Nambi Narayanan

By Du Gu Lakshman

Nambi Narayanan
Nambi Narayanan

ಮೊನ್ನೆ ಜನವರಿ ೫ರಂದು ಸಂಪೂರ್ಣ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಸಿದ್ದ ಜಿಎಸ್‌ಎಲ್‌ವಿ – ಡಿ೫ ಶ್ರೀಹರಿ ಕೋಟಾದಿಂದ ಗಗನಕ್ಕೆ ಜಿಗಿದಾಗ ಸ್ವಾಭಿಮಾನಿ ದೇಶವಾಸಿಗಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಕ್ರಯೋಜೆನಿಕ್ ತಂತ್ರಜ್ಞಾನದಲ್ಲೂ ಸ್ವಾವಲಂಬನೆ ಸಾಧಿಸಿzವೆಂಬ ಹೆಮ್ಮೆಯೇ ಇದಕ್ಕೆ ಕಾರಣ. ಇದೇ ಸಂದರ್ಭದಲ್ಲಿ, ಅತ್ತ ಗಗನಕ್ಕೆ ಜಿಎಸ್‌ಎಲ್‌ವಿ – ಡಿ೫ ರಾಕೆಟ್ ಜಿಗಿದಾಗ ಇತ್ತ ತಿರುವನಂತಪುರದ ಮಲೆಯಾಳಿ ಟಿವಿ ಚಾನೆಲ್ ಒಂದರ ಸ್ಟುಡಿಯೊದಲ್ಲಿ ಕುಳಿತಿದ್ದ ವೃದ್ಧರೊಬ್ಬರ ಕಣ್ಣಲ್ಲಿ ಮಾತ್ರ ದಳದಳ ನೀರು. ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಭಾರತದ ಬಗ್ಗೆ ಎಲ್ಲರಿಗೂ ಹೆಮ್ಮೆ ಎನಿಸಿರಬೇಕಾದರೆ ಈ ವೃದ್ಧರಿಗೇಕೆ ದುಃಖ? ಆದರೆ ಅದು ದುಃಖದ ಕಣ್ಣೀರು ಆಗಿರಲಿಲ್ಲ. ಅದು ಆನಂದಬಾಷ್ಪ ಆಗಿತ್ತು. ಏಕೆಂದರೆ ಇಸ್ರೊ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಹಿನ್ನೆಲೆಯಲ್ಲಿ ಆ ವೃದ್ಧರ ದೀರ್ಘ ಪರಿಶ್ರಮ, ಕಠೋರ ತಪಸ್ಸು ಇತ್ತು. ಆದರೆ ಸ್ವದೇಶಿ ತಂತ್ರಜ್ಞಾನದ ರಾಕೆಟ್ ಶ್ರೀಹರಿ ಕೋಟಾದಿಂದ ನಭಕ್ಕೆ ಜಿಗಿದಾಗ ಮಾತ್ರ ಈ ವೃದ್ಧರು ಶ್ರೀಹರಿಕೋಟಾದಲ್ಲಿರದೆ, ಕೇರಳದ ಯಾವುದೋ ಸ್ಟುಡಿಯೋದಲ್ಲಿ ಕುಳಿತು ಅದನ್ನು ವೀಕ್ಷಿಸಬೇಕಾದ ದೌರ್ಭಾಗ್ಯ ಒದಗಿತ್ತು. ಅದೊಂದು ದೊಡ್ಡ ವ್ಯಥೆಯ ಕಥೆ.

೭೧ರ ಆ ವಯೋವೃದ್ಧರೇ ಎಸ್.ನಂಬಿ ನಾರಾಯಣನ್. ಭಾರತದ ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿಗಳ ಸಾಲಿನಲ್ಲಿ ಇವರ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಕೆತ್ತಿಡಬೇಕು, ೨೦ ವರ್ಷಗಳ ಹಿಂದೆ ಇಸ್ರೊ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಕಾರ್ಯಕ್ರಮ ರೂಪಿಸಿದಾಗ, ಆ ಅತ್ಯಂತ ಮಹತ್ವದ ಯೋಜನೆಯ ರೂವಾರಿಯಾಗಿದ್ದವರು ಇದೇ ನಾರಾಯಣನ್. ರಾಕೆಟ್‌ಗಳಲ್ಲಿ ದ್ರವ ಇಂಧನ ಹಾಗೂ ಕ್ರಯೋಜೆನಿಕ್ ತಂತ್ರಜ್ಞಾನ ಅಳವಡಿಸಿಕೊಂಡಿರುವುದರಿಂದ ಏನು ಲಾಭವಾಗಲಿದೆ ಎಂಬುದನ್ನು ಅವರು ೭೦ರ ದಶಕದಲ್ಲೇ ಅರಿತಿದ್ದರು. ಇಷ್ಟಕ್ಕೂ ಪಿಎಸ್‌ಎಲ್‌ವಿ ರಾಕೆಟ್‌ನಲ್ಲಿ ಬಳಸುವ ‘ವಿಕಾಸ್ ಎಂಜಿನ್’ ವಿನ್ಯಾಸಗೊಳಿಸಿದವರೂ ಕೂಡ ಇದೇ ನಂಬಿ ನಾರಾಯಣನ್.

