ್, ಎನ್. ಅಬ್ದುಲ್ಲಾ ತೌಫೀಕ್, ಎನ್. ಸಿ. ಖಾದರ್, ಅಬ್ದುಲ್ ಹಮೀದ್, ಅಬ್ದುಲ್ ಕಾದಿರ್ ಬಡಾಕೆರೆ ಸಹಿತ ಅನೇಕ ಮುಸ್ಲಿಂ ಧಾರ್ಮಿಕ ಮುಖಂಡರು ಶಾಲು ಹೊದಿಸಿ ಫಲ ತಾಂಬೂಲ ನೀಡಿ ಗೌರವಿಸಿದರು. ಎಲ್ಲಾ ವರ್ಗದ ಸ್ವಾಗತ ಗೌರವಗಳನ್ನು ಪಡೆಯುತ್ತಾ ನಾವುಂದ ಪ್ರಗತಿಪರ ಕೃಷಿಕ ವೆಂಕಟರಮಣ ಗಾಣಿಗರ ಮನೆಗೆ ತಲುಪಿ ವಿಶ್ರಾಂತಿ ಪಡೆದ ಕೆದಿಲಾಯರು, 11.00 ಗಂಟೆಗೆ ಜುಮ್ಮಾ ಮಸೀದಿ ಜಮಾತ್ ಅಧ್ಯಕ್ಷ ಮೊಹಿದ್ದೀನ್ ತೌಫೀಕ್ ಇವರೊಂದಿಗೆ ರಾಷ್ಟ್ರೀಯ ವಿಚಾರ ಧಾರೆಗಳ ಬಗ್ಗೆ ಸಮಾಲೋಚನೆ ನೆಡೆಸಲಾಯಿತು. ಮದ್ಯಾಹ್ನ ಡಾ|| ರಾಘವನ್ ನಂಬಿಯಾರ್ರವರ ಮನೆಯಲ್ಲಿ ಭಿಕ್ಷಾನ್ನ ಸ್ವೀಕರಿಸಿದರು.
ಬಳಿಕ ನಾವುಂದ ಕಮಲಾ ಗಾಣಿಗರ ಮನೆ, ನಾಗರತ್ನ ಮಂಜಪ್ಪ ಅವರ ಮನೆ ಹಾಗೂ ಹಂಝ ಸಾಹೇಬರ ಮನೆಗೆ ತೆರಳಿ ಕುಶಲೋಪರಿ ನಡೆಸಿದ ಕೆದಿಲಾಯರು, ನಾವುಂದ ಪದವಿಪೂರ್ವ ಕಾಲೇಜಿನಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಊರಿನ ಪ್ರಮುಖರೊಂದಿಗೆ ಚರ್ಚಿಸಿದರು. ವೃದ್ಧಾಶ್ರಮಗಳ ಅಗತ್ಯವಿರುವ ಹಳ್ಳಿಗಳ ರಕ್ಷಣೆ, ಕಾಡು ನಾಶದಿಂದ ಬರಡಾಗುತ್ತಿರುವ ಗ್ರಾಮಗಳ ಉಳಿವು, ಅತಿಯಾದ ರಾಸಾಯನಿಕ ಉಪಯೋಗದಿಂದ ಸತ್ವ ಕಳೆದುಕೊಂಡಿರುವ ಭೂಮಿಯ ಉಳಿವು, ಆಧುನಿಕ ತಂತ್ರಜ್ಞಾನದ ಅತಿಯಾದ ಅವಲಂಬಿಕೆಯಿಂದಾಗಿ ಕಳೆದು ಹೋಗುತ್ತಿರುವ ಗ್ರಾಮ ಪರಂಪರೆಗಳ ಸಂರಕ್ಷಣೆ, ಕ್ಷೀಣಿಸುತ್ತಿರುವ ಗೋ ಸಂಪತ್ತಿನ ಸಂವರ್ಧನೆ, ಜೀವ ಸಂಕುಲಕ್ಕೆ ಅಗತ್ಯವಾದ ಜಲ ಸ್ರೋತಗಳ ಕಾಯಕಲ್ಪ, ಮೊದಲಾದ ವಿಚಾರಧಾರೆಗಳ ಆಧಾರದ ಮೇಲೆ ಯಾತ್ರೆಯನ್ನು ಕೈಗೊಂಡಿರುವುದಾಗಿ ಕೆದಿಲಾಯರು ಸ್ಪಷ್ಟಪಡಿಸಿದರು.
ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಣಯ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಬೈಂದೂರು, ಜಿ.ಪಂ. ಸದಸ್ಯ ಬಾಬು ಹೆಗ್ಡೆ ತಗ್ಗರ್ಸೆ, ನವೀನ್ಚಂದ್ರ ಉಪ್ಪುಂದ, ವೀರಭದ್ರ ಶೆಟ್ಟಿ, ತಾ.ಪಂ. ಸದಸ್ಯ ಮಹೇಂದ್ರ ಪೂಜಾರಿ, ನಾಗೇಶ್ ಶೇಟ್, ರಾಜಶೇಖರ್ ನಾವುಂದ, ಪ್ರವೀಣ್ ಪೂಜಾರಿ, ರಾಘವೇಂದ್ರ ಗಾಣಿಗ, ವಿನಯ ನಾಯರಿ, ರಾಜು ಮತ್ತು ಸತೀಶ್ ಮರವಂತೆ ಮುಂತಾದ ಪ್ರಮುಖರು ಯಾತ್ರೆಯಲ್ಲಿ ಭಾಗವಹಿಸಿದ್ದರು.