by Du Gu Lakshman

ಅವರಿಗೆ ಕೈಗಳಿವೆ. ಆದರೂ ಎತ್ತಲಾಗುತ್ತಿಲ್ಲ. ನಮ್ಮ – ನಿಮ್ಮ ಹಾಗೆ ಕಾಲುಗಳಿವೆ. ಆದರೆ ನಡೆಯಲಾಗುತ್ತಿಲ್ಲ. ತಾರುಣ್ಯದ ವಯಸ್ಸಿದೆ. ಆದರೂ ಚುರುಕಾಗಿ ಎzಳಲಾಗುತ್ತಿಲ್ಲ. ಸಂತಾನೋತ್ಪತ್ತಿಯಂತೂ ಸಾಧ್ಯವೇ ಇಲ್ಲ. ಅಸ್ತಮಾ, ಕ್ಯಾನ್ಸರ್, ಮಿದುಳಿಗೆ ಆಘಾತ ಮುಂತಾದ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಜೀವಂತವಾಗಿದ್ದರೂ ಜೀವಚ್ಛವದಂತೆ ಬದುಕಬೇಕಾದ ದಯನೀಯ ಸ್ಥಿತಿ.

endosulfanvictim

ಆದರೆ ಈ ಸ್ಥಿತಿ ಅವರಿಗೆ ಹುಟ್ಟಿನಿಂದ ಬಂದಿದ್ದಲ್ಲ. ಹುಟ್ಟುವಾಗ ಅವರೆಲ್ಲ ಆರೋಗ್ಯವಂತರಾಗಿಯೇ ಇದ್ದರು. ನಮ್ಮ-ನಿಮ್ಮಂತೆ ಚೈತನ್ಯಪೂರ್ಣ ಶರೀರ ಅವರದಾಗಿತ್ತು. ಆದರೆ ಬರಬರುತ್ತ ವಿಕಲಾಂಗರಾಗಿ ಪರಾವಲಂಬಿಗಳಾಗಬೇಕಾದ ಶೋಚನೀಯ ಸ್ಥಿತಿ. ಅಂದ ಹಾಗೆ ಅದೇನೂ ವಂಶೀಯ ಖಾಯಿಲೆಯ ಪರಿಣಾಮವಲ್ಲ. ಇವರ‍್ಯಾರೂ ಪಾರ್ಶ್ವವಾಯು ಪೀಡಿತರೂ ಅಲ್ಲ. ಯಾವುದೋ ದೆವ್ವ, ಭೂತಗಳ ಶಾಪದ ಪರಿಣಾಮವೂ ಇದಲ್ಲ. ಇದೆಲ್ಲವೂ ಎಂಡೋಸಲ್ಫಾನ್ ಎಂಬ ಒಬ್ಬ ಭಯಂಕರ ರಾಕ್ಷಸನಿಂದಾದ ಅನಾಹುತ. ಮೊದಲು ಆರೋಗ್ಯವಂತನಾಗಿದ್ದ ತನ್ನ ಮಗ ಸಂತೋಷ್ ಮುಂದೆ ಎಂದಾದರೊಂದು ದಿನ ತಾನಾಗಿಯೇ ನಡೆದಾನು ಎಂಬ ಕನಸು ಗ್ರೇಸಿ ಡಿ’ಸೋಜಾಗೆ ಈಗ ಕರಗಿ ಹೋಗಿದೆ. ೨೧ರ ಹರೆಯದ ಸಂತೋಷ್ ಮಾನಸಿಕ ವಿಕಲಾಂಗನಾಗಿ ಅಸ್ತಮಾ, ಆರ್ಥರೈಟಿಸ್‌ಗೆ ಗುರಿಯಾಗಿ ಹಾಸಿಗೆ ಹಿಡಿದಿದ್ದಾನೆ. ಶ್ರೀಧರ ಗೌಡ ಕಾಲಿದ್ದರೂ ನಡೆಯಲಾಗದೆ ತೆವಳುತ್ತಿದ್ದಾರೆ… ದಕ್ಷಿಣಕನ್ನಡ ಜಿಲ್ಲೆಯ, ಪುತ್ತೂರು, ಬೆಳ್ತಂಗಡಿ ಹಾಗೂ ಕೇರಳದ ಕಾಸರಗೋಡು ಪ್ರದೇಶದ ಪಡ್ರೆ ಗ್ರಾಮಗಳಿಗೆ ಒಮ್ಮೆ ಹೋಗಿ ನೋಡಿದರೆ ಇಂತಹ ಕರುಳು ಹಿಂಡುವ, ಮಾನವೀಯತೆಯೇ ಕರಗಿ ಕಂಗಾಲಾಗುವ ಅದೆಷ್ಟೋ ಹೃದಯವಿದ್ರಾವಕ ದೃಶ್ಯಗಳು ಕಂಡುಬರುತ್ತವೆ. ತಮ್ಮದಲ್ಲದ ತಪ್ಪಿಗೆ ಬದುಕಿಡೀ ಪರಿತಪಿಸಬೇಕಾದ ಈ ನತದೃಷ್ಟರನ್ನು ನೋಡಿದರೆ ತಕ್ಷಣ ನಮಗೆ ನೆನಪಾಗುವುದು – ಮಧ್ಯಪ್ರದೇಶದ ಭೋಪಾಲ್ ಅನಿಲ ದುರಂತಪೀಡಿತರು. ಅವರಿಗೂ ಇವರಿಗೂ ಯಾವುದೇ ವ್ಯತ್ಯಾಸವಿಲ್ಲ. ಅವರು ಅನಿಲ ದುರಂತದ ಪರಿಣಾಮವಾಗಿ ಬದುಕಿನ ನೆಮ್ಮದಿ, ಸುಖದಿಂದ ವಂಚಿತರಾಗಿದ್ದರೆ, ಇವರು ಎಂಡೋಸಲ್ಫಾನ್ ವಿಷದ ಪರಿಣಾಮವಾಗಿ ಅಂತಹದೇ ಸ್ಥಿತಿ ಎದುರಿಸುತ್ತಿದ್ದಾರೆ.

ಕೀಟನಾಶಕ ಎಸಗಿದ ಅನಾಹುತ

೧೯೮೦ರಿಂದ ೨೦೦೦ದವರೆಗೆ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳ ಗೇರು ತೋಟಗಳಿಗೆ ಎಂಡೋಸಲ್ಫಾನ್ ಕೀಟನಾಶಕವನ್ನು ಹೆಲಿಕಾಪ್ಟರ್ ಮೂಲಕ ಸಿಂಪಡಿಸಲಾಗಿತ್ತು. ಗೇರು ಗಿಡಗಳಿಗೆ ತಗಲಿರುವ ಕೀಟಗಳನ್ನು ನಾಶಪಡಿಸುವುದು, ತನ್ಮೂಲಕ ಗೇರು ಬೆಳೆಯನ್ನು ರಕ್ಷಿಸುವುದು ಇದರ ಮೂಲ ಉzಶವಾಗಿತ್ತು. ಆದರೆ ಆಗಿz ಬೇರೆ. ಗೇರು ಗಿಡಗಳಲ್ಲಿರುವ ಕೀಟಗಳ ಜೊತೆಗೆ ಮನುಷ್ಯರ ಬದುಕನ್ನೂ ಎಂಡೋಸಲ್ಫಾನ್ ಹೊಸಗಿ ಹಾಕಿತು. ಭಯಾನಕ ವಾತಾವರಣವನ್ನು ಸೃಷ್ಟಿಸಿಬಿಟ್ಟಿತು. ಕುಡಿಯುವ ನೀರಿಗೂ ಎಂಡೋ ವಿಷ ಸೇರಿಕೊಂಡಿತು. ಗಿಡಗಳಿಗೆ ಎಂಡೋಸಲ್ಫಾನ್ ಸಿಂಪಡಿಸುವ ಮಂದಿಗಾಗಲಿ, ಈ ಕೀಟನಾಶಕಗಳನ್ನು ಉತ್ಪಾದಿಸುವ ಕಂಪೆನಿಗಳಿಗಾಗಲಿ ಇಂತಹದೊಂದು ಭಯಾನಕ ವಿಷ ಎಸಗುವ ದುಷ್ಪರಿಣಾಮಗಳ ಬಗ್ಗೆ ಅರಿವೇ ಇರಲಿಲ್ಲವೆ ಅಥವಾ ಇದ್ದಿದ್ದರೂ ಅದರ ಬಗ್ಗೆ ನಿಷ್ಕಾಳಜಿವಹಿಸಿದರೆ ಎಂಬುದು ಈಗ ಚರ್ಚೆಗೆ ಗ್ರಾಸವಾಗುವ ಸಂಗತಿ. ಗೇರುಬೀಜ ತಿಂದವರು ಯಾರೋ. ಗೇರು ಗಿಡದ ವಿಷ ಉಂಡವರು ಮಾತ್ರ ಈ ನತದೃಷ್ಟರು! ಎಂಡೋ ವಿಷದ ದುಷ್ಪರಿಣಾಮ ನಿಜಕ್ಕೂ ಅರಿವಿಗೆ ಬಂದದ್ದು ೧೦ ವರ್ಷಗಳ ಬಳಿಕ. ಸಣ್ಣ ಸಣ್ಣ ಶಿಶುಗಳಿಂದ ಹಿಡಿದು ಮಧ್ಯ ವಯಸ್ಕರವರೆಗೆ ವಿವಿಧ ವಯೋಮಾನದವರು ಎಂಡೋ ದುಷ್ಪ್ರಭಾವಕ್ಕೆ ಸಿಲುಕಿ ಅಂಗವಿಕಲರಾದರು. ಕೆಲವರು ಮತಿಹೀನರಾದರು. ಕೇರಳದ ಕಲ್ಲಿಕೋಟೆಯ ವೈದ್ಯಕೀಯ ಕಾಲೇಜೊಂದು ನಡೆಸಿದ ಸಮೀಕ್ಷೆಯಂತೆ, ಎಂಡೋ ದುಷ್ಪ್ರಭಾವಕ್ಕೆ ಬಲಿಯಾದವರ ಸಂಖ್ಯೆ ಬರೋಬ್ಬರಿ ೫೦೦. ಇನ್ನೂ ೫ ಸಾವಿರ ಮಂದಿ ನಾನಾ ಬಗೆಯ ಗಂಭೀರ ಖಾಯಿಲೆಗಳಿಗೆ ಸಿಲುಕಿ ನರಳುತ್ತಿದ್ದಾರೆ. ಕರ್ನಾಟಕದಲ್ಲಿ ೬,೫೦೦ಕ್ಕೂ ಹೆಚ್ಚು ಮಂದಿ ರೋಗಪೀಡಿತರಾಗಿದ್ದಾರೆ ಎಂದು ವರದಿ.

