ಹರಿಹರಪುರ: ತಮ್ಮ ಮಕ್ಕಳನ್ನು ತೋರಿಕೆಯ ಆಧುನಿಕ ವ್ಯಕ್ತಿಯನ್ನಾಗಿಸದೆ, ನಿಜವಾದ ಭಾರತೀಯನ್ನನ್ನಾಗಿಸಲು ತಮ್ಮ ಗುರುಕುಲದ ಈ ಪ್ರವಾಹದಲ್ಲಿ ಈಜಲು ಕಳಿಸಿರುವ ಪಾಲಕರು ಅಭಿನಂದನಾರ್ಹರು. ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಯಂತೆ ನಮ್ಮವರಿಗೇ ನಮ್ಮತನದ ಕುರಿತು ಗೌರವವಿಲ್ಲದಾಗಿದೆ. ಗುರುಕುಲ ಶಿಕ್ಷಣದ ಪರಿಣಾಮದಿಂದ ನಾವು ಪರಿಶುದ್ಧರಾಗಬಹುದು ಎಂದು ಖ್ಯಾತ ಅಂಕಣಕಾರ ರೋಹಿತ್ ಚಕ್ರತೀರ್ಥ ಹೇಳಿದರು.

ಹರಿಹರಪುರದ ಪ್ರಬೋಧಿನೀ ಗುರುಕುಲದಲ್ಲಿ ಜೂನ್ ೨೫ರಂದು ನಡೆದ `ನೂತನ ಛಾತ್ರ ಪ್ರವೇಶೋತ್ಸವ’ದಲ್ಲಿ ಅವರು ಮಾತನಾಡಿದರು.

ಬ್ರಿಟಿಷ್ ಸಾಮ್ರಾಜ್ಯದ ನೌಕರನಾಗಬೇಕೆಂದೇ ನಿರ್ಮಾಣವಾದ ಪದ್ಧತಿಯೇ ಆಧುನಿಕ ಶಿಕ್ಷಣ ಪದ್ಧತಿ. ಆದರೆ ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯು ಜೀವನಕ್ಕೆ ಬೇಕಾದ ಶಿಕ್ಷಣವಾಗಿದೆ. ಹೊರಗಿನೆಲ್ಲದನ್ನೂ ಓದಿ ತನ್ನ ಬಗ್ಗೆ ಅರಿವೇ ಇಲ್ಲದವರ ನಿರ್ಮಾಣ ಈಗಿನ ಆಧುನಿಕ ಶಿಕ್ಷಣದಿಂದಾಗುತ್ತಿದೆ ಎಂದರು.

ಜೀಜಾಬಾಯಿ ತೋರಿದ ಧೈರ್ಯದಿಂದಾಗಿ ಶಿವಾಜಿಯ ಉದಯವಾಯ್ತು. ಎಡಿಸನ್‌ನ ತಾಯಿಯ ಅಚಲ ನಿರ್ಧಾರದ ಕಾರಣದಿಂದ ಎಡಿಸನ್ ಮುಂದೊಮ್ಮೆ ಜಗಮೆಚ್ಚಿದ ವಿಜ್ಞಾನಿಯಾದನು. ಹೀಗೆ ಮಕ್ಕಳ ನೈಜ ಸಾಮರ್ಥ್ಯವನ್ನು ಅರಿತು ಬೆಳೆಸುವ ಕೇಂದ್ರವೇ ಗುರುಕುಲ ಎಂದು ನುಡಿದರು.

