ಸಾಹಿತಿ ರಾಂಟೆಕೆ Writer Ramteke

By ದು.ಗು.ಲಕ್ಷ್ಮಣ

ದೇಶಕ್ಕಾಗಿ ಸಂಘದ ಈ ಪಾಠವನ್ನು ಮೈಗೂಡಿಸಿಕೊಂಡ ಸ್ವಯಂಸೇವಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಯಾರಪ್ಪಣೆ, ಆದೇಶಗಳೂ ಬೇಕಾಗುವುದಿಲ್ಲ. ದುರಂತ ನಡೆದ ಸ್ಥಳಕ್ಕೆ ತಲುಪಲು ಅವರಿಗೆ ಯಾವ ವಾಹನ ವ್ಯವಸ್ಥೆಯೂ ಬೇಕಾಗುವುದಿಲ್ಲ. ಸಂತ್ರಸ್ತರಿಗೆ ನೆರವು ನೀಡುತ್ತಾ ಅಕಸ್ಮಾತ್ ಸ್ವಂತ ಪ್ರಾಣಕ್ಕೆ ಕುತ್ತೊದಗಿದರೂ ಅವರು ಹೆದರುವುದಿಲ್ಲ. ರಾಂಟೆಕೆಯಂತಹ ಕಟ್ಟರ್ ಸಂಘ ವಿರೋಧಿಗಳೂ ಸಂಘವನ್ನು ಅಭಿಮಾನದಿಂದ ಮೆಚ್ಚಿಕೊಳ್ಳುವುದು ಇದೇ ಕಾರಣಕ್ಕಾಗಿ.

**************

ನಾನು ಕಟ್ಟರ್ ಅಂಬೇಡ್ಕರ್‌ವಾದಿ. ಎಷ್ಟೆಂದರೆ ಅಂಬೇಡ್ಕರ್ ಅವರನ್ನು ನಾನು ಆಧುನಿಕ ಬುದ್ಧ ಎಂದೇ ಭಾವಿಸುತ್ತೇನೆ. ನಾನು ಆರೆಸ್ಸೆಸ್‌ನ ಕಟ್ಟರ್ ವಿರೋಧಿ. ಎಷ್ಟೆಂದರೆ ಇವತ್ತಿನವರೆಗೆ ನಾನು ಆ ಖಾಕಿ ನಿಕ್ಕರ್‌ಗೆ ಎಂದೂ ನಿಕ್ಕರ್ ಎಂದು ಹೇಳಿಲ್ಲ. ಅದನ್ನು ಚಡ್ಡಿ ಎಂದೇ ಸಂಬೋಧಿಸುವೆ.

ಸಾಹಿತಿ ರಾಂಟೆಕೆ Writer Ramteke
ಸಾಹಿತಿ ರಾಂಟೆಕೆ
Writer Ramteke

ಉತ್ತರಾಖಂಡ ದುರ್ಘಟನೆ ಸಂಭವಿಸಿತು. ಕೆಲವೇ ಗಂಟೆಗಳಲ್ಲಿ ಖಾಕಿ ಚಡ್ಡಿಗಳು ಸೇವೆಗಾಗಿ ಹಾಜರಾಗಿದ್ದವು. ಈ ಆರೆಸ್ಸೆಸ್ ಬಗ್ಗೆ ಉಳಿದದ್ದು ಏನೇ ಇರಲಿ, ಆದರೆ ಸೇವೆಯ ಬಗೆಗಿರುವ ಅವರ ಕಾಳಜಿ ಹಾಗೂ ವ್ಯವಸ್ಥೆ ಮೆಚ್ಚುವಂತಹದೇ. ಎಲ್ಲೇ ಅನಾಹುತ ಸಂಭವಿಸಿದರೂ ಖಾಕಿ ಚಡ್ಡಿ ಎಲ್ಲರಿಗಿಂತ ಮುಂಚೆ ಅಲ್ಲಿಗೆ ಧಾವಿಸಿ ಸಹಾಯಹಸ್ತ ನೀಡುತ್ತದೆ. ಅದು ಲಾತೂರ್ ಭೂಕಂಪ ಇರಲಿ, ಗುಜರಾತಿನ ಭೂಕಂಪವಿರಲಿ, ತ್ಸುನಾಮಿಯ ಹೊಡೆತವಿರಲಿ ಅಲ್ಲಿ ಖಾಕಿ ಚಡ್ಡಿ ಹಾಜರ್. ಭಾರತೀಯ ಸೈನ್ಯದ ಹೆಗಲಿಗೆ ಹೆಗಲು ಕೊಟ್ಟು ಈ ಚಡ್ಡಿಗಳು ಸಹಾಯ ಮಾಡುತ್ತಾರೆ. ಇದೆಲ್ಲ ಇವರಿಗೆ ಹೇಗೆ ಸಾಧ್ಯ? ಉತ್ತರ ಸರಳವಾಗಿದೆ. ಸಂಘ ದೇಶಾದ್ಯಂತ ಹಬ್ಬಿದೆ. ಸಂಘದ ಕಾರ್ಯಾಲಯವಿಲ್ಲದ ಅಥವಾ ಕಾರ್ಯಕರ್ತನಿಲ್ಲದ ತಾಲೂಕು ದೇಶದಲ್ಲಿ ಇರಲಿಕ್ಕಿಲ್ಲ. ಇದಕ್ಕೂ ಮಹತ್ವದ ವಿಷಯವೇನೆಂದರೆ ದುರಂತಗಳು ನಡೆದಾಗ ಈ ಸಂಘದವರು ಸಹಾಯ ನೀಡಲು ಧಾವಿಸಿ ಬರುತ್ತಾರೆ. ಇದು ಪ್ರತೀ ಬಾರಿಯೂ ಗುರುತಿಸಬಹುದಾದ ಸಂಗತಿ. ಇವರ ಹಿಂದುತ್ವದ ಬಗ್ಗೆ ಎಷ್ಟೇ ಸಿಟ್ಟು ಇದ್ದರೂ ಇವರ ಈ ನಿಸ್ವಾರ್ಥ ಸೇವಾ ಗುಣವನ್ನು ಮಾತ್ರ ಮೆಚ್ಚಲೇಬೇಕು.

