Hamsaraj Bharadwaj

By Du Gu Lakshman

Hamsaraj Bharadwaj
Hamsaraj Bharadwaj

ಕರ್ನಾಟಕದ ಅತ್ಯಂತ ವಿವಾದಿತ ರಾಜ್ಯಪಾಲ ಡಾ. ಹಂಸರಾಜ ಭಾರದ್ವಾಜ ಅವರು ಕೊನೆಗೂ ನಿವೃತ್ತರಾಗಿ ದೆಹಲಿಗೆ ತೆರಳಿದ್ದಾರೆ. ಅವಧಿಪೂರ್ತಿ ಮುಗಿಸಿದ ರಾಜ್ಯಪಾಲ ಎಂಬ ಹೆಗ್ಗಳಿಕೆ ಅವರದು. ಆದರೆ ಅತ್ಯಂತ ವಿವಾದಿತ ರಾಜ್ಯಪಾಲ ಎಂಬ ‘ಕೀರ್ತಿ’ಗೂ ಭಾಜನರು!
ಹಂಸರಾಜರು ರಾಜ್ಯಪಾಲರಾದ ಬಳಿಕ ಮಾಡಿದ ಉತ್ತಮ ಕೆಲಸಗಳತ್ತ ಮೊದಲು ಗಮನಹರಿಸೋಣ. ಏಕೆಂದರೆ ಅವರ ವಿವಾದಿತ ಕೆಲಸಗಳನ್ನಷ್ಟೇ ಚರ್ಚಿಸಿದರೆ, ಅವರು ಮಾಡಿರಬಹುದಾದ ಉತ್ತಮ ಕೆಲಸಗಳಿಗೆ ಅಪಚಾರವೆಸಗಿದಂತಾಗುತ್ತದೆ. ಹಂಸರಾಜರು ರಾಜ್ಯಪಾಲರಾದ ಬಳಿಕ ರಾಜಭವನದ ಬಾಗಿಲುಗಳು ಸಾರ್ವಜನಿಕರಿಗಾಗಿ ಮುಕ್ತವಾಗಿ ತೆರೆದಿದ್ದನ್ನು ಪ್ರಜ್ಞಾವಂತರು ಯಾರೂ ಮರೆಯುವಂತಿಲ್ಲ. ಅದುವರೆಗೆ ರಾಜಭವನವೆಂದರೆ ಸಾರ್ವಜನಿಕರಿಗೆ ನಿಷೇಧಿತ ಪ್ರದೇಶ ಎಂಬಂತಾಗಿತ್ತು. ಹಂಸರಾಜರು ರಾಜಭವನದಲ್ಲಿ ಅನೇಕ ಪುಸ್ತಕ ಬಿಡುಗಡೆ ಕಾರ್ಯಕ್ರಮ, ಸಂಗೀತ ರಸಮಂಜರಿ ಏರ್ಪಡಿಸಿ ರಾಜಭವನದೊಂದಿಗೆ ಸಾರ್ವಜನಿಕರ ಸ್ನೇಹ ಸೇತುವನ್ನು ಬೆಸೆದರು. ಬಹುಶಃ ಹಂಸರಾಜರ ಅವಧಿಯಲ್ಲಿ ರಾಜಭವನದಲ್ಲಿ ನಡೆದಷ್ಟು ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮಗಳು ಬೇರೆ ಯಾವ ರಾಜ್ಯಪಾಲರ ಅವಧಿಯಲ್ಲೂ ನಡೆದಿರಲಿಕ್ಕಿಲ್ಲ. ಅದರಲ್ಲೂ ದೂರದರ್ಶನ ಏರ್ಪಡಿಸಿದ ಮೃತ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ರಾಜಭವನದಲ್ಲಿ ನಡೆದಾಗ ಸ್ವತಃ ರಾಜ್ಯಪಾಲರು ಹಾಗೂ ಅವರ ಪತ್ನಿ ಮೃತ ಯೋಧರ ವಿಧವಾ ಪತ್ನಿಯರ ಕಣ್ಣೀರಿಗೆ ತಾವೂ ಕಣ್ಣೀರಾದದ್ದನ್ನು ನಾನಂತೂ ಮರೆಯಲಾರೆ. ಆ ಮಟ್ಟಿನ ಸಂವೇದನಾಶೀಲತೆ ರಾಜ್ಯಪಾಲರಂತಹ ಗಡಸು ವ್ಯಕ್ತಿತ್ವದಲ್ಲೂ ಅಡಗಿರುತ್ತದೆಂದು ಗೊತ್ತಾಗಿz ಇಂತಹ ಕಾರ್ಯಕ್ರಮ ನಡೆದಾಗ. ರಾಜ್ಯಪಾಲರು ಸರ್ಕಾರದ ಕೆಲವು ಕಾರ್ಯಕ್ರಮ ಮತ್ತು ವಿಶ್ವವಿದ್ಯಾಲಯ ಘಟಿಕೋತ್ಸವ ಬಿಟ್ಟು ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ ಎಚ್.ಆರ್. ಭಾರದ್ವಾಜ್ ಆ ನಂಬಿಕೆಯನ್ನು ಸುಳ್ಳಾಗಿಸಿದರು. ಹಲವಾರು ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜನರಿಗೆ ಹತ್ತಿರವಾದರು. ಮಾಧ್ಯಮದವರಿಗೆ ಸಾಧಾರಣವಾಗಿ ರಾಜ್ಯಪಾಲರೆಂದರೆ ಅಲರ್ಜಿ. ಏಕೆಂದರೆ ರಾಜ್ಯಪಾಲರು ಮಾಧ್ಯಮದವರೆದುರು ಬಾಯಿ ಬಿಡುವುದಿಲ್ಲ. ಹಾಗಾಗಿ ಮಾಧ್ಯಮದವರೂ ರಾಜ್ಯಪಾಲರನ್ನು ಮಾತನಾಡಿಸುವ ಪರಿಪಾಠ ಅಷ್ಟಾಗಿ ಇರುವುದಿಲ್ಲ. ಆದರೆ ಭಾರದ್ವಾಜ್ ಮಾಧ್ಯಮ ಪ್ರತಿನಿಧಿಗಳನ್ನು ಕಂಡರೆ ನಗುತ್ತಾ ತಾವಾಗಿಯೇ ಹತ್ತಿರ ಬಂದು ಮಾತನಾಡಿಸುತ್ತಿದ್ದರು. ಕೆಲವೊಮ್ಮೆ ಏನಾದರೂ ಹೇಳಬೇಕೆನ್ನಿಸಿದರೆ ತಾವೇ ಮೈಕ್ ಹಿಡಿದುಕೊಂಡು ಹೇಳಿದ್ದೂ ಇದೆ. ರಾಜ್ಯಪಾಲರ ಆಪ್ತ ಕಾರ್ಯದರ್ಶಿಗಳಿಗೆ ಇದು ನಿಜವಾಗಿಯೂ ಮುಜುಗರ ತರುತ್ತಿದ್ದ ಸಂಗತಿ. ಅದಕ್ಕೇ ಅವರು ಮಾಧ್ಯಮ ಪ್ರತಿನಿಧಿಗಳಿಗೆ ‘ದಯವಿಟ್ಟು ರಾಜ್ಯಪಾಲರ ಎದುರಿಗೆ ಬರಬೇಡಿ, ಮಾತನಾಡಿ ಬಿಡುತ್ತಾರೆ, ನಂತರ ನಮಗೇ ಕಷ್ಟ’ ಎಂದು ಅಲವತ್ತುಕೊಳ್ಳುತ್ತಿದ್ದರು. ಇವೆಲ್ಲ ರಾಜ್ಯಪಾಲ ಹಂಸರಾಜ ಭಾರದ್ವಾಜರ ವ್ಯಕ್ತಿತ್ವದಲ್ಲಿ ಕಂಡುಬರುತ್ತಿದ್ದ ಧನಾತ್ಮಕ ಅಂಶಗಳು.
