Sardar Vallabhbhai Patel and his daughter Manibehn Patel 2

By Du Gu Lakshman

ತಮಿಳುನಾಡಿನಾದ್ಯಂತ ಈಗ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಕಾವೇರಿ ನದಿನೀರಿನ ವಿವಾದವಲ್ಲ. ಆದರೆ ಮದರಾಸ್ ಹೈಕೋರ್ಟ್ ನ್ಯಾಯಮೂರ್ತಿಗೆ ಪಂಚೆಯುಟ್ಟ ಕಾರಣಕ್ಕೆ ಕ್ಲಬ್‌ವೊಂದರಲ್ಲಿ ಪ್ರವೇಶ ನಿರಾಕರಿಸಿದ ವಿಷಯ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡು ವಿಧಾನಸಭೆಯಲ್ಲೂ ಪಂಚೆ ಗದ್ದಲ ಜೋರಾಗಿ ಕೇಳಿಬಂದಿದೆ.

Sardar Vallabhbhai Patel and his daughter Manibehn Patel 2
Sardar Vallabhbhai Patel

ಆ ಘಟನೆ ನಡೆದಿದ್ದು ಹೀಗೆ: ಕಳೆದ ಜು. ೧೧ರಂದು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (ಟಿಎನ್‌ಸಿಎ) ಕ್ಲಬ್‌ನಲ್ಲಿ ಜರುಗಿದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ಮದರಾಸ್ ಹೈಕೋರ್ಟ್ ನ್ಯಾಯಮೂರ್ತಿ ಡಿ. ಹರಿ ಪರಂಧಾಮನ್ ಹಾಗೂ ಇಬ್ಬರು ಹಿರಿಯ ವಕೀಲರು ಹೋಗಿದ್ದಾಗ ಅವರಿಗೆ ಕ್ಲಬ್ ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿತು. ಅವರೆಲ್ಲರೂ ಪ್ಯಾಂಟ್ ಧರಿಸದೆ ಪಂಚೆ ಉಟ್ಟಿದ್ದರು ಎಂಬುದು ಕ್ಲಬ್‌ನಲ್ಲಿ ಪ್ರವೇಶ ನಿರಾಕರಿಸಿದ್ದಕ್ಕೆ ಕಾರಣ. ತಮಿಳುನಾಡು ವಿಧಾನಸಭೆಯಲ್ಲಿ ಮುಂದಿನ ಒಂದೆರಡು ದಿನ ಈ ಕುರಿತು ಜೋರಾಗಿಯೇ ಚರ್ಚೆ ನಡೆಯಿತು. ಭಾರತೀಯ ಪರಂಪರೆಯನ್ನು ಅವಮಾನಿಸುವ ಬ್ರಿಟಿಷ್ ಪದ್ಧತಿ ಅನುಸರಿಸುತ್ತಿರುವ ಕ್ಲಬ್ ನಡೆಯನ್ನು ವಿಧಾನಸಭೆ ಒಕ್ಕೊರಲಿನಿಂದ ಖಂಡಿಸಿತು. ತಮಿಳರ ಘನತೆಯ ಸಂಕೇತವಾದ ಪಂಚೆ ಮತ್ತು ಅದನ್ನು ಧರಿಸಿದವರನ್ನು ಅವಮಾನಿಸಿದ ಕ್ಲಬ್ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸುವಂತೆ ಶಾಸಕರು ಆಗ್ರಹಿಸಿದರು. ವಿಷಯ ಪ್ರಸ್ತಾಪಿಸಿದ ಮಾಜಿ ಉಪಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘ರಾಜ್ಯದ ಇನ್ನಿತರೇ ಕ್ಲಬ್‌ಗಳು ಇದೇ ನಡೆಯನ್ನು