ಈಗ ಉತ್ತರಾಖಂಡದ ಘಟನೆಯನ್ನೇ ತೆಗೆದುಕೊಳ್ಳಿ. ಭಾರತದ ಅತ್ಯಂತ ದುರ್ಗಮ ಬೆಟ್ಟ ಗುಡ್ಡಗಳ ಭಾಗದಲ್ಲಿ ಸೇನೆಯ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವ ಸ್ವಯಂಸೇವಕರು ಕಾಣಸಿಗುತ್ತಾರೆ. ದೇಶದ ಇತರ ಅನೇಕ ಸಂಘಟನೆಗಳ ಸ್ವಯಂಸೇವಕರು ನೆರವು ನೀಡಲು ಅಲ್ಲಿಗೆ ತಲುಪಿದರು. ಆದರೆ ಸಂಘದ ಸ್ವಯಂಸೇವಕರು ಮಾತ್ರ ಎಲ್ಲರಿಗಿಂತ ಮೊದಲು ಅಲ್ಲಿ ಹಾಜರಿದ್ದರು.

ಹೀಗೆ ಒಟ್ಟಾರೆ ದಿನ ಪತ್ರಿಕೆಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ – ಸ್ಥಾನೀಯ ಸಂಘದ ಸ್ವಯಂಸೇವಕರು ಮುಂದಾಳತ್ವವಹಿಸಿ ಸೇವಾಕಾರ್ಯ ಪ್ರಾರಂಭಿಸಿದ್ದರು. ಹೊರ ಊರಿನಿಂದ ಬಂದ ಸ್ವಯಂಸೇವಕರು ಜೊತೆಗೆ ಸೇರಿಕೊಂಡರು. ಆದರೆ ಅಲ್ಲಿಯವರೆಗೆ ಕೆಲಸದ ಪ್ರಾರಂಭದಲ್ಲೇನೂ ವಿಳಂಬವಾಗಲಿಲ್ಲ. ಪರಿಹಾರ ಕಾರ್ಯ ತಕ್ಷಣ ಪ್ರಾರಂಭವಾಯಿತು. ಇತರ ಸಂಘಟನೆಗಳಿಗೂ ಇವರಿಗೂ ವ್ಯತ್ಯಾಸವಿರುವುದು ಇಲ್ಲೇ. ಇತರರ ಸೇವೆ ತಲುಪುವ ಹೊತ್ತಿಗೆ ಸಮಯ ಕಳೆದು ಹೋಗಿರುತ್ತದೆ. ಆದರೆ ನಿಜವಾಗಿಯೂ ಸಂಘದ ಸೇವೆ ಮಾತ್ರ ಬಲುಬೇಗ ಉಪಲಬ್ಧವಾಗುತ್ತದೆ. ಈ ಸತ್ಯವನ್ನು ನಿರಾಕರಿಸಲಾಗದು. ಅದಕ್ಕಾಗಿ ಸಂಘವನ್ನು ಮೆಚ್ಚಲೇಬೇಕು…”

ಪುಣೆಯ ದಲಿತ ಸಾಹಿತಿ, ಸಂಘದ ಕಟ್ಟರ್ ವಿರೋಧಿ ಎಂ.ಡಿ.ರಾಂಟೆಕೆ ಇತ್ತೀಚೆಗೆ ಮರಾಠಿ ಪತ್ರಿಕೆಗಳಾದ ‘ವಿಜಯಂತ್’ ಹಾಗೂ ‘ವೀರವಾಣಿ’ಯಲ್ಲಿ ಇಂತಹದೊಂದು ಲೇಖನ ಬರೆದಿದ್ದಾರೆ. ತಮ್ಮ ಬ್ಲಾಗ್‌ನಲ್ಲೂ ಇದನ್ನು ಬರೆದುಕೊಂಡಿದ್ದಾರೆ. ಚಿಕ್ಕಂದಿನಿಂದ ಸಂಘವನ್ನು, ಸಂಘದ ಕಾರ್ಯವನ್ನು, ಸಂಘದ ಕಾರ್ಯಕರ್ತರನ್ನು ಹತ್ತಿರದಿಂದಲೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವರು, ಕಾರ್ಯಕರ್ತರ ಪ್ರಾಮಾಣಿಕತೆ, ನಿಸ್ಪೃಹ ಸೇವಾಭಾವನೆಯನ್ನು ಕಂಡು ಮಾರು ಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ಸಂಘ ಪರಿವಾರದ ವನವಾಸಿ ಆಶ್ರಮ ನಡೆಸುತ್ತಿರುವ ಶಾಲೆಗಳು, ವಸತಿ ಗೃಹಗಳಲ್ಲಿರುವ ಅಚ್ಚುಕಟ್ಟಾದ ವ್ಯವಸ್ಥೆ, ಕಾಡಿನ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಅದ್ಭುತ ಪರಿ ಕಂಡು ಅವರು ಮಾರು ಹೋಗಿದ್ದಾರೆ. ಅವರ ಸ್ವಂತ ಊರಾದ ಆಹೇರಿಗೆ ಇತ್ತೀಚೆಗೆ ಅವರು ಹೋಗಿ ಸ್ನೇಹಿತರನ್ನು ವಿಚಾರಿಸಿದಾಗ, ಅಲ್ಲಿನ ಸಂಘದ ಅನೇಕ ಸ್ವಯಂಸೇವಕರು ಉತ್ತರಾಖಂಡಕ್ಕೆ ಧಾವಿಸಿರುವ ವಿಚಾರ ಗೊತ್ತಾಗಿದೆ. ಸಂಘಕ್ಕೆ ದೇಣಿಗೆ ನೀಡಿದರೆ ಅದು ಸಂಪೂರ್ಣ ಸದುಪಯೋಗವಾಗುತ್ತದೆ ಎಂಬ ನಂಬಿಕೆ ಸಂಘದ ಕಟ್ಟರ್ ವಿರೋಧಿಯಾಗಿರುವ ರಾಂಟೆಕೆ ಅವರದು. ಸಂಘಕ್ಕೆ ೧೦೦ ರೂ. ಕೊಟ್ಟರೆ ಅದು ಸಂತ್ರಸ್ತರಿಗೆ ೧೦೫ ರೂ. ಆಗಿ ನೇರವಾಗಿ ತಲುಪುತ್ತದೆ ಎಂದವರು ತಮ್ಮ ಲೇಖನದಲ್ಲಿ ಬಣ್ಣಿಸಿದ್ದಾರೆ. ಸಂಘ ವಿರೋಧಿಯಾದ ಅವರು ಮೊದಲು ಸಂಘದ ಖಾಕಿ ನಿಕ್ಕರ್‌ಗೆ ‘ಚಡ್ಡಿ’ ಎಂದೇ ಗೇಲಿ ಮಾಡುತ್ತಿದ್ದರು. ಆದರೀಗ ಅದನ್ನು ‘ಖಾಕಿ ನಿಕ್ಕರ್’ ಎಂದು ಕರೆಯಲು ಅಭಿಮಾನವೆನಿಸುತ್ತದೆ ಎನ್ನುತ್ತಾ ಆ ಲೇಖನವನ್ನು ಮುಕ್ತಾಯಗೊಳಿಸಿದ್ದಾರೆ.