ವಿವಾದಗಳೇ ಹೆಚ್ಚು
ಆದರೆ ಹಂಸರಾಜರಲ್ಲಿ ಈ ಧನಾತ್ಮಕ ಅಂಶಗಳಿಗಿಂತಲೂ ವಿವಾದಾತ್ಮಕ ಅಂಶಗಳೇ ಹೆಚ್ಚಾಗಿ ವಿಜೃಂಭಿಸಿದ್ದವು ಎನ್ನುವುದು ಉತ್ಪ್ರೇಕ್ಷೆಯಲ್ಲ. ಸಾಮಾನ್ಯವಾಗಿ ರಾಜ್ಯಪಾಲರು ಆಯಾ ರಾಜ್ಯದ ಆಡಳಿತ ವ್ಯವಸ್ಥೆಗೆ ಪೂರಕವಾಗಿ, ಅದು ಹದಗೆಡದಂತೆ ಎಚ್ಚರಿಕೆ ನೀಡುತ್ತಾ ಕಾರ್ಯಭಾರ ನಿಭಾಯಿಸಬೇಕು. ಮಾತಿಗಿಂತ ಕೃತಿಯ ಕಡೆಗೆ ಹೆಚ್ಚು ಗಮನ ಹರಿಸಬೇಕು. ಆದರೆ ಹಂಸರಾಜರು ಇದಕ್ಕೆ ತೀರಾ ವ್ಯತಿರಿಕ್ತವಾಗಿದ್ದರು. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಅವಧಿಯಲ್ಲಂತೂ ಹಂಸರಾಜರು ಸರ್ಕಾರದ ವಿರುದ್ಧ ತೊಡೆ ತಟ್ಟದ, ಕಿರಿಕ್ ಮಾಡದ ದಿನಗಳೇ ಇರಲಿಲ್ಲ. ಬಿಜೆಪಿ ಸರ್ಕಾರ ಯಾವುದೇ ಉತ್ತಮ ನಿರ್ಧಾರಗಳನ್ನು ಕೈಗೊಂಡರೂ ಅದಕ್ಕೆ ಕ್ಯಾತೆ ತೆಗೆಯುವುದೇ ಹಂಸರಾಜರ ಮರ್ಜಿಯಾಗಿತ್ತು. ಬಿಜೆಪಿ ಅಧಿಕಾರದಲ್ಲಿರುವವರೆಗೆ ಅಕ್ರಮ-ಸಕ್ರಮ ಯೋಜನೆಗೆ ಅನುಮತಿ ನಿರಾಕರಿಸಿದರು. ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿದರು. ಇವೆರಡೂ ಜನಪರ ನಿರ್ಧಾರಗಳು. ಇದಕ್ಕೆ ಅನುಮತಿ ನೀಡಿದ್ದರೆ ರಾಜ್ಯಪಾಲರು ಕಳೆದುಕೊಳ್ಳಬೇಕಾಗಿದ್ದುದು ಏನೂ ಇರಲಿಲ್ಲ. ಆದರೂ ಅವರು ಅನುಮತಿ ನೀಡಲಿಲ್ಲ.
