RSS pracharak K Suryanarayana Rao

Neranota: by Du Gu Lakshman

ಇಂದುನ. 5 ರಂದು ಸೂರೂಜಿ ಅವರಿಗೆ 90 ತುಂಬಿದ ಸಂದರ್ಭಕ್ಕಾಗಿ ಬೆಂಗಳೂರಿನ ಶಂಕರಪುರಂನ ಶಂಕರಮಠದಲ್ಲಿ ಹೋಮ ಹವನ ಧಾರ್ಮಿಕ ವಿಧಿ ನಡೆಯಲಿದೆ. ಬನ್ನಿ, ನಮಗೆಲ್ಲರಿಗೂ ಸಂಘಗಂಗೆಯ ಅಮೃತ ಉಣಿಸಿದ ಈ ಹಿರಿಯ ಚೇತನಕ್ಕೆ ಶುಭ ಕೋರೋಣ.

RSS pracharak K Suryanarayana Rao
RSS pracharak K Suryanarayana Rao

ಸೂರೂಜಿ, ಸೂರು ಅವರು…

ಈ ಹೆಸರು ಕೇಳಿದಾಕ್ಷಣ ಆರೆಸ್ಸೆಸ್ ವಲಯದಲ್ಲಿ ತಕ್ಷಣ ಒಂದು ಗೌರವ ಭಾವನೆ, ಒಂದು ಆಪ್ತತೆ, ಒಂದು ಅನಿರ್ವಚನೀಯ ಆತ್ಮೀಯ ಭಾವ ಸುಳಿಯುತ್ತದೆ. ಹಿರಿ-ಕಿರಿಯರೆನ್ನದೆ ಎಲ್ಲರೂ ಈ ಹೆಸರಿನ ವ್ಯಕ್ತಿಯ ಮುಂದೆ ನತಮಸ್ತಕರಾಗುತ್ತಾರೆ. ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಹೃದಯ ತೆರೆದಿಡುತ್ತಾರೆ.

ಸೂರೂಜಿ ಅಥವಾ ಸೂರು ಎಂದು ಪ್ರೀತಿಯಿಂದ ಕರೆಯಲಾಗುವ ಆ ವ್ಯಕ್ತಿಯೇ ಶ್ರೀ ಕೃ.ಸೂರ್ಯನಾರಾಯಣ ರಾವ್. ಈಗ 90ರ ಹರೆಯಕ್ಕೆ ತಲುಪಿರುವ (ಹುಟ್ಟಿದ್ದು 20-08-1924) ಅವರು ಸಂಘದ ವರಿಷ್ಠ ಪ್ರಚಾರಕರು. 1946 ರಲ್ಲಿ ಸಂಘದ ಪ್ರಚಾರಕರಾಗಿ ತನ್ನನ್ನು ದೇಶ ಕಾರ್ಯಕ್ಕಾಗಿ ಮುಡುಪಿಟ್ಟ ಸೂರ್ಯನಾರಾಯಣ ರಾವ್ ಅನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಗಣಿತದಲ್ಲಿ ಬಿಎಸ್ಸಿ (ಆನರ್ಸ್) ಪದವಿ ಪಡೆದ ಬಳಿಕ ಅವರು ಪ್ರಚಾರಕರಾಗಿ ಹೊರಟರು. ಅವರು ಸಂಘಕ್ಕೆ ಸೇರಿದ್ದು 1942 ರಲ್ಲಿ.

ಅಧಿಕೃತವಾಗಿ ಅವರು 1946ರಲ್ಲಿ ಸಂಘದ ಪೂರ್ಣಾವಧಿ ಕಾರ್ಯಕರ್ತರಾದರೂ ಅದಕ್ಕೂ ಮುಂಚೆ ವಿದ್ಯಾರ್ಥಿಯಾಗಿರುವಾಗಲೇ ಅವರು ಒಂದು ರೀತಿಯಲ್ಲಿ ಪೂರ್ಣಾವಧಿ ಕಾರ್ಯಕರ್ತರೇ ಆಗಿದ್ದರು. ಬಿಎಸ್ಸಿ ಪದವಿ ಓದುತ್ತಿರುವಾಗ ಅವರು ಪ್ರತಿ ಶನಿವಾರ ರಾತ್ರಿ ರೈಲಿನಲ್ಲಿ ಶಿವಮೊಗ್ಗೆಗೆ ಹೋಗುತ್ತಿದ್ದರು. ಭಾನುವಾರ ಅಲ್ಲಿ ಸಾಂಘಿಕ್, ಬೈಠಕ್, ಸ್ವಯಂಸೇವಕರ ಸಂಪರ್ಕ, ಅವರೊಡನೆ ಮಾತುಕತೆ ಇತ್ಯಾದಿ ಮುಗಿಸಿಕೊಂಡು ಅದೇ ದಿನ ರಾತ್ರಿ ರೈಲಿಗೆ ಬೆಂಗಳೂರಿಗೆ ಹೊರಡುತ್ತಿದ್ದರು. ಸೋಮವಾರ ಬೆಳಿಗ್ಗೆ ಮತ್ತೆ ಯಥಾಪ್ರಕಾರ ಕಾಲೇಜಿಗೆ.