ರಾಂಟೆಕೆ ಒಬ್ಬರೇ ಅಲ್ಲ, ಸಂಘವನ್ನು ಸೈದ್ಧಾಂತಿಕ ಕಾರಣಗಳಿಗಾಗಿ  ವಿರೋಧಿಸುವ ಅನೇಕ ಗಣ್ಯರು ಸಂಘದ ಸೇವಾ ಮನೋಭಾವನೆ, ಮಾನವೀಯ ಸಂವೇದನೆಗಳನ್ನು ಕಂಡು ಬೆರಗಾಗುತ್ತಾರೆ. ಇಂತಹ ಹೃದಯವಂತಿಕೆ, ವಿಶಾಲ ಭಾವನೆ ಸ್ವಯಂಸೇವಕರಲ್ಲಿ ಮೈತಾಳುವುದಾದರೂ ಹೇಗೆ ಎಂಬ ಆಶ್ಚರ್ಯ ಅವರೆಲ್ಲರದು. ಆ ಪ್ರಶ್ನೆಗೆ ಮಾತ್ರ ಅವರಿಗೆ ಉತ್ತರ ದೊರಕುತ್ತಿಲ್ಲ.

ಸಂಘವನ್ನು ಸೈದ್ಧಾಂತಿಕ ಕಾರಣಗಳಿಗಾಗಿ ಕಟುವಾಗಿ ವಿರೋಧಿಸುತ್ತಿದ್ದ ಸಮಾಜವಾದಿ, ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರೂ ಕೂಡ ಸಂಘದ ಸೇವಾ ಭಾವನೆಗೆ ಮಾರು ಹೋಗಿದ್ದರು. ಪ್ರಾಕೃತಿಕ ದುರಂತಗಳು ಸಂಭವಿಸಿದಾಗ ಸಂಘದ ಸ್ವಯಂಸೇವಕರು ಯಾರ ಸೂಚನೆಗೂ ಕಾಯದೆ, ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ, ಕೆಲವೊಮ್ಮೆ ಗಂಡಾಂತರವನ್ನು ಮೈಮೇಲೆಳೆದುಕೊಂಡು ದುರಂತದ ಸ್ಥಳಕ್ಕೆ ಧಾವಿಸಿ, ಅಲ್ಲಿ ನೊಂದವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಪರಿಯನ್ನು ಕಂಡು ಅವರೂ ಕೂಡ ಬೆರಗಾಗಿದ್ದರು. ಆರೆಸ್ಸೆಸ್ ಎಂದರೆ ಖeಚಿಜಥಿ ಜಿoಡಿ Seಟಜಿಟess Seಡಿviಛಿe ಎಂದು ಉದ್ಗರಿಸಿದವರು ಅದೆಷ್ಟೋ ಮಂದಿ. ಇವರ‍್ಯಾರೂ ಮೊದಲು ಸಂಘದ ಪರವಾಗಿರಲಿಲ್ಲ.

ಇತ್ತೀಚೆಗೆ ಉತ್ತರಾಖಂಡ ದುರಂತ ಸಂಭವಿಸಿದಾಗ ಸಂಘದ ಸ್ವಯಂಸೇವಕರ ಈ ಸೇವಾ ಮನೋಭಾವ ಮತ್ತೊಮ್ಮೆ ಅನಾವರಣಗೊಂಡಿತು. ಹಿಂದಿನಂತೆಯೇ ಮತ್ತೆ ಸ್ವಯಂಸೇವಕರು ದುರಂತದ ಸ್ಥಳಕ್ಕೆ ಎಲ್ಲರಿಗಿಂತ ಮೊದಲು ಧಾವಿಸಿದರು. ಸಂತ್ರಸ್ತರನ್ನು ಸಂತೈಸಿದರು. ಹೀಗೆ ಮಾಡಬೇಕೆಂದು ಅವರಿಗೆ ಸಂಘದ ನಾಯಕರಾಗಲೀ ಸರ್ಕಾರವಾಗಲೀ ಆದೇಶವನ್ನೇನೂ ನೀಡಿರಲಿಲ್ಲ. ಅಲ್ಲದೆ, ಹೀಗೆ ಮಾಡಿದರೆ ಅದಕ್ಕೆ ಸೂಕ್ತ ಪ್ರತಿಫಲ ಅಥವಾ ಸಂಭಾವನೆ ಸಿಗುತ್ತದೆಂಬ ಆಸೆಯಿಂದ ಅವರು ದುರಂತದ ಸ್ಥಳಕ್ಕೆ ಧಾವಿಸಿದ್ದೂ ಅಲ್ಲ. ದುರಂತ ನಡೆದಾಗ  ಹೀಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂಬುದಷ್ಟೇ ಸ್ವಯಂಸೇವಕರಲ್ಲಿ ಆ ಕ್ಷಣದಲ್ಲಿದ್ದ ನಿಷ್ಕಾಮ ಕರ್ಮದ ಭಾವನೆ.

