ಬೆಂಗಳೂರು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ಸಮಾಜದಲ್ಲಿ ಆರೋಗ್ಯಕರ ವಾತಾವರಣವನ್ನು ಮೂಡಿಸುವ ಅಸ್ತ್ರವಾಗಬೇಕಿತ್ತು. ಆದರೆ ಪ್ರಸ್ತುತ ಅದು ಧಾವಂತದಿಂದಾಗಿ ಅನೇಕ ವೈಪರಿತ್ಯಕ್ಕೆ ಎಡೆ ಮಾಡಿಕೊಡುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಆದರ್ಶ ಪ್ರಧಾನವಾಗಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಶ್ರೀನಿವಾಸ ಬಳ್ಳಿ ಹೇಳಿದರು.

ರಾಜ್ಯದ ಸುದ್ದಿ ಸಂವಹನ ಸಂಸ್ಥೆ ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವರ್ಷಂಪ್ರತಿ ನಾರದ ಜಯಂತಿಯ ಪ್ರಯುಕ್ತ ಪತ್ರಕರ್ತರಿಗೆ ಕೊಡಮಾಡುವ ವಿಎಸ್‌ಕೆ ಮಾಧ್ಯಮ ಪ್ರಶಸ್ತಿಯ ೨೦೨೩ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.

ಅನೇಕ ಒತ್ತಡಗಳ ಮಧ್ಯೆ ಕೆಲಸ ಮಾಡಬೇಕಾಗಿ ಬಂದರೂ ಮೌಲ್ಯವನ್ನಿಟ್ಟುಕೊಂಡು ಕೆಲಸ ಮಾಡುವವರಿಗೆ ಸಮಾಜದಲ್ಲಿ ವಿಶೇಷವಾದ ಅಸ್ತಿತ್ವವಿದೆ ಹಾಗೂ ಅವರು ಗೌರವಿಸಲ್ಪಡುತ್ತಾರೆ. ಯಾವ ವ್ಯಕ್ತಿ ತನ್ನ ವೈಯಕ್ತಿಕ ಜೀವನದ ಜೊತೆಗೆ ಶ್ರಮಪಟ್ಟು ಸಮಾಜವನ್ನು ಮುನ್ನಡೆಸುವ ಕಾರ್ಯ ಮಾಡುತ್ತಾರೊ ಅವರನ್ನು ಗುರುತಿಸುವುದು ಸಮಾಜದ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿಗಾಗಿಯೋ, ಪ್ರಶಂಸೆಗಾಗಿಯೋ ಕೆಲಸ ಮಾಡುವುದಕ್ಕಿಂತ ಒಳ್ಳೆಯ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುವುದನ್ನು ತನ್ನ ಧ್ಯೇಯವೆಂದು ಭಾವಿಸಿ ಕಾರ್ಯನಿರ್ವಹಿಸುವವರಿಂದ ಸಮಾಜ ಕಟ್ಟುವ ಕೆಲಸವಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಉಳಿಯಬೇಕಾಗಿರುವುದು ಮೌಲ್ಯವೇ ಆಗಿದೆ ಎಂದರು.