ಸಿಡಿಲೆರಗಿದ ಆ ಆಘಾತ

ಮೊನ್ನೆ ಜನವರಿ ೫ರಂದು ಯಶಸ್ವಿಯಾಗಿ ಹಾರಿದ ಪಿಎಸ್‌ಎಲ್‌ವಿ ರಾಕೆಟ್ ನಿಜವಾಗಿ ೧೩ ವರ್ಷಗಳ ಹಿಂದೆಯೇ ನಭಕ್ಕೆ ಜಿಗಿದು ದಾಖಲೆ ಬರೆಯಬೇಕಾಗಿತ್ತು. ಏಕೆಂದರೆ ಬಹಳಷ್ಟು ಹಿಂದೆಯೇ ಇಸ್ರೋ ಸ್ವದೇಶಿ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮಿಸಿತ್ತು. ನಂಬಿ ನಾರಾಯಣನ್ ನೇತೃತ್ವದಲ್ಲಿ ಸಾಕಷ್ಟು ಪ್ರಗತಿಯೂ ಆಗಿತ್ತು. ಇನ್ನೇನು ಸ್ವದೇಶೀ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಸಿದ್ಧವಾಗಬೇಕೆನ್ನುವಷ್ಟರಲ್ಲಿ ೧೯೯೪ರಲ್ಲಿ ದೊಡ್ಡದೊಂದು ಆಘಾತವೇ ನಡೆದು ಹೋಯಿತು. ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ ಆ ತಂತ್ರಜ್ಞಾನವನ್ನು ಶತ್ರು ದೇಶಗಳಿಗೆ ಮಾರಾಟ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಬಲವಾದ ಆರೋಪ ಕೇಳಿಬಂತು. ‘ಇಸ್ರೊ ಬೇಹುಗಾರಿಕೆ ಪ್ರಕರಣ’ವೆಂದೇ ಮಾಧ್ಯಮಗಳಲ್ಲಿ ಅದು ಭಾರೀ ಸುದ್ದಿಯಾಯಿತು. ಕೇರಳದ ಪೊಲೀಸರು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್, ಇನ್ನೊಬ್ಬ ವಿಜ್ಞಾನಿ ಶಶಿ ಕುಮಾರ್ ಮತ್ತೆ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದರು. ೫೦ ದಿವಸಗಳ ಕಾಲ ನಂಬಿಯವರನ್ನು ಜೈಲಿನಲ್ಲಿಡಲಾಯಿತು. ಅವರ ವೃತ್ತಿ ಜೀವನಕ್ಕೆ ಕಲ್ಲು ಬಿತ್ತು. ಅಷ್ಟೇ ಅಲ್ಲ, ಕ್ರಯೋಜೆನಿಕ್ ಯೋಜನೆ, ಜಿಎಸ್‌ಎಲ್‌ವಿ, ಪಿಎಸ್‌ಎಲ್‌ವಿ ರಾಕೆಟ್ ಅಭಿವೃದ್ಧಿ ಸೇರಿದಂತೆ ಇಸ್ರೊದ (ಭಾರತೀಯ ಬಾಹ್ಯಾಕಾಶ ಸಂಸ್ಥೆ) ಹತ್ತಾರು ಯೋಜನೆಗಳೂ ನೆನೆಗುದಿಗೆ ಬಿದ್ದವು. ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯವೇ ಉಡುಗಿ ಹೋಯಿತು. ಕ್ರಯೋಜೆನಿಕ್ ಯೋಜನೆ ಹಳ್ಳ ಹತ್ತಿ ಹೋಯಿತು.

