BIRSA MUNDA, (1875–1900) was an Indian tribal freedom fighter and a folk hero, who belonged to the Munda tribe, and was behind the Millenarian movement that rose in the tribal belt of modern day Bihar, and Jharkhand during the British Raj, in the late 19th century, thereby making him an important figure in the history of the Indian independence movement.

ನವೆಂಬರ್ 15: ಗಿರಿಜನ ಸ್ವಾಭಿಮಾನ ದಿನ. ತನ್ನಿಮಿತ್ತ ಈ ವಿಶೇಷ ಲೇಖನ.
(ಈ ಲೇಖನ ಇಂದಿನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.)

ಲೇಖನ: ಸತ್ಯಪ್ರಕಾಶ, ಸಾಫ್ಟ್ ವೇರ್ ತಂತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ಬೆಂಗಳೂರು.


ಭಾರತಕ್ಕೆ ಭವ್ಯವಾದ ಇತಿಹಾಸ ಇದೆ. ಸಾವಿರಾರು ವರ್ಷಗಳ ಶ್ರೇಷ್ಠ ಸಂಸ್ಕೃತಿ ಇದೆ. ಅದರೆ ಈ ದೇಶದ ಜನರು ಸುಖ ನಿದ್ರೆ ಗೆ ಜಾರಿದಾಗಲೆಲ್ಲಾ ಆದ ಆಕ್ರಮಣಗಳು ಒಂದಲ್ಲಾ, ಎರಡಲ್ಲಾ. ಭಾರತೀಯರು ಆತ್ಮವಿಸ್ಮೃತಿ ಹೊಂದಿದಾಗಲೆಲ್ಲಾ ವಿದೇಶಿಯರು ನಮ್ಮ ಮೇಲೆ ಆಕ್ರಮಣ ಮಾಡಿದರು. ಹೂಣರು, ಶಕರು, ಮೊಘಲರು, ಬ್ರಿಟೀಷರು ಹೀಗೆ ಒಬೊಬ್ಬರಾಗಿ ಭಾರತವನ್ನು ಕೊಳ್ಳೆ ಹೊಡೆಯಲು ಅಗ್ರೇಸರರಾದರು. ಇಲ್ಲಿಯ ಜನರ ಮುಗ್ಧತೆ, ಸರಳತೆ, ಮೃದು ಸ್ವಭಾವ, ಬಡತನ ಇವುಗಳನ್ನು ಕಂಡು ತಾವು ಸುಲಭವಾಗಿ ಈ ದೇಶವನ್ನು ಆಳಬಹುದು ಎಂದು ಅರಿತುಕೊಂಡರು. ಭಾರತದಲ್ಲಿ ದೀರ್ಘಕಾಲ ಆಳ್ವಿಕೆ ಮಾಡಬೇಕಾದರೆ ಇಲ್ಲಿಯ ಜನರ ನಂಬಿಕೆ, ಶ್ರದ್ಧಾಕೇಂದ್ರಗಳನ್ನು ನಾಶಮಾಡಬೇಕು ಎಂದು ಕಂಡುಕೊಂಡರು. ಈ ರಾಷ್ಟ್ರಕ್ಕೆ ಶ್ರೇಷ್ಠವಾದ ಪರಂಪರೆ ಇದೆ, ಅನೇಕ ಮಹಾಪುರುಷರು, ವೀರರು, ಸಾಧು ಸಂತರು, ಕವಿಗಳು, ಋಷಿಗಳು, ವಿಜ್ಞಾನಿಗಳು, ಸಮಾಜ ಸುಧಾರಕರು, ವ್ಯಾಪಾರಿಗಳು, ಅರ್ಥಶಾಸ್ತ್ರಜ್ಞರು, ಕ್ರಾಂತಿಕಾರಿಗಳು ಜನಿಸಿದ್ದಾರೆಂದು ಇಲ್ಲಿಯ ಜನ ಮರೆಯುವಂತೆ ಷಡ್ಯಂತ್ರ ಮಾಡಿದರು.