ಅಜಾನುಬಾಹು ಶರೀರ, ರಾಷ್ಟ್ರೀಯ ವಿಚಾರಗಳನ್ನು ಪ್ರಖರವಾಗಿ ಮಂಡಿಸುವ ಅಸ್ಖಲಿತ ಮಾತುಗಾರಿಕೆ, ಎಂಥವರನ್ನೂ ಆಕರ್ಷಿಸುವ ಆತ್ಮೀಯ ವ್ಯಕ್ತಿತ್ವ, ಸಂಘ ವಿರೋಧಿಗಳನ್ನೂ ತಮ್ಮ ಸಮರ್ಥ ವಾದ ಮಂಡನೆಯಿಂದ ಹತ್ತಿರಕ್ಕೆ ಬರಮಾಡಿಕೊಳ್ಳುವ ಚಾತುರ್ಯ, ಅಪ್ರತಿಮ ಸಂಘಟನಾ ಕೌಶಲ್ಯ… ಹೀಗೆ ಒಬ್ಬ ಪ್ರಚಾರಕನಿಗೆ ಅಗತ್ಯವಿರುವ ಎಲ್ಲ ಗುಣವಿಶೇಷಗಳೂ ಸೂರೂಜಿ ಅವರಲ್ಲಿವೆ.

ಕರ್ನಾಟಕದಲ್ಲಿ ವಿಭಾಗ ಪ್ರಚಾರಕ್, 1972 ರಿಂದ 84 ರ ವರೆಗೆ ತಮಿಳುನಾಡು ಪ್ರಾಂತ ಪ್ರಚಾರಕ್, ಅನಂತರ 1990 ರವರೆಗೆ ಕ್ಷೇತ್ರ ಪ್ರಚಾರಕ್, ಅದಾದ ಬಳಿಕ ಅಖಿಲ ಭಾರತೀಯ ಸೇವಾ ಪ್ರಮುಖ್… ಹೀಗೆ ಹಲವಾರು ಉನ್ನತ ಜವಾಬ್ದಾರಿಗಳನ್ನು ಸಂಘದಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಅವರದು. ಅ.ಭಾ. ಸೇವಾ ಪ್ರಮುಖ್ ಆಗಿದ್ದಾಗ ಭಾರತದಾದ್ಯಂತ ಹಲವಾರು ಸೇವಾ ಪ್ರಕಲ್ಪಗಳಿಗೆ ಜೀವ ತುಂಬಿದರು. ಅಷ್ಟೇ ಅಲ್ಲ , ಅದೇ ವೇಳೆ ಅಮೆರಿಕ, ಟ್ರಿನಿಡಾಡ್, ಕೆನಡ, ಇಂಗ್ಲೆಂಡ್, ಜರ್ಮನಿ, ಹಾಲೆಂಡ್, ನಾರ್ವೆ, ಕೆನ್ಯಾ, ಮಲೇಶಿಯಾ, ಸಿಂಗಾಪುರ ಮತ್ತು ನೇಪಾಳ ಮೊದಲಾದ ದೇಶಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಹಿಂದು ಚಟುವಟಿಕೆಗಳಿಗೆ ರಭಸ ತಂದುಕೊಟ್ಟರು.

