by Du Gu Lakshman

ಕಳೆದ ವಾರದ ಎರಡು ಮಹತ್ವದ ವಿದ್ಯಮಾನಗಳು ದೇಶದ ಭವಿಷ್ಯದ ಕುರಿತು ನಿರಾಶೆಯ ಪ್ರಪಾತಕ್ಕೆ ತಲುಪಿದವರಿಗೂ ವಿಶ್ವಾಸ, ಭರವಸೆ ಮೂಡಿಸಿವೆ.   ಒಂದು-ಜಗತ್ತಿನ ನಂಬರ್ ಒನ್ ಐಟಿ ಕಂಪೆನಿ ಮೈಕ್ರೋಸಾಫ್ಟ್ ಕಾರ್ಪೊರೇಷನ್‌ಗೆ ಭಾರತೀಯ ಮೂಲದ ಸತ್ಯ ನಾದೆಲ್ಲಾ ಸಿಇಓ ಆಗಿ ನೇಮಕಗೊಂಡಿದ್ದು.  ಎರಡು-ಕಾನ್ಪುರ ನಗರದ ಪಟೇಲ್ ನಗರ ನಿವಾಸಿಗಳು ತಮ್ಮ ಬಡಾವಣೆ ನೈರ್ಮಲ್ಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ ಕಾರ್ಪೊರೇಟರ್‌ನನ್ನು ಅನಾಮತ್ತಾಗಿ ತಿಪ್ಪೆಗೆಸೆದು ಬುದ್ಧಿ ಕಲಿಸಿದ್ದು.  ಭಾರತಕ್ಕೆ ಭವಿಷ್ಯವೇ ಇಲ್ಲವೆಂದು ಹತಾಶೆಗೊಂಡ ಮಂದಿಗೆ ಈ ವಿದ್ಯಮಾನಗಳು ಭರವಸೆಯ ಆಶಾಕಿರಣವಾಗಿ ಖಂಡಿತ ಗೋಚರಿಸಲಿವೆ ಎಂಬುದು ನನ್ನ ಅಭಿಮತ.

LE WEB PARIS 2013 - CONFERENCES - PLENARY 1 - SATYA NADELLA

ವಿದ್ಯಮಾನ-ಒಂದು

ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಮೈಕ್ರೊಸಾಫ್ಟ್ ಕಾರ್ಪೊರೇಷನ್ ಪ್ರಧಾನ ಕಚೇರಿ ಇರುವುದು ವಾಷಿಂಗ್ಟನ್‌ನ  ರೆಡ್ಮಂಡ್‌ನಲ್ಲಿ.  ಕಂಪ್ಯೂಟರ್ ಸಾಫ್ಟ್‌ವೇರ್, ಪರ್ಸನಲ್ ಕಂಪ್ಯೂಟರ್‌ಗಳ ಅಭಿವೃದ್ಧಿ, ತಯಾರಿಕೆ, ಸೇವೆ ಹಾಗೂ ಮಾರಾಟವನ್ನು ಇದು ನಿರ್ವಹಿಸುತ್ತದೆ.  ಜಗತ್ತಿನಲ್ಲೆಡೆ ವ್ಯಾಪಕವಾಗಿ ಬಳಕೆಯಾಗುವ ಆಪರೇಟಿಂಗ್ ಸಿಸ್ಟಮ್ ’ವಿಂಡೋಸ್’ ಈ ಕಂಪನಿಯ ಮಹತ್ವದ ಕೊಡುಗೆ.  ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಇದೇ ಸಂಸ್ಥೆಯ ಉತ್ಪನ್ನ.  ಎಕ್ಸ್‌ಬಾಕ್ಸ್ ಕನ್ಸೋಲ್, ಮೈಕ್ರೋಸಾಫ್ಟ್  ಸರ್ಫೇಸ್ ಟ್ಯಾಬ್ಲೆಟ್‌ಗಳನ್ನು  ಮೈಕ್ರೋಸಾಫ್ಟ್  ತಯಾರಿಸುತ್ತದೆ.  ಜಗತ್ತಿನಲ್ಲೆ ಅತಿಹೆಚ್ಚು ಆದಾಯವಿರುವ ಕಂಪನಿ ಇದು.  ಬಿಲ್‌ಗೇಟ್ಸ್ ಮತ್ತು ಪಾಲ್ ಅಲೆನ್ ೧೯೭೫ರಲ್ಲಿ ಆರಂಭಿಸಿರುವ ಮೈಕ್ರೋಸಾಫ್ಟ್ ಕಂಪ್ಯೂಟರ್ ತಂತ್ರಜ್ಞಾನದ ಬೆಳವಣಿಗೆ ಜತೆಜತೆಗೇ ಹೆಜ್ಜೆ ಇಟ್ಟಿತು.  ಬೇಸಿಕ್, ಎಂಎಸ್ ಡಾಸ್‌ನಿಂದ ಹಿಡಿದು ಈಗಿನ ಸ್ಕೈಪ್ ತನಕ ಬದಲಾದ ಎಲ್ಲ ತಂತ್ರಜ್ಞಾನಗಳಲ್ಲೂ ಎಂಎಸ್ ಛಾಪು  ಇದೆ.  ಈ ಕಂಪನಿಯ ಸಂಸ್ಥಾಪಕ ಸಿಇಓ ಬಿಲ್‌ಗೇಟ್ಸ್ ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆ ಪಡೆದಿದ್ದರು.