ಹೀಗೆ ಭಾರತ ತನ್ನ ಅಸ್ತಿತ್ವವನ್ನು ಮರೆತು, ಹತಾಶವಾಗಿ, ಸ್ವಾಭಿಮಾನವೇ ಸತ್ತಂತಹ ಸಂದರ್ಭದಲ್ಲಿ ರಾಷ್ಟ್ರವನ್ನು ಬಡಿದೆಬ್ಬಿಸಿ ಜಾಗೃತ ಸಮಾಜನಿರ್ಮಾಣ ಮಾಡಿದವರು ಅನೇಕರು. ಅದರಲ್ಲಿ ವನವಾಸಿಗಳ ಪಾತ್ರ ಬಹಳ ಮುಖ್ಯವಾದದು. ರಾಜಸ್ತಾನದ ಪೂಂಜಾಭಿಲ್, ನಾಗಾಲ್ಯಾಂಡ್ ನ ಜಾದೋನಾ0ಗ್, ರಾಣಿ ಗಾಯಿಡಿನುಲ್ಯೂ, ಆಂಧ್ರದ ಅಲ್ಲೂರಿ ಸೀತಾರಾಮರಾಜು, ಬಿಹಾರದ ಸಿದ್ದು ಕಾನ್ಹೋ, ತಿಲಕಾ ಮ್ಹಾಜೀ, ಜತರಾಭಗತ, ಕೇರಳದ ತಲಕ್ಕಲ್ ಚಂದು, ಕರ್ನಾಟಕದ ಸುರಪುರದ ವೆಂಕಟಪ್ಪನಾಯಕ ಮುಂತಾದವರು ಹೆಮ್ಮೆಯಿಂದ ನೆನೆಯಬೇಕಾದ ಸ್ವಾಭಿಮಾನಿ ವನವಾಸಿ ಹುತಾತ್ಮರು. ಇಂತಹ ಅಸಂಖ್ಯಾತ ವನವಾಸಿ ಸ್ವತಂತ್ರ ಹೋರಾಟಗಾರರ ಪೈಕಿ ಸ್ವಾತಂತ್ರ ಸೇನಾನಿ ವನವಾಸಿ ಕ್ರಾಂತಿಕಾರಿ ಭಗವಾನ್ ಬಿರಸಾ ಮುಂಡಾರವರ ಹೆಸರು ಅಗ್ರಗಣ್ಯವಾದುದು. ವಿದೇಶಿ ಮಿಷನರಿಗಳ ಮತಾಂತರದ ಷಡ್ಯಂತ್ರದ ವಿರುದ್ಧ ಬ್ರಿಟಿಷರ ದಮನಕಾರಿ ಮತ್ತು ಕ್ರೂರ ಶಾಸನದ ವಿರುದ್ಧ ತನ್ನ ಚಿಕ್ಕ ವಯಸ್ಸಿನಲ್ಲೇ ಹೋರಾಡಿದ ಹಾಗೂ ತನ್ನ ಸಮುದಾಯದ ಜನರನ್ನು ಸಂಘಟಿಸಿ ಕ್ರಾಂತಿಯ ಅಲೆಯನ್ನು ಹಬ್ಬಿಸಿದವನು “ಭಗವಾನ್ ಬಿರಸಾ ಮುಂಡಾ”.

ಈಗಿನ ಝಾರ್ಖಂಡ್ ಮತ್ತು ದಕ್ಷಿಣ ಬಿಹಾರ ಪ್ರದೇಶಗಳನ್ನು ಛೋಟಾ ನಾಗಪುರ ಎಂದು ಕರೆಯುತ್ತಾರೆ.
ಈ ಪ್ರದೇಶದಗಳು ದಟ್ಟವಾದ ಅರಣ್ಯ ಮತ್ತು ಬೆಟ್ಟಗಳಿಂದ ಕೂಡಿದ್ದು ಇಲ್ಲಿ 90 ಪ್ರತಿಶತ ವನವಾಸಿಗಳಾದ “ಮುಂಡಾ” ಹಾಗು ಉರಾಂವ್ ಸಮುದಾಯದವರು ವಾಸಿಸುತ್ತಾರೆ. ಮುಂಡಾ ಎಂದರೆ ಮುಖ್ಯಸ್ಥ ಎಂದು ಅರ್ಥ. ಅವರ ಭಾಷೆ ಮುಂಡಾರಿ. ಛೋಟಾ ನಾಗಪುರದ ಉಲಿಹಾತು ಗ್ರಾಮದಲ್ಲಿ ನವೆಂಬರ್ 15 1875 ರಂದು ಮುಂಡಾ ಸಮುದಾಯದಲ್ಲಿ ಒಬ್ಬ ಮಹಾನ್ ವ್ಯಕ್ತಿಯ ಜನ್ಮವಾಯಿತು ಆ ವ್ಯಕ್ತಿಯ ಹೆಸರೇ “ಬಿರಸಾ ಮುಂಡಾ”. ತಂದೆ ಸುಗನ ಮುಂಡಾ ಹಾಗು ತಾಯಿ ಕಾರ್ಮಿಹಾತುರಿಗೆ 4 ನೇ ಪುತ್ರ ಬಿರಸಾ.