ಸಂಘದ ಒಬ್ಬ ಹಿರಿಯ ಪ್ರಚಾರಕ್ ಆಗಿ ಇಂತಹ ಹಲವು ಜವಾಬ್ದಾರಿಗಳನ್ನು ನಿರ್ವಹಿಸುವುದು ವಿಶೇಷವೇನಲ್ಲ. ಆದರೆ ಸೂರೂಜಿ ಅವರ ವಿಶೇಷತೆಗಳು ಬೇರೆಯೇ ಇವೆ. ಯಾವುದೇ ಜವಾಬ್ದಾರಿ ಹೊತ್ತಿರಲಿ, ಅಲ್ಲಿ ಸೂರೂಜಿ ಅವರದೇ ಛಾಪು ಎದ್ದು ಕಾಣುತ್ತಿತ್ತು. 1948 ರಲ್ಲಿ ಬೆಂಗಳೂರಿನ ಟಾಟಾ ಇನಸ್ಟಿಟ್ಯೂಟ್ ಜಾಗದಲ್ಲಿ 10 ಸಾವಿರ ಸ್ವಯಂಸೇವಕರ ಮೊಟ್ಟಮೊದಲ ಬೃಹತ್ ಶಿಬಿರ ಏರ್ಪಟ್ಟಾಗ ಆ ಶಿಬಿರದ ಯಶಸ್ಸಿಗೆ ದುಡಿದವರಲ್ಲಿ ಸೂರು ಅವರದು ಪ್ರಮುಖ ಹೆಸರು. 1969 ರ ಡಿಸೆಂಬರ್ ತಿಂಗಳಿನಲ್ಲಿ ಉಡುಪಿಯಲ್ಲಿ ವಿಶ್ವ ಹಿಂದು ಪರಿಷತ್‌ನ ಮೊಟ್ಟಮೊದಲ ಸಮ್ಮೇಳನ ಅದ್ಭುತ ಯಶಸ್ಸು ಕಾಣಲು ಕಾರಣಕರ್ತರು ಸೂರೂಜಿ ಅವರೇ. ಆ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯಾಗಿ ಅವರು ನಿರ್ವಹಿಸಿದ ಪಾತ್ರ ಸ್ಮರಣೀಯ. ನಿರೀಕ್ಷೆಗೂ ಮೀರಿ ಆ ಸಮ್ಮೇಳನಕ್ಕೆ ಪ್ರತಿನಿಧಿಗಳು ಬಂದಾಗ ಅವರಿಗೆಲ್ಲ ಉಡುಪಿಯ ಮನೆ ಮನೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವಲ್ಲಿ ಸೂರೂಜಿ ಅವರ ಸಂಘಟನಾ ಕೌಶಲ್ಯ ಹೊರಹೊಮ್ಮಿತ್ತು. ತಮಿಳುನಾಡಿನಲ್ಲಿ ಸಂಘಕಾರ್ಯ ಏನೇ ಆದರೂ ಬೆಳೆಯದು ಎಂಬ ನಿರಾಶೆ ಸಂಘದ ಕಾರ್ಯಕರ್ತರಲ್ಲಿ ಮನೆಮಾಡಿದ್ದಾಗ ಸೂರೂಜಿ ಅದನ್ನು ಹುಸಿಗೊಳಿಸಿದರು. ತಮಿಳುನಾಡಿನಾದ್ಯಂತ ಸಂಚರಿಸಿ, ಅಲ್ಲಿನ ವಿವಿಧ ಜಾತಿ, ಮತಗಳಿಗೆ ಸೇರಿದ ಗಣ್ಯರನ್ನು ಸಂಪರ್ಕಿಸಿ ದೇಶಕ್ಕೆ ಸಂಘದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು. ತಮಿಳಿನಲ್ಲೇ ಬೌದ್ಧಿಕ್, ಭಾಷಣ ಮಾಡುವಷ್ಟು ನಿಷ್ಣಾತರಾಗಿದ್ದರು ಅವರು. ಈಗಲೂ ಚೆನ್ನೈನ `ಶಕ್ತಿ’ ಸಂಘ ಕಾರ್ಯಾಲಯದಲ್ಲೇ ಅವರ ಕಾಯಂ ವಾಸ. ತಮಿಳುನಾಡಿನ ಸ್ವಯಂಸೇವಕರೊಂದಿಗೆ ತಮಿಳಿನಲ್ಲೇ ಮಾತುಕತೆ.