ಅಂತಹ ಕಂಪೆನಿಗೆ ಈಗ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಆಗಿ ನಿಯುಕ್ತಿಗೊಂಡು ಎಲ್ಲರಲ್ಲೂ ಮುಖ್ಯವಾಗಿ ಭಾರತೀಯರಲ್ಲಿ ರೋಮಾಂಚನ ಹುಟ್ಟಿಸಿರುವವರು ಹೈದರಾಬಾದ್ ಮೂಲದ ಹಾಗೂ ಮಣಿಪಾಲದಲ್ಲಿ ಎಂಜಿನಿಯರಿಂಗ್ ಓದಿರುವ ಸತ್ಯ ನಾದೆಲ್ಲ.

ಆ  ಉನ್ನತ ಹುದ್ದೆಗೆ ಅಂತಿಮವಾಗಿ ಇಬ್ಬರು ಪೈಪೋಟಿಯ ಕಣದಲ್ಲಿದ್ದರು.  ಆದರೆ ಅವರಿಬ್ಬರೂ ಭಾರತೀಯರೆಂಬುದು ಇನ್ನಷ್ಟು ರೋಮಾಂಚನದ ಸಂಗತಿ.  ಸತ್ಯ ಅವರಿಗೆ ಸ್ಪರ್ಧಿಯಾಗಿದ್ದವರು ಗೂಗಲ್ ಕಂಪನಿಯ ಹಿರಿಯ ಉಪಾಧ್ಯಕ್ಷರಾದ ಸುಂದರ್ ಪಿಚಾಯ್.  ತಮಿಳುನಾಡು ಮೂಲದ ಸುಂದರ್(೪೨) ಗೂಗಲ್‌ಗೆ ಸೇರ್ಪಡೆಯಾಗುವುದಕ್ಕೆ ಮುನ್ನ ಅಪ್ಲೈಡ್ ಮೆಟೀರಿಯಲ್ಸ್, ಮೆಕೆನ್ಸಿ ಆಂಡ್ ಕಂಪನಿಯಲ್ಲಿ ಸೇವೆ ಸಲ್ಲಿಸಿದ್ದರು.  ಕೊನೆಗೂ ತಂತ್ರಜ್ಞಾನದಲ್ಲಿ ಅಪಾರ ಯಶಸ್ಸು, ಬದ್ಧತೆ ಮತ್ತು ದೂರದೃಷ್ಟಿ ಮಿಳಿತವಾಗಿರುವ ಅರ್ಹ ಅಭ್ಯರ್ಥಿಯಾಗಿ ಸತ್ಯ ಮೈಕ್ರೋಸಾಫ್ಟ್ ಸಿಇಓ ಹುದ್ದೆಗೆ ಆಯ್ಕೆಯಾದರು.