ಕೇರಳದ ಅಚ್ಯುತಾನಂದನ್ ನೇತೃತ್ವದ ಎಲ್‌ಡಿಎಫ್ ಸರ್ಕಾರ ೨೦೦೯ರಲ್ಲೇ ಆ ರಾಜ್ಯದಲ್ಲಿ ಎಂಡೋಸಲ್ಫಾನ್ ಬಳಕೆಗೆ ನಿಷೇಧ ಹೇರಿತ್ತು. ಎಂಡೋಸಲ್ಫಾನ್ ಉತ್ಪಾದಿಸುತ್ತಿರುವ ಕೊಚ್ಚಿ ಬಳಿಯ ಇಲೂರಿನಲ್ಲಿರುವ ಹಿಂದುಸ್ಥಾನ್ ಇನ್‌ಸೆಕ್ಟಿಸೈಡ್ಸ್ ಕಾರ್ಖಾನೆಯ ಘಟಕವನ್ನು ಮುಚ್ಚುವಂತೆ ಆದೇಶವನ್ನು ಜಾರಿಗೊಳಿಸಿತ್ತು. ಆ ಕಾರ್ಖಾನೆಯು ಗಾಳಿ ಮತ್ತು ನೀರು ಮಲಿನಗೊಳ್ಳುವಂತೆ ತನ್ನ ತ್ಯಾಜ್ಯವನ್ನು ಹೊರಹಾಕಿ ಪರಿಸರ ಮಾಲಿನ್ಯ ತಡೆ ಕುರಿತ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಕೆ.ಸಂಜೀವನ್ ಆರೋಪಿಸಿದ್ದರು. ಆದರೆ ಆ ಕಂಪೆನಿ ಯಾವುದಕ್ಕೂ ಕ್ಯಾರೇ ಎಂದಿರಲಿಲ್ಲ.