ಬೆಂಗಳೂರು ವಿ.ವಿ.ಯ ಕುಲಪತಿ, ಕುಲಸಚಿವರು ಬೀದಿಗೆ ಬಂದು ರಂಪಾಟ ಮಾಡುತ್ತಿದ್ದರೂ ಹಂಸರಾಜರು ಕೇವಲ ಹೇಳಿಕೆ ನೀಡಿ ಸುಮ್ಮನಿರುತ್ತಿದ್ದುದು ಏಕೆಂದು ಆಶ್ಚರ್ಯವಾಗುತ್ತಿತ್ತು. ಪ್ರೊ. ರಂಗಪ್ಪ ವಿರುದ್ಧ ಆರೋಪಗಳಿದ್ದರೂ ಅವರನ್ನು ಮೈಸೂರು ಕುಲಪತಿಯಾಗಿ ನೇಮಿಸಿದರು. ಬೆಂಗಳೂರು, ಮೈಸೂರು, ಕರ್ನಾಟಕ ಮುಕ್ತ ವಿ.ವಿ., ದಾವಣಗೆರೆ, ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ., ರಾಣಿ ಚೆನ್ನಮ್ಮ, ಸಂಸ್ಕೃತ ವಿ.ವಿ. ಕುಲಪತಿ ನೇಮಕ ವಿಚಾರದಲ್ಲೂ ತಜ್ಞರು, ಸರ್ಕಾರದ ಜತೆ ನಡೆದ ರಾಜ್ಯಪಾಲರ ಜಟಾಪಟಿ ಅಷ್ಟಿಷ್ಟಲ್ಲ. ಖ್ಯಾತ ಸಂಶೋಧಕ ಡಾ. ಚಿದಾನಂದಮೂರ್ತಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ವಿಚಾರದಲ್ಲೂ ವಿರೋಧ. ಖಾಸಗಿ ವಿ.ವಿ.ಗಳ ಸ್ಥಾಪನೆಗೂ ವಿರೋಧ. ಆದರೆ ಆಮೇಲೆ ಎಲ್ಲಾ ಖಾಸಗಿ ವಿ.ವಿ.ಗಳಿಗೆ ಒಪ್ಪಿಗೆ. ಮಾಜಿ ಮುಖ್ಯಮಂತ್ರಿಗಳಾದ ಧರಂ ಸಿಂಗ್, ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆ ಹಗರಣ ಭುಗಿಲೆದ್ದಾಗ ರಾಜ್ಯಪಾಲರು ಇವರಿಬ್ಬರ ಬಗ್ಗೆಯೂ ಒಂದೇ ಧೋರಣೆ ತಾಳಬೇಕಿತ್ತು. ಆದರೆ ತಮ್ಮದೇ ಪಕ್ಷದ ಧರಂ ಸಿಂಗ್ ಅಕ್ರಮ ಗಣಿಗಾರಿಕೆ ಬಗ್ಗೆ ದಿವ್ಯಮೌನ ತಳೆದು ಪಕ್ಷಪಾತ ಕಳಂಕ ಅಂಟಿಸಿಕೊಂಡರು.
ಬಿಎಸ್ವೈ ಮೇಲೆ ಬಾಣ
ಇನ್ನು ಬಿಜೆಪಿಯ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾಡಿದ್ದಕ್ಕಂತೂ ಲೆಕ್ಕವೇ ಇಲ್ಲ. ಪ್ರತಿನಿತ್ಯವೆಂಬಂತೆ ಬಿಎಸ್ವೈ ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಹಂಸರಾಜರು, ಅವರನ್ನು ಸದಾಕಾಲ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದರು. ಕೊನೆಗೂ ಯಾರದೋ ಮಾತಿಗೆ ತಲೆಬಾಗಿ ಬಿಎಸ್ವೈ ಅವರನ್ನು ಜೈಲಿಗೆ ಕಳಿಸುವಲ್ಲೂ ಇದೇ ಹಂಸರಾಜರು ಸಹಕರಿಸಿದರು! ಬಿಎಸ್ವೈ ಜೈಲಿಗೆ ಹೋಗುವಂತಹ ಅಪರಾಧವನ್ನೇನೂ ನಿಜವಾಗಿ ಮಾಡಿರಲಿಲ್ಲ. ಆದರೆ ಬಿಜೆಪಿಯ ಕೆಲವು ಪಟ್ಟಭದ್ರರ ಕಿತಾಪತಿ, ರಾಜ್ಯಪಾಲರ ಪೂರ್ವಾಗ್ರಹ ನಿಲುವು, ಜೊತೆಗೆ ಬಿಎಸ್ವೈ ಅವರ ಹುಂಬತನಗಳಿಂದಾಗಿ ಜೈಲಿಗೆ ಹೋಗುವ ಪರಿಸ್ಥಿತಿ ಉದ್ಭವಿಸಿತ್ತು. ತಮಾಷೆಯೆಂದರೆ ಬಿಎಸ್ವೈ ರಾಜ್ಯಪಾಲರನ್ನು ರಾಜಭವನಕ್ಕೆ ಹೋಗಿ ಭೇಟಿ ಮಾಡಿದ ಒಂದಷ್ಟು ದಿನಗಳವರೆಗೆ ಭಾರದ್ವಾಜರು ಅವರ ವಿರುದ್ಧ ಹರಿಹಾಯದೆ ಮೌನವಾಗಿರುತ್ತಿದ್ದರು. ಅದೇಕೆಂಬುದು ಆಗ ಸಾರ್ವಜನಿಕರಿಗೆ ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ ! ಈಗ ಮಾತ್ರ ಅದೇಕೆಂಬುದು ಗುಟ್ಟಾಗಿ ಉಳಿದಿರಲು ಸಾಧ್ಯವಿಲ್ಲ.