ಅನುಸರಿಸುತ್ತಿದ್ದು ಸರ್ಕಾರ ಮಧ್ಯ ಪ್ರವೇಶಿಸಿ ತಮಿಳುನಾಡು ಸಂಸ್ಕೃತಿಯನ್ನು ಬೆಂಬಲಿಸಬೇಕು’ ಎಂದು ಆಗ್ರಹಿಸಿದರು. ‘ಸ್ವಾತಂತ್ರ್ಯ ಹೋರಾಟದಲ್ಲಿ ಪಂಚೆ ಉಟ್ಟ ತಮಿಳರೂ ರಕ್ತ ಬಸಿದಿದ್ದಾರೆ. ಆದರೆ ಇಂದು ಪಂಚೆಯ ಬೆಲೆ ಗೊತ್ತಿಲ್ಲದವರೂ ಇದ್ದಾರೆ. ಟಿಎನ್‌ಸಿಎ ಕ್ಲಬ್ ಒಂದೇ ಅಲ್ಲ , ಮದರಾಸ್ ಜಿಮ್ಕಾನಾ, ಎಂಸಿಸಿ ಹಾಗೂ ಬೋಟ್ ಕ್ಲಬ್‌ನಲ್ಲಿ ಪಂಚೆಯುಟ್ಟು ಹೋದರೆ ಒಳಗೆ ಪ್ರವೇಶವಿಲ್ಲ. ಈ ಅವಮಾನಕ್ಕೆ ತಡೆ ಹಾಕಬೇಕು’ ಎಂಬುದು ಸ್ಟಾಲಿನ್‌ರವರ ಆಗ್ರಹವಾಗಿತ್ತು.
ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಷ್ಟೇ ಅಲ್ಲ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಬ್ರಿಟಿಷ್ ಸಂಸ್ಕೃತಿಗೇ ಜೋತು ಬಿದ್ದಿರುವ ಕ್ಲಬ್‌ಗಳ ನಡೆಗೆ ಮೂಗುದಾರ ಹಾಕಲು ಕಾನೂನು ರಚಿಸುವ ನಿರ್ಧಾರಕ್ಕೂ ಕಾರಣವಾಯಿತು. ಟಿಎನ್‌ಸಿಎ ಕ್ಲಬ್‌ನ ನಡೆಯನ್ನು ಅವರು ‘ವಸ್ತ್ರ ಸರ್ವಾಧಿಕಾರತ್ವ ಮತ್ತು ತಮಿಳು ಸಂಸ್ಕೃತಿಗೆ ಆಗಿರುವ ಅವಮಾನ’ ಎಂದು ವ್ಯಾಖ್ಯಾನಿಸಿದರು. ಭವಿಷ್ಯದಲ್ಲಿ ಇಂತಹ ಘಟನೆಗಳು ಜರುಗದಂತೆ ಸರ್ಕಾರ ಹೊಸ ಕಾನೂನನ್ನು ರೂಪಿಸಲಿದೆ. ಒಂದು ವೇಳೆ ಇನ್ನೊಮ್ಮೆ ಅಂತಹ ಪ್ರಸಂಗ ನಡೆದರೆ ಅಂತಹ ಕ್ಲಬ್‌ಗಳ ಪರವಾನಗಿ ರದ್ದುಪಡಿಸಲಾಗುವುದು ಎಂದೂ ವಿಧಾನಸಭೆಯಲ್ಲಿ ಘೋಷಿಸಿದರು.
ಈ ಘಟನೆ ಇಲ್ಲಿಗೇ ಮುಕ್ತಾಯಗೊಳ್ಳದೆ ಚೆನ್ನೈನ ವಕೀಲರೊಬ್ಬರು ಪಂಚೆ ಉಡುಗೆಯನ್ನು ನಿರಾಕರಿಸಿದ ಟಿಎನ್‌ಸಿಎ ಕ್ಲಬ್ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದ್ದಾರೆ. ರಾಜ್ಯದಲ್ಲಿರುವ ಕ್ಲಬ್‌ಗಳ ನಿರ್ವಹಣೆಯನ್ನು ಸರ್ಕಾರ ಎಚ್ಚರಿಕೆಯಿಂದ ಗಮನಿಸುವಂತೆ ಆದೇಶ ನೀಡಬೇಕೆಂದೂ ತಮಿಳು ಸಂಸ್ಕೃತಿಗೆ ಅವಮಾನಿಸುವ ಕ್ಲಬ್‌ನ ಲೈಸೆನ್ಸನ್ನು ರದ್ದುಗೊಳಿಸಬೇಕೆಂದೂ ಅವರು ತಮ್ಮ ಈ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ. ಸದ್ಯ ಈ ದೂರನ್ನು ಸ್ವೀಕರಿಸಿರುವ ಮದ್ರಾಸ್ ಹೈಕೋರ್ಟ್, ಮುಂದೆ ವಿಚಾರಣೆ ನಡೆಸಿ ಯಾವ ತೀರ್ಪು ಕೊಡುತ್ತದೋ ನೋಡಬೇಕು.