ಸತ್ಯ ನಾದೆಲ್ಲ ಆಯ್ಕೆಯಾಗಿz ತಡ, ಈ ಸುದ್ದಿ ದೇಶದಲ್ಲೆಲ್ಲಾ ವಿದ್ಯುತ್ ಸಂಚಾರ ಮೂಡಿಸಿದೆ.  ಇಡೀ ಜಗತ್ತು ಇನ್ನೊಮ್ಮೆ ಭಾರತದತ್ತ ಹೊರಳಿ ಕಣ್ಣು ನೆಟ್ಟಿದೆ.  ಇನ್‌ಫೋಸಿಸ್ ಅಧ್ಯಕ್ಷ ಎನ್. ನಾರಾಯಣಮೂರ್ತಿ ಅವರು ಕೂಡ ‘ಜಗತ್ತಿನ ಅತ್ಯಂತ ಮಹತ್ವದ ಸಾಫ್ಟ್‌ವೇರ್ ಕಂಪನಿಯ ನಾಯಕತ್ವವನ್ನು ಭಾರತೀಯನೊಬ್ಬ ವಹಿಸಿಕೊಂಡಿರುವುದು ಹೆಮ್ಮೆಯ ವಿಚಾರ.  ಮೈಕ್ರೋಸಾಫ್ಟ್ ಗಷ್ಟೇ ಅಲ್ಲ , ಭಾರತಕ್ಕೆ ಹಾಗೂ ಇಡೀ ಜಗತ್ತಿಗೆ ಇದು ಅತಿ ಜರೂರಾಗಿದೆ ’ ಎಂದು ಶ್ಲಾಘಿಸಿದ್ದಾರೆ.  ಸತ್ಯ ಅವರಿಗೆ ಪಾಠ ಹೇಳಿಕೊಟ್ಟ ಮಣಿಪಾಲದ ಡಾ.ಹರಿಶ್ಚಂದ್ರ ಹೆಬ್ಬಾರ್‌ರಿಂದ ಹಿಡಿದು ಈಗ ಎಂಐಟಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳವರೆಗೆ ಎಲ್ಲರೂ ಸತ್ಯ ಅವರಿಗೆ ಕಂಗ್ರಾಟ್ಸ್ ಹೇಳಿದ್ದಾರೆ.  ಹೇಳಲೇಬೇಕು.  ಏಕೆಂದರೆ ಆ ಹುದ್ದೆಯೇ ಅಂತಹದು.  ಸತ್ಯ ಅವರಿಗೆ ವಾರ್ಷಿಕ ವೇತನವೇ ೧೧೨ ಕೋಟಿ ರೂ.!  ನಾವಿಲ್ಲೇ ಕುಳಿತು  ಬೆವರು ಹರಿಸದೇ ಆರು ತಿಂಗಳಲ್ಲೇ ಅಷ್ಟೊಂದು ಕಮಾಯಿಸುವಾಗ ಅದ್ಯಾವ ಮಹಾ ಮೊತ್ತ ಎಂದು ನಮ್ಮ ಕೆಲವು ‘ಕಮಾಯಿ’ ರಾಜಕಾರಣಿಗಳು ಹೇಳಬಹುದು!  ಆ ಮಾತು ಬೇರೆ.  ಆದರೆ ೧೧೨ ಕೋಟಿ ಎನ್ನುವುದು ಸತ್ಯ ಸಿಇಓ ಆಗಿ ಪ್ರಾಮಾಣಿಕ ದುಡಿಮೆಯಿಂದ ಗಳಿಸುವ ವೇತನ ಎನ್ನುವುದು ಮುಖ್ಯ.