ಕರ್ನಾಟಕದಲ್ಲೂ ಎಂಡೋಸಲ್ಫಾನ್ ಸಂತ್ರಸ್ತರ ಬಗ್ಗೆ ಅಷ್ಟಾಗಿ ಯಾರೂ ವಿಶೇಷ ಗಮನಹರಿಸಲಿಲ್ಲ. ೨೦೦೦ ಇಸವಿಯಿಂದ ೨೦೧೩ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಎಂಡೋ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸುವ ಸೂಕ್ಷ್ಮತೆಯನ್ನೇ ಕಳೆದುಕೊಂಡಿದ್ದವು. ಆರೋಗ್ಯ ಇಲಾಖೆಯಂತೂ ಹೈಕೋರ್ಟ್‌ಗೆ ತಪ್ಪು ಮಾಹಿತಿಗಳನ್ನು ನೀಡುತ್ತಲೇ ಬಂದಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಮಾತ್ರ ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಎಂಡೋ ಸಂತ್ರಸ್ತರ ಮನೆಗಳಿಗೆ ಸ್ವತಃ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ, ಎಂಡೋಸಲ್ಫಾನ್ ಕೀಟನಾಶಕ ನಿಷೇಧಕ್ಕೆ ಸಂಪುಟ ನಿರ್ಣಯ ತೆಗೆದುಕೊಳ್ಳುವಂತೆ ಮಾಡಿದ್ದರು. ಇಡೀ ದೇಶದಲ್ಲಿ ಎಂಡೋಸಲ್ಫಾನ್ ಬಳಕೆ ನಿಷೇಧಿಸುವಂತೆ ಆಗ್ರಹಿಸಿ ಯಡಿಯೂರಪ್ಪ ಸರ್ಕಾರ ಕೇಂದ್ರಕ್ಕೆ ಪತ್ರವನ್ನೂ ಬರೆದಿತ್ತು. ದೆಹಲಿಯಲ್ಲಿರುವ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್‌ಮೆಂಟ್ ಎಂಬ ಸಂಸ್ಥೆ ಕೂಡ ೨೦೦೧ರಲ್ಲೇ ಎಂಡೋಸಲ್ಫಾನ್‌ನಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸಿತ್ತು. ಸ್ವತಃ ಸುಪ್ರೀಂಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಈ ಕುರಿತು ನೊಟೀಸ್ ಜಾರಿಗೊಳಿಸಿ, ಎಂಡೋ ದುಷ್ಪರಿಣಾಮಗಳ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲವೆಂದು ಪ್ರಶ್ನಿಸಿತ್ತು. ಇಷ್ಟೆಲ್ಲ ಆದರೂ ಎಂಡೋಸಲ್ಫಾನ್‌ಗೆ ನಿಷೇಧ ಹೇರುವ ಬಗ್ಗೆ ಕೇಂದ್ರ ಸರ್ಕಾರ ಮನಸ್ಸು ಮಾಡಲೇ ಇಲ್ಲ.

 ಕೊನೆಗೂ ಹೈಕೋರ್ಟ್ ನೆರವು

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ, ಜನಪ್ರತಿನಿಧಿಗಳ ಉಡಾಫೆಯಿಂದಾಗಿ ಎಂಡೋಪೀಡಿತರು ಅನಾಥರಾಗಿದ್ದು ನಿಜ. ಕೊನೆಗೆ ಹೈಕೋರ್ಟ್ ಇವರ ನೆರವಿಗೆ ಬರಬೇಕಾಯಿತು. ನ್ಯಾಯಾಲಯದ ಸಹಾಯಕರು ಸ್ವತಃ ಎಂಡೋಪೀಡಿತ ಪ್ರದೇಶಗಳಿಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಿದರು. ಇದೀಗ ರಾಜ್ಯ ಹೈಕೋರ್ಟ್ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಎಂಡೋ ಪೀಡಿತ ೬,೧೪೦ ಮಂದಿ ಸಂತ್ರಸ್ತರಿಗೆ ಮಾಸಿಕ ಪರಿಹಾರ ನೀಡುವುದಕ್ಕೆ ಆದೇಶ ನೀಡಿದೆ. ಶೇ.೬೦ಕ್ಕಿಂತ ಅಧಿಕ ಅಂಗವೈಕಲ್ಯ ಇರುವವರಿಗೆ ಮಾಸಿಕ ೩ ಸಾವಿರ ರೂ. ಮತ್ತು ಶೇ.೬೦ಕ್ಕಿಂತ ಕಡಿಮೆ ಹಾಗೂ ಶೇ. ೨೫ಕ್ಕಿಂತ ಹೆಚ್ಚಿನ ಪ್ರಮಾಣದ ಅಂಗವೈಕಲ್ಯ ಇರುವವರಿಗೆ ಮಾಸಿಕ ೧,೫೦೦ ರೂ. ಪರಿಹಾರ ನೀಡಬೇಕು. ವಾರಕ್ಕೊಮ್ಮೆ ಸಂಚಾರಿ ಆಸ್ಪತ್ರೆಗಳು ಸಂತ್ರಸ್ತರ ಬಳಿಗೇ ತೆರಳಿ ಉಪಚಾರ ನೀಡಬೇಕು ಎಂದೂ ತಾಕೀತು ಮಾಡಿದೆ.

ಈ ಕೆಲಸವನ್ನು ರಾಜ್ಯ ಸರ್ಕಾರವೇ ಮಾಡಬಹುದಿತ್ತು. ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ರಾಜ್ಯ ಸರ್ಕಾರ ಎಂಡೋ ಸಂತ್ರಸ್ತರಿಗೆ ೨೦ ಕೋಟಿ ಪರಿಹಾರ ಒದಗಿಸಬಹುದು ಎಂದು ತಿಳಿಸಿತ್ತು. ‘ಇದೊಂದು ಪರಿಹಾರವೇ ಅಲ್ಲ. ಕೇವಲ ಕಾಟಾಚಾರಕ್ಕೆ ಒದಗಿಸಿದ ಮೊತ್ತ. ಯಾವುದೋ ಮಲೇರಿಯಾ ರೋಗಪೀಡಿತರಿಗೆ ಪರಿಹಾರ ನೀಡಿದಂತೆ ಸರ್ಕಾರ ನಿರ್ಲಕ್ಷ್ಯವಹಿಸಿದೆ’ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಎಂಡೋಪೀಡಿತರಿಗೆ ಕೊಡಬೇಕಾದ ಪರಿಹಾರ ಮೊತ್ತವನ್ನು ಕನಿಷ್ಠ ೫೦೦ರಿಂದ ೬೦೦ ಕೋಟಿಗೆ ಏರಿಸಬೇಕೆಂದೂ ಕೋರ್ಟ್ ತಾಕೀತು ಮಾಡಿತ್ತು.