ಬಹಳ ಹಿಂದೆ ಸಂವಿಧಾನ ರಚನಾ ಸಭೆಯಲ್ಲಿ ಮೂಲಭೂತ ಹಕ್ಕುಗಳ ಕುರಿತು ಚರ್ಚೆಯಾದಾಗ ಸಂವಿಧಾನ ರಚನಾ ಸಮಿತಿಯ ಸದಸ್ಯ ರೋಹಿಣಿ ಕುಮಾರ್ ಚೌಧರಿ ಈ ಮೂಲಭೂತ ಹಕ್ಕುಗಳ ವಿಧಿಗೆ ತಿದ್ದುಪಡಿ ತರಬೇಕೆಂದು ಸಲಹೆ ನೀಡಿದ್ದರು. ಆದರೆ ಆಗ ಸಭೆಯಲ್ಲಿ ಉಪಸ್ಥಿತರಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು, ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಬಗೆಯ ವಸ್ತ್ರಸಂಹಿತೆಗೆ ನಿಷೇಧ ವಿಧಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ತಾನು ವೈಸರಾಯ್ ಅವರ ಬಂಗಲೆಯಿಂದ ಹಿಡಿದು ಸಾಧಾರಣ ರೈತನ ಮನೆಯವರೆಗೂ ಧೋತಿ (ಪಂಚೆ) ಧರಿಸಿಯೇ ಹೋಗಿರುವುದಾಗಿ ಪಟೇಲರು ಹೇಳಿದ್ದರು. ಹಾಗಾಗಿ ವಸ್ತ್ರಸಂಹಿತೆಗೆ ನಿಷೇಧ ಹೇರುವ ಪ್ರಸ್ತಾಪ ಆಗ ಬಿದ್ದು ಹೋಗಿತ್ತು. ಜಾತಿ, ಪಂಥ ಅಥವಾ ಲಿಂಗಾಧಾರಿತವಾಗಿ ವಸ್ತ್ರಸಂಹಿತೆಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ ಹೇರುವ ಅಥವಾ ತಾರತಮ್ಯವೆಸಗುವ ಹಕ್ಕು ಯಾರಿಗೂ ಇಲ್ಲ ಎಂಬುದು ಆಗಿನಿಂದಲೇ ಅಲಿಖಿತವಾಗಿ ಜಾರಿಯಾಗಿತ್ತು. ಹಾಗಿದ್ದರೂ ಆಗಾಗ ವಸ್ತ್ರಸಂಹಿತೆ ವಿವಾದ ಸ್ವತಂತ್ರ ಭಾರತದಲ್ಲಿ ಭುಗಿಲೇಳುತ್ತಿರುವುದು ಒಂದು ವಿಷಾದನೀಯ ವಿದ್ಯಮಾನ.