 ಮುಂದುವರಿದ ಪರಂಪರೆ

ಪ್ರಾಚೀನ ಕಾಲದಿಂದಲೂ ಭಾರತ ನಾನಾ ಕ್ಷೇತ್ರಗಳಲ್ಲಿ ಆವಿಷ್ಕಾರ, ಸಂಶೋಧನೆಗಳಿಗೆ ಹೆಸರುವಾಸಿ.  ಗಣಿತದ ಅಂಕಿ ಶುರುವಾಗುವುದೇ ಸೊನ್ನೆಯಿಂದ.  ಆ ಸೊನ್ನೆಯನ್ನು ಕಂಡು ಹಿಡಿದವರು  ಭಾರತೀಯರು.  ಸೊನ್ನೆಯನ್ನು ಕಂಡುಹಿಡಿಯದಿರುತ್ತಿದ್ದರೆ ಗಣಿತದ ಸಂಖ್ಯೆ ೯ ನ್ನು ದಾಟುತ್ತಿರಲಿಲ್ಲ. ಛ್ಟಿಟ ಎಂಬ ಬಗ್ಗೆ ಅಮೆರಿಕದಲ್ಲೊಂದು ಪುಸ್ತಕವೇ ಪ್ರಕಟವಾಗಿದೆ.  ಆ ಪುಸ್ತಕದ ಮುನ್ನುಡಿಯಲ್ಲಿ ಜಗತ್ತಿನ ಅಂಕಗಣಿತಕ್ಕೆ ಭಾರತ ಶೂನ್ಯದ ಕೊಡುಗೆ ನೀಡಿದ್ದಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ,  ( ಭಾರತದ ಕೊಡುಗೆಯೇ ಶೂನ್ಯವೆಂದಲ್ಲ! ಶೂನ್ಯವನ್ನು ಕಂಡುಹಿಡಿದಿದ್ದು ಭಾರತ ಎಂಬುದು ಈ ಮಾತಿನ ಅರ್ಥ). ಬಾಹ್ಯಾಕಾಶ ವಿಜ್ಞಾನ, ಇನ್ನಿತರ ವಿಜ್ಞಾನ ಕ್ಷೇತ್ರಗಳಲ್ಲಿ ಹಿಂದಿನಿಂದಲೂ ಭಾರತೀಯರ ಕೊಡುಗೆ ಕಡಿಮೆಯದೇನಲ್ಲ.  ಜಗದೀಶ್‌ಚಂದ್ರ ಬೋಸ್, ಸತ್ಯೇಂದ್ರನಾಥ ಬೋಸ್, ಹರಗೋವಿಂದ ಖುರಾನ, ಸಿ.ವಿ. ರಾಮನ್, ಅವರಿಗೂ ಮೊದಲು ಆರ್ಯಭಟ, ವರಾಹಮಿಹಿರ ಮೊದಲಾದ ದಿಗ್ಗಜರು ಜಗತ್ತಿಗೆ ಬೆಳಕು ಹರಿಸಿದ್ದರು.  ಈಗ ಆ ಸಾಲಿಗೆ ಸತ್ಯ ನಾದೆಲ್ಲ ಸೇರ್ಪಡೆ.