ಉತ್ತರಾಖಂಡದಲ್ಲಿ ಜಲ ಪ್ರಳಯದ ದುರಂತ ಸಂಭವಿಸಿದ್ದು ಜೂ.೧೭ರಂದು. ಸಂಘದ ಕಡೆಯಿಂದ ಪರಿಹಾರ ಕಾರ್ಯ ಆರಂಭವಾಗಿದ್ದೂ ಕೂಡ ಅದೇ ದಿನದಿಂದ.ಗೌರಿಕುಂಡ ಮತ್ತು ಬದರೀನಾಥ ಹೆಲಿಪ್ಯಾಡ್‌ಗಳಲ್ಲಿ ಸಂಘದ ಕಾರ್ಯಕರ್ತರು ಯಾತ್ರಿಕರನ್ನು ಹೆಲಿಕ್ಯಾಪ್ಟರ್‌ಗೆ ಹತ್ತಿಸುವ, ಇಳಿಸುವ ವ್ಯವಸ್ಥೆ ಮಾಡಲು ಸೈನ್ಯಕ್ಕೆ ಸಹಕಾರ ನೀಡಿದರು. ಎಲ್ಲಕ್ಕೂ ಮೊದಲು ಕೇದಾರ ಘಾಟಿಯಲ್ಲಿ ಜೂ.೧೭ರಂದೇ ಸಂಘದ ಕಾರ್ಯಕರ್ತ, ಪಿನೇಕಲ್ ಏವಿಯೇಷನ್ ಕಂಪೆನಿಯ ಬೇಸ್‌ಮ್ಯಾನೇಜರ್ ಬ್ರಜ್ ಮೋಹನ್ ಹಾಗೂ ಪ್ರಭಾತ್ ಏವಿಯೇಷನ್ ಕಂಪೆನಿಯ ಬೇಸ್ ಮ್ಯಾನೇಜರ್ ಯೋಗೇಂದ್ರ ರಾಣಾ ಇವರು ಹೆಲಿಕಾಪ್ಟರ್‌ನಿಂದ ಹಗ್ಗದ ಮೂಲಕ ಕೆಳಗೆ ಜಿಗಿದು ಕೇದರಾನಾಥ, ರಾಮಬಾಡ ಮತ್ತು ಜಂಗಲ್‌ಚೆಟ್ಟಿಯಲ್ಲಿ ಹೆಲಿಪ್ಯಾಡ್ ನಿರ್ಮಿಸಿದರು. ಸಂಜಯ್ ರಾವತ್ ಎಂಬ ಸ್ವಯಂಸೇವಕ ಮರವನ್ನು ಕಡಿದು ನದಿಗೆ ಸೇತುವೆ ನಿರ್ಮಿಸಿ, ತ್ರಿಯುಗೀ ನಾರಾಯಣ, ಸೋನಪ್ರಯಾಗ ಮೊದಲಾದ ಗ್ರಾಮಗಳ ಸುಮಾರು ೧,೬೦೦ ಯಾತ್ರಿಕರ ಪ್ರಾಣ ಉಳಿಸಲು ನೆರವಾದ. ಜೋಶಿ ಮಠದ ಸರಸ್ವತೀ ಶಿಶು ವಿದ್ಯಾಕೇಂದ್ರದಲ್ಲಿ ಆರೆಸ್ಸೆಸ್‌ನ ಸಹಾಯತಾ ಕೇಂದ್ರ ತೆರೆದು ಅಲ್ಲಿ ಸುಮಾರು ೮೦೦ ಯಾತ್ರಿಕರಿಗೆ ವಸತಿ ಸೌಲಭ್ಯ ಹಾಗೂ ೧,೬೦೦ ಯಾತ್ರಿಕರಿಗೆ ಭೋಜನ ವ್ಯವಸ್ಥೆ ಮಾಡಲಾಯಿತು. ಭಿಯುಡಾಂಡ್ ಗ್ರಾಮದ ೯೯ ಕುಟುಂಬಗಳ ೪೨೫ ಜನರಿಗೆ ಪರಿಹಾರ ಸಾಮಗ್ರಿ ಮೊದಲು ದೊರೆತಿದ್ದು ಸಂಘದ ಕಡೆಯಿಂದ. ಜೋಶಿ ಮಠದಲ್ಲಿ ಉಳಿದೆಲ್ಲ ಸಂಘ ಸಂಸ್ಥೆಗಳಿಗಿಂತ ಮೊದಲು ಪರಿಹಾರ ಕಾರ್ಯ ಆರಂಭವಾಗಿದ್ದು ಸಂಘ ತೆರೆದ ಕೇಂದ್ರಗಳಲ್ಲಿ.