ಈ ಬಾರಿ ತಿ.ತಾ.ಶರ್ಮಾ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪ್ರಜಾವಾಣಿಯ ರವಿಪ್ರಕಾಶ್ ಎಸ್, ಸುವರ್ಣ ವಾಹಿನಿಯ ಜಯಪ್ರಕಾಶ್ ಶೆಟ್ಟಿ, ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಶಿವಮೊಗ್ಗದ ಅಜೇಯ ಪತ್ರಿಕೆಯ ಸಂಪಾದಕ ಎಂ. ಶ್ರೀನಿವಾಸನ್, ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿಯನ್ನು ಹೊಸದಿಗಂತದ ಅಂಕಣಕಾರ ಹೆಬ್ರಿ ಬಾಲಕೃಷ್ಣ ಮಲ್ಯ, ವಿಕ್ರಮ ವಾರಪತ್ರಿಕೆಯ ಅಂಕಣಕಾರ ಕಾ. ರಮಾನಂದ ಆಚಾರ್ಯ, ವಿ.ಎಸ್.ಕೆ. ಡಿಜಿಟಲ್ ಮಾಧ್ಯಮ ಪ್ರಶಸ್ತಿಯನ್ನು ಮೀಡಿಯಾ ಮಾಸ್ಟರ್ಸ್ ಸಂಪಾದಕ ಎಂ. ಎಸ್. ರಾಘವೇಂದ್ರ ಸ್ವೀಕರಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ವಿಶ್ವ ಸಂವಾದ ಕೇಂದ್ರದ ಅಧ್ಯಕ್ಷ ಡಾ.ಶ್ರೀಧರ್ ಉಪಸ್ಥಿತರಿದ್ದರು. ಚಿಂತಕರು, ಅಂಕಣಕಾರರು, ಲೇಖಕರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಶಸ್ತಿ ಪುರಸ್ಕೃತರ ವಿಸ್ತೃತ ಪರಿಚಯ

ಶ್ರೀ ರವಿಪ್ರಕಾಶ್ ಎಸ್
ಶ್ರೀಯುತ ರವಿಪ್ರಕಾಶ್ ಎಸ್ ಅವರು ೩೨ ವರ್ಷಗಳಿಂದ ನಿರಂತರವಾಗಿ ಸಂಯುಕ್ತ ಕರ್ನಾಟಕ, ಉದಯವಾಣಿ, ಕನ್ನಡಪ್ರಭ, ಟೈಮ್ಸ್ ಆಫ್ ಇಂಡಿಯಾ, ಹೊಸದಿಗಂತ, ವಿಜಯವಾಣಿ ಮುಂತಾದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರಜಾವಾಣಿ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ ಪದವಿ ಪಡೆದಿರುವ ಇವರು ಸಾಮಾಜಿಕ ಕಳಕಳಿಯುಳ್ಳ ಅನೇಕ ವರದಿಗಳ ಮೂಲಕವೇ ಮುನ್ನೆಲೆಗೆ ಬಂದವರು. ವೈಎನ್‌ಕೆ, ಕೆ.ಸತ್ಯನಾರಾಯಣ, ಈಶ್ವರ ದೈತೋಟ ಮುಂತಾದವರ ಮಾರ್ಗದರ್ಶನದಲ್ಲಿ ಬೆಳೆದು ಬಂದ ಇವರು ರಾಜಕೀಯ, ವಿಜ್ಞಾನ, ಸಾಹಿತ್ಯ, ಸಿನಿಮಾ, ಪರಿಸರ, ಡಿಫೆನ್ಸ್ ಹೀಗೆ ಅನೇಕ ವಿಷಯಗಳ ಕುರಿತು ಅತ್ಯಂತ ಸರಳವಾಗಿಯೂ ಆಳವಾಗಿಯೂ ಬರೆಯುವುದು ಇವರ ವಿಶೇಷತೆ. ಇವರ ಲೇಖನಗಳು ಸಮಾಜದ ಕೊನೆಯ ವ್ಯಕ್ತಿಯಿಂದ ಹಿಡಿದು ಮಾನವ ಸಹಿತ ಗಗನಯಾನದ ತನಕ ವಿಸ್ತಾರವಾದುದು. ಲಾಟರಿ ಮಾಫಿಯಾ, ಸೈಕಿಕ್ ಸರ್ಜರಿ, ಬೆನ್ನಿಹಿನ್‌ನ ಭಾರತ ಪ್ರವಾಸ, ಡೆಂಗಿ ಎಂಬ ಜೈವಿಕ ಅಸ್ತç ಸಮರ ಮುಂತಾದ ವರದಿಗಳು ಸಮಾಜದಲ್ಲಿ ಅತ್ಯಂತ ಪ್ರಭಾವ ಬೀರಿದ್ದು ಇವರ ವರದಿಗಾರಿಕೆಯ ಹೆಗ್ಗಳಿಕೆ. ಭೀಷ್ಮ ಸಹಾನಿ, ಎಲ್.ಕೆ.ಆಡ್ವಾಣಿ, ವ್ಯಾಸರಾಯ ಬಲ್ಲಾಳ, ವಿಜ್ಞಾನಿಗಳಾದ ಯು.ಆರ್.ರಾವ್, ಸಿ.ಎನ್.ಆರ್.ರಾವ್, ರೊದ್ದಂ ನರಸಿಂಹ, ಬಿ.ಎನ್.ಸುರೇಶ್, ಕಿರಣ್‌ಕುಮಾರ್ ಮುಂತಾದವರನ್ನು ಸಂದರ್ಶನವು ಅತ್ಯಂತ ವಿಶಿಷ್ಟವಾದವುಗಳು.