ಕೇಂದ್ರ ಬೇಹುಗಾರಿಕಾ ದಳ (ಐಬಿ) ಮತ್ತು ಕೇರಳ ಪೊಲೀಸರು ಪ್ರಕರಣದ ತನಿಖೆ ನಡೆಸಿದರು. ಬಂಧನದಲ್ಲಿದ್ದ ನಂಬಿಯವರ ಬಾಯಿ ಬಿಡಿಸಲು ಅವರಿಗೆ ಮಾನಸಿಕ ಹಾಗೂ ಶಾರೀರಿಕ ಹಿಂಸೆ ನೀಡಲಾಗಿತ್ತು. ಇಷ್ಟಕ್ಕೂ ನಂಬಿಯವರ ಮೇಲೆ ಕೇರಳ ಪೊಲೀಸರಿಗೆ ಅನುಮಾನ ಬರಲು ಕಾರಣ – ಇಸ್ರೊಗೆ ಆಗಾಗ ಭೇಟಿ ನೀಡುತ್ತಿದ್ದ ಹಾಗೂ ವೀಸಾ ಅವಧಿ ಮುಗಿದ ಮೇಲೂ ಭಾರತದಲ್ಲೇ ಇದ್ದ ಮಾಲ್ಡೀವ್ಸ್‌ನ ಮರಿಯಂ ರಷೀದಾ ಮತ್ತು ಫೌಜಿಯಾ ಹಸನ್ ಅವರನ್ನು ಬಂಧಿಸಿದಾಗ ಅವರ ಬಳಿ ಇದ್ದ ಡೈರಿಯಲ್ಲಿ ನಂಬಿಯವರ ದೂರವಾಣಿ ಸಂಖ್ಯೆ ನಮೂದಾಗಿದ್ದು. ಬಂಧಿತ ರಷೀದಾ ಮತ್ತು ಫೌಜಿಯಾ ಬಳಿ ಕೇವಲ ನಂಬಿಯವರ ದೂರವಾಣಿ ಸಂಖ್ಯೆ ಇತ್ತು ಎಂಬ ಏಕೈಕ ಕಾರಣಕ್ಕೆ ಇಸ್ರೊಗೆ ಸಂಬಂಧಿಸಿದ ಕೆಲವು ರಹಸ್ಯ ಮಾಹಿತಿಗಳೂ ಅವರ ಬಳಿ ಇದ್ದವು, ಕ್ರಯೋಜೆನಿಕ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿವೆ ಎಂದೆಲ್ಲ ಪೊಲೀಸರು ಆರೋಪಿಸಿದರು.

ದೋಷಮುಕ್ತ ನಾರಾಯಣನ್

ಇಸ್ರೊ ಹೇಳಿಕೇಳಿ ಭಾರತದ ಸುಪ್ರತಿಷ್ಠಿತ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ. ಅಂತಹ ಸಂಸ್ಥೆಯೊಂದರ ಹಿರಿಯ ವಿಜ್ಞಾನಿಯ ಮೇಲೆರಗಿದ ಆರೋಪವನ್ನು ಕೇವಲ ಬೇಹುಗಾರಿಕಾ ದಳದ ತನಿಖೆಯಿಂದ ಬಗೆಹರಿಸಲಾಗದು ಎಂದು ಈ ಪ್ರಕರಣವನ್ನು ಸಿಬಿಐಗೆ ಅನಂತರ ಹಸ್ತಾಂತರಿಸಲಾಯಿತು. ಸಿಬಿಐ ತನಿಖೆಯಲ್ಲಿ ನಂಬಿಯವರ ಮೇಲಿನ ಆರೋಪಗಳು ಸಂಪೂರ್ಣ ಕಪೋಲಕಲ್ಪಿತ ಎಂದು ಕಂಡುಬಂತು. ಇದಾದಮೇಲೆ ಈ ಪ್ರಕರಣ ಸುಪ್ರೀಂಕೋರ್ಟಿನ ಮೆಟ್ಟಿಲನ್ನೂ ಹತ್ತಿತು. ಆದರೆ ೧೯೯೮ರಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣವನ್ನೇ ವಜಾಗೊಳಿಸಿ ತೀರ್ಪು ನೀಡಿತು. ಆ ಬಳಿಕ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನಂಬಿ ನಾರಾಯಣನ್ ಅವರ ವೃತ್ತಿ ಜೀವನಕ್ಕೆ ಅನ್ಯಾಯವಾಗಿ ಕಲ್ಲು ಹಾಕಿದ್ದಕ್ಕಾಗಿ ಕೇರಳ ಸರ್ಕಾರಕ್ಕೆ ಛೀಮಾರಿ ಹಾಕಿ ಪರಿಹಾರ ನೀಡುವಂತೆ ಆದೇಶ ನೀಡಿತು. ಕೇರಳ ಸರ್ಕಾರ ನಂಬಿಯವರಿಗೆ ೧೦ ಲಕ್ಷ ರೂ. ಪರಿಹಾರ ಕೊಡುವಂತೆ ಕೇರಳ ಹೈಕೋರ್ಟ್ ಇದೇ ಸಂದರ್ಭದಲ್ಲಿ ಸೂಚಿಸಿತು. ಐಬಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆಯೂ ಅದು ಹೇಳಿತ್ತು. ಅಲ್ಲಿಗೆ ನಂಬಿ ನಾರಾಯಣನ್ ನಿರ್ದೋಷಿ ಎಂಬುದು ಸಂಪೂರ್ಣ ಸಾಬೀತಾಗಿತ್ತು. ಆದರೇನು, ಅಷ್ಟರಲ್ಲಿ ಅವರ ವೃತ್ತಿ ಜೀವನದ ಅಮೂಲ್ಯ ೧೩ ವರ್ಷಗಳು ವ್ಯರ್ಥವಾಗಿದ್ದವು. ಅನ್ಯಾಯವಾಗಿ ಮೇಲೆರಗಿದ ಕಳಂಕ ನಿವಾರಣೆಯಾಗಿದ್ದರೂ ನಂಬಿಯವರು ಏನನ್ನು ಸಾಧಿಸಬೇಕಾಗಿತ್ತೋ ಅದನ್ನು ಅಂದುಕೊಂಡಂತೆ  ಮಾಡಲಾಗಿರಲಿಲ್ಲ.

ಅಮೆರಿಕದ ಷಡ್ಯಂತ್ರ

ಭಾರತದ ಬಳಿ ಇದಕ್ಕೂ ಮುಂಚೆ ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನ ಇರಲಿಲ್ಲವೆಂಬುದು ನಿಜ. ಅದಕ್ಕಾಗಿ ಅದು ಅವಲಂಬಿಸಿದ್ದು ರಷ್ಯಾ, ಅಮೆರಿಕದಂತಹ ಅಭಿವೃದ್ಧಿ ಹೊಂದಿದ ದೇಶಗಳನ್ನು. ಕ್ರಯೋಜೆನಿಕ್ ತಂತ್ರಜ್ಞಾನ ಪೂರೈಕೆಗೆ ಹಿಂದಿನ ಸೋವಿಯತ್ ಒಕ್ಕೂಟದ (ಯುಎಸ್‌ಎಸ್‌ಆರ್) ಜೊತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಆದರೆ ಸೋವಿಯತ್ ಒಕ್ಕೂಟದ ಪತನದ ನಂತರ ಆ ಒಪ್ಪಂದ ಜಾರಿಗೆ ಬರದಂತೆ ಅಮೆರಿಕ ರಷ್ಯಾದ ಮೇಲೆ ಒತ್ತಡ ಹೇರಿತು. ಅಣ್ವಸ್ತ್ರಗಳನ್ನು ಹೊಂದಿದ ಭಾರತ ತನ್ನ ಖಂಡಾಂತರ ಕ್ಷಿಪಣಿಗಳಿಗೆ ಕ್ರಯೋಜೆನಿಕ್ ಎಂಜಿನ್ ಬಳಸಬಹುದೆಂಬ ಭೀತಿ ಅಮೆರಿಕೆಗೆ ಇದ್ದುದೇ ಇದಕ್ಕೆ ಕಾರಣ. ಹೀಗಾಗಿ ಕ್ರಯೋಜೆನಿಕ್ ತಂತ್ರಜ್ಞಾನ ದೊರಕದೆ ಇಸ್ರೋ ಪರದಾಡಿದ್ದು ಅಷ್ಟಿಷ್ಟಲ್ಲ. ಆದರೆ ೨ ದಶಕಗಳ ಸತತ ಪರಿಶ್ರಮ, ಪ್ರಯೋಗಗಳ ಫಲವಾಗಿ ಆ ತಂತ್ರಜ್ಞಾನವನ್ನು ಭಾರತವೇ ಈಗ ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದೆ. ಬಹುಶಃ ನಂಬಿ ನಾರಾಯಣನ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಬಂಧಿಸದೇ ಇದ್ದಿದ್ದರೆ ಇಸ್ರೋ ಈಗಿನ ಸಾಧನೆಯನ್ನು ಇನ್ನೂ ಮುಂಚೆಯೇ ಸಾಧಿಸಬಹುದಿತ್ತು.