Adithya Jaalan College Raanchi
Adithya Jaalan College Raanchi

 ಬೆಲೆ ಕಟ್ಟಲಾಗದ ಸೇವೆ

ಒಂದೆಡೆ ಸಂಘದ ಕಾರ್ಯಕರ್ತರು ಶರವೇಗದಲ್ಲಿ ಪ್ರವಾಹಕ್ಕೀಡಾದ ಸಂತ್ರಸ್ತರಿಗೆ ಈ ಪರಿ ಸೇವೆ, ಸಹಾಯ ಸಲ್ಲಿಸುತ್ತಿದ್ದರೆ ಇನ್ನೊಂದೆಡೆ ಕೇಂದ್ರ ಸರ್ಕಾರ ಹಾಗೂ ಉತ್ತರಾಖಂಡ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯವಹಿಸಿ ಚಿಲ್ಲರೆ ರಾಜಕಾರಣದಲ್ಲಿ ತೊಡಗಿತ್ತು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಉತ್ತರಾಖಂಡಕ್ಕೆ ಧಾವಿಸಿ ಬಂದಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಚರ್ಚೆಯ ಮುಖ್ಯ ಅಂಶವಾಗಿತ್ತು. ಮೋದಿ ನೀಡುವ ಯಾವುದೇ ಕೊಡುಗೆ ಸ್ವೀಕರಿಸಬಾರದೆಂಬ ಪತ್ರಿಕಾ ಹೇಳಿಕೆ ನೀಡುವುದೇ ರಾಜ್ಯ ಸರ್ಕಾರದ ಆದ್ಯತಾ ಕಾರ್ಯಕ್ರಮವಾಗಿತ್ತು. ಆದರೆ ಸಂಘದ ಸ್ವಯಂಸೇವಕರು ಇಂತಹ ಚಿಲ್ಲರೆ ರಾಜಕೀಯಕ್ಕಾಗಿ ತಲೆ ಕೆಡಿಸಿಕೊಳ್ಳದೆ ಉತ್ತರಾಖಂಡದ ಉಳಿದ ಭಾಗಗಳಲ್ಲಿ ಸಂತ್ರಸ್ತರಾದವರನ್ನು ಸಂತೈಸುವ ಕಾರ್ಯದಲ್ಲಿ ತೊಡಗಿದ್ದರು. ಸ್ವಯಂಸೇವಕರು ಆ ಸಂದರ್ಭದಲ್ಲಿ ಮಾಡಿದ ಸೇವೆ, ಕೈಗೊಂಡ ಕಾರ್ಯಗಳಿಗೆ ಎಂತಹ ಬೆಲೆಯನ್ನೂ ಕೂಡ ಕಟ್ಟಲಾಗದು. ಹೈದರಾಬಾದಿನ ಹೃದಯಾಘಾತಕ್ಕೀಡಾದ ರೋಗಿಯೊಬ್ಬರನ್ನು ಸ್ವಯಂಸೇವಕರು ಮಂಜಗಾಂವ್‌ನಿಂದ ಮನೇರಿವರೆಗೆ ೬ ಕಿ.ಮೀ. ದೂರ ಹೆಗಲ ಮೇಲೆ ಹೊತ್ತು ತಂದು,  ಚಿಕಿತ್ಸೆ ವ್ಯವಸ್ಥೆ ಮಾಡಿದರು. ಆ ಕುಟುಂಬದವರು ಹೀಗೆ ಸೇವೆ ಸಲ್ಲಿಸಿದ ಸ್ವಯಂಸೇವಕರಿಗೆ ತಲಾ ೫೦೦ ರೂ. ಬಹುಮಾನ ನೀಡಿದಾಗ ಅದನ್ನವರು ಸ್ವೀಕರಿಸಲಿಲ್ಲ. ೧೪ ವರ್ಷದ ಶಿವಾಜಿ ಎಂಬ ಕಿಶೋರ ಕಾರ್ಯಕರ್ತ ಅಸ್ವಸ್ಥ ಯಾತ್ರಿಕರನ್ನು ತನ್ನ ಸ್ಕೂಟರಿನಲ್ಲಿ ಡಾಕ್ಟರ್ ಬಳಿ ಒಯ್ಯುವ ಕೆಲಸದಲ್ಲಿ ನಿರತನಾಗಿದ್ದ. ೩೫ ಯಾತ್ರಿಕರ ಮಕ್ಕಳನ್ನು ಹೊತ್ತೊಯ್ಯುವ ಕೆಲಸವನ್ನು ಸುರೇಂದ್ರ ಎಂಬ ಸಂಘದ ಕಾರ್ಯಕರ್ತ ನಿರ್ವಹಿಸಿದ್ದ.