ಶ್ರೀ ಜಯಪ್ರಕಾಶ್ ಶೆಟ್ಟಿ
ಶ್ರೀ ಜಯಪ್ರಕಾಶ್ ಶೆಟ್ಟಿ ಅವರು ರಾಜ್ಯದ ಹೆಸರಾಂತ ಟಿವಿ ಪತ್ರಕರ್ತರು. ಈ-ಟಿವಿಯಲ್ಲಿ ವಾರ್ತಾವಾಚಕರಾಗಿ ತಮ್ಮ ಪತ್ರಿಕಾರಂಗದ ಪಯಣವನ್ನು ಶುರು ಮಾಡಿದ ಇವರು ನಂತರ ಉದಯ ನ್ಯೂಸ್ ಕನ್ನಡ, ಸಮಯ ಸುದ್ದಿವಾಹಿನಿಯಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಹಿರಿಯ ನಿರೂಪಕರಾಗಿ ಮತ್ತು ಪ್ರಚಲಿತ ವಿದ್ಯಮಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುವರ್ಣ ಬಿಗ್ – ೩ ಕಾರ್ಯಕ್ರಮದ ಮೂಲಕ ಸಮಾಜದ ಸಮಸ್ಯೆಗಳ ಪರಿಹಾರಕ್ಕಾಗಿ ವಹಿಸುತ್ತಿರುವ ವಿಶೇಷ ಪ್ರಯತ್ನದ ಮೂಲಕ ಮನೆಮಾತಾಗಿರುವ ಇವರು ತಮ್ಮ ವಿಶಿಷ್ಟ ಶೈಲಿಯ ನಿರೂಪಣೆಯ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾನವೀಯತೆ ಮೆರೆಯುವ ಅನೇಕ ಪ್ರೇರಣಾದಾಯಿ ಪೋಸ್ಟ್ಗಳ ಮೂಲಕ ನಾಡಿನಾದ್ಯಂತ ಪರಿಚಿತರು.