ಪಂಚೆ ಧರಿಸಿದ ಗಣ್ಯರು
ಮಹಾತ್ಮ ಗಾಂಧೀಜಿ ಬ್ರಿಟಿಷರು ಕರೆದಿದ್ದ ದುಂಡುಮೇಜಿನ ಪರಿಷತ್ ಸಭೆಗೆ ಹೋಗಿದ್ದು ಕೋಟು, ಪ್ಯಾಂಟು ಧರಿಸಿ ಅಲ್ಲ. ಅವರ ಮಾಮೂಲಿ ವೇಷವಾಗಿದ್ದ ತುಂಡು ಪಂಚೆ ಧರಿಸಿಯೇ ಹೋಗಿದ್ದರು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾಮರಾಜ ನಾಡಾರ್ ಸದಾಕಾಲ ಉಡುತ್ತಿದ್ದುದು ಪಂಚೆಯನ್ನೇ. ದೇಶ ಕಂಡ ಸಮರ್ಥ ಪ್ರಧಾನಿ ಎನಿಸಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಹೆಚ್ಚಿನ ಸಂದರ್ಭಗಳಲ್ಲಿ ತೊಡುತ್ತಿದ್ದುದು ಧೋತಿಯನ್ನೇ. ನಮ್ಮ ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಪ್ರತಿನಿತ್ಯ ಪಂಚೆಯನ್ನೇ ತೊಡುತ್ತಿದ್ದರು. ಕೇರಳದಲ್ಲಿ ಮುಖ್ಯಮಂತ್ರಿಗಳಾಗಿದ್ದ ವಿ. ಅಚ್ಯುತಾನಂದನ್, ನಂಬೂದಿರಿಪಾಡ್, ಎ.ಕೆ. ಗೋಪಾಲನ್, ಈಗಿನ ಮುಖ್ಯಮಂತ್ರಿ ಒಮನ್ ಚಾಂಡಿ ಹಾಗೂ ಅಲ್ಲಿನ ಬಹುತೇಕ ಮಂತ್ರಿಗಳು ಧರಿಸುವುದು ಪಂಚೆಯನ್ನೇ. ಸಾರ್ವಜನಿಕ ಸಭೆಗಳಿಗೆ, ಘನತೆವೆತ್ತ ಕಾರ್ಯಕ್ರಮಗಳಿಗೆ ಇವರೆಲ್ಲ ಅದೇ ವೇಷದಲ್ಲಿ ಹೋಗಿದ್ದಾರೆ, ಹೋಗುತ್ತಿದ್ದಾರೆ. ಅದು ಆ ನಾಡಿನ ಸಂಸ್ಕೃತಿ. ಕೇರಳ, ತಮಿಳುನಾಡು, ಕರ್ನಾಟಕದಾದ್ಯಂತ ಪಂಚೆ ಧರಿಸುವ ಸಂಸ್ಕೃತಿ ಹಿಂದಿನಿಂದಲೂ ಬಂದಿದೆ. ಇಲ್ಲೆಲ್ಲ ಶುಭ ಕಾರ್ಯದ ಸಂದರ್ಭದಲ್ಲಿ ಪಂಚೆಗೇ ಅಗ್ರಸ್ಥಾನ. ಅದರಲ್ಲೂ ಮದುವೆ ಮುಂಜಿಯಂತಹ ಶುಭಕಾರ್ಯ ಸಂದರ್ಭದಲ್ಲಿ ಹಿರಿಯರು ಹಾಗೂ ಮದುಮಗ ಧೋತಿ ಉಡಲೇಬೇಕು. ಈಗೀಗ ಈ ಸಂಸ್ಕೃತಿ ಮರೆಯಾಗುತ್ತಿದೆ. ಧೋತಿ ಜಾಗವನ್ನು ಪ್ಯಾಂಟ್ ಆಕ್ರಮಿಸಿದೆ. ಮದುಮಗ ಸೂಟು ಬೂಟುಗಳಲ್ಲೇ ಮದುವೆ ದಿನ ರಾರಾಜಿಸುವ ದೃಶ್ಯ ಸಾಮಾನ್ಯವಾಗುತ್ತಿದೆ. ಮದುಮಗಳು ಹಣೆಗೆ ಕುಂಕುಮವಿಡದೆ, ತಲೆಗೆ ಹೂವು ಮುಡಿಯದೆ ಬಾಬ್‌ಕಟ್‌ನ ಕೆದರಿದ ಕೂದಲಲ್ಲೆ ಮದುವೆಯ ಮಂಗಳ ಮುಹೂರ್ತಕ್ಕೆ ಹಾಜರಾಗುವುದೂ ಕಂಡುಬರುತ್ತಿದೆ. ಅನೇಕ ಹಿರಿಯರಿಗೆ ಇವೆಲ್ಲ ತೀವ್ರ ಮುಜುಗರ ಉಂಟು ಮಾಡುತ್ತಿದ್ದರೂ ಕಾಲಾಯ ತಸ್ಮೈ ನಮಃ ಎಂದು ಮೌನಕ್ಕೆ ಶರಣಾಗಿದ್ದಾರೆ.