ಆದರೆ ಸ್ವಯಂಸೇವಕರು ತಮ್ಮ ಪ್ರಾಣವನ್ನು ಪಣವಾಗಿಟ್ಟು ನಿರ್ವಹಿಸಿದ ಈ ಸೇವೆಯ ವಿವರಗಳು ಯಾವುದೇ ಮಾಧ್ಯಮಗಳಲ್ಲಿ ಪ್ರಕಟವಾಗಲಿಲ್ಲ. ಸಣ್ಣ ಪುಟ್ಟ ಸಂಘ ಸಂಸ್ಥೆಗಳು ಸರ್ಕಾರದ ನೆರವಿನಿಂದ ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ಗಿಡ ನೆಡುವ, ವನಮಹೋತ್ಸವ ಆಚರಿಸುವ ಅಥವಾ ದೊಡ್ಡ ಐಟಿ ಕಂಪೆನಿಗಳ ಉದ್ಯೋಗಿಗಳು ಬೆಂಗಳೂರಿನ ಯಾವುದೋ ಬಡಾವಣೆಯಲ್ಲಿ ಭಾನುವಾರ ಕಸ ಗುಡಿಸಿ ಸ್ವಚ್ಛ ಮಾಡುವ ದೃಶ್ಯಗಳನ್ನು ಮಾಧ್ಯಮಗಳು ವೈಭವೀಕರಿಸಿ ತೋರಿಸುತ್ತವೆ. ಉತ್ತರಾಖಂಡದಲ್ಲಿ ಸಂಘದ ಸ್ವಯಂಸೇವಕರು ನಿರ್ವಹಿಸಿದ ಈ ಸೇವಾ ಕಾರ್ಯಗಳ ಬಗ್ಗೆ ಒಂದಕ್ಷರ ಬರೆಯುವ ಅಥವಾ ಪ್ರಸಾರ ಮಾಡುವ ಔದಾರ್ಯ ಮಾತ್ರ ಮಾಧ್ಯಮಗಳಿಗೆ ಇರಲಿಲ್ಲ. ಏಕೆಂದರೆ ಮಾಧ್ಯಮಗಳ ದೃಷ್ಟಿಯಲ್ಲಿ ಸಂಘ ‘ಕೋಮುವಾದಿ’ ಸಂಘಟನೆ. ಸಂಘ ನಿಸ್ವಾರ್ಥ ಸೇವೆ ಸಲ್ಲಿಸಿದರೂ ಅದರ ಹಿಂದೆ ಏನೋ ಷಡ್ಯಂತ್ರ ಇರಬಹುದು ಎಂಬ ಗುಮಾನಿ ಮಾಧ್ಯಮಗಳಿಗೆ ಹಾಗೂ ರಾಜಕಾರಣಿಗಳಿಗೆ!

‘ನಮ್ಮದು ಡ್ಯೂಟಿ, ನಿಮ್ಮದು ನಿಸ್ವಾರ್ಥ ಸೇವೆ’

ಆದರೇನು, ಸಂಘದ ನಿಸ್ವಾರ್ಥ ಸೇವೆಯನ್ನು ಕಣ್ಣಾರೆ ಕಂಡ ಸೈನಿಕರು ಮಾತ್ರ ಸ್ವಯಂಸೇವಕರನ್ನು ಕೊಂಡಾಡಿದರು. ಸಂಘ ನಿರ್ವಹಿಸುತ್ತಿದ್ದ ಮನೇರಿಯ ಸೇವಾಶ್ರಮಕ್ಕೆ ಬಂದು ಎಲ್ಲ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ ಸೈನ್ಯಾಧಿಕಾರಿ ಕರ್ನಲ್ ವಿನೋದ್ ಪಾಂಡೆ ಹೇಳಿzನು ಗೊತ್ತೆ: ‘ನಮ್ಮದಂತೂ ಡ್ಯೂಟಿ ಇತ್ತು. ಆದರೆ ನಿಮ್ಮದು ನಿಸ್ವಾರ್ಥ ಸೇವೆ.’ ಚಿನ್ಯಾಲಿಸೌಡ್ ಎಂಬ ಪ್ರದೇಶದಲ್ಲಿ ಪರಿಹಾರ ಕಾರ್ಯ ಮುಗಿಸಿ ಮರಳುವ ಸಂದರ್ಭದಲ್ಲಿ ಕ್ಯಾಪ್ಟನ್ ಎಸ್.ಕೆ.ಯಾದವ್ ಸಂಘದ ಪರಿಹಾರ ಶಿಬಿರಕ್ಕೆ ಬಂದು ಅಲ್ಲಿದ್ದ ಕಾರ್ಯಕರ್ತರೊಂದಿಗೆ ಭಾವಚಿತ್ರ ತೆಗೆಸಿಕೊಂಡರು. ‘ಸೇವೆಯ ಇಂತಹ ನಿದರ್ಶನವನ್ನು ನಾನೆಂದೂ ಕಂಡಿರಲಿಲ್ಲ. ಈ ಭಾವಚಿತ್ರವನ್ನು ಇತರರಿಗೆ ಪ್ರೇರಣೆ ಸಿಗಲೆಂದು ನನ್ನ ಕಚೇರಿಯಲ್ಲಿ ಹಾಕುವೆ’ ಎಂದವರು ಹೇಳಿದ್ದರು. ಆ ಶಿಬಿರಕ್ಕೆ ಕಾಂಗ್ರೆಸ್ ನಾಯಕ, ಕೇಂದ್ರ ಸಚಿವ ಹರೀಶ್ ರಾವಲ್ ಸಹ ಬಂದಿದ್ದರು. ಸಂಘದ ನಿಸ್ವಾರ್ಥ ಪರಿಹಾರ ಕಾರ್ಯಗಳನ್ನು ಗಮನಿಸಿದ ಅವರಿಗೂ ಸಂಘವನ್ನು ಪ್ರಶಂಸಿಸದೆ ಇರಲು ಸಾಧ್ಯವಾಗಲಿಲ್ಲ.