ಶ್ರೀ ಎಂ.ಶ್ರೀನಿವಾಸನ್
ಶ್ರೀ ಎಂ. ಶ್ರೀನಿವಾಸನ್ ಅವರು ಕಳೆದ ೩೫ ವರ್ಷಗಳಿಂದ ನಿರಂತರವಾಗಿ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡವರು. ೧೮ ವರ್ಷಗಳ ಕಾಲ ಶಿವಮೊಗ್ಗದ ನಾವಿಕ ದಿನಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಬಿ.ಕಾಂ ಶಿಕ್ಷಣದ ನಂತರ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಇವರ ವರದಿಗಾರಿಕೆಯು ಅತ್ಯಂತ ಸೂಕ್ಷ್ಮವಾದ ಒಳನೋಟಗಳನ್ನು ಹೊಂದಿದೆ. ಇವರು ಬರೆದ ಅನೇಕ ಕತೆ, ಕವನ ಕಾದಂಬರಿಗಳು ರಾಜ್ಯಮಟ್ಟದ ವಿವಿಧ ಪತ್ರಿಕಗಳಲ್ಲಿ ಪ್ರಕಟಗೊಂಡಿದೆ. ಇವರ ಸೇವೆಯನ್ನು ಗುರುತಿಸಿ ಮಿಥಿಕ್ ಸೊಸೈಟಿಯ ಶತಮಾನೋತ್ಸವದ ಸಂದರ್ಭದಲ್ಲಿ ಯುವ ಪ್ರತಿಭಾ ಪುರಸ್ಕಾರ, ಶಿವಮೊಗ್ಗ ಪಾಲಿಕೆಯಿಂದ ದಸರಾ ಪ್ರಶಸ್ತಿ, ಶಿವಮೊಗ್ಗ ಪತ್ರಕರ್ತರ ಸಂಘದಿಂದ ನೀಡುವ ಸೃಜನಾತ್ಮಕ ಪತ್ರಕರ್ತ, ಶಿವಮೊಗ್ಗ ಜಿಲ್ಲಾ ರೋಟರಿ ಪುರಸ್ಕಾರ ಹೀಗೆ ಅನೇಕ ಪ್ರಶಸ್ತಿಗಳು ದೊರೆತಿದೆ. ಪತ್ರಕರ್ತರಾಗಿ ಅಲ್ಲದೆ ಸಾಹಿತಿಗಳಾಗಿಯೂ ಕೃಷಿ ಮಾಡಿರುವ ಇವರು ಬಂಬಂ ಬೋಲೆ', 'ದೇವರು - ಹಾಗೆಂದರೇನು?',ನಾನೂ ಕೈಲಾಸ ಮುಟ್ಟಿದೆ’, ಕೃಷ್ಣ ಕಾರಣ',ದೇವಭೂಮಿಯ ಜಾಡಿನಲ್ಲಿ’ ಹೀಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೆ, ರಂಗಭೂಮಿಯಲ್ಲಿ ನಿರ್ದೇಶನ, ನಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯ ಕುರಿತು ಆಳವಾಗಿ ಅಧ್ಯಯನವನ್ನು ಮಾಡಿರುವ ಇವರು ನೃತ್ಯ, ಸಂಗೀತ, ಯಕ್ಷಗಾನಗಳಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದಾರೆ.