ಭಾರತ ಉಪಗ್ರಹಗಳನ್ನು ಉಡಾವಣೆ ಮಾಡಲು ಇದುವರೆಗೆ ಅವಲಂಬಿಸಿದ್ದು ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು. ಆದರೆ ಇದರಿಂದ ಅತಿ ಹೆಚ್ಚು ತೂಕದ ಉಪಗ್ರಹಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚಿನ ಭಾರದ ಉಪಗ್ರಹಗಳನ್ನು ಕಳುಹಿಸಲು ೫೦೦ ಕೋಟಿ ರೂ. ಹಣ ತೆತ್ತು ವಿದೇಶಿ ರಾಕೆಟ್‌ಗಳ ನೆರವು ಪಡೆಯಬೇಕಾಗಿತ್ತು. ಆದರೀಗ ಕ್ರಯೋಜೆನಿಕ್ ತಂತ್ರಜ್ಞಾನದಿಂದಾಗಿ ಇನ್ನು ಮುಂದೆ ೨೦೦೦ದಿಂದ ೪೦೦೦ ಟನ್ ತೂಕದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಬಹುದಾಗಿದೆ. ಸಾಕಷ್ಟು ವಿದೇಶಿ ವಿನಿಮಯ ಹಣವೂ ಉಳಿತಾಯವಾಗಲಿದೆ. ಈಗಿನ ಸಾಧನೆಯನ್ನೇ ಮೆಟ್ಟಿಲಾಗಿ ಮಾಡಿಕೊಂಡು ಪೂರ್ಣ ಪ್ರಮಾಣದ ದೊಡ್ಡ ಸಂವಹನ ಉಪಗ್ರಹವನ್ನು ಉಡಾವಣೆ ಮಾಡುವತ್ತ ಇಸ್ರೊ ಹೆಜ್ಜೆ ಹಾಕಿದರೆ ಸಾಕಷ್ಟು ಪ್ರಯೋಜನ ದೊರಕಲಿದೆ. ಏಕೆಂದರೆ ಬಾಹ್ಯಾಕಾಶ ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಬಹು ದೊಡ್ಡದಾಗಿ ಬೆಳೆದಿದೆ. ಅನೇಕ ಅಭಿವೃದ್ಧಿಶೀಲ ದೇಶಗಳಿಗೆ ಸ್ವಂತ ಸಂವಹನ ಉಪಗ್ರಹಗಳ ಅಗತ್ಯವಿದ್ದರೂ ಅವುಗಳ ಬಳಿ ದೇಶೀಯವಾಗಿ ಉಪಗ್ರಹಗಳನ್ನು ನಿರ್ಮಿಸುವ ತಂತ್ರಜ್ಞಾನವಾಗಲೀ, ಆ ಪ್ರಮಾಣದ ಆರ್ಥಿಕ ಚೈತನ್ಯವಾಗಲಿ ಇಲ್ಲ. ಅಂಥ ದೇಶಗಳಿಗೆ ಭಾರತ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ನಿರ್ಮಿಸಿಕೊಟ್ಟು ಸಾಕಷ್ಟು ಆದಾಯ ಗಳಿಸಬಹುದು.

ಭಾರತ ತನ್ನದೇ ಆದ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಬಾರದೆಂದೇ ಅಮೆರಿಕ ರಷ್ಯಾದ ಮೇಲೆ ಒತ್ತಡ ಹೇರಿತ್ತು. ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯವನ್ನು ಉಡುಗಿಸಲೆಂದೇ ಬೇಹುಗಾರಿಕಾ ಪ್ರಕರಣವನ್ನು ಸೃಷ್ಟಿಸಲಾಯಿತು ಎಂದು ನಂಬಿ ನಾರಾಯಣನ್ ದುಃಖದಿಂದ ಹೇಳುತ್ತಾರೆ. ಕ್ರಯೋಜೆನಿಕ್ ತಂತ್ರಜ್ಞಾನವನ್ನು ವಿದೇಶಕ್ಕೆ ನಂಬಿಯವರು ಮಾರಾಟ ಮಾಡಿದರೆಂದು ಕೇರಳ ಪೊಲೀಸರ ಆರೋಪ. ಆದರೆ ಹೀಗೆ ಹೇಳಲು ಕೇರಳ ಪೊಲೀಸರಿಗೆ ಇರುವ ತಂತ್ರಜ್ಞಾನದ ತಿಳಿವಳಿಕೆಯಾದರೂ ಏನು? ಅಷ್ಟಕ್ಕೂ ಕ್ರಯೋಜೆನಿಕ್ ಎಂದರೆ ಏನು ಎಂಬುದಾದರೂ ಕೇರಳ ಪೊಲೀಸರಿಗೆ ಗೊತ್ತಿರಲು ಸಾಧ್ಯವೆ? ಪೊಲೀಸರಾದರೂ ಪಾಪ ಏನು ಮಾಡಿಯಾರು? ಸರ್ಕಾರ ಹೇಳಿದಂತೆ ಕೇಳುವುದಷ್ಟೇ ಅವರ ಕೆಲಸವಾಗಿರುವಾಗ ನಂಬಿ ನಾರಾಯಣನ್ ಎಂಬ ಶ್ರೇಷ್ಠ ವಿಜ್ಞಾನಿ ವಿದೇಶಗಳಿಗೆ ತಂತ್ರಜ್ಞಾನ ಮಾರಿದ್ದಾರಾ ಅಥವಾ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದಾರಾ ಎಂಬ ಸಂಗತಿ ಗೊತ್ತಾಗುವುದಾದರೂ ಹೇಗೆ?