ಆರೆಸ್ಸೆಸ್ ಕಲಿಸಿದ ಪಾಠ

ತಮ್ಮ ತಂದೆಯೊಡನೆ ಕೇದಾರನಾಥಕ್ಕೆ ಬಂದಿದ್ದ ಅರ್ಜಿತ್, ಅವಿರಲ್ ಶಾಶ್ವತ್ ಎಂಬ ಇಬ್ಬರು ಸೋದರರು ದುರಂತದ ವೇಳೆ ೪೫೦ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ್ದರು. ಇವರು ಉಳಿದುಕೊಂಡಿದ್ದ ಹೊಟೇಲ್ ಕೋಣೆಗೆ ನೀರು ನುಗ್ಗಿ ಕಣ್ಣೆದುರೇ ಜೊತೆಗೆ ಬಂದಿದ್ದ ಸಂಬಂಧಿಕರು ಕೊಚ್ಚಿಕೊಂಡು ಹೋಗಿದ್ದರು. ಸ್ವಂತ ಚಿಕ್ಕಪ್ಪ, ಚಿಕ್ಕಮ್ಮ ಸೇರಿದಂತೆ ಹತ್ತಾರು ಜನರ ಮೃತ ಶರೀರಗಳು ಕಣ್ಣೆದುರೇ ಬಿದ್ದಿದ್ದವು. ಆದರೆ ಈ ಸೋದರರಿಗೆ ಕೇಳಿಸಿದ್ದು – ಪಕ್ಕದ ಕಟ್ಟಡದೊಳಗಿಂದ ಸಹಾಯಕ್ಕಾಗಿ ಆರ್ತನಾದ. ಟ್ರಕ್ಕಿಂಗ್ ಅಭ್ಯಾಸವಿದ್ದ ಅರ್ಜಿತ್ ಕಷ್ಟಪಟ್ಟು ೧೪ ಜನರನ್ನು ರಕ್ಷಿಸಿದ್ದ. ಜೂ.೧೮ರ ಮಧ್ಯಾಹ್ನ ಹೆಲಿಕ್ಯಾಪ್ಟರ್ ಬಂತು. ದೇವಸ್ಥಾನದ ಎದುರು ಈ ಸೋದರರು ನೆಲವನ್ನು ಸಮತಟ್ಟುಗೊಳಿಸಿದರೂ ಚಾಲಕ ನದಿಯ ಇನ್ನೊಂದು ಬದಿಯಲ್ಲಿ ಹೆಲಿಕ್ಯಾಪ್ಟರ್ ಅನ್ನು ಇಳಿಸಿದ್ದ. ಆಗ ಇವರು ಕೆಸರಿನೊಳಗೆ ಸಿಲುಕಿದ್ದ ಭಾರೀ ಮರಗಳ ತುಂಡುಗಳನ್ನು ಎಳೆದು ತಂದು ತೆಪ್ಪ ಕಟ್ಟಿ ಕಡಿಮೆ ಸೆಳೆತವಿರುವ ನದಿಯೊಳಗೆ ಹಾಕಿದರು. ದಪ್ಪದೊಂದು ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಂಡು, ಇನ್ನೊಂದು ತುದಿಯನ್ನು ಮರವೊಂದಕ್ಕೆ ಕಟ್ಟಿ ಶ್ರಮಪಟ್ಟು ಈ ಸೋದರರು ೪೫೦ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದರು. ಸ್ವಂತ ನೆಂಟರನ್ನು ಕಳೆದುಕೊಂಡ ದುಃಖ ಕಾಡುತ್ತಿದ್ದರೂ ಅದನ್ನು ಮರೆತು ನೊಂದವರ ಸೇವೆಗೆ ಧಾವಿಸಿದ ಅರ್ಜಿತ್, ಅವಿರಲ್ ಸೋದರರಿಗೆ ಹಾಗೆ ಮಾಡಬೇಕೆಂದು ಕಲಿಸಿಕೊಟ್ಟವರಾರು? ಅದೇ ಆರೆಸ್ಸೆಸ್! ಕೇದಾರಘಾಟ್‌ನ ಬಣಾಸು ಗ್ರಾಮದ ನಿವಾಸಿ ಸಂಗ್ರಾಮ ಸಿಂಗ್ ತಮ್ಮ ಮಗ ಯೋಗೇಂದ್ರ ಸಿಂಗ್ ತನ್ನ ಕಣ್ಣೆದುರೇ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದರೂ ಇತರ ಯಾತ್ರಿಕರನ್ನು ರಕ್ಷಿಸಲು ಮುಂದಾದರು. ಅವರಿಗೂ ಇಂತಹ ಸೇವಾಭಾವನೆಗೆ ಪ್ರೇರಣೆ ನೀಡಿದ್ದು ಮತ್ತೆ ಅದೇ ಆರೆಸ್ಸೆಸ್!

***

ಇತ್ತೀಚೆಗೆ ಜು.೧೯ರಂದು ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ವಿದ್ಯಾಭಾರತಿ ಆಶ್ರಯದಲ್ಲಿ ಹೊಸ ಬಿ.ಎಡ್. ಕಾಲೇಜೊಂದರ ಲೋಕಾರ್ಪಣೆಯನ್ನು ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ನೆರವೇರಿಸಿದರು. ಅದೇನೂ ಅಷ್ಟು ದೊಡ್ಡ ಸುದ್ದಿಯಲ್ಲ. ಆದರೆ ಸುದ್ದಿ ಇರುವುದು ಆ ಕಾಲೇಜನ್ನು ನಿರ್ಮಿಸಲು ನೆರವಾದ ಸೂರ್ಯಪ್ರಕಾಶ್ ಜಾಲಾನ್ ಕುಟುಂಬದ್ದು. ರಾಂಚಿಯ ಎಲ್ಲ ನಿವಾಸಿಗಳಿಗೆ ಜಾಲಾನ್ ಪರಿವಾರ ಚಿರಪರಿಚಿತ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಿಗೆ ಸದಾ ಸಹಾಯಹಸ್ತ ಚಾಚುವ ಸಜ್ಜನ ಪರಿವಾರ ಅದು. ಆ ಕುಟುಂಬದ ಒಬ್ಬ ಮೇಧಾವಿ ಯುವಕ ಆದಿತ್ಯ ಪ್ರಕಾಶ್ ಜಾಲಾನ್. ತನ್ನ ವಿದ್ಯಾಭ್ಯಾಸ ಪೂರೈಸಿ ಇತ್ತೀಚೆಗೆ ಒಂದು ಹೊಸ ಉದ್ಯಮ ಪ್ರಾರಂಭಿಸಿದ್ದನಷ್ಟೆ. ಆದರೆ ರಸ್ತೆ ಅಪಘಾತವೊಂದರಲ್ಲಿ ಆತ ದುರ್ಮರಣಕ್ಕೀಡಾದ. ಹೂವಾಗಿ ಅರಳಿ ಎಲ್ಲೆಡೆ ಸುಗಂಧ ಬೀರಬೇಕಿದ್ದ ಸುಂದರ ಮೊಗ್ಗು ಬಾಡಿ ಹೋಗಿತ್ತು. ಕುಟುಂಬದ ಹಿರಿಯರಾದ ಸೂರ್ಯಪ್ರಕಾಶ್ ಜಾಲಾನ್ ಮಾತ್ರ ದುಃಖದಲ್ಲೇ ಕೊರಗುತ್ತಾ ಮೂಲೆ ಹಿಡಿದು ಕೂರಲಿಲ್ಲ. ಮಗನ ಸಾವಿಗೆ ದುಃಖಿಸುತ್ತಾ ಕೂರುವ ಬದಲಿಗೆ ನೂರಾರು ತರುಣರಿಗೆ ಉಪಯುಕ್ತವಾಗುವ ಕಾರ್ಯ ಮಾಡಿ ಆತನ ನೆನಪನ್ನು ಚಿರ ಹಸಿರಾಗಿಡಬೇಕು ಎಂಬುದು ಅವರ ಸಂಕಲ್ಪವಾಗಿತ್ತು. ರಾಂಚಿಯ ವಿದ್ಯಾಭಾರತಿ ಸಂಸ್ಥೆಗೆ ಒಂದು ಬಿ.ಎಡ್. ಕಾಲೇಜನ್ನು ತೆರೆಯಲು ಪ್ರೋತ್ಸಾಹಿಸಿ, ತಮ್ಮ ಜೇಬಿನಿಂದ ೭೦ ಲಕ್ಷ ರೂ. ಖರ್ಚು ಮಾಡಿ, ಮಡಿದ ಆದಿತ್ಯನ ಹೆಸರಿನಲ್ಲಿ ಕಟ್ಟಡ ನಿರ್ಮಿಸಿದರು. ಜು.೧೯ರಂದು ಸರಸಂಘಚಾಲಕರು ಲೋಕಾರ್ಪಣೆಗೊಳಿಸಿದ ಆ ಭವ್ಯ ಕಟ್ಟಡ ಅದೇ.

