
By Du Gu Lakshman
ಹೊಸದಿಲ್ಲಿ ಹಾಗೂ ದೇಶದ ಇತರ ಜನತೆಯ ಪಾಲಿಗೆ ಆಮ್ ಆದ್ಮಿ ಪಕ್ಷದ ವಿದ್ಯಮಾನಗಳೆಲ್ಲವೂ ಅನಿರೀಕ್ಷಿತವೇ ಆಗಿತ್ತು. ಅಣ್ಣಾ ಹಜಾರೆಯವರ ಜನಲೋಕಪಾಲ್ ಕುರಿತ ಸಾಮಾಜಿಕ ಆಂದೋಲನದ ಬೆಂಕಿಯಲ್ಲಿ ಅರಳಿದ ಆಮ್‌ಆದ್ಮಿ ಪಕ್ಷ ಅಷ್ಟೇ ಬೇಗ ದಿಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ಭರ್ಜರಿ ೨೮ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಬಹುಮತ ಇಲ್ಲದಿದ್ದರೂ ಕಾಂಗ್ರೆಸ್‌ನ ೮ ಸದಸ್ಯರ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದು, ಸರ್ಕಾರ ರಚಿಸಿ ೪೮ ದಿನದೊಳಗೇ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದು… ಎಲ್ಲವೂ ಅನಿರೀಕ್ಷಿತವೇ. ದೇಶದ ಇತಿಹಾಸದಲ್ಲಿ ಯಾವುದಾದರೂ ಒಂದು ರಾಜಕೀಯ ಪಕ್ಷ ಹುಟ್ಟಿದ ಕೂಡಲೇ ಇಷ್ಟು ಶರವೇಗದಲ್ಲಿ ಚುನಾವಣೆಯಲ್ಲಿ ಅನಿರೀಕ್ಷಿತ ಬಹುಮತದ ಬಾಗಿಲಿಗೆ ಬಂದು ಸರ್ಕಾರ ರಚಿಸಿದ ನಿದರ್ಶನ ವಿರಳ. ಎಎಪಿ ಮಾತ್ರ ಇದಕ್ಕೆ ಅಪವಾದ. ಆದರೆ ಹೊಸದಿಲ್ಲಿ ಮತ್ತು ದೇಶದ ಜನತೆಗೆ ಅನಿರೀಕ್ಷಿತವಲ್ಲದ, ನಿರೀಕ್ಷಿತ ವಿದ್ಯಮಾನವೆಂದರೆ ಆಮ್‌ಆದ್ಮಿ ಸರ್ಕಾರ ಪತನವಾಗಿದ್ದು.
ನಿಜವಾದ ನಿರೀಕ್ಷೆ
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಡಳಿತ ವೈಖರಿ, ಮಾತಿನ ಧಾಟಿ, ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಆಪ್ ಸರ್ಕಾರ ಯಾವ ಕ್ಷಣದಲ್ಲಾದರೂ ಪತನಗೊಳ್ಳಬಹುದೆಂಬ ನಿರೀಕ್ಷೆ ಇz ಇತ್ತು. ಅದೀಗ ನಿಜವಾಗಿದೆ. ವಾಸ್ತವವಾಗಿ ಸ್ವತಃ ಅರವಿಂದ ಕೇಜ್ರಿವಾಲ್ ಅವರಿಗೇ ಈ ಸರ್ಕಾರ ಹೆಚ್ಚು ದಿನ ಬಾಳುವುದು ಬೇಕಿರಲಿಲ್ಲ. ದಿಲ್ಲಿ ಜನತೆಗೆ ಉತ್ತಮ ಆಡಳಿತ ನೀಡಬೇಕೆಂಬ ಕಾಳಜಿ ಕೂಡ ಅವರಿಗಿರಲಿಲ್ಲ. ತಾನು ಕೂಡ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಬೇಕು, ತುಘಲಕ್ ದರ್ಬಾರ್ ಮಾಡಬೇಕು ಎಂಬುದನ್ನು ಹೊರತುಪಡಿಸಿದರೆ ದೂರದೃಷ್ಟಿ, ಜನಪರ ಕಾಳಜಿ ಖಂಡಿತ ಅವರಿಗಿರಲಿಲ್ಲ. ಜನಲೋಕಪಾಲ್ ವಿಧೇಯಕ ಮಂಡಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಅವಕಾಶ ನೀಡಲಿಲ್ಲ. ಹಾಗಾಗಿ ರಾಜೀನಾಮೆ ನೀಡಬೇಕಾಗಿ ಬಂತು ಎಂದು ಕೇಜ್ರಿವಾಲ್ ಎಷ್ಟೇ ತನ್ನನ್ನು ಸಮರ್ಥಿಸಿಕೊಂಡರೂ, ದೇಶಕ್ಕಾಗಿ ಸಿಎಂ ಸ್ಥಾನವಷ್ಟೇ ಅಲ್ಲ, ಪ್ರಾಣ ಬಿಡಲೂ ಸಿದ್ಧ ಎಂದು ತಮ್ಮ ವಿದಾಯ ಭಾಷಣದಲ್ಲಿ ವೀರಾವೇಶದ ನುಡಿಯಾಡಿದ್ದರೂ ಅವರಿಗೆ ರಾಜೀನಾಮೆ ನೀಡಲು ಒಂದು ನೆಪ ಬೇಕಿತ್ತು, ಅಷ್ಟೆ. ಸರ್ಕಾರದ ಪತನಕ್ಕೆ ಒಂದು ಕಾರಣ ಬೇಕಾಗಿತ್ತು. ಜನಲೋಕಪಾಲ್ ಮಸೂದೆ ಮಂಡನೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಅವಕಾಶ ನೀಡಲಿಲ್ಲವೆಂದು ಹೇಳಿದರೆ ತಾನು ‘ಹೀರೋ’ ಆಗಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಅದಕ್ಕೇ ಅವರು ರಾಜೀನಾಮೆ ನೀಡಿ ಪಲಾಯನ ಸೂತ್ರಕ್ಕೆ ಜೋತು ಬಿದ್ದರು.
ರಾಜೀನಾಮೆ ನೀಡಿzಕೆ?
ಟಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಹೆಚ್ಚು ದಿನ ಸರ್ಕಾರ ನಡೆಸುವುದು ಕೇಜ್ರಿವಾಲ್ ಅವರಿಗೂ ಬೇಕಾಗಿರಲಿಲ್ಲ. ಅವರಿಗೆ ಆಮ್‌ಆದ್ಮಿ ಪಾರ್ಟಿಯ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಬೇಕಿತ್ತು. ಸರ್ಕಾರ ರಚನೆ ಮಾಡುವಾಗಲೇ ಅವರು ಈ ಸುಳಿವು ನೀಡಿದ್ದರು.
ಟಿ ದೆಹಲಿ ಸರ್ಕಾರ ತಾಂತ್ರಿಕವಾಗಿ ಬಹುಮತ ಕಳೆದುಕೊಂಡಿತ್ತು. ಆಮ್‌ಆದ್ಮಿ ಪಾರ್ಟಿಯ ಒಬ್ಬ ಹಾಗೂ ಒಬ್ಬ ಪಕ್ಷೇತರ ಶಾಸಕ ಬೆಂಬಲ ವಾಪಸ್ ಪಡೆದುಕೊಂಡಿದ್ದರಿಂದ ಸ್ಪೀಕರ್ ಮತದ ಮೇಲೆ ಸರ್ಕಾರದ ಭವಿಷ್ಯ ಅವಲಂಬಿಸಿತ್ತು. ಇಂತಹ ಅಸ್ಥಿರ ಸರ್ಕಾರದಲ್ಲಿ ಬಹಳ ದಿನ ಆಡಳಿತ ನಡೆಸಲು ಸಾಧ್ಯವಿರಲಿಲ್ಲ.
ಟಿ ಜನಲೋಕಪಾಲ ಮಸೂದೆ ಜಾರಿಗೆತರಲು ಸಾಧ್ಯವಾಗದ್ದರಿಂದ ರಾಜೀನಾಮೆ ಕೊಟ್ಟಿzವೆ ಎಂದು ಮುಂದಿನ ಚುನಾವಣೆಯಲ್ಲಿ ಹೇಳಿಕೊಂಡು ಹೆಚ್ಚು ಮತ ಗಳಿಸುವ ಹುನ್ನಾರ ಆಮ್‌ಆದ್ಮಿ ಪಾರ್ಟಿಯದು. ಚುನಾವಣೆಗೆ ಇದು ಬಹಳ ಒಳ್ಳೆಯ ವಿಷಯ ಎಂಬುದು ಅದರ ಹಿಡನ್ ಅಜೆಂಡಾ.