ಶ್ರೀ ಕಾ. ರಮಾನಂದ ಆಚಾರ್ಯ
ಶ್ರೀ ಕಾ. ರಮಾನಂದ ಆಚಾರ್ಯರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರು. ೧೯೩೬ರ ಎಪ್ರಿಲ್ ೨೯ರಂದು ಅವರ ಜನನ. ಕಾರ್ಕಳದ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸದ ನಂತರ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ವ್ಯಾಸಂಗ ಪೂರೈಸಿದರು. (ಈ ವೇಳೆ ಇವರ ಕಾಲೇಜು ಸಹಪಾಠಿಯಾಗಿದ್ದವರು ಚಂದ್ರಶೇಖರ ಭಂಡಾರಿಯವರು. ಸ್ವ|ಚಂದ್ರಶೇಖರ ಭಂಡಾರಿಯವರು ವಿಶ್ವಸಂವಾದ ಕೇಂದ್ರದ ಸಂಸ್ಥಾಪಕ ಟ್ರಸ್ಟಿಗಳಾಗಿದ್ದು ೪೨ಕ್ಕೂ ಹೆಚ್ಚು ಪುಸ್ತಕಗಳ ಲೇಖಕರು, ಹಿರಿಯ ಪ್ರಚಾರಕರಾಗಿದ್ದರು.) ರಮಾನಂದ ಆಚಾರ್ಯರು ಉದ್ಯೋಗ ನಿಮಿತ್ತ ಮುಂಬೈಗೆ ತೆರಳಿದರು. ನಂತರ ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಂದು ವರ್ಷದ ತಾಂತ್ರಿಕ ತರಬೇತಿ ಪಡೆದು ಮರಳಿ ಮುಂಬೈಗೆ ಬಂದು ವೆಸ್ಟರ್ನ್ ರೈಲ್ವೆಯಲ್ಲಿ ವೃತ್ತಿಜೀವನ ಮುಂದುವರೆಸಿದರು. ನಂತರ ಗುಜರಾತ್‌ನ ವಡೋದರಾ, ಗೋಧ್ರಾ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದರು. ೧೯೬೨ರಲ್ಲಿ ಕಾರ್ಕಳಕ್ಕೆ ಮರಳಿ ಅತ್ತೂರಿನ ಚರ್ಚ್ ಹೈಸ್ಕೂಲಿನಲ್ಲಿ ಒಂದು ವರ್ಷ ಅಧ್ಯಾಪಕ ವೃತ್ತಿ ನಡೆಸಿದರು. ೧೯೬೩ರಲ್ಲಿ ನಾಗಪುರದಲ್ಲಿ ತೃತೀಯ ವರ್ಷ ಸಂಘ ಶಿಕ್ಷಾ ವರ್ಗ ಪೂರೈಸಿದರು. ಅದೇ ವರ್ಷ, ೧೯೬೩ರಿಂದ ಸಂಘದ ಪ್ರಚಾರಕರು. ಕಳೆದ ೬೦ ವರ್ಷಗಳಿಂದ ಸಂಘದ ಪ್ರಚಾರಕರಾಗಿದ್ದಾರೆ. ಪ್ರಾರಂಭದ ೬ ತಿಂಗಳು ಆನೇಕಲ್‌ನ ದೊಮ್ಮಸಂದ್ರ – ಸರ್ಜಾಪುರದಲ್ಲಿ ಪ್ರಚಾರಕರಾಗಿದ್ದರು. ೧೯೬೩ರ ಡಿಸೆಂಬರ್ ತಿಂಗಳಲ್ಲಿ ಸಂಘದ ಯೋಜನೆಯಂತೆ ವಿಕ್ರಮ ವಾರಪತ್ರಿಕೆಯ ಸಂಪಾದಕೀಯ ತಂಡದ ಹೊಣೆಗಾರಿಕೆ ಹೆಗಲೇರಿತು. ಅಂದಿನಿಂದ ಇಂದಿನವರೆಗೆ, ಕಳೆದ ೬೦ ವರ್ಷಗಳಿಂದ ವಿಕ್ರಮ ವಾರಪತ್ರಿಕೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ೧೯೬೫ರಲ್ಲಿ ರಾಷ್ಟ್ರೋತ್ಥಾನ ಪರಿಷತ್ ಪ್ರಾರಂಭವಾದಾಗ ಸಂಘದ ಯೋಜನೆಯಂತೆ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಮೊದಲ ಒಂದು ವರ್ಷ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. ೧೯೬೬ರಲ್ಲಿ ವಿಕ್ರಮಕ್ಕೆ ಮರಳಿದರು. ೧೯೭೫ರಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭೂಗತರಾಗಿ ಕವಿ, ಲೇಖಕ ಶಿವರಾಮು ಅವರೊಂದಿಗೆ ಹೋರಾಟ. ಭೂಗತ ಪತ್ರಿಕೆ `ಕಹಳೆ’ಗೆ ರಮಾನಂದರೇ ಸುದ್ದಿಯ ಮೂಲ.