 ಸಿಲಿಕಾನ್‌ನಲ್ಲಿ ಭಾರತೀಯರ ಪಾರಮ್ಯ

ಅಂದಹಾಗೆ  ಜಗತ್ತಿನ ಐಟಿ ಕಂಪೆನಿಗಳಲ್ಲಿ ಭಾರತೀಯರ ಪಾರಮ್ಯ ಹೊಸದೇನಲ್ಲ.  ಸಿಲಿಕಾನ್ ಕಣಿವೆಯಲ್ಲಿ ಭಾರತೀಯರ ಚಕ್ರಾಧಿಪತ್ಯವೇ ಮೆರೆದಿದೆ  ಎನ್ನಲಡ್ಡಿಯಿಲ್ಲ.  ದಿಲ್ಲಿ  ಮೂಲದ ತಂತ್ರಜ್ಞಾನ ಉದ್ಯಮಿ ವಿನೋದ್ ಖೋಸ್ಲಾ ೧೯೮೦ರ ಮೊದಲ ಭಾಗದಲ್ಲಿ ಸನ್ ಮೈಕ್ರೊಸಿಸ್ಟಮ್ಸ್‌ನ ಸಹಸಂಸ್ಥಾಪಕ ಮತ್ತು ಸಿಇಓ ಆಗಿದ್ದರು.  ಪುಣೆ ಮೂಲದ ವಿನೋದ್ ಧಾಮ್ ಇಂಟೆಲ್‌ನ ಪೆಂಟಿಯಮ್ ಚಿಪ್‌ನ ಪಿತಾಮಹ ಎಂದೇ ಗುರುತಿಸಲಾಗುತ್ತಿದೆ.  ಪೆಂಟಿಯಮ್ ಪ್ರೊಸೆಸರ್ ಅಭಿವೃದ್ಧಿಪಡಿಸಿದ ರೂವಾರಿ ಆತ.  ನರೇಶ್ ವಾಧ್ವಾ ಸಿಸ್ಕೊ ಸಿಸ್ಟಮ್ಸ್‌ನ ಮುಖ್ಯಸ್ಥರಾಗಿದ್ದರು.  ಹೈದರಾಬಾದ್‌ನ ಶಂತನು ನಾರಾಯಣ್ ಅಡೋಬ್ ಸಿಸ್ಟಮ್ಸ್ ನ ಸಿಇಓ.  ಜೈಪುರದ ಸಮೀರ್ ಭಾಟಿಯಾ ಅಮೆರಿಕದಲ್ಲಿ ಹಾಟ್‌ಮೇಲ್ ಸೇವೆ ಸ್ಥಾಪಿಸಿದವರು.  ವಿಜಯವಾಡದ ಪದ್ಮಶ್ರೀ ವಾರಿಯರ್ ಸಿಸ್ಕೊ ಸಿಸ್ಟಮ್ಸ್ ಮುಖ್ಯ ತಂತ್ರಜ್ಞಾನ ಮತ್ತು ಕಾರ್ಯತಂತ್ರ ಅಧಿಕಾರಿ (ಸಿಟಿಓ). ಹೀಗೆ ಇನ್ನೂ ಅದೆಷ್ಟೋ ಮಂದಿ ಭಾರತೀಯರು ಉನ್ನತ ಹುದ್ದೆಗಳನ್ನಲಂಕರಿಸಿದ್ದಾರೆ.  ರತ್ನಗರ್ಭಾವಸುಂಧರಾ. ತಾಯಿ ಭಾರತಿ ಅನೇಕ ಪ್ರತಿಭಾಮಣಿಗಳಿಗೆ ಜನ್ಮ ನೀಡುತ್ತಲೇ ಇದ್ದಾಳೆ.  ಅವರೆಲ್ಲ ಭಾರತದ ಕೀರ್ತಿ ಪತಾಕೆಯನ್ನು ಜಗದಗಲ ಮೆರೆಸುತ್ತಾರೆ.   ಇದು ನಿರಂತರ. ಹಾಗಿರುವಾಗ ಭಾರತದ ಬಗ್ಗೆ ಹೆಮ್ಮೆಯಿಂದೆದೆಯೆತ್ತಿ ನಿಲ್ಲಬೇಕಾದ ಸರದಿ ನಮ್ಮದಲ್ಲವೇ?

 ವಿದ್ಯಮಾನ  – ಎರಡು

ಇದೊಂದು ಸಣ್ಣ ಘಟನೆ.  ಆದರೆ ಇದರಿಂದ ರವಾನೆಯಾಗಿರುವ ಸಂದೇಶ ಮಾತ್ರ ದೊಡ್ಡದು.