ಸೂರೂಜಿ ಅವರ ಇನ್ನೊಂದು ವಿಶೇಷತೆ – ಸ್ವಾಮಿ ವಿವೇಕಾನಂದರ ಬಗ್ಗೆ ಬೇರೆ ಯಾರೂ ಮಾತನಾಡದಷ್ಟು ಆಳವಾದ ಅಧ್ಯಯನ ಹಾಗೂ ತಿಳಿವಳಿಕೆ. ಸೂರೂಜಿ ಯಾವುದೇ ಸಭೆಯಲ್ಲಿ ಮಾತನಾಡಲಿ, ಯಾವುದೇ ವಿಷಯ ಪ್ರಸ್ತಾಪಿಸಲಿ ವಿವೇಕಾನಂದರ ಉಲ್ಲೇಖ ಇಲ್ಲದೆ ಅದು ಮುಗಿದಿದ್ದಿಲ್ಲ. ವಿವೇಕಾನಂದರನ್ನು ಅವರು ಆ ಪರಿಯಾಗಿ ಹಚ್ಚಿಕೊಂಡಿದ್ದಾರೆ. ರಾಮಕೃಷ್ಣ ಮಠದ ಕೆಲವು ಸಂನ್ಯಾಸಿಗಳಿಗೂ ತಿಳಿಯದಷ್ಟು ವಿವೇಕಾನಂದರ ವಿಚಾರಗಳನ್ನು ಸೂರೂಜಿ ತಿಳಿದುಕೊಂಡಿದ್ದಾರೆ.

ಸ್ವಾಮಿ ವಿವೇಕಾನಂದರ ಕುರಿತು ಸೂರೂಜಿಗೆ ಇಷ್ಟೊಂದು ಅಧ್ಯಯನ, ಆಳವಾದ ತಿಳಿವಳಿಕೆ ಹೇಗೆ ಸಾಧ್ಯವಾಯಿತು? ಅದಕ್ಕೊಂದು ಸ್ವಾರಸ್ಯಕರ ಹಿನ್ನೆಲೆ ಇದೆ. 1948 ರಲ್ಲಿ ಅವರು ಸಂಘದ ಮೇಲಿನ ನಿಷೇಧದ ಸಂದರ್ಭದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದಾಗ ಬಂಧಿತ ಆರೋಪಿಗಳಿಗೆ ಸಿಗರೇಟು ಸೇವನೆಗೆಂದು ಒಂದಿಷ್ಟು ಹಣ ಕೊಡುತ್ತಿದ್ದರಂತೆ. ಬಂಧಿತರಲ್ಲಿ ಹಲವರು ಈ ಹಣದಲ್ಲಿ ಸಿಗರೇಟ್ ಸೇದುತ್ತಿದ್ದರೆ, ಸೂರೂಜಿ ಮಾತ್ರ ಹಾಗೆ ಮಾಡದೆ ಆ ಹಣವನ್ನು ಸಂಗ್ರಹಿಸಿ ಅದರಿಂದ ವಿವೇಕಾನಂದರ ಪುಸ್ತಕಗಳನ್ನು ಕೊಂಡು ಓದುತ್ತಿದ್ದರು. ಹೀಗೆ ವಿವೇಕಾನಂದರ ಕುರಿತು ಇರುವ ಎಲ್ಲ ಸಾಹಿತ್ಯಗಳನ್ನೂ ಅಧ್ಯಯನ ಮಾಡಿದ ಅವರಿಗೆ ವಿವೇಕಾನಂದ ವಿಚಾರಧಾರೆ ಕರತಲಾಮಲಕ. ವಿವೇಕಾನಂದರ ಕುರಿತು ಒಂದು ಸಪ್ತಾಹ ಪೂರ್ತಿ ಹಲವು ಬಾರಿ ಉಪನ್ಯಾಸ ಮಾಲೆಯಲ್ಲಿ ಮಾತನಾಡಿದ್ದಾರೆ.

ಒಮ್ಮೆ ಮಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಕುರಿತು ಸೂರೂಜಿ ಅವರ ಭಾಷಣ ನಡೆಯಿತು. ಎಂದಿನಂತೆ ಸ್ಫೂರ್ತಿಪ್ರದ, ಓತಪ್ರೋತ ವಾಗ್ಝರಿ. ವೈಚಾರಿಕ ರಸಧಾರೆ. ವಿಶ್ಲೇಷಣೆಯ ಚಮತ್ಕಾರ. ಭಾಷಣ ಮುಗಿದ ಬಳಿಕ ಆಶ್ರಮದ ಕೆಲವು ಸ್ವಾಮೀಜಿಗಳು ತಮ್ಮ ತಮ್ಮಲ್ಲೇ ಚರ್ಚಿಸುತ್ತಿದ್ದರು. `ನಾವೆಲ್ಲ ವಿವೇಕಾನಂದರ ವಿಚಾರಧಾರೆ ಓದಿದ್ದೇವೆ. ಆದರೆ ಅದನ್ನು ಇಷ್ಟು ಸಮರ್ಥವಾಗಿ ಈ ರೀತಿಯಲ್ಲೂ ವಿಶ್ಲೇಷಿಸಬಹುದೆಂದು ತಿಳಿದಿರಲಿಲ್ಲ. ವಿವೇಕಾನಂದರು ಏನು ಹೇಳಿದ್ದಾರೋ ಅದರ ಪರಿಪಕ್ವ ವಿಶ್ಲೇಷಣೆ ಸೂರು ಅವರ ಭಾಷಣದಲ್ಲಿತ್ತು’- ಹೀಗೆಂದು ಅವರೆಲ್ಲ ಮಾತನಾಡಿಕೊಳ್ಳುತ್ತಿದ್ದರೆಂದು ಹಿರಿಯ ಪ್ರಚಾರಕರಾದ ಚಂದ್ರಶೇಖರ ಭಂಡಾರಿ ನೆನಪಿಸಿಕೊಳ್ಳುತ್ತಾರೆ.