ಕಾಲ ಸಾಕಷ್ಟು ಬದಲಾಗಿದ್ದರೂ ವೇಷಭೂಷಣಗಳಲ್ಲಿ ಅಪಾರ ಪಲ್ಲಟ ಕಂಡುಬಂದಿದ್ದರೂ ಈಗಲೂ ಪ್ರತಿನಿತ್ಯ ಪಂಚೆ ಧರಿಸುವವರ ಸಂಖ್ಯೆಗೇನೂ ಕೊರತೆಯಿಲ್ಲ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲೂ ಪ್ರತಿನಿತ್ಯ ಧರಿಸುವುದು ಪಂಚೆಯನ್ನೇ. ಪಂಚೆ ಧರಿಸಿ ಹೆಗಲ ಮೇಲೊಂದು ಟವೆಲ್ ಹಾಕುವ ಅವರದು ಅಪ್ಪಟ ದೇಸೀ ಸಂಸ್ಕೃತಿ. (ಪ್ಯಾಂಟು ಅವರ ದೇಹಕ್ಕೆ ಒಗ್ಗುವುದಿಲ್ಲ. ಅದು ಅವರಿಗೆ ಅಲರ್ಜಿ ಎಂಬುದೂ ಇದಕ್ಕೆ ಕಾರಣವಿರಬಹುದು!) ಹಿರಿಯ ಸಾಹಿತಿ ಶಿವರಾಮ ಕಾರಂತ, ಗಾಂಧಿವಾದಿ ದಿವಂಗತ ಹೆಚ್. ನರಸಿಂಹಯ್ಯ, ವಿಕ್ರಮದ ಸಂಪಾದಕರಾಗಿದ್ದ ದಿ. ಬೆ.ಸು.ನಾ. ಮಲ್ಯ, ಹಿರಿಯ ಕವಿ ಕಯ್ಯಾರ ಕಿಂಞಣ್ಣ ರೈ, ಇನ್ನೋರ್ವ ಕವಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪುತ್ತೂರಿನ ವಿಶ್ರಾಂತ ಪ್ರಾಧ್ಯಾಪಕ, ಅಂಕಣಕಾರ ವಿ.ಬಿ. ಅರ್ತಿಕಜೆ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ, ಸಂಘ ಪರಿವಾರದ ಅನೇಕ ಹಿರಿಯ ಪ್ರಚಾರಕರು… ಹೀಗೆ ಸಾಕಷ್ಟು ಮಂದಿ ಗಣ್ಯರ ಪ್ರತಿನಿತ್ಯದ ವಸ್ತ್ರಸಂಹಿತೆ ಪಂಚೆಯೇ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆದ ಸಭೆಯೊಂದರಲ್ಲಿ ಯಾವುದೋ ದ್ವೇಷದ ಕಾರಣಕ್ಕಾಗಿ, ಆಗ ಕಸಾಪ ಅಧ್ಯಕ್ಷರಾಗಿದ್ದ ಹರಿಕೃಷ್ಣ ಪುನರೂರು ಅವರ ಪಂಚೆಯನ್ನು ಕಿಡಿಗೇಡಿಗಳು ಸಭೆ ನಡೆಯುತ್ತಿರುವಾಗಲೇ ಎಳೆದ ಘಟನೆಯೂ ನಡೆದಿತ್ತು. ಆದರೆ ಪುನರೂರು ಇದರಿಂದ ಧೃತಿಗೆಡದೆ ಈಗಲೂ ಪಂಚೆಯನ್ನೇ ಧರಿಸುತ್ತಿದ್ದಾರೆ.