ಉತ್ತರಪ್ರದೇಶದ ಕಾನ್ಪುರ ನಗರದ ಪಟೇಲ್ ನಗರ ನಿವಾಸಿಗಳು ಕೆಲಸ ಮಾಡದ ಉಡಾಫೆ ಕಾರ್ಪೊರೇಟರ್‌ಗೆ ತಕ್ಕ ಪಾಠ ಕಲಿಸಿದ್ದಾರೆ.  ಪಟೇಲ್ ನಗರವೆಲ್ಲ ಕಸಕಡ್ಡಿ, ತ್ಯಾಜ್ಯಗಳಿಂದ ಹಾಳು ಸುರಿಯುತ್ತಿದ್ದರೂ ಇಲ್ಲಿನ ಕಾರ್ಪೊರೇಟರ್ ಮನೋಜ್ ಯಾದವ್ ಕ್ಯಾರೇ ಎಂದಿರಲಿಲ್ಲ.  ಬಡಾವಣೆಯಲ್ಲಿ ದುರ್ನಾತ ಬೀರುತ್ತಿರುವ ಕಸದ ರಾಶಿಯನ್ನು ಸ್ವಚ್ಛಗೊಳಿಸಲು ವ್ಯವಸ್ಥೆ ಮಾಡಿ ಎಂದು ನಿವಾಸಿಗಳು ಅದೆಷ್ಟು ಬಾರಿ ಗೋಗರೆದರೂ ಏನಾದರೊಂದು ಸಬೂಬು ಹೇಳುತ್ತಲೇ ಇದ್ದ  ಮನೋಜ್ ಯಾದವ್.  ಚರಂಡಿಗಳಲ್ಲಿ ಕಸ ತುಂಬಿ ರಸ್ತೆಗಳ ಮೇಲೆ ಗಬ್ಬು ನೀರು ಹರಿದು ಎಲ್ಲೆಡೆ ದುರ್ನಾತ ಬೀರುತ್ತಿತ್ತು.  ನಿವಾಸಿಗಳ ಮನವಿಗೆ ಕಾಲಕಸದಷ್ಟೇ ಬೆಲೆ ನೀಡಿದ್ದ ಆ ಕಾರ್ಪೊರೇಟರ್ ಮಹಾಶಯ.

ಕೊನೆಗೆ ಬೇರೆ ದಾರಿಕಾಣದೆ ಅಲ್ಲಿನ ನಿವಾಸಿಗಳು ಕಸ ಗುಡಿಸಿ ಬಡಾವಣೆ ಸ್ವಚ್ಛಗೊಳಿಸಿದರು.  ಚರಂಡಿಗಳನ್ನು ಸರಾಗವಾಗಿ ನೀರು ಹರಿದುಹೋಗುವಂತೆ ಮಾಡಿದರು.  ಅಷ್ಟರಲ್ಲಿ ಅಲ್ಲಿಗೆ ಬಂದ ಆ ಕಾರ್ಪೊರೇಟರ್ ಇನ್ನೇನೋ ಭರವಸೆ ಕೊಡಲು ಬಂದ . ನಿವಾಸಿಗಳು ಕ್ಯಾರೇ ಎನ್ನಲಿಲ್ಲ.  ಅವಮಾನಿತನಾದ ಆತ ನಿವಾಸಿಗಳನ್ನು ನಿಂದಿಸತೊಡಗಿದ.  ಆಗ ಜನರ ಸಹನೆಯ ಕಟ್ಟೆಯೊಡೆಯಿತು.  ಮನೋಜನನ್ನು ಸುತ್ತುಗಟ್ಟಿದ ಜನರು ಅನಾಮತ್ತಾಗಿ ಆತನನ್ನು ಎತ್ತಿಕೊಂಡು ಹೋಗಿ ತಿಪ್ಪೆಗುಂಡಿಗೆ ಎಸೆದು,  ಆತನ ಮೈಮೇಲೆ ಕಸದರಾಶಿ ಚೆಲ್ಲಿದರು.  ಅಷ್ಟೇ ಅಲ್ಲ, ಒಂದು ಗಂಟೆ ಕಾಲ ಸುತ್ತುಗಟ್ಟಿ ನಿಂತು ಅಲ್ಲಿಂದ ಏಳಲು ಅವಕಾಶವನ್ನೇ ಕೊಡಲಿಲ್ಲ.  ಕೊನೆಗೂ ತನ್ನ ಉದ್ಧಟತನದ ವರ್ತನೆಗೆ ಕ್ಷಮೆ ಕೋರಿ ಮುಂದೆ ಸರಿಯಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ ಮೇಲಷ್ಟೇ ಜನರು ಕಾರ್ಪೊರೇಟರ್‌ಗೆ ಕಸದ ತೊಟ್ಟಿಯಿಂದ ಮೇಲೆದ್ದು ಬರಲು ಅವಕಾಶ ನೀಡಿದ್ದು.