90 ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ದಟ್ಟ ಮಲೆನಾಡಿನ ತೀರ್ಥಹಳ್ಳಿ ಸುತ್ತಲಿನ ಹಳ್ಳಿಗಳಿಗೆ ಯಾವುದೇ ಬಸ್ ಸೌಕರ್ಯ ಇರಲಿಲ್ಲ. ರಸ್ತೆ ಕೂಡ ಸರಿಯಾಗಿರಲಿಲ್ಲ. ಸೂರೂಜಿ ಹಲವು ಬಾರಿ ಚಕ್ಕೋಡಬೈಲು ಎಂಬ ಹಳ್ಳಿಗೆ ತೆರಳಲು ಕಲ್ಮನೆಯಲ್ಲಿ ದೋಣಿ ದಾಟಿ ಹೆಗ್ಗೋಡಿಗೆ ಬಂದು ಅಲ್ಲಿಂದ ನಾಲ್ಕೈದು ಕಿ.ಮೀ. ದೂರ ನಡೆದುಕೊಂಡು ಹೋಗಿದ್ದೂ ಉಂಟು. ಒಮ್ಮೆ ಕಮ್ಮರಡಿಯಿಂದ ಶೃಂಗೇರಿಗೆ ಸುಮಾರು 15 ಕಿ.ಮೀ ದೂರ ನಡೆದುಕೊಂಡೇ ಹೋಗಿದ್ದರು. ಸಂಘ ಕಾರ್ಯಕ್ಕಾಗಿ ಹೀಗೆ ಅವರು ತಮ್ಮ ಪ್ರಚಾರಕ್ ಜೀವನದಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿದ ದೂರ ಅದೆಷ್ಟೋ… ತಾಯಿ ಭಾರತಿಯ ಸೇವೆಯನ್ನು ಅವರು ಅಕ್ಷರಶಃ ತನು, ಮನಗಳಿಂದ ಮಾಡಿದ್ದಾರೆ.

ಸಂಘದ ದ್ವಿತೀಯ ಸರಸಂಘಚಾಲಕ ಶ್ರೀ ಗುರೂಜಿಯವರ ಜೊತೆಗೆ ೩೧ ವರ್ಷಗಳಷ್ಟು ದೀರ್ಘಕಾಲ ಕಾರ್ಯ ನಿರ್ವಹಿಸಿದ ಸೌಭಾಗ್ಯ ಸೂರೂಜಿ ಅವರದು. ಗುರೂಜಿಯವರು ಕರ್ನಾಟಕಕ್ಕೆ ಬಂದಾಗಲೆಲ್ಲ ಅವರ ಜೊತೆಗೆ ಸಾಥ್ ನೀಡುತ್ತಿದ್ದವರಲ್ಲಿ ಸೂರೂಜಿ ಪ್ರಮುಖರು. ಗುರೂಜಿಯವರನ್ನು ಅತ್ಯಂತ ಸಮೀಪದಿಂದ ಹಲವಾರು ಬಾರಿ ಕಂಡು, ಅವರೊಡನೆ ಆತ್ಮೀಯವಾಗಿ ಚರ್ಚಿಸುವಷ್ಟು ಸಲುಗೆ ಸೂರು ಅವರಿಗಿತ್ತು. ಶ್ರೀ ಗುರೂಜಿ ಅವರ ಕುರಿತು ಸೂರೂಜಿ 368 ಪುಟಗಳ Shri Guruji REMINISCENCES ಎಂಬ ದೊಡ್ಡ ಗ್ರಂಥವನ್ನೇ ಇಂಗ್ಲಿಷ್‌ನಲ್ಲಿ ಬರೆಯಲು ಬಹುಶಃ ಇದೇ ಹಿನ್ನೆಲೆಯಾಗಿರಬಹುದು. ಈ ಗ್ರಂಥಕ್ಕೆ ಮುನ್ನುಡಿ ಬರೆದವರು ಖ್ಯಾತ ಅಂಕಣಕಾರ ಎಸ್.ಗುರುಮೂರ್ತಿ. ಈ ಮುನ್ನುಡಿಯೇ ಒಂದು ಚಿಕ್ಕ ಕಿರುಹೊತ್ತಿಗೆಯಷ್ಟಿದೆ! ಬರೋಬ್ಬರಿ 120 ಪುಟಗಳ ಮುನ್ನುಡಿ ಅದು! ಆ ಮುನ್ನುಡಿಯ ಕೊನೆಯಲ್ಲಿ ಗುರುಮೂರ್ತಿ ಸೂರೂಜಿ ಅವರ ಕುರಿತು ಬರೆದಿರುವುದು ಹೀಗೆ : Suruji was amongst the first in Sangh to begin taking care of me from the earliest days of my association with Sangh. His boundless affection for me enabled him to overlook my faults and see only my positive side. This helped me grow in quality and in devotion. He was one of the principal guides, who continuously monitored me… Among the many whose influence over me saw to it that I digested the modern world, and would not alllow the modern world to digest me, Suruji is the most prominent.