ಅಷ್ಟೇ ಅಲ್ಲ, ಎಂಡೋಸಂತ್ರಸ್ತರಿಗೆ ಪರಿಹಾರ ಒದಗಿಸಬೇಕಾದುದು ಸರ್ಕಾರದ ಹೊಣೆ ಮಾತ್ರವಲ್ಲ , ಆ ವಿಷವನ್ನು ಉತ್ಪಾದಿಸಿದ ಕಂಪೆನಿಗಳ ಹೊಣೆಯೂ ಆಗಿದೆ ಎಂದೂ ಕೋರ್ಟ್ ಹೇಳಿತ್ತು. ಕಂಪೆನಿಗಳು ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ಇಂತಹ ಕೀಟನಾಶಕಗಳನ್ನು ಉತ್ಪಾದಿಸಿ ಲಾಭ ಮಾಡಿಕೊಳ್ಳುತ್ತಿವೆ. ಅವುಗಳಿಗೆ ವ್ಯಾಪಾರವೊಂದೇ ಮುಖ್ಯ. ಜನರ ಆರೋಗ್ಯ ಕಟ್ಟಿಕೊಂಡು ಅವುಗಳಿಗೆ ಆಗಬೇಕಾದ್ದಾದರೂ ಏನು? ಆದರೆ ಕಂಪೆನಿಗಳಿಂದ ಪರಿಹಾರ ಕೊಡಿಸುವ ‘ಕಷ್ಟ’ವನ್ನು ಯಾವ ಸರ್ಕಾರವೂ ತೆಗೆದುಕೊಳ್ಳಲಿಲ್ಲ ಎನ್ನುವುದು ಮಾತ್ರ ವಿಷಾದನೀಯ.

ರಾಜ್ಯ ಹೈಕೋರ್ಟ್ ತೀರ್ಪಿನಿಂದ ಸದ್ಯಕ್ಕಂತೂ ಎಂಡೋಪೀಡಿತರಿಗೆ ತಾತ್ಕಾಲಿಕ ಸಮಾಧಾನ ದೊರಕಿದೆ. ಸರ್ಕಾರಗಳು ಎಂಡೋಸಂತ್ರಸ್ತರ ಕಷ್ಟವನ್ನು ಕಡೆಗಣಿಸಿದಾಗ, ಪರಿಹಾರ ಎಂಬುದು ಅವರ ಪಾಲಿಗೆ ಗಗನಕುಸುಮವಾಗಿದ್ದಾಗ ನ್ಯಾಯಾಲಯದ ಈ ಆದೇಶ ಒಂದು ಆಶಾಕಿರಣವೆನಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಇದೊಂದು ಸರ್ಕಾರದ ಕಣ್ತೆರೆಸುವ ಮಹತ್ವದ ಆದೇಶವೂ ಹೌದು.

ನಿಷೇಧಕ್ಕೆ ೧೧ ವರ್ಷ ಏಕೆ?