ಆರೆಸ್ಸೆಸ್ಸಿನ ಸರಸಂಘಚಾಲಕರಾಗಿದ್ದ ಗುರೂಜಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಪ್ರಚಾರಕರಾಗಲು ಅವರೇ ಪ್ರೇರಣೆ ಎನ್ನುತ್ತಾರೆ ರಮಾನಂದರು. ಯಾದವ್‌ರಾವ್ ಜೋಷಿ, ಮೈ.ಚ.ಜಯದೇವ್, ತಿ.ತಾ.ಶರ್ಮ, ಹೊ.ವೆ.ಶೇಷಾದ್ರಿ, ಮಧ್ವರಾವ್ ಮುಂತಾದವರ ಸ್ನೇಹಮಯಿ ವಾತಾವರಣದಲ್ಲಿ ಸಂಘಸಾಹಿತ್ಯದ ಕೃಷಿ ಬೆಳೆಸಿದರು. ಸಾವಿರಕ್ಕೂ ಹೆಚ್ಚು ಅನುವಾದ ಲೇಖನಗಳು, ಅಂಕಣಗಳು, ಸುದ್ದಿ ಲೇಖನಗಳು ಸೇರಿದಂತೆ ಬಹುಮುಖದಲ್ಲಿ ವಿಕ್ರಮ ವಾರಪತ್ರಿಕೆಯ ಬೆನ್ನೆಲುಬಾಗಿ ನಿಂತ ಧೀಮಂತ ಪತ್ರಕರ್ತರು – ಹಿರಿಯ ಅಂಕಣಕಾರರು. ಇದೀಗ ೮೮ರ ಹರೆಯದ ರಮಾನಂದ ಆಚಾರ್ಯರು ಇಂದಿಗೂ ತಮ್ಮ ಅವಿರತ ಬರವಣಿಗೆ ಕಾರ್ಯವನ್ನು ಮುಂದುವರೆಸಿದ್ದಾರೆ

ಶ್ರೀ ಹೆಬ್ರಿ ಬಾಲಕೃಷ್ಣ ಮಲ್ಯ
ಶ್ರೀ ಹೆಬ್ರಿ ಬಾಲಕೃಷ್ಣ ಮಲ್ಯ ಮೂಲತಃ ಹೆಬ್ರಿಯವರು. ೧೯೪೧ರಲ್ಲಿ ಇವರ ಜನನ. ಈಗ ೮೨ ವರ್ಷದ ಮಲ್ಯರು ತಮ್ಮ ಕ್ರಿಯಾಶೀಲತೆಯ ಮೂಲಕ ತರುಣ ಸಮೂಹಕ್ಕೆ ಪ್ರೇರಣೆಯಾಗಿದ್ದಾರೆ. ತಮ್ಮ ಬಿ ಎ ಬಿ ಎಲ್ ಪದವಿ ಬಳಿಕ ೮ ವರ್ಷ LIC of India ದಲ್ಲಿ ಉದ್ಯೋಗ ಮಾಡಿ, ೧೯೬೯ ರಿಂದ ೧೯೮೯ರವರೆಗೆ ಸಂಘದ ಪ್ರಚಾರಕರಾಗಿ ರಾಯಚೂರು, ಬಳ್ಳಾರಿ, ಮಂಗಳೂರು, ಬೆಂಗಳೂರುಗಳಲ್ಲಿ ಸಂಘದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ತುರ್ತು ಪರಿಸ್ಥಿತಿಯಲ್ಲಿ ೩ ತಿಂಗಳು ಸೆರೆವಾಸವನ್ನೂ ಅನುಭವಿಸಿದ್ದಾರೆ. ೩ ವರ್ಷ ವಿಕ್ರಮ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. ೧ ವರ್ಷ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕರಾಗಿ, ಆನಂತರ ದಿಲ್ಲಿಯಲ್ಲಿ ಸುಪ್ರೀಂ ಕೋರ್ಟ್ ವಕೀಲರಾಗಿ ೧೪ ವರ್ಷ ಕಾರ್ಯನಿರ್ವಹಣೆ ಮಾಡಿದ್ದಾರೆ. ಈಗ ಹೆಬ್ರಿಯ ಅಮೃತಭಾರತಿ ಸಮೂಹ ಸಂಸ್ಥೆಗಳ ಟ್ರಸ್ಟಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹೊಸದಿಗಂತ ಪತ್ರಿಕೆಯ ನಿಯಮಿತ ಅಂಕಣ ಬರಹಗಾರರಾದ ಇವರು, ಹಲವು ಸಂಘ ಸಾಹಿತ್ಯಗಳ ಅನುವಾದವನ್ನು ಮಾಡಿದ್ದಾರೆ. ಪ್ರಸ್ತುತ ಹೆಬ್ರಿಯಲ್ಲಿ ವಾಸವಿರುವ ಮಲ್ಯರು ತಮ್ಮ ಸರಳತೆ, ಸಜ್ಜನಿಕೆ, ಕಾರ್ಯನಿಷ್ಠೆಗೆ ಹಲವರಿಗೆ ರೋಲ್ ಮಾಡೆಲ್. ಧರ್ಮ, ಸಂಸ್ಕೃತಿ, ಗೋಳ ವಿಜ್ಞಾನ, ವೇದಗಣಿತ, ಸಂಘಟನೆ ಇವರ ಆಸಕ್ತಿಯ ವಿಷಯಗಳು.