ಟಿ ತಮ್ಮ ಪಕ್ಷಕ್ಕೆ ಸಿಕ್ಕಿರುವ ಯಶಸ್ಸನ್ನು ದೆಹಲಿಗಷ್ಟೇ ಸೀಮಿತಗೊಳಿಸುವುದು ಕೇಜ್ರಿವಾಲ್‌ಗೆ ಇಷ್ಟವಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವ ಹುನ್ನಾರವೂ ಅವರದ್ದು. ಆದರೆ ಇದಕ್ಕೆ ದೆಹಲಿ ಮುಖ್ಯಮಂತ್ರಿಯಾಗಿದ್ದುಕೊಂಡು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಮುನ್ನಡೆಸುವುದು ಕಷ್ಟವೆಂಬ ಅರಿವು ಕೂಡ ಇತ್ತು.
ಟಿ ದೆಹಲಿ ಚುನಾವಣೆಗೂ ಮುನ್ನ ಆಮ್‌ಆದ್ಮಿ ಪಾರ್ಟಿ ಈಡೇರಿಸಲು ಸಾಧ್ಯವಾಗದ ಹಲವು ಭರವಸೆಗಳನ್ನು ಮತದಾರರಿಗೆ ನೀಡಿತ್ತು. ಉಚಿತ ನೀರು, ವಿದ್ಯುತ್ ಬೆಲೆ ಕಡಿತ ಮುಂತಾದ ಭರವಸೆಗಳನ್ನು ಸರ್ಕಾರ ರಚಿಸಿದ ಮೇಲೆ ಈಡೇರಿಸಲು ಪ್ರಯತ್ನಿಸಿತಾದರೂ ಅದು ಪೂರ್ತಿ ಸಫಲವಾಗಿಲ್ಲ. ಆ ಭರವಸೆಗಳ ಭವಿಷ್ಯವೇ ಡೋಲಾಯಮಾನವಾಗಿದೆ. ಈಡೇರಿಸಲಾಗದ ಭರವಸೆಗಳಿಂದ ಸದ್ಯಕ್ಕೆ ಬಚಾವ್ ಆಗಲು ರಾಜೀನಾಮೆ ಒಂದು ಬ್ರಹ್ಮಾಸ್ತ್ರ ಎಂದು ಕೇಜ್ರಿವಾಲ್‌ಗೆ ಅನಿಸಿದ್ದರೆ ಅದು ಸಹಜ.
ಟಿ ತನ್ನ ಮಾತಿಗೇ ಬೆಲೆ ಸಿಗಬೇಕು. ಸಿಗದಿದ್ದಾಗ ಸಿಡಿದೇಳುವುದು ಕೇಜ್ರಿವಾಲ್ ಅವರ ಜಾಯಮಾನ. ಅಣ್ಣಾ ಹಜಾರೆ ಜತೆಗಿನ ಹೋರಾಟದಲ್ಲೂ ಅವರು ಹೀಗೆಯೇ ವರ್ತಿಸಿದ್ದುಂಟು. ತನ್ನ ಮಾತಿಗೆ ಬೆಲೆ ಸಿಗದಿದ್ದಾಗ ಹಜಾರೆ ಹೋರಾಟದಿಂದ ಬೇರ್ಪಟ್ಟು ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಅದು ಅಣ್ಣಾ ಹಜಾರೆಯವರಿಗೆ ಇಷ್ಟವಾಗಿರಲಿಲ್ಲ. ಈಗ ಕಾಂಗ್ರೆಸ್ ಜತೆಗಿನ ಮೈತ್ರಿ ಸರ್ಕಾರದಲ್ಲಿ ಅವರ ಮಾತು ಹೆಚ್ಚು ನಡೆಯಲು ಸಾಧ್ಯವಿರಲಿಲ್ಲ. ಪ್ರತಿಯೊಂದು ನಿರ್ಧಾರ ಕೈಗೊಳ್ಳುವಾಗಲೂ ಕಾಂಗ್ರೆಸ್‌ನ ಮರ್ಜಿಗೆ ತಕ್ಕಂತೆ ಮುಂದಡಿ ಇಡಬೇಕಾಗಿತ್ತು. ಇದು ಅವರ ಸ್ವಭಾವಕ್ಕೇ ವಿರುದ್ಧವಾದುದು. ಅಂತಹ ಕುರ್ಚಿಯಲ್ಲಿ ಹೆಚ್ಚು ದಿನ ಕುಳಿತುಕೊಳ್ಳುವುದು ಅವರಿಗೆ ಖಂಡಿತ ಸಾಧ್ಯವಿರಲಿಲ್ಲ.