ಶ್ರೀಕುಮಾರ್ ಎಂಬ ಖಳನಾಯಕ

ನಂಬಿ ನಾರಾಯಣನ್ ಬಂಧನ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದು ಐಬಿಯ ಮುಖ್ಯಸ್ಥರಾಗಿದ್ದ ಆರ್.ಬಿ.ಶ್ರೀಕುಮಾರ್. ಈತ ಅದಕ್ಕೂ ಮುನ್ನ ಗುಜರಾತಿನ ಡಿಜಿಪಿಯಾಗಿದ್ದರು. ಗೋಧ್ರೋತ್ತರ ಗಲಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರ ಇತ್ತೆಂದು ಆರೋಪಿಸಿದವರಲ್ಲಿ ಅವರೂ ಒಬ್ಬರು. ನಂಬಿ ನಾರಾಯಣನ್ ಅವರನ್ನು ಬೇಹುಗಾರಿಕಾ ಬಲೆಗೆ ಬೀಳಿಸಲು ಕುಮಾರ್ ಜೊತೆ ‘ಶ್ರಮಿಸಿದ’ ಇನ್ನೊಬ್ಬರೆಂದರೆ ಐಬಿಯ ಜಂಟಿ ನಿರ್ದೇಶಕ ಮ್ಯಾಥ್ಯೂ ಜಾನ್. ರಾಷ್ಟ್ರೀಯ ಮಾನವಹಕ್ಕು ಆಯೋಗಕ್ಕೆ ೧೯೯೯ರಲ್ಲಿ ಸಲ್ಲಿಸಿದ ಪರಿಹಾರ ಕುರಿತ ಅರ್ಜಿಯಲ್ಲಿ ನಂಬಿ ನಾರಾಯಣನ್ ಇವರಿಬ್ಬರ ಹೆಸರನ್ನೂ ಉಲ್ಲೇಖಿಸಿದ್ದಾರೆ. ಸಿಬಿಐ ಕೂಡ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸಿನಲ್ಲಿ ಈ ಇಬ್ಬರು ಐಬಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಷರಾ ಬರೆದಿತ್ತು. ಆದರೆ ಕೇಂದ್ರ ಸರ್ಕಾರ ಅವರಿಬ್ಬರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನ್ನುವುದು ಬೇರೆ ಮಾತು.

ಕೇಂದ್ರ ಕಾಂಗ್ರೆಸ್ ಸರ್ಕಾರ ಹಾಗೂ ಆಗ ಕೇರಳದಲ್ಲಿ ಯುಡಿಎಫ್ ಸರ್ಕಾರ ಮಾತ್ರ ನಂಬಿ ನಾರಾಯಣನ್ ವಿರುದ್ಧ ಅನ್ಯಾಯವಾಗಿ ಹೇರಲಾದ ಆರೋಪಗಳ ಕುರಿತು ತುಟಿ ಪಿಟಕ್ಕೆನ್ನಲಿಲ್ಲ. ಪ್ರಧಾನ ಪ್ರತಿಪಕ್ಷ ಬಿಜೆಪಿ ಮಾತ್ರ ಸುಮ್ಮನೆ ಬಿಡಲಿಲ್ಲ. ಬಿಜೆಪಿಯ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ದೆಹಲಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ, ನಂಬಿ ನಾರಾಯಣನ್ ಅವರನ್ನು ದೇಶದ್ರೋಹಿಯಂತೆ ಬಿಂಬಿಸುವಲ್ಲಿ ಷಡ್ಯಂತ್ರ ಹೂಡಿದ ಮಾಸ್ಟರ್ ಮೈಂಡ್ ಆರ್.ಬಿ.ಶ್ರೀಕುಮಾರ್ ಎಂದು ಆರೋಪಿಸಿದ್ದರು. ತನಿಖೆಯ ವೇಳೆ ಶ್ರೀಕುಮಾರ್ ಎಲ್ಲೂ ನೇರವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಐಬಿ ಸಿಬ್ಬಂದಿ ನಂಬಿಯವರಿಗೆ ಅನಗತ್ಯ ಮಾನಸಿಕ ಕಿರಿಕಿರಿ ಹಾಗೂ ಹಿಂಸೆ ನೀಡಿ ಅವರಿಂದ ಏನನ್ನೋ ಬಾಯಿ ಬಿಡಿಸಲು ಇನ್ನಿಲ್ಲದಂತೆ ಪ್ರಯತ್ನಿಸಿದ್ದರು.