ಸಂಶಯಾಸ್ಪದ ವ್ಯಕ್ತಿತ್ವ
ಕುಲಪತಿಗಳ ನೇಮಕ, ವಿಧಾನಪರಿಷತ್ತಿಗೆ ನಾಮನಿರ್ದೇಶನ ಇತ್ಯಾದಿ ವಿಚಾರಗಳಲ್ಲಿ ರಾಜ್ಯಪಾಲರ ನಿಲುವು ಅತ್ಯಂತ ಸಂಶಯಾಸ್ಪದವಾಗಿರುತ್ತಿದ್ದುದಕ್ಕೆ ನಿದರ್ಶನಗಳು ಅನೇಕ. ಈಗಲೂ ರಾಜ್ಯದ ಕೆಲವು ವಿ.ವಿ.ಗಳ ಕುಲಪತಿಗಳ ನೇಮಕಾತಿ, ಮುಂದುವರಿಕೆ ವಿದ್ಯಮಾನಗಳು ರಾಜ್ಯಪಾಲರ ‘ಶುದ್ಧ ಹಸ್ತ’ವನ್ನು ಪ್ರಶ್ನಿಸುವಂತೆ ಮಾಡಿವೆ. ಕೇಂದ್ರ ಕಾನೂನು ಸಚಿವರಾಗಿದ್ದಾಗಲೇ ಭ್ರಷ್ಟಾಚಾರದ ಕಳಂಕ ಅಂಟಿಸಿಕೊಂಡಿದ್ದ ಭಾರದ್ವಾಜ್ ಕೊನೆಪಕ್ಷ ರಾಜ್ಯಪಾಲರಾಗಿ ನೇಮಕಗೊಂಡಾಗ ಶುದ್ಧ ಹಸ್ತರಾಗಿ ಹುದ್ದೆ ನಿರ್ವಹಿಸಬೇಕಾಗಿತ್ತು. ಆದರೆ ಹಾಗಾಗಿಲ್ಲ ಎನ್ನುವುದೇ ವಿಷಾದದ ಸಂಗತಿ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಪ್ಪಟ ರಾಜಕಾರಣಿ ವಿ.ಸೋಮಣ್ಣ ಅವರನ್ನು ‘ಸಮಾಜಸೇವೆ’ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕೆಂಬ ಶಿಫಾರಸನ್ನು ಅವರು ಖಂಡತುಂಡವಾಗಿ ವಿರೋಧಿಸಿದ್ದರು. ಅದೊಂದು ಅವರ ಸೂಕ್ತವಾದ ನಿರ್ಧಾರವೇ ಆಗಿತ್ತು. ಸಾಹಿತ್ಯ, ಕಲೆ, ಸಮಾಜಸೇವೆ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರನ್ನೇ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕಾದುದು ಸಂಪ್ರದಾಯ ಹಾಗೂ ನಿಯಮ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ವಿಷಯದಲ್ಲಿ ಉತ್ತಮ ನಿರ್ಧಾರ ತೆಗೆದುಕೊಂಡ ರಾಜ್ಯಪಾಲರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಏಕೆ ಉಲ್ಟಾ ಹೊಡೆದರು ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ. ಮೊನ್ನೆ ಮೊನ್ನೆ ಕಾಂಗ್ರೆಸ್ ಮುಖಂಡರಾದ ವಿ.