ಇದೊಂದು ವಿನೂತನ ರೀತಿಯ ಪ್ರತಿಭಟನೆ.  ಜನರ ಸಾತ್ವಿಕ ಆಕ್ರೋಶ ಕೃತಿಗಿಳಿದ ಪ್ರಬಲ ಸಂಕೇತ.  ಪಟೇಲ್‌ನಗರದ ನಿವಾಸಿಗಳು, ಇದೆಲ್ಲ ನಮ್ಮ ಹಣೆಬರಹ  ಎಂದು ಸುಮ್ಮನಿದ್ದಿದ್ದರೆ ಆ ಕಾರ್ಪೊರೇಟರ್  ಇನ್ನಷ್ಟು  ಕೊಬ್ಬಿನಿಂದ ಮೆರೆಯುತ್ತಾ ತಿರುಗಾಡುತ್ತಿದ್ದ.  ಆತನನ್ನು ತಿಪ್ಪೆಗೆಸೆದು ಪಾಠ ಕಲಿಸಿದ್ದರಿಂದ ಈಗಾತ ಎಚ್ಚೆತ್ತುಕೊಂಡಿದ್ದಾನೆ.  ಮುಂದೆಂದೂ ಆತ ಉದ್ಧಟತನ, ನಿರ್ಲಕ್ಷ್ಯ ಖಂಡಿತ ತೋರಲಾರ.  ನಿಮ್ಮ ನಿಮ್ಮ ಬಡಾವಣೆಗಳಲ್ಲಿ , ಕ್ಷೇತ್ರಗಳಲ್ಲಿ ಇದೇ ಥರದ  ಜನಪ್ರತಿನಿಧಿಗಳಿರಬಹುದು  (ಇರಬಹುದೇನು, ಇz ಇರುತ್ತಾರೆ,ಬಿಡಿ). ಓಟುಕೊಟ್ಟ ಜನರನ್ನು ಕಾಲಕಸವಾಗಿ ಕಂಡು ಕೊಬ್ಬಿನಿಂದ ತಿರುಗಾಡುತ್ತಿರಬಹುದು.  ಅಂಥವರನ್ನು ತಿಪ್ಪೆಗಲ್ಲದಿದ್ದರೆ ಎಲ್ಲಿಗೆಸೆದು ಬುದ್ಧಿ ಕಲಿಸಬೇಕೆಂದು ವಿವೇಕಿಗಳಾದ ನೀವೇ ನಿರ್ಧರಿಸಿ!

ಭಾರತದ ಭವಿಷ್ಯ ಖಂಡಿತ ಉಜ್ವಲವಾಗಿದೆ.  ಈ ಎರಡು ವಿದ್ಯಮಾನಗಳು ನನಗಂತೂ ಈ ನಂಬಿಕೆಯನ್ನು ಇನ್ನಷ್ಟು  ದೃಢವಾಗುವಂತೆ ಮಾಡಿವೆ.  ನಿಮಗೆ?

Leave a Reply

Your email address will not be published.

This site uses Akismet to reduce spam. Learn how your comment data is processed.