‘ವಿಕ್ರಮ’ ಮಲ್ಯರಿಗೂ ಅವಮಾನ
ವಿಕ್ರಮದ ಸಂಪಾದಕರಾಗಿದ್ದ ಬೆ.ಸು.ನಾ. ಮಲ್ಯ ಅವರ ಬದುಕಿನಲ್ಲೂ ದೇಸೀ ಸಂಸ್ಕೃತಿಯನ್ನು ಅವಮಾನಿಸಿದ ಪ್ರಸಂಗವೊಂದು ನಡೆದಿತ್ತು. ಬೆಂಗಳೂರಿನ ಪಂಚತಾರಾ ಹೊಟೇಲ್‌ನಲ್ಲಿ ನಡೆದ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ ಅವರ ಪತ್ರಿಕಾ ಗೋಷ್ಠಿಗೆ ಮಲ್ಯರು ಎಂದಿನಂತೆ ಪಂಚೆ ಧರಿಸಿ, ಹವಾಯಿ ಚಪ್ಪಲಿ ತೊಟ್ಟು ಹೋಗಿದ್ದರು. ಹೊಟೇಲಿನ ದ್ವಾರಪಾಲಕ ಅವರನ್ನು ತಡೆದು ‘ಹವಾಯಿ ಚಪ್ಪಲ್ ಹಾಕಿಕೊಂಡವರಿಗೆ ಪ್ರವೇಶವಿಲ್ಲ’ ಎಂದು ಹೇಳಿದ. ಮಲ್ಯರು ತಮ್ಮ ಪರಿಚಯ ಹೇಳಿ, ಬಂದ ಉzಶ ತಿಳಿಸಿದರೂ ಅವರಿಗೆ ಒಳಗೆ ಪ್ರವೇಶಿಸಲು ಅನುಮತಿ ದೊರಕಿರಲಿಲ್ಲ. ಕೊನೆಗೆ ಸುದ್ದಿ ಹೊಟೇಲ್ ಮ್ಯಾನೇಜರ್‌ಗೆ ತಲುಪಿ ಅವರು ‘ಇನ್ನು ಮುಂದೆ ಹವಾಯಿ ಚಪ್ಪಲ್ ಹಾಕಿಕೊಂಡು ಬರಕೂಡದು’ ಎಂಬ ಎಚ್ಚರಿಕೆ ನೀಡಿ ಮಲ್ಯರನ್ನು ಒಳಗೆ ಬಿಟ್ಟಿದ್ದರು. ಪತ್ರಿಕೆಗಳಲ್ಲಿ ಇದು ಸುದ್ದಿಯಾಗಿ, ಕೊನೆಗೆ ಈ ಘಟನೆಯ ಬಗ್ಗೆ ಹೊಟೇಲ್‌ನ ಮುಖ್ಯಸ್ಥರು ವಿಷಾದ ವ್ಯಕ್ತಪಡಿಸಿದ್ದರು. ಇದು ನಡೆದಿದ್ದು ೧೯೯೨ರ ಜೂ. ೨೮ರಂದು.