ಶ್ರೀ ಎಂ.ಎಸ್ ರಾಘವೇಂದ್ರ
ಶ್ರೀ ಎಂ.ಎಸ್ ರಾಘವೇಂದ್ರ ತಮ್ಮ ಕಂಚಿನ ಕಂಠದ ಮೂಲಕವೇ ಕನ್ನಡಿಗರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿಯುವ ಜನಪ್ರಿಯ ಪತ್ರಕರ್ತರು. ಪ್ರಸ್ತುತ ಹೆಸರಾಂತ ಮೀಡಿಯಾ ಮಾಸ್ಟರ್ಸ್ ಡಿಜಿಟಲ್ ಮೀಡಿಯಾದ ಸಂಪಾದಕರು. ಹೊಸದಿಗಂತ, ಹಾಯ್ ಬೆಂಗಳೂರು ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ ಇವರು ಈ-ಟಿವಿ ಕನ್ನಡ ವಾಹಿನಿಯ ಮೂಲಕ ಟೆಲಿವಿಷನ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ನಂತರ ಟಿವಿ-೯ನಲ್ಲಿ ಕ್ರೈಂ ಕಾರ್ಯಕ್ರಮದ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶೇಷ ಹೆಗ್ಗಳಿಕೆಯೆಂದರೆ ಪ್ರತಿಷ್ಠಿತ `ರಾಮನಾಥ್ ಗೋಯಂಕ’ ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೊದಲ ತನಿಖಾ ಪತ್ರಕರ್ತರಿವರು. ೨೦೧೮ರಲ್ಲಿ ಮೀಡಿಯಾ ಮಾಸ್ಟರ್ಸ್ ಡಿಜಿಟಲ್ ಮೀಡಿಯಾವನ್ನು ಆರಂಭಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಲಕ್ಷಾಂತರ ವೀಕ್ಷಕರ ಪ್ರಶಂಸೆಗೆ ಪಾತ್ರವಾದ ಮೀಡಿಯಾ ಮಾಸ್ಟರ್ಸ್, ಪ್ರಸ್ತುತ ೨೪ ಲಕ್ಷಕ್ಕೂ ಹೆಚ್ಚಿನ ಸಬ್‌ಸ್ಕ್ರೈಬರ್ಸ್ ಅನ್ನು ಹೊಂದಿದೆ. ರಾಮಾಯಣ, ಮಹಾಭಾರತದ ೩೦೦ ಕ್ಕೂ ಹೆಚ್ಚು ಸಂಚಿಕೆಗಳು ಮೀಡಿಯಾ ಮಾಸ್ಟರ್ಸ್ನಲ್ಲಿ ಪ್ರಕಟಗೊಂಡಿವೆ. ಭಾರತೀಯ ವಿಜ್ಞಾನ, ಇತಿಹಾಸ, ಪ್ರಚಲಿತ ವಿದ್ಯಮಾನಗಳ ಜೊತೆಗೆ ಭಾರತೀಯ ಪುರಾಣ, ಸಂಸ್ಕೃತಿ, ಆಚರಣೆಗಳ ಮಹತ್ವವನ್ನು ತಿಳಿಸಿಕೊಡುವ ಕಾರ್ಯವನ್ನು ಮೀಡಿಯಾ ಮಾಸ್ಟರ್ಸ್ ಮಾಡುತ್ತಿದೆ.


Leave a Reply

Your email address will not be published.

This site uses Akismet to reduce spam. Learn how your comment data is processed.