ಕೇಜ್ರಿವಾಲ್ ಸರ್ಕಾರ ಅಸ್ತಿತ್ವಕ್ಕೆ ಬಂದು ಶುಕ್ರವಾರಕ್ಕೆ (ಫೆ.೧೪) ಕೇವಲ ೪೮ ದಿನಗಳಾಗಿತ್ತು. ಸರ್ಕಾರ ಇಷ್ಟು ಬೇಗ ಪತನಗೊಳ್ಳಬೇಕಾದ ಅಗತ್ಯವಿರಲಿಲ್ಲ. ಆದರೆ ಆಡಳಿತದ ಅನನುಭವ, ತಾನು ಹೇಳಿz ಸರಿ, ತನ್ನ ಮೂಗಿನ ನೇರಕ್ಕೇ ಎಲ್ಲವೂ ನಡೆಯಬೇಕೆಂಬ ತುಘಲಕ್‌ಗಿರಿ, ದೇಶದ ಕಾನೂನು ಮತ್ತು ಸಂವಿಧಾನಗಳಿಗೆ ತಲೆಬಾಗದ ಉದ್ಧಟತನ, ತನ್ನನ್ನು ಬಿಟ್ಟರೆ ಉಳಿದ ರಾಜಕೀಯ ಪಕ್ಷಗಳ ಮುಖಂಡರೆಲ್ಲರೂ ಅಯೋಗ್ಯರು, ಭ್ರಷ್ಟರು ಎಂಬ ದುರಹಂಕಾರ… ಹೀಗೆ ಕೇಜ್ರಿವಾಲ್ ಸರ್ಕಾರ ಪತನಕ್ಕೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಬಹುದು. ಯಾವುದೇ ಪಕ್ಷವಿರಲಿ, ಅದು ಅಧಿಕಾರಕ್ಕೆ ಬಂದ ಬಳಿಕ ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆಗಳಿಗೆ ತಲೆಬಾಗಿ, ಅದಕ್ಕನುಸಾರವಾಗಿಯೇ ಆಡಳಿತ ನಡೆಸಬೇಕು. ಸಂವಿಧಾನ ಹಾಗೂ ಕಾನೂನು ವ್ಯವಸ್ಥೆಗಳನ್ನು ಗಾಳಿಗೆ ತೂರಿ ಆಡಳಿತ ನಡೆಸಿದರೆ ಅದು ಅರಾಜಕತೆಗೆ ಅಥವಾ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ. ಈಗ ಆಗಿರುವುದೂ ಹಾಗೆಯೇ.
ಬರೇ ತಟವಟ, ಗೊಂದಲ
ಅನ್ಯಾಯ, ಅಸತ್ಯಗಳ ವಿರುದ್ಧ ಹೋರಾಡುವುದಾಗಿ ಸಂಕಲ್ಪ ತೊಟ್ಟ ಕೇಜ್ರಿವಾಲ್ ಸರ್ಕಾರ ಮಾತ್ರ ಆ ರೀತಿ ನಡೆದುಕೊಳ್ಳಲೇ ಇಲ್ಲ. ಆಪ್ ಸರ್ಕಾರದ ಕಾನೂನು ಸಚಿವ ಸೋಮನಾಥ್ ಭಾರ್ತಿ ನೇತೃತ್ವದಲ್ಲಿ ತಂಡವು ಆಫ್ರಿಕಾ ಮಹಿಳೆಯರ ಮೇಲೆ ಮಧ್ಯರಾತ್ರಿ ದಾಳಿ ನಡೆಸಿತ್ತು. ಈ ಮಹಿಳೆಯರು ಮಾದಕ ದ್ರವ್ಯ ಮಾರಾಟ ಹಾಗೂ ವ್ಯಭಿಚಾರದಲ್ಲಿ ತೊಡಗಿದ್ದಾರೆಂದು ಆರೋಪಿಸಿದ ಭಾರ್ತಿ, ಅವರೆಲ್ಲರನ್ನೂ ಬಂಧಿಸುವಂತೆ ದಿಲ್ಲಿ ಪೊಲೀಸರಿಗೆ ಆದೇಶಿಸಿದ್ದರು. ಆದರೆ ವಾರಂಟ್ ಇಲ್ಲದೇ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದಾಗ, ಕೇಜ್ರಿವಾಲ್ ಕ್ರಮ ಕೈಗೊಳ್ಳದ ಆ ಮೂವರು ಪೊಲೀಸ್ ಪೇದೆಗಳ ಅಮಾನತಿಗೆ ಆಗ್ರಹಿಸಿ ಬೀದಿಗಿಳಿದು ಧರಣಿ ಕುಳಿತಿದ್ದರು. ಸರ್ಕಾರವೇ ಬೀದಿಗಿಳಿದಿದ್ದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಈ ಟೀಕೆಗಳಿಗೆ ಕೇಜ್ರಿವಾಲ್ ಕ್ಯಾರೇ ಅಂದಿರಲಿಲ್ಲ. ಆಗ ಅವರು ಆಕ್ರೋಶಭರಿತರಾಗಿ ಹೇಳಿzನು ಗೊತ್ತೆ: ‘ಹೌದು, ನಾನು ಅರಾಜಕತಾವಾದಿ.’ ಕಾನೂನು ಸಚಿವ ಭಾರ್ತಿ ತಾನೇ ಸ್ವತಃ ತಂಡ ಕಟ್ಟಿಕೊಂಡು ಆಫ್ರಿಕಾ ಮಹಿಳೆಯರ ಮೇಲೆ ಮಧ್ಯರಾತ್ರಿ ದಾಳಿ ನಡೆಸುವ ಅಗತ್ಯವೇನಿತ್ತು? ವಿದೇಶಿ ಮಹಿಳೆಯರ ಮೇಲೆ ದಾಳಿ ನಡೆಸಲು ಸಂಬಂಧಿಸಿದ ಕಾನೂನುಗಳಿವೆ ಎಂಬ ಕನಿಷ್ಠ ಪ್ರಾಥಮಿಕ ಜ್ಞಾನವೂ ಕಾನೂನು ಸಚಿವರಿಗೆ ಇರಲಿಲ್ಲವೆಂಬುದು ಎಂತಹ ಸೋಜಿಗ! ಆದರೆ ಕೇಜ್ರಿವಾಲ್ ತನ್ನ ಸಚಿವ ಎಸಗಿದ ಪ್ರಮಾದದ ಬಗ್ಗೆ ತುಟಿಪಿಟಕ್ಕೆನ್ನಲಿಲ್ಲ. ಭಾರ್ತಿಯನ್ನು ಸಂಪುಟದಿಂದ ವಜಾ ಮಾಡಲೂ ಇಲ್ಲ.
ಇನ್ನು ಕೇಜ್ರಿವಾಲ್ ಸರ್ಕಾರ ಅಧಿಕಾರದಲ್ಲಿದ್ದಷ್ಟು ದಿನವೂ ಒಂದೊಂದು ಸುಳ್ಳನ್ನು ಹೇಳುತ್ತಲೇ ಇತ್ತು. ಚುನಾವಣೆ ಸಂದರ್ಭದಲ್ಲಿ ಕೇಜ್ರಿವಾಲ್ ತಾನು ಒಂದು ವೇಳೆ ಗೆದ್ದು ಸರ್ಕಾರ ರಚಿಸಿದರೂ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂದಿದ್ದರು. ಆ ಮಾತನ್ನು ಅವರು ಕೊನೆಗೂ ಸುಳ್ಳು ಮಾಡಿದರು. ಮುಖ್ಯಮಂತ್ರಿಯಾದ ಮೊದಲ ದಿನವೇ ಮೆಟ್ರೋದಲ್ಲಿ ಪ್ರಯಾಣಿಸುವಾಗ ವೀಡಿಯೋ ರೆಕಾರ್ಡಿಂಗ್‌ಗೆ ಅವಕಾಶ ಮಾಡಿಕೊಟ್ಟರು. ಇದು ಭದ್ರತಾ ನಿಯಮದ ಸ್ಪಷ್ಟ ಉಲ್ಲಂಘನೆ. ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುವಾಗ, ಸರ್ಕಾರ ರಚಿಸಲು ಯಾವುದೇ ಪಕ್ಷದ ಬೆಂಬಲ ಪಡೆಯುವುದಿಲ್ಲ ಎಂದು ತನ್ನ ಮಕ್ಕಳ ಮೇಲೆ ಆಣೆ ಮಾಡಿ ಹೇಳಿದ್ದರು. ಆದರೆ ಅಧಿಕಾರದಾಸೆಗಾಗಿ ಕಾಂಗ್ರೆಸ್ ಕಾಲು ಹಿಡಿದು ಈ ವಚನವನ್ನು ಸುಳ್ಳು ಮಾಡಿದರು. ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವುದಾಗಿ ನೀಡಿದ್ದ ಭರವಸೆಯೂ ಸುಳ್ಳಾಯಿತು. ಏಕೆಂದರೆ ಕೇಜ್ರಿವಾಲ್ ಸಂಪುಟದ ಸಚಿವರೇ ದುಬಾರಿ ಕಾರುಗಳಲ್ಲಿ ವಿಐಪಿಗಳಂತೆ ಸಂಚರಿಸುತ್ತಿದ್ದರು. ಮುಖ್ಯಮಂತ್ರಿಯವರ ಕಚೇರಿಯಲ್ಲಿ ೧ ಲಕ್ಷಕ್ಕೂ ಹೆಚ್ಚು ಸಾರ್ವಜನಿಕರಿಂದ ಬಂದ ದೂರುಗಳನ್ನು ನೊಂದಾಯಿಸಲಾಗಿತ್ತು. ಪರಿಹಾರವಿರಲಿ, ಹೆಚ್ಚಿನ ದೂರುಗಳಿಗೆ ಉತ್ತರಿಸುವ ಸೌಜನ್ಯವನ್ನೂ ಆಪ್ ಸರ್ಕಾರ ತೋರಿರಲಿಲ್ಲ. ಸರ್ಕಾರ ರಚಿಸುವ ಮುನ್ನ ಎಎಪಿ, ಕಾಂಗ್ರೆಸ್ ನಾಯಕರಿಗೆ ತಮ್ಮ ಭ್ರಷ್ಟಾಚಾರದ ಕುರಿತ ಸಾಕ್ಷ್ಯಗಳನ್ನು ನಾಶಪಡಿಸಲು ಸಾಕಷ್ಟು ಸಮಯಾವಕಾಶ ನೀಡಿತ್ತು. ಮಾಜಿ ಕಾಂಗ್ರೆಸ್ ಸಚಿವರ ಓಎಸ್‌ಡಿಯೊಬ್ಬರು ಪ್ರಮುಖ ಕಡತಗಳನ್ನು ನಾಶಪಡಿಸುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿತ್ತು. ಆದರೆ ಸರ್ಕಾರ ಪತನಗೊಳ್ಳುವವರೆಗೂ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆಮ್‌ಆದ್ಮಿ ಪಾರ್ಟಿಯ ಶಾಸಕ ವಿನೋದ್ ಬಿನ್ನಿ ಪಕ್ಷದ ವಿರುದ್ಧ ಬಂಡಾಯವೆದ್ದಾಗ ಕೇಜ್ರಿವಾಲ್ ಮತ್ತು ಅವರ ತಂಡ ಹೇಳಿದ್ದು – ಬಿನ್ನಿ ಜೊತೆ ನಮಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು. ಹಾಗಿದ್ದರೆ ಅನಂತರ ವಿನೋದ್ ಬಿನ್ನಿಯನ್ನು ಪಕ್ಷದಿಂದ ಉಚ್ಚಾಟಿಸಿzಕೆ ಎಂಬ ಪ್ರಶ್ನೆಗೆ ‘ಆಪ್’ ಬಳಿ ಉತ್ತರವಿರಲಿಲ್ಲ. ಸ್ವಯಂಘೋಷಿತ ನಿರಂಕುಶವಾದಿ ಹಾಗೂ ಸರ್ವಾಧಿಕಾರಿ ಕೇಜ್ರಿವಾಲ್ ಸೆಕ್ರೆಟರಿಯೇಟ್‌ಗೆ ಮಾಧ್ಯಮದ ಪ್ರವೇಶವನ್ನು ನಿರ್ಬಂಧಿಸಿ, ಪ್ರಜಾತಂತ್ರದ ೪ನೇ ಆಧಾರಸ್ತಂಭದ ಹಕ್ಕುಗಳಿಗೆ ಚ್ಯುತಿ ತಂದಿದ್ದರು. ಆದರೆ ಇದೇ ಮಾಧ್ಯಮರಂಗ ಕೇಜ್ರಿವಾಲರ ಆಮ್‌ಆದ್ಮಿ ಪಾರ್ಟಿಗೆ ಚುನಾವಣೆ ಸಂದರ್ಭದಲ್ಲಿ ಹಾಗೂ ಅನಂತರ ವ್ಯಾಪಕ ಪ್ರಚಾರ ಹಾಗೂ ಬೆಂಬಲ ನೀಡಿದ್ದು ಮಾತ್ರ ವಿಪರ್ಯಾಸ. ಹೀಗೆ ಕೇಜ್ರಿವಾಲ್ ಸರ್ಕಾರ ಅಧಿಕಾರದಲ್ಲಿದ್ದ ಕಡಿಮೆ ಅವಧಿಯಲ್ಲೂ ನಾನಾ ಬಗೆಯ ಸುಳ್ಳು , ತಟವಟ, ಗೊಂದಲಗಳನ್ನು ಸೃಷ್ಟಿಸುತ್ತಲೇ ಇತ್ತು.