ಲೋಕಾರ್ಪಣೆಯ ಆ ಸಮಾರಂಭದಲ್ಲಿ ಸೂರ್ಯಪ್ರಕಾಶ್ ಜಾಲಾನ್ ವೇದಿಕೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಎಲ್ಲರೆದುರು ಮೈಕ್ ಹಿಡಿದು ಮಾತನಾಡಲೂ ಇಲ್ಲ. ತಾನೇ ಕಟ್ಟಿಸಿಕೊಟ್ಟ ಭವ್ಯ ಕಾಲೇಜು ಕಟ್ಟಡ ಎಂಬ ಅಹಂಭಾವವೂ ಅವರಲ್ಲಿರಲಿಲ್ಲ. ಏಕೆಂದರೆ ಅವರು ಸಂಘದ ಸ್ವಯಂಸೇವಕರಾಗಿದ್ದರು. ‘ಸ್ವಯಂಸೇವಕತ್ವ’ ಅಂದರೆ ಏನೆಂಬುದಕ್ಕೆ ಅವರೊಂದು ನಿದರ್ಶನವಾಗಿದ್ದರು.

ಶಾಖೆಗೆ ಪ್ರತಿನಿತ್ಯ ಬರುವ ಸ್ವಯಂಸೇವಕರಿಗೆ ಸಂಘ ಕಲಿಸುವ ಪಾಠ ಇದೇ. ‘ಇಡೀ ದೇಶವನ್ನು ಒಂದು ಕುಟುಂಬದಂತೆ ಪ್ರೀತಿಸು. ದೇಶವಾಸಿಗಳೆಲ್ಲರೂ ನಿನ್ನ ಒಡಹುಟ್ಟಿದವರು. ಅವರಿಗಾಗಿ ನೀನು ಬದುಕು. ನಿನಗಾಗಿ ಮಾತ್ರ ಬದುಕಬೇಡ. ಅವರೆಲ್ಲರ ಸುಖ, ನೆಮ್ಮದಿಗಳೇ ನಿನ್ನ ಸುಖ, ನೆಮ್ಮದಿ. ಇದೇ ತಾಯಿ ಭಾರತಿಗೆ ನಾವೆಲ್ಲರೂ ಸಲ್ಲಿಸಬಹುದಾದ ಅಳಿಲು ಸೇವೆ.’

ಈ ಪಾಠವನ್ನು ಮೈಗೂಡಿಸಿಕೊಂಡ ಸ್ವಯಂಸೇವಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಯಾರಪ್ಪಣೆ, ಆದೇಶಗಳೂ ಬೇಕಾಗುವುದಿಲ್ಲ. ದುರಂತ ನಡೆದ ಸ್ಥಳಕ್ಕೆ ತಲುಪಲು ಅವರಿಗೆ ಯಾವ ವಾಹನ ವ್ಯವಸ್ಥೆಯೂ ಬೇಕಾಗುವುದಿಲ್ಲ. ಸಂತ್ರಸ್ತರಿಗೆ ನೆರವು ನೀಡುತ್ತಾ ಅಕಸ್ಮಾತ್ ಸ್ವಂತ ಪ್ರಾಣಕ್ಕೆ ಕುತ್ತೊದಗಿದರೂ ಅವರು ಹೆದರುವುದಿಲ್ಲ. ರಾಂಟೆಕೆಯಂತಹ ಕಟ್ಟರ್ ಸಂಘ ವಿರೋಧಿಗಳೂ ಸಂಘವನ್ನು ಅಭಿಮಾನದಿಂದ ಮೆಚ್ಚಿಕೊಳ್ಳುವುದು ಇದೇ ಕಾರಣಕ್ಕಾಗಿ.

Leave a Reply

Your email address will not be published.

This site uses Akismet to reduce spam. Learn how your comment data is processed.