ನಮ್ಮಿಂದ ಕಸಿದುಕೊಂಡದ್ದನ್ನೇ ಬೇರೊಂದು ರೂಪದಲ್ಲಿ ನಮಗೇ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಭಾಷೆ, ಸಂಸ್ಕೃತಿ, ವೇಷಭೂಷಣದಲ್ಲಿ ಆನಂದವಿದೆ. ನಮ್ಮದು integratal approach. ಪಶ್ಚಿಮದ್ದು compartmental approach. ಸರಳ ಜೀವನ ಉದಾತ್ತ ಚಿಂತನೆ ನಮ್ಮದು. ಸತ್ಯ, ಧರ್ಮ, ಮೌಲ್ಯಗಳೇ ನಮ್ಮ ಸಂಸ್ಕೃತಿಯ ಆಧಾರ ಎಂದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಅಭ್ಯಾಗತರಾಗಿ ಭಾಗವಹಿಸಿದ ಶೃಂಗೇರಿಯ ರಾಜೀವಗಾಂಧಿ ಪರಿಸರ ವೇದಾಂತ ವಿಭಾಗದ ಉಪನ್ಯಾಸಕ ವಿಶ್ವನಾಥ ಸುಂಕಸಾಳ ಮಾತನಾಡಿ “ಮಕ್ಕಳ ಸರ್ವತೋಮುಖ ವಿಕಾಸವಾಗಬೇಕೆಂಬ ಮಹದಾಸೆಯಿಂದ ಗುರುಕುಲ ಆರಂಭವಾಯಿತು. ಶಿಕ್ಷಣ ಎಂದರೆ ಸಂಸ್ಕಾರ. ವೇದದಿಂದ ಆರಂಭಗೊಂಡು ಆಧುನಿಕ ವಿಜ್ಞಾನದವರೆಗಿನ ಶಿಕ್ಷಣ ಇಲ್ಲಿದೆ. ವೇದವೆಂದರೆ ವಿಜ್ಞಾನವೇ ಆಗಿದೆ. ಜ್ಞಾನವು ವಿಜ್ಞಾನ ಸಹಿತವಾಗಿರಬೇಕು. ಅನುಭವಕ್ಕೆ ಬಾರದ ಜ್ಞಾನ ವ್ಯರ್ಥ. ಆತ್ಮಜ್ಞಾನವೇ ವಿಜ್ಞಾನ. ಇಂತಹ ಆತ್ಮಜ್ಞಾನ ಬೋಧಿಸುವ ಗುರುಕುಲ ಹೀಗೆಯೇ ಅಭಿವೃದ್ಧಿ ಹೊಂದಲಿ” ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ವೈದ್ಯ, ವಿಜ್ಞಾನಿ ಡಾ.ಶ್ರೀಧರ್ ರವರು ಮಾತನಾಡಿ “ಗುರುಕುಲಕ್ಕೆ ಸೇರುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಯೋಗಾಭ್ಯಾಸದಂತಹ ಅತ್ಯಂತ ವೈಜ್ಞಾನಿಕ ವಿಷಯವನ್ನು ಇಲ್ಲಿ ಅಧ್ಯಯನ ಮಾಡಬಹುದು. ವೇದದಂತಹ ಪ್ರಾಚೀನ ವಿಜ್ಞಾನದ ಅಧ್ಯಯನ ಗುರುಕುಲದಲ್ಲಿದೆ. ಜೀವನಕ್ಕೆ ಅನಿವಾರ್ಯವಾದ ಕೃಷಿ ಕಲಿಸಲಾಗುತ್ತದೆ. ಮಾನಸಿಕ ಸಮತೋಲನ ಸಾಧನೆಗಾಗಿ ಕಲೆ ಇದೆ. ಹೀಗೆ ಗುರುಕುಲವು ಸಮಗ್ರ ಶಿಕ್ಷಣ ನೀಡುವಲ್ಲಿ ಕಾರ್ಯತತ್ಪರವಾಗಿದೆ” ಎಂದು ಅಭಿಪ್ರಾಯಪಟ್ಟರು.


ಗುರುಕುಲದ ವ್ಯವಸ್ಥಾಪಕ ಉಮೇಶ್ ಸ್ವಾಗತಿಸಿ, ಪ್ರಬೋಧಿನೀ ಟ್ರಸ್ಟ್ನ ಸದಸ್ಯ ಭೀಮಣ್ಣ. ವಂದಿಸಿದರು. ಗುರುಕುಲದ ಹಿರಿಯರಾದ ನಾರಾಯಣ ಶೇವಿರೆ. ಗಣ್ಯರಾದ ಡಿ.ಎನ್.ಜೀವರಾಜ್, ಎಸ್ ಎನ್ ರಾಮಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಕರ್ನಾಟಕದ ೧೩ ಜಿಲ್ಲೆ, ೧೭ ತಾಲ್ಲೂಕುಗಳ ೧೯ ಸ್ಥಾನಗಳಿಂದ ಆಯ್ಕೆಯಾದ ೧೯ ವಿದ್ಯಾರ್ಥಿಗಳು “ಪಂಚಗವ್ಯ ಹೋಮ”ದ ಮೂಲಕ ವಿಧಿವತ್ತಾಗಿ ಗುರುಕುಲಕ್ಕೆ ಪ್ರವೇಶ ಪಡೆದರು.

Leave a Reply

Your email address will not be published.

This site uses Akismet to reduce spam. Learn how your comment data is processed.