ಎಸ್. ಉಗ್ರಪ್ಪ, ಇಕ್ಬಾಲ್ ಅಹಮದ್ ಸರಡಗಿ, ಐವನ್ ಡಿ’ಸೋಜ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಚಿತ್ರನಟಿ ಜಯಮಾಲಾ ನಾಮನಿರ್ದೇಶನಕ್ಕೆ ಕಣ್ಣು ಮುಚ್ಚಿ ಸಹಿ ಹಾಕಿದರೇಕೆ? ಈ ಐದು ಸ್ಥಾನಗಳು ನಿಜವಾಗಿ ಶಿಕ್ಷಣ, ಸಾಹಿತ್ಯ, ಕಲೆ ಮತ್ತಿತರ ಕ್ಷೇತ್ರಗಳ ಗಣ್ಯ ಸಾಧಕರ ಆಯ್ಕೆಗೆ ಮೀಸಲಾಗಿರಬೇಕಾಗಿತ್ತು. ಈಗ ನಾಮನಿರ್ದೇಶನಗೊಂಡವರಲ್ಲಿ ಜಯಮಾಲಾ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಪಕ್ಕಾ ರಾಜಕಾರಣಿಗಳು. ನೇರ ಚುನಾವಣೆಯಲ್ಲಿ ಗೆಲ್ಲಲಾಗದೆ ಹಿಂಬಾಗಿಲಿನಿಂದ ವಿಧಾನಪರಿಷತ್ತಿಗೆ ಪ್ರವೇಶ ಪಡೆದವರು. ಅವರ್ಯಾರೂ ಸಮಾಜ ಸೇವಕರಲ್ಲ. ಸಹಕಾರ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದವರೂ ಅಲ್ಲ. ಆದರೂ ಅವರೆಲ್ಲ ನಾಮನಿದೇರ್ಶನಗೊಂಡು ಮೇಲ್ಮನೆಯ ಹೊಸಿಲನ್ನು ನಿರಾಯಾಸವಾಗಿ ತುಳಿದಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆಗಾಗಿ ಪಟ್ಟಿಯನ್ನು ತಾವೇ ತೆಗೆದುಕೊಂಡು ರಾಜ್ಯಪಾಲರ ಬಳಿಗೆ ಹೋಗಿದ್ದರು. ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ನ್ಯಾಯಾಲಯಗಳ ತೀರ್ಪುಗಳನ್ನು ರಾಜ್ಯಪಾಲರಿಗೆ ಅವರು ಮನವರಿಕೆ ಮಾಡಿಕೊಟ್ಟರಂತೆ. ರಾಜ್ಯಪಾಲರು ತಕ್ಷಣ ಸಹಿ ಹಾಕಿದರಂತೆ. ಇದನ್ನೆಲ್ಲ ಜನರು ಈಗ ನಂಬಬೇಕಾಗಿದೆ. ಆದರೆ ಇದರ ಹಿಂದೆ ಏನು ನಡೆಯಿತು? ರಾಜ್ಯಪಾಲರಿಗೆ ಈ ನಾಮನಿರ್ದೇಶನಕ್ಕೆ ಸಂದಾಯವಾದ ‘ಕಪ್ಪ-ಕಾಣಿಕೆ’ಯ ಮೊತ್ತವೆಷ್ಟು ಎಂಬುದು ಕೊನೆಗೂ ರಹಸ್ಯವಾಗಿಯೇ ಉಳಿಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಂಸರಾಜರಿಗೆ ಮಾತ್ರ ಆ ಸಂಗತಿ ಗೊತ್ತಿರಬಹುದು! ಬಿಜೆಪಿಗೊಂದು ನ್ಯಾಯ, ಕಾಂಗ್ರೆಸ್ಸಿಗೊಂದು ನ್ಯಾಯ. ಇದೇ ಹಂಸರಾಜರ ಹಂಸಕ್ಷೀರ ನ್ಯಾಯ!
ಮತ್ತೆ ವಿವಾದ
ಕರ್ನಾಟಕಕ್ಕೆ ಬಂದಾಗಿನಿಂದಲೂ ಹಲವಾರು ವಿವಾದಗಳಿಗೆ ಕಾರಣರಾದ ಭಾರದ್ವಾಜರು ಇಲ್ಲಿಂದ ತೆರಳುವಾಗಲೂ ಒಳ್ಳೆಯ ಕೆಲಸ ಮಾಡಲಿಲ್ಲ. ನಿರ್ಗಮನಕ್ಕೆ ಮುನ್ನ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಹಂಗಾಮಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಮೀರಾ ಸಕ್ಸೇನ ಅವರನ್ನು ನೇಮಿಸಿ ಆದೇಶ ಹೊರಡಿಸಿ ಮತ್ತೆ ವಿವಾದ ಸೃಷ್ಟಿಸಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಕಾಯ್ದೆ ಪ್ರಕಾರ, ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗುವವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿರಬೇಕು ಅಥವಾ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ ಅನುಭವ ಇರಬೇಕು. ಈ ನಿಯಮ ಉಲ್ಲಂಘಿಸಿ ಮೀರಾ ಸಕ್ಸೇನರ ಹೆಸರನ್ನು ಕಾಂಗ್ರೆಸ್ ಸರ್ಕಾರ ಶಿಫಾರಸು ಮಾಡಿತ್ತು. ಇದಕ್ಕೆ ಹಂಸರಾಜರು ಒಪ್ಪಿಗೆ ಸೂಚಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಯಾವ ಆಧಾರದ ಮೇಲೆ ಐಎಎಸ್ ಅಧಿಕಾರಿಯೊಬ್ಬರನ್ನು ರಾಜ್ಯಪಾಲರು ಮಾನವ ಹಕ್ಕು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲು ಒಪ್ಪಿಗೆ ಸೂಚಿಸಿದ್ದಾರೆ? ಇದರ ಹಿಂದಿನ ಹುನ್ನಾರವೇನು? ಇದು ಈಗ ಬಯಲಾಗಬೇಕಾದ ಸಂಗತಿ.
ರಾಜ್ಯಪಾಲರ ಹುದ್ದೆಯೆಂಬುದು ಕೇವಲ ಅಲಂಕಾರಿಕ. ಕೆಲವು ಸಂದಿಗ್ಧ ಸಂದರ್ಭಗಳಲ್ಲಿ ಮಾತ್ರ ಅವರಿಗೆ ವಿಶೇಷ ಅಧಿಕಾರಗಳಿರುವುದು ನಿಜ. ಅಂತಹ ಸಂದರ್ಭಗಳಲ್ಲಿ ಮಾತ್ರ ರಾಜ್ಯಪಾಲರ ಅಗತ್ಯ ಇರುತ್ತದೆ. ಆದರೆ ರಾಜ್ಯಪಾಲರ ಹುದ್ದೆಯೆಂಬುದು ಪ್ರಶ್ನಾತೀತ ಹುದ್ದೆಯಾಗಿರುವುದು ಅತ್ಯಂತ ಕಳವಳಕಾರಿ. ಒಬ್ಬ ಜವಾನ, ಒಬ್ಬ ಪೊಲೀಸ್ ಪೇದೆ ಕೆಲಸಕ್ಕಾದರೂ ಯಾರನ್ನು ಹೇಗೆ ಆಯ್ಕೆ ಮಾಡಬೇಕು ಎನ್ನುವ ನಿಯಮಗಳಿವೆ. ಆದರೆ ರಾಜ್ಯಮಟ್ಟದಲ್ಲಿ ಅತ್ಯಂತ ಉನ್ನತ ಸಾಂವಿಧಾನಿಕ ಹುದ್ದೆಯಾಗಿರುವ ಗವರ್ನರ್ಗಳ ಸ್ಥಾನಕ್ಕೆ ಕೇಂದ್ರದಲ್ಲಿ ಅಧಿಕಾರ ಹಿಡಿದವರು ತಮಗೆ ಇಷ್ಟಬಂದ ಯಾರನ್ನಾದರೂ ಬೇಕಾಬಿಟ್ಟಿಯಾಗಿ ನೇಮಿಸಬಹುದೇ ಎಂಬುದು ಪ್ರಜ್ಞಾವಂತರ ತಲೆ ತಿನ್ನುತ್ತಿರುವ ಪ್ರಶ್ನೆ. ಅಲಂಕಾರಿಕ ಹುದ್ದೆಯಾಗಿದ್ದರೂ ರಾಜ್ಯಪಾಲರಿಗೆ ರಾಜಭವನವೆಂಬ ವಿಲಾಸೀ ಬಂಗಲೆ, ಆಳುಕಾಳುಗಳು, ಇನ್ನಿತರ ಸವಲತ್ತುಗಳ ಅಗತ್ಯವಿದೆಯೆ? ಜನರ ಹಣವನ್ನು ರಾಜ್ಯಪಾಲರ ವಿಲಾಸೀ ಜೀವನಕ್ಕೆ ಹೀಗೆ ಅಪವ್ಯಯಗೊಳಿಸುವುದು ಎಷ್ಟು ಸಮಂಜಸ?