ಭಾರತ ಸರ್ಕಾರಕ್ಕೆ ಪ್ರಬಲ ಇಚ್ಛಾಶಕ್ತಿ ಇದ್ದಿದ್ದರೆ ಎಂಡೋಸಲ್ಫಾನ್‌ನಂತಹ ಮನುಷ್ಯರನ್ನು ನಿಧಾನವಾಗಿ ಕೊಲ್ಲುವ ಭಯಾನಕ ಕೀಟನಾಶಕವನ್ನು ಎಂದೋ ನಿಷೇಧಿಸಬಹುದಿತ್ತು. ಪ್ರತಿವರ್ಷ ವಿಶ್ವ ಸಾವಯವ ಮಾಲಿನ್ಯ ಸಮಸ್ಯೆ ಕುರಿತ ಸಮ್ಮೇಳನಗಳು ಜರುಗುತ್ತಲೇ ಇರುತ್ತವೆ. ೨೦೧೧ ಏಪ್ರಿಲ್ ೨೫ರಿಂದ ೨೯ರವರೆಗೆ ಜಿನೇವಾದಲ್ಲಿ ನಡೆದ ಇಂತಹ ಸಮ್ಮೇಳನದಲ್ಲಿ ಭಾರತವೂ ಭಾಗವಹಿಸಿತ್ತು. ಅಲ್ಲಿ ಎಂಡೋಸಲ್ಫಾನ್ ನಿಷೇಧಕ್ಕೆ ಮೊದಲ ಬಾರಿಗೆ ಭಾರತ ಸಮ್ಮತಿಸಿತ್ತು. ಆದರೆ ಈ ನಿಷೇಧ ತಕ್ಷಣದಿಂದಲ್ಲ, ಇನ್ನೂ ೧೧ ವರ್ಷದೊಳಗೆ ಹಂತ ಹಂತವಾಗಿ ನಿಷೇಧಿಸಲಾಗುತ್ತದೆ ಎಂದು ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೇಂದ್ರ ಪರಿಸರ ಖಾತೆ ಸಚಿವ ಜಯರಾಂ ರಮೇಶ್ ಅನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಹೀಗಾಗಿ ಎಂಡೋಸಲ್ಫಾನ್ ಸಂಪೂರ್ಣ ನಿಷೇಧಕ್ಕೆ ಭಾರತ ಒಪ್ಪಿಯೇ ಇರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಆದರೆ ಯುರೋಪಿಯನ್ ಒಕ್ಕೂಟ, ಆಸ್ಟ್ರೇಲಿಯ, ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ೬೩ ದೇಶಗಳು ಎಂಡೋಸಲ್ಫಾನ್ ಬಳಕೆಯನ್ನು ಸಂಪೂರ್ಣ ನಿಷೇಧಿಸಿವೆ. ಭಾರತಕ್ಕೇಕೆ ಇದು ಸಾಧ್ಯವಿಲ್ಲ? ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಲೋಕಸಭೆಯಲ್ಲಿ ಮಾತನಾಡುತ್ತಾ, ಎಂಡೋಸಲ್ಫಾನ್ ನಿಷೇಧಕ್ಕೆ ಹಲವು ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ ಎಂದಿದ್ದರು. ಆದರೆ ಅಸಲಿಗೆ ಯಾವ ರಾಜ್ಯವೂ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿರಲಿಲ್ಲ. ನಿಷೇಧದ ಪರವಾಗಿ ಕೇಂದ್ರ ಸರ್ಕಾರಕ್ಕೆ ೩ ಸಾವಿರಕ್ಕೂ ಹೆಚ್ಚು ಪತ್ರಗಳು ಬಂದಿದ್ದರೆ, ನಿಷೇಧ ವಿರೋಧಿಸಿ ಬಂದಿದ್ದು ಕೇವಲ ಎರಡೋ ಅಥವಾ ಮೂರೋ ಇರಬಹುದು. ಆ ಪತ್ರಗಳು ಕೂಡ ಎಂಡೋಸಲ್ಫಾನ್ ಉತ್ಪಾದಿಸುವ ಕಂಪೆನಿಗಳದಾಗಿರಬಹುದು! ಸುಪ್ರೀಂಕೋರ್ಟ್ ೨ ವರ್ಷಗಳ ಹಿಂದೆ ಮಧ್ಯಂತರ ಆದೇಶ ಹೊರಡಿಸಿ ಎಂಡೋಸಲ್ಫಾನ್ ಉತ್ಪಾದನೆ, ವಿತರಣೆ ಹಾಗೂ ಅದರ ಬಳಕೆಯನ್ನು ದೇಶಾದ್ಯಂತ ನಿಷೇಧಿಸಬೇಕೆಂದು ಸೂಚಿಸಿತ್ತು. ಎಂಡೋ ಎಂಬ ಕೀಟನಾಶಕ ಮನುಕುಲ ಹಾಗೂ ಪರಿಸರ ಮೇಲೆ ಮಾರಕ ಪರಿಣಾಮವನ್ನುಂಟು ಮಾಡುತ್ತಿದೆ ಎಂಬ ಎಚ್ಚರಿಕೆಯನ್ನೂ ನೀಡಿತ್ತು.