ಇತ್ತೀಚೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಿರುವನಂತಪುರಕ್ಕೆ ಬಂದಿದ್ದಾಗ ನಂಬಿ ನಾರಾಯಣನ್ ಅವರನ್ನು ಭೇಟಿಯಾಗಿದ್ದರು. ಆಗ ಮೋದಿ ಇಸ್ರೊ ಪ್ರಕರಣದ ಕುರಿತು ನಂಬಿಯವರ ಬಳಿ ವಿಚಾರಿಸಿದರು. ಬೇಹುಗಾರಿಕಾ ಪ್ರಕರಣದಲ್ಲಿ ಅಮೆರಿಕದ ಸಂಶಯಾಸ್ಪದ ಪಾತ್ರವಿದೆ ಎಂಬುದನ್ನು ನಂಬಿ ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ‘ಈ ಪ್ರಕರಣದ ಬಗ್ಗೆ ನನ್ನ ಅಭಿಪ್ರಾಯ ಕೇಳಿದ ಮೊದಲ ಮುಖ್ಯಮಂತ್ರಿಯೆಂದರೆ ನರೇಂದ್ರ ಮೋದಿ. ಪ್ರಕರಣದ ಸಂದರ್ಭದಲ್ಲಿ ಆಗಿಹೋದ ಕೇರಳದ ಯಾವೊಬ್ಬ ಮುಖ್ಯಮಂತ್ರಿಯೂ ಈ ಪ್ರಕರಣದಬಗ್ಗೆ ನನ್ನ ಅಭಿಪ್ರಾಯ ಕೇಳುವ ಸೌಜನ್ಯವನ್ನೂ ತೋರಲಿಲ್ಲ’ ಎನ್ನುತ್ತಾರೆ ನಾರಾಯಣನ್. ಇಸ್ರೊ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಎಡಪಂಥೀಯ ಪಕ್ಷಗಳ ಶಾಮೀಲು ಇz ಇದೆ ಎನ್ನುವುದು ನಾರಾಯಣನ್ ಅವರ ಶಂಕೆ.

ಬರಲಿದೆ ಸ್ಫೋಟಕ ಕೃತಿ

ಭಾರತ ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಬಾರದು ಎಂಬ ಕಾರಣಕ್ಕಾಗಿ ಈ ಪ್ರಕರಣವನ್ನು ಹುಟ್ಟು ಹಾಕಲಾಯಿತೆ? ಅಮೆರಿಕದ ಕೈವಾಡ ಈ ಪ್ರಕರಣದ ಹಿಂದೆ ಇತ್ತೆ? ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಗಬೇಕಾಗಿದೆ. ಆದರೆ ಉತ್ತರಿಸುವವರು ಯಾರು? ಇಸ್ರೊ ಬೇಹುಗಾರಿಕಾ ಪ್ರಕರಣದ ಕುರಿತು ಇದೀಗ ನಂಬಿ ನಾರಾಯಣನ್ ಪುಸ್ತಕವೊಂದನ್ನು ರಚಿಸುತ್ತಿದ್ದಾರೆ. ಬೇಹುಗಾರಿಕಾ ಪ್ರಕರಣದ ಸುತ್ತ ನಡೆದಿರಬಹುದಾದ ವಿದ್ಯಮಾನಗಳು ಈ ಕೃತಿಯಲ್ಲಿ ಅನಾವರಣಗೊಂಡಿವೆ. ಇಸ್ರೊ ಬೇಹುಗಾರಿಕಾ ಪ್ರಕರಣ ವಿಕಾಸವಾಗಿದ್ದು ಹೇಗೆ, ಏಕೆ ನಡೆಯಿತು, ಯಾರು ಯಾರಿಗಾಗಿ ಇದನ್ನು ಮಾಡಿದರು – ಇದು ಪುಸ್ತಕದ ಮೊದಲನೇ ಭಾಗವಾಗಿದ್ದರೆ, ಎರಡನೇ ಭಾಗದಲ್ಲಿ ಉಳಿದ ರಾಜಕೀಯ ಮೇಲಾಟದ ಕಥೆಯಿದೆ ಎನ್ನುತ್ತಾರೆ ನಾರಾಯಣನ್. ಇಂಗ್ಲಿಷ್‌ನಲ್ಲಿ ಈಗಾಗಲೇ ಈ ಪುಸ್ತಕ ಹೆಚ್ಚು ಕಡಿಮೆ ಮುಕ್ತಾಯವಾಗಿದ್ದು, ಮಲೆಯಾಳಂನಲ್ಲೂ ಇದನ್ನು ಪ್ರಕಟಪಡಿಸುವ ಇರಾದೆ ಅವರದ್ದು. ಇಂಗ್ಲಿಷ್‌ನಿಂದ ಮಲೆಯಾಳಂಗೆ ತಾನೇ ಭಾಷಾಂತರಿಸಬಹುದಿತ್ತು. ಆದರೆ ಅದು ಮೂಲ ಮಲೆಯಾಳಂನಲ್ಲೇ ಬರೆದಷ್ಟು ಚೆನ್ನಾಗಿರುವುದಿಲ್ಲ ಎನ್ನುವುದು ನಂಬಿಯವರ ಅಭಿಮತ.