ನಿಜ, ಸಾಂವಿಧಾನಿಕ ಬಿಕ್ಕಟ್ಟುಗಳು ರಾಜ್ಯದಲ್ಲಿ ಉಂಟಾದಾಗ ರಾಜ್ಯಪಾಲರ ನಿರ್ಧಾರವೇ ನಿರ್ಣಾಯಕ. ಅದಕ್ಕಾಗಿ ರಾಜ್ಯಪಾಲರ ಅಸ್ತಿತ್ವವನ್ನು ಅಲ್ಲಗಳೆಯುವಂತಿಲ್ಲ. ಆದರೆ ಇಂತಹ ಗುರುತರ ಹೊಣೆಯ ನಿರ್ವಹಣೆಗೆ ರಾಜ್ಯಪಾಲರೆಂಬ ಅಲಂಕಾರಿಕ ಹುದ್ದೆಯೇ ಇರಬೇಕೆ? ಆ ಹೊಣೆಯನ್ನು ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ವಹಿಸಬಹುದಲ್ಲವೆ? ಹಾಗೆ ಮಾಡಿದರೆ ಬೊಕ್ಕಸಕ್ಕೆ ಸಾಕಷ್ಟು ಹಣ ಉಳಿತಾಯವಾಗಬಲ್ಲದು. ಸಂಪನ್ಮೂಲ ಕ್ರೋಡೀಕರಣಕ್ಕೆಂದು ಅನೇಕ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿರುವ ಮೋದಿ ಸರ್ಕಾರ, ಬೊಕ್ಕಸಕ್ಕೆ ಹೊರೆಯಾಗುತ್ತಿರುವ ರಾಜ್ಯಪಾಲರ ಹುದ್ದೆಗಳನ್ನು ರದ್ದುಪಡಿಸುವುದರ ಕಡೆಗೂ ಚಿಂತನೆ ನಡೆಸುವುದಕ್ಕೆ ಇದು ಸಕಾಲ.
ಬ್ಲರ್ಬ್: ಸಾಂವಿಧಾನಿಕ ಬಿಕ್ಕಟ್ಟುಗಳು ರಾಜ್ಯದಲ್ಲಿ ಉಂಟಾದಾಗ ರಾಜ್ಯಪಾಲರ ನಿರ್ಧಾರವೇ ನಿರ್ಣಾಯಕ. ಅದಕ್ಕಾಗಿ ರಾಜ್ಯಪಾಲರ ಅಸ್ತಿತ್ವವನ್ನು ಅಲ್ಲಗಳೆಯುವಂತಿಲ್ಲ. ಆದರೆ ಇಂತಹ ಗುರುತರ ಹೊಣೆಯ ನಿರ್ವಹಣೆಗೆ ರಾಜ್ಯಪಾಲರೆಂಬ ಅಲಂಕಾರಿಕ ಹುದ್ದೆಯೇ ಇರಬೇಕೆ? ಆ ಹೊಣೆಯನ್ನು ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ವಹಿಸಬಹುದಲ್ಲವೆ? ಹಾಗೆ ಮಾಡಿದರೆ ಬೊಕ್ಕಸಕ್ಕೆ ಸಾಕಷ್ಟು ಹಣ ಉಳಿತಾಯವಾಗಬಲ್ಲದು.

Leave a Reply

Your email address will not be published.

This site uses Akismet to reduce spam. Learn how your comment data is processed.