ಈಗ ಸೂರೂಜಿ ಅವರಿಗೆ 90 ರ ಹರೆಯ. ವಯಸ್ಸಿನ ಕಾರಣದಿಂದ ದೇಹ ಕೊಂಚ ಮಾಗಿದೆ. ಒಮ್ಮೆ ಕೇರಳದಲ್ಲಿ ರಸ್ತೆ ಅಪಘಾತ ನಡೆದಾಗ ಅವರ ಸೊಂಟದ ಭಾಗಕ್ಕೆ ತೀವ್ರ ಏಟಾಗಿತ್ತು. ಪರಿಣಾಮವಾಗಿ ಈಗ ಅವರಿಗೆ ಊರುಗೋಲಿನ ಆಸರೆಯಿಲ್ಲದೆ ನೆಟ್ಟಗೆ ನಿಲ್ಲಲಾಗುತ್ತಿಲ್ಲ. ಆದರೆ ಉತ್ಸಾಹ, ಸಕ್ರಿಯತೆ ಕಿಂಚಿತ್ತೂ ಬತ್ತಿಲ್ಲ. ಬೆಳಿಗ್ಗೆ ಬೇಗನೆ ಎದ್ದು ಪ್ರಾತರ್ವಿಧಿ, ಸ್ನಾನ ಇತ್ಯಾದಿ ಪೂರೈಸಿ, ಆ ದಿನದ ಪತ್ರಿಕೆಗಳನ್ನೋದಿ, `ಇಂದು ನನ್ನ ಕಾರ್ಯಕ್ರಮ ಏನಪ್ಪಾ?’ ಎಂದು ಜೊತೆಗಾರರಿಗೆ ಪ್ರಶ್ನಿಸುತ್ತಾರೆ. ಯಾವುದೇ ಕಾರ್ಯಕ್ರಮ ಇಲ್ಲದಿದ್ದರೆ ಅಧ್ಯಯನ, ಸ್ವಯಂಸೇವಕರೊಂದಿಗೆ ವಾರ್ತಾಲಾಪದಲ್ಲಿ ನಿರತರಾಗುತ್ತಾರೆ.

ಸೂರೂಜಿ ಅವರ ಪ್ರೇರಣೆ ಪಡೆದು ಸಮಾಜದಲ್ಲಿ ಅನೇಕರು ಶಾಸಕ, ಸಚಿವ, ಮುಖ್ಯಮಂತ್ರಿ ಪದವಿಗೇರಿದವರೂ ಇದ್ದಾರೆ. ಸೂರೂಜಿ ಮಾತ್ರ ಹೀಗೆ ತಮ್ಮ ಸಂಪರ್ಕಕ್ಕೆ ಬಂದವರಿಗೆ ಸ್ಫೂರ್ತಿ, ಪ್ರೇರಣೆ ತುಂಬುತ್ತ ನಿಷ್ಕಾಮ ಯೋಗಿಯಂತೆ ದೇಶ ಸೇವೆಯಲ್ಲಿ ವ್ಯಸ್ತರಾಗಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.