ಭಾರತದಲ್ಲೇ ಅತೀ ಹೆಚ್ಚು ಉತ್ಪಾದನೆ

ಭಾರತದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಕೀಟನಾಶಕವೆಂದರೆ ಎಂಡೋಸಲ್ಫಾನ್. ವರ್ಷಕ್ಕೆ ೧೨೦ ಲಕ್ಷ ಲೀಟರ್‌ಗೂ ಹೆಚ್ಚು ಪ್ರಮಾಣದಲ್ಲಿ ಇದು ಮಾರಾಟವಾಗುತ್ತಿದೆ. ನೂರಕ್ಕೂ ಹೆಚ್ಚು ಬ್ರಾಂಡ್‌ಗಳಲ್ಲಿ ಇದು ಮಾರುಕಟ್ಟೆಗೆ ಇಂದು ಲಗ್ಗೆ ಹಾಕಿದೆ. ವಿವಿಧ ದೇಶಗಳಿಗೆ ಪ್ರತಿವರ್ಷ ಇಲ್ಲಿಂದ ರಫ್ತಾಗುವ ಪ್ರಮಾಣ ೧೬೦ ಕೋಟಿ ರೂ.ಗೂ ಹೆಚ್ಚು. ಅತೀ ಹೆಚ್ಚು ಪ್ರಮಾಣದಲ್ಲಿ ಎಂಡೋಸಲ್ಫಾನ್ ಉತ್ಪಾದಿಸುವ ದೇಶ ಕೂಡ ಭಾರತವೇ. ಹಾಗಾಗಿ ಜಾಗತಿಕವಾಗಿ ಈ ಕೀಟನಾಶಕ ವ್ಯಾಪಾರದ ಮೇಲೆ ಭಾರತz ನಿಯಂತ್ರಣ. ಭಾರತದ ಕ್ರಿಮಿನಾಶಕ ಉದ್ಯಮ ಒಟ್ಟು ೫,೨೦೦ ಕೋಟಿ ಮೌಲ್ಯದ್ದಾಗಿದ್ದರೆ, ಅದರಲ್ಲಿ ೪೫೦ ಕೋಟಿ ರೂ. ಎಂಡೋಸಲ್ಫಾನ್‌ನz ಸಿಂಹಪಾಲು. ಎಂಡೋಸಲ್ಫಾನ್ ಉತ್ಪಾದಿಸುವ ಎಕ್ಸೆಲ್ ಕ್ರಾಪ್‌ಕೇರ್, ಹಿಂದೂಸ್ಥಾನ್ ಇನ್‌ಸೆಕ್ಟಿಸೈಡ್ಸ್ ಮತ್ತು ಕೋರಮಂಡಲ್ ಫರ್ಟಿಲೈಸರ‍್ಸ್ – ಈ ಮೂರೂ ಕಾರ್ಖಾನೆಗಳ ಒಡೆತನ ಸರ್ಕಾರದ್ದು. ಭಾರೀ ಬಂಡವಾಳ ಹೂಡಿರುವ ಕಾರ್ಖಾನೆಗಳಿವು. ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರ ಜೇಬಿಗೆ ಕಮಿಷನ್ ರೂಪದಲ್ಲಿ ಈ ಕಾರ್ಖಾನೆಗಳಿಂದ ಕೋಟಿಕೋಟಿ ಹಣ ಹರಿದುಬರುತ್ತಿದೆ ಎನ್ನುವುದು ರಹಸ್ಯವಲ್ಲ. ಎಂಡೋಸಲ್ಫಾನ್ ನಿಷೇಧಕ್ಕೆ ಪವಾರ್ ವಿರೋಧವಿರುವುದು ಇದೇ ಕಾರಣಕ್ಕಾಗಿ! ಸಲೀಸಾಗಿ ತನ್ನ ತಿಜೋರಿ ತುಂಬುತ್ತಿರುವ ಲಕ್ಷ್ಮಿಯನ್ನು ಕೈಯಾರೆ ಕಳೆದುಕೊಳ್ಳುವಷ್ಟು ದಡ್ಡರೇನೂ ಅವರಲ್ಲ. ಆದರೆ ಈ ಕಾರ್ಖಾನೆಗಳು ಮನುಷ್ಯರನ್ನು ನಿಧಾನವಾಗಿ ಸಾಯಿಸುವ ವಿಷವನ್ನು ಉತ್ಪಾದಿಸುತ್ತಿರುವುದು ಸಮಾಜಘಾತುಕ ಕೃತ್ಯ ಎಂದು ಪ್ರಾಜ್ಞರಾದವರಿಗೆಲ್ಲ ಅನಿಸುವ ಸಂಗತಿ.