ಅದೇನೇ ಇರಲಿ, ವಿಕ್ರಂ ಸಾರಾಭಾಯ್, ಸತೀಶ್ ಧವನ್ ಹಾಗೂ ಯು.ಆರ್.ರಾವ್ ಅವರಂಥ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಲ್ಲಬಹುದಾದ ನಂಬಿ ನಾರಾಯಣನ್ ಅವರ  ಪುಸ್ತಕ ಹೊರಗೆ ಬಂದರೆ, ಅದು ಸ್ಫೋಟಿಸುವ ಕಹಿ ಸತ್ಯಗಳು ಎಂತಹದಿರಬಹುದು? ಇಸ್ರೊ ಬೇಹುಗಾರಿಕಾ ಪ್ರಕರಣದ ಹಿಂದೆ ಇರಬಹುದಾದ ಕ್ಷುಲ್ಲಕ ರಾಜಕೀಯ, ಷಡ್ಯಂತ್ರ, ಭಾರತ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಲೇಬಾರದೆಂಬ ಅಮೆರಿಕದ ಹಪಾಹಪಿ ಎಲ್ಲವೂ ಬಯಲಾಗಬಹುದು. ಹಲವು ಗಣ್ಯರ ರಾಜಕೀಯ ಭವಿಷ್ಯಕ್ಕೂ ಕುತ್ತು ತರಬಹುದು. ಆದರೆ ಸತ್ಯವಂತೂ ಬಯಲಾಗುತ್ತದೆ. ಭಾರತದ ಶ್ರೇಷ್ಠ ವಿಜ್ಞಾನಿಯೊಬ್ಬನ ಮೇಲೆ ಬಂದೆರಗಿದ ಕಳಂಕದ ನೈಜ ಕಥೆ ಸಾರ್ವಜನಿಕರಿಗೆ ತಿಳಿಯುತ್ತದೆ.

ನಂಬಿ ನಾರಾಯಣನ್ ಅವರ ಪರಿಶ್ರಮದಿಂದಾಗಿ ಭಾರತ ಈಗ ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿರುವುದು ಹೆಗ್ಗಳಿಕೆಯ ವಿಚಾರ. ಭಾರತ ಈ ತಂತ್ರಜ್ಞಾನವನ್ನು ಮಿಲಿಟರಿ ಉzಶಕ್ಕೆ ಬಳಸದೆ ಸಂವಹನ ಮತ್ತಿತರ ಶಿಕ್ಷಣ ಹಾಗೂ ವೈದ್ಯಕೀಯ ಉzಶಕ್ಕೆ ಬಳಸಿರುವುದು ಈ ದೇಶದ ಸತ್ಪರಂಪರೆಯ ದ್ಯೋತಕ. ತಂತ್ರಜ್ಞಾನವನ್ನು ಉತ್ತಮ ಉzಶಗಳಿಗೆ ಹೇಗೆ ಬಳಸಬಹುದು ಎಂಬುದನ್ನು ಭಾರತ ಈಗ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಅಷ್ಟೇ ಅಲ್ಲ, ಕಡಿಮೆ ವೆಚ್ಚದಲ್ಲಿ ಅದನ್ನು ಹೇಗೆ ಸಾಧಿಸಬಹುದು ಎಂಬುದಕ್ಕೂ ಭಾರತವೇ ಈಗ ಮೇಲ್ಪಂಕ್ತಿ. ಬಲಿಷ್ಠ ದೇಶಗಳ ತಂತ್ರಜ್ಞಾನದ ಏಕಸ್ವಾಮ್ಯವನ್ನು ಭಾರತ ಮುರಿದಿರುವುದಂತೂ ನಿಜ. ಅಮೆರಿಕ ಇದನ್ನು ಹೇಗೆ ಜೀರ್ಣಿಸಿಕೊಳ್ಳುತ್ತದೆಯೋ ಕಾದು ನೋಡಬೇಕು.

 

Leave a Reply

Your email address will not be published.

This site uses Akismet to reduce spam. Learn how your comment data is processed.