ಈ ಘಟನೆಗೆ ಸಂಬಂಧಿಸಿ ಪ್ರಜಾವಾಣಿ ಪತ್ರಿಕೆ ಜೂ. ೩೦ರಂದು ಸಂಪಾದಕೀಯ ಕೂಡ ಬರೆದಿತ್ತು. ‘ಪತ್ರಕರ್ತನ ಪಾದ ಧೂಳಿ’ ಎಂಬ ಶೀರ್ಷಿಕೆಯ ಆ ಸಂಪಾದಕೀಯ ಹೀಗಿತ್ತು: ‘ಮನೆಯಲ್ಲಿದ್ದಷ್ಟು ಹೊತ್ತು ಹೊಟೇಲ್‌ನ ತಿಂಡಿ ತೀರ್ಥ ಬಯಸುವ ಮನುಷ್ಯ, ಹೊಟೇಲ್ ಹೊಕ್ಕಾಗ ಮನೆಯಂಥ ವಾತಾವರಣ ಬಯಸುವುದು ತೀರಾ ಸಹಜ. ಇಷ್ಟು ದಿನ ಬೆಂಗಳೂರಿನ ಹೊಟೇಲ್‌ಗಳಲ್ಲೆಲ್ಲ ಮನೆಯಂಥದೇ ಪರಿಸರವಿತ್ತು. ಅಂದರೆ ಜೇಬಿನಲ್ಲಿ ಹಣವಿದ್ದಷ್ಟು ಕಾಲವೂ ಆದರ ಗೌರವಗಳು ಸಿಗುತ್ತಿದ್ದವು. ಈಗ ಕಾಲ ಬದಲಾಗಿದೆ. ಮುಖ ನೋಡಿ ಮಣೆ ಹಾಕುವ ಬದಲು, ಪಾದ ನೋಡಿ ವಾದ ಮಾಡುವ ಶಿಷ್ಟಾಚಾರ ಬಂದಿದೆ. ಇಲ್ಲಾಂದ್ರೆ ಹವಾಯಿ ಚಪ್ಪಲ್ ಧರಿಸಿದ ಪತ್ರಕರ್ತರಿಗೂ ಇಲ್ಲಿನ ಪಂಚತಾರಾ ಹೊಟೇಲ್‌ಗಳಲ್ಲಿ ಪ್ರವೇಶವಿಲ್ಲ ಎಂದರೇನು?
ಹಾಗೆ ನೋಡಿದರೆ, ಪಾದರಕ್ಷೆಗಳ ಸಾಲಿನಲ್ಲಿ ಹವಾಯಿಯೇ ಅತ್ಯಂತ ನಿರುಪದ್ರವಿ. ಬೂಟು, ಎಕ್ಕಡ, ಕೆರ, ಚಪ್ಪಲು ಅಥವಾ ಮೆಟ್ಟುಗಳಿಗಿದ್ದಷ್ಟು ಕಾಠಿಣ್ಯವಾಗಲೀ, ನಿರ್ದಯತೆಯಾಗಲೀ ಅದಕ್ಕಿಲ್ಲ. ಸೊಕ್ಕಿನವರ ಮಾನ ಕಳೆಯುವ ಆಯುಧವಾಗಿಯೂ ಬಳಸಲಾರದಷ್ಟು ಕೋಮಲತೆ ಅದಕ್ಕಿದೆ. ಅದರಲ್ಲೂ ಲೇಖನಿಯೇ ಆಯುಧವೆಂದು ದೃಢವಾಗಿ ನಂಬಿದ ಪತ್ರಕರ್ತರಂತೂ ಆಕಾಶದೆತ್ತರಕ್ಕೆ ಬೆಲೆ ಏರಿಸಿ ಕೂತ ಶೂಗಳನ್ನು ಕಾಲ ಕಸದಂತೆ ಕಡೆಗಣಿಸಿ ಹವಾಯಿಯನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ. ದಪ್ಪ ಚರ್ಮದ ಮಂದಿಗೆ ಇವೆಲ್ಲ ಅರ್ಥವಾಗಲಿಕ್ಕಿಲ್ಲ. ಆದರೆ ಹೊಟೇಲ್‌ನವರಿಗೂ ಹವಾಯಿ ಚಪ್ಪಲು ರಚಿಸುತ್ತಿಲ್ಲವೆಂದರೆ? ಹಾಗಿದ್ದರೆ, ದೇವಸ್ಥಾನಗಳಲ್ಲಿರುವ ಹಾಗೆ ಚಪ್ಪಲಿ ಕಳಚಲು ಪ್ರತ್ಯೇಕ ಸ್ಥಾನ ಗುರುತಿಸಿ ಬದಲಿಗೆ ಶೂ ತೊಡಿಸುವ ವ್ಯವಸ್ಥೆ ಮಾಡಬೇಕೇ ವಿನಾ, ಚಪ್ಪಲಿಯಂತಹ ಕ್ಷುಲ್ಲಕ ವಸ್ತು ಎತ್ತಿಕೊಂಡು ತಮ್ಮದೇ ಮಾನ ಕಳೆದುಕೊಳ್ಳಬಾರದು.’