ಇಂತಹ ಸರ್ಕಾರವೊಂದು ಹೆಚ್ಚು ದಿನ ಬಾಳಲು ಹೇಗೆ ಸಾಧ್ಯ? ಮುಖೇಶ್ ಅಂಬಾನಿ ವಿರುದ್ಧ ಕೇಸು ಹಾಕಿದ್ದಕ್ಕೆ ಬಿಜೆಪಿ – ಕಾಂಗ್ರೆಸ್ ಒಂದಾಗಿ ನಮ್ಮ ಸರ್ಕಾರ ಬೀಳಿಸಲು ಸಂಚು ನಡೆಸಿದವು ಎಂದು ಕೇಜ್ರಿವಾಲ್ ಹೇಳಿಬಿಟ್ಟರೆ ಅದನ್ನು ನಂಬುವಷ್ಟು ಮೂರ್ಖರೇ ಈ ದೇಶದ ಜನರು? ಜನಲೋಕಪಾಲ್ ಮಸೂದೆಗೆ ಪ್ರತಿಪಕ್ಷ ಬಿಜೆಪಿ ಎಂದೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಅದನ್ನು ಆಪ್ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ರೀತಿ ಮಾತ್ರ ಸಾಂವಿಧಾನಿಕವಾಗಿರಲಿಲ್ಲ ಎಂದಿತ್ತು ಬಿಜೆಪಿ. ಅದನ್ನು ಪ್ರತಿಭಟಿಸಿದ್ದು ಬಿಜೆಪಿಯ ತಪ್ಪು ಆಗುವುದಾದರೂ ಹೇಗೆ? ಬಿಜೆಪಿ ಸಂವಿಧಾನಬಾಹಿರ ಕೃತ್ಯಗಳಿಗೆ ‘ಆಪ್’ ಜೊತೆ ಕೈ ಜೋಡಿಸಬೇಕಿತ್ತೆ?
ಅಂತೂ ಆಪ್ ಪಕ್ಷ ಅಧಿಕಾರಕ್ಕೇರಿದಷ್ಟೇ ವೇಗವಾಗಿ ಪತನ ಕಂಡಿದೆ. ಪೂಜೆಗೆ ಮುನ್ನವೇ ಪ್ರಜಾತಂತ್ರ ದೇಗುಲದ ಪೂಜಾರಿ ಪಲಾಯನ ಮಾಡಿದ್ದಾನೆ! ಒಂದು ರಾಜಕೀಯ ಪಕ್ಷ ಹೇಗೆ ಅಧಿಕಾರ ನಡೆಸಬಾರದು ಎಂಬುದಕ್ಕೆ ಆಪ್ ಸರ್ಕಾರದ ವೈಖರಿ ದಿವ್ಯ ನಿದರ್ಶನ! ಧೂಮಕೇತುವಿನಂತೆ ರಾಜಕೀಯ ರಂಗದಲ್ಲಿ ದಿಢೀರನೆ ಉದ್ಭವಿಸುವ ‘ಆಪ್’ನಂತಹ ಪಕ್ಷಕ್ಕೆ ಬೆಂಬಲ ನೀಡಬೇಕೆ? ನೀಡಿದರೆ ಅದು ವ್ಯರ್ಥವಾಗುವುದಿಲ್ಲವೆ? ಇಂತಹ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳಲು ಈಗ ಮತದಾರರಿಗೆ ಇದು ಸಕಾಲ.