ಎಂಡೋಸಲ್ಫಾನ್ ನಿಷೇಧಕ್ಕೆ ಕೇಂದ್ರ ಸರ್ಕಾರ ೧೧ ವರ್ಷ ಕಾಲಾವಕಾಶ ತೆಗೆದುಕೊಂಡಿzಕೋ ಗೊತ್ತಿಲ್ಲ. ಬಹುಶಃ ಈ ೧೧ ವರ್ಷಗಳಲ್ಲಿ ಅನಾಯಾಸವಾಗಿ ಕಮಿಷನ್ ಎಂಬ ಕಿಕ್‌ಬ್ಯಾಕ್ ನಿರಂತರ ಹರಿದು ಬರುತ್ತಿರಲಿ ಎಂಬುದು ಹಿಡನ್ ಅಜೆಂಡಾ ಆಗಿರಬಹುದು! ಅಥವಾ ಈ ಅವಧಿಯಲ್ಲಿ ಎಂಡೋಸಲ್ಫಾನ್‌ಗೆ ಪರ್ಯಾಯವಾಗಿ ಬೇರೆ ಹೆಸರಿನ, ಬೇರೆ ರೂಪದ, ಆದರೆ ಇಷ್ಟೇ ದುಷ್ಪರಿಣಾಮ ಬೀರುವ ಇನ್ನೊಂದು ಕೀಟನಾಶಕವನ್ನು ಅಭಿವೃದ್ಧಿಪಡಿಸಿ, ಮಾರುಕಟ್ಟೆಗೆ ಬಿಟ್ಟು ಅಪಾರ ಹಣ ಗಳಿಸಬಹುದಲ್ಲ ಎಂಬ ದುರಾಸೆಯೂ ಇರಬಹುದು. ಯಾರಿಗೆ ಗೊತ್ತು!

ಎಂಡೋಸಲ್ಫಾನ್ ದುಷ್ಪರಿಣಾಮ ಇಲ್ಲಿಗೇ ನಿಲ್ಲದು. ಅದು ವಂಶವಾಹಿ ಮೂಲಕ ಮೂರನೇ, ನಾಲ್ಕನೇ ತಲೆಮಾರಿಗೂ ವಿಸ್ತರಿಸುವ ಅಪಾಯ ಇz ಇದೆ. ಹೈಕೋರ್ಟ್ ಆದೇಶದಿಂದ ಎಂಡೋಪೀಡಿತರಿಗೆ ತಾತ್ಕಾಲಿಕ ನೆರವು ದೊರಕಿದೆ ಎಂಬುದು ನಿಜ. ಆದರೆ ಇದಿಷ್ಟೇ ಅವರಿಗೆ ನೆಮ್ಮದಿಯನ್ನು ತಂದುಕೊಡದು. ಎಂಡೋಪೀಡಿತ ತಾಲ್ಲೂಕಿಗೊಂದು ಶಾಶ್ವತ ಪುನರ್ವಸತಿ ಕೇಂದ್ರ ತೆರೆದು, ಅದನ್ನು ಸರ್ಕಾರವೇ ನಡೆಸುವಂತಾಗಬೇಕು. ಜೊತೆಗೆ ಸ್ಕ್ಯಾನಿಂಗ್ ಕೇಂದ್ರಗಳನ್ನು ತೆರೆದು ಅಂಗವೈಕಲ್ಯದ ವಂಶವಾಹಿ ವ್ಯಾಪಿಸದಂತೆ ನೋಡಿಕೊಳ್ಳಬೇಕಾಗಿದೆ. ಇಷ್ಟಕ್ಕೂ ಗೇರು ತೋಟಗಳಿಗೆ ಎಂಡೋಸಲ್ಫಾನ್ ಸಿಂಪಡಿಸಲು ಸಲಹೆ ನೀಡಿದ್ದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ. ಈಗ ಮಾತ್ರ ಅದು ತನಗೂ ಈ ವಿಷಯಕ್ಕೂ ಸಂಬಂಧವಿಲ್ಲವೆಂಬಂತೆ ತಟಸ್ಥವಾಗಿರುವುದು ಖಂಡನೀಯ. ಕರ್ನಾಟಕ ಗೇರು ಅಭಿವೃದ್ಧಿ ನಿಗಮವನ್ನು ಇಡೀ ದುರಂತಕ್ಕೆ ಬಾಧ್ಯಸ್ತ ಮಾಡಿದಲ್ಲಿ ಮುಂದೆ ಇಂತಹ ಅನಾಹುತಗಳು ತಪ್ಪಬಹುದು. ಅದನ್ನು ರಾಜ್ಯ ಸರ್ಕಾರ ಮಾಡಬೇಕು. ಹೈಕೋರ್ಟ್ ನೀಡಿರುವ ಪರಿಹಾರದ ಆದೇಶ ಪ್ರಾಮಾಣಿಕವಾಗಿ ಕಾರ್ಯಗತವಾಗಬೇಕು. ಎಂಡೋಪೀಡಿತರಿಗೆ ತಲುಪಬೇಕಾದ ಪರಿಹಾರದ ಹಣ ಇನ್ಯಾರದೋ ಜೇಬಿಗೆ ಹೋಗುವಂತಾಗಬಾರದು.

ಹಾಗಾದೀತೆ?

Leave a Reply

Your email address will not be published.

This site uses Akismet to reduce spam. Learn how your comment data is processed.