ಬ್ರಿಟಿಷ್ ಸಂಸ್ಕೃತಿಯ ಪಳೆಯುಳಿಕೆ ಸ್ವಾತಂತ್ರ್ಯ ಬಂದ ೬೭ ವರ್ಷಗಳ ಬಳಿಕವೂ ಉಳಿದುಕೊಂಡಿದೆ ಎನ್ನುವುದಕ್ಕೆ ಇವೆಲ್ಲ ಪ್ರಸಂಗಗಳು ಸಾಕ್ಷಿ. ನಮ್ಮ ಗುಲಾಮೀ ಮನೋಭಾವ ಹಾಗೂ ಸ್ವಾಭಿಮಾನಶೂನ್ಯತೆಯನ್ನು ಈ ಪ್ರಸಂಗಗಳು ಮತ್ತೆ ಮತ್ತೆ ಬಯಲಾಗಿಸಿವೆ. ಇಂತಹ ಪ್ರಸಂಗಗಳು ನಡೆದಾಗ ಅವುಗಳಿಗೆ ಪರಿಣಾಮಕಾರಿ, ತಾರ್ಕಿಕ ಅಂತ್ಯ ದೊರಕುವುದು ತೀರಾ ವಿರಳ. ಹಾಗಾಗಿಯೇ ಗುಲಾಮೀ ಸಂಸ್ಕೃತಿ ವಿಜೃಂಭಿಸುತ್ತದೆ. ಹೈಕೋರ್ಟ್ ನ್ಯಾಯಮೂರ್ತಿ ಪರಂಧಾಮನ್‌ರಂಥ ಗಣ್ಯರೂ ಅವಮಾನ ಸಹಿಸಬೇಕಾಗುತ್ತದೆ. ಪಂಚೆ ತೊಟ್ಟು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿz ಅವರ ‘ಅಪರಾಧ’ವಾಗಿ ಬಿಡುತ್ತದೆ. ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿಗೆ ಸಹಜವಾದ ನಮ್ಮದೇ ವೇಷಭೂಷಣ ತೊಡುವುದಕ್ಕೆ ಬ್ರಿಟಿಷ್ ದೊಣೆ ನಾಯಕನ ಅಪ್ಪಣೆ ಏಕೆ ಬೇಕು? ಇಂಗ್ಲೆಂಡ್‌ನಲ್ಲಿ ಇಂಗ್ಲಿಷರು ಪ್ಯಾಂಟು – ಕೋಟು – ಬೂಟು ತೊಡುವುದು ಗೌರವದ ಸಂಕೇತವಾದರೆ ಭಾರತದಲ್ಲಿ ಭಾರತೀಯ ವೇಷಗಳಾದ ಪಂಚೆ, ಸೀರೆಗಳನ್ನು ಪುರುಷರು ಹಾಗೂ ಸ್ತ್ರೀಯರು ಧರಿಸುವುದು ಅಗೌರವದ ಸಂಕೇತ ಹೇಗಾಗುತ್ತದೆ?
ತಮಿಳುನಾಡಿನ ಟಿಎನ್‌ಸಿಎ ಕ್ಲಬ್‌ನಲ್ಲಿ ಜರುಗಿದ ಪ್ರಸಂಗ ಪಂಚೆಗಾದ ಅವಮಾನವಷ್ಟೇ ಅಲ್ಲ, ಭಾರತೀಯ ಸಂಸ್ಕೃತಿಗೇ ಆದ ಅವಮಾನ ಎಂಬುದನ್ನು ನಾವೆಲ್ಲರೂ ಅರಿಯದಿದ್ದರೆ ಹೇಗೆ?

Leave a Reply

Your email address will not be published.

This site uses Akismet to reduce spam. Learn how your comment data is processed.