ಚಿಕ್ಕಂದಿನಿಂದಲೇ ತನ್ನ ಸಮುದಾಯದ ಮಕ್ಕಳನ್ನು ಸಂಘಟಿಸಿ ಆಟಗಳನ್ನು ಆಡುತ್ತ ತನ್ನ ತಂದೆ ತಾಯಿಗೆ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಬೆಳೆದನು. ಕಾಡಿನಲ್ಲಿ ಕುರಿ ಕಾಯಲು ಹೋದಾಗ ತಾನೇ ಕೊಳಲನ್ನು ತಯಾರಿಸಿ ಮಧುರವಾಗಿ ನುಡಿಸುತ್ತಿದ್ದ. ಮುಂಡಾ ಜನಾಂಗದಲ್ಲಿ ಒಂದು ನಂಬಿಕೆ ಇತ್ತು. ಅದರ ಪ್ರಕಾರ, ಮುಂಡಾ ಜನಾಂಗದಲ್ಲಿ ಒಬ್ಬ ದೇವತೆ ಜನಿಸಿ ಮುಂಡಾ ಸಮುದಾಯವನ್ನು ಮುನ್ನಡೆಸುವನು ಮತ್ತು ಅವನು ತನ್ನ ಕೊಳಲಿನ ನಾದದಿಂದ ಜನರನ್ನು ಹೋರಾಟಕ್ಕೆ ಪ್ರೇರೇಪಿಸುವನು ಎಂದು. ಇದು ಸತ್ಯವೇ ಆಯಿತು.

ಬಿರಸಾ ಕಲಿಕೆಯಲ್ಲಿ ಬಹಳ ಚುರುಕಾಗಿದ್ದ ಕಾರಣ ಅವನನ್ನು ಜರ್ಮನ್ ಮಿಷನರಿ ಶಾಲೆಗೇ ಸೇರಿಸಲು ಪೋಷಕರು ಮುಂದಾದರು. ಆದರೆ ಜರ್ಮನ್ ಮಿಷನರಿ ಶಾಲೆಯಲ್ಲಿ ಕೇವಲ ಕ್ರಿಶ್ಚಿಯನರಿಗೆ ಮಾತ್ರವೇ ಅವಕಾಶವಿತ್ತು ಹಾಗಾಗಿ ಬಿರಸಾನ ಕುಟುಂಭವು ಕ್ರೈಸ್ತ ಮತಕ್ಕೆ ಮತಾಂತರವಾಯಿತು. ಅವರಿಗೆಲ್ಲ ಬ್ಯಾಪ್ಟಿಸಮ್ ಕ್ರಿಯೆ ಮಾಡಲಾಯಿತು. ಶಿಶಾ(ಜುಟ್ಟು) ಹೊಂದಿದ್ದ ಬಿರಸಾನ ಜುಟ್ಟನ್ನು ಕತ್ತರಿಸಲಾಯಿತು. ಇದು ಆ ಎಳೆಯ ಮನಸ್ಸಿಗೆ ಬಹಳ ಆಘಾತವನ್ನು ಮಾಡಿತು.

ಮಿಷನರಿಯ ವಂಚನೆ:
ಒಂದು ರವಿವಾರ ಚಾಯಬಾಸದ ಚರ್ಚಿನಲ್ಲಿ ಜನರು ಪ್ರಾರ್ಥನೆಗಾಗಿ ಸೇರಿದ್ದರು. ಹೆಚ್ಚಿನವರು ಮುಂಡಾ ಜನರೇ ಇದ್ದರು. ಫಾದರ್ ನೋಟ್ರೋಸ್ ಈಶ್ವರನ ರಾಜ್ಯದ ಬಗ್ಗೆ ಹೇಳುತ್ತಾ ಭೂತಖೇತ್, ಸಹನಾಯಿ ಮುಂತಾದ ಮುಂಡಾ ಜನರ ಹಳ್ಳಿಗಳ ಸುತ್ತಲಿನ ಕಾಡನ್ನು ಮಿಷನರಿಗೆ ಒಪ್ಪಿಸುವಂತೆ ಹೇಳಿದನು. ಇದನ್ನು ಮುಂಡಾ ಜನರು ವಿರೋಧಿಸಿದಾಗ ಸಿಟ್ಟಾದ ಫಾದರ್ ಮುಂಡಾ ಜನರನ್ನು ವಂಚಕರು, ಕಳ್ಳರು, ಅಪ್ರಾಮಾಣಿಕರು ಎಂದು ನಿಂದಿಸಿದನು. ತನ್ನ ಜನಾಂಗದವರ ನಿಂದನೆ ಕೇಳಿದ ೧೪ ವರ್ಷದ ಬಿರಸಾನ ರಕ್ತ ಕುದಿಯ ಹತ್ತಿತು. ಅವನು ಎದ್ದು ನಿಂತು “ನೀವು ಯಾರನ್ನು ವಂಚಕರು ಕಳ್ಳರು ಅಪ್ರಾಮಾಣಿಕರು ಎನ್ನುತ್ತೀರಿ? ನಾವು ವನವಾಸಿಗಳು ಇದುವರೆಗೆ ಯಾರಿಗೂ ವಂಚಿಸಿಲ್ಲ. ನಮ್ಮಂತಹ ಸರಳ ವ್ಯಕ್ತಿಗಳು ವಿಶ್ವದಲ್ಲೇ ಸಿಗುವುದಿಲ್ಲ. ನೀವು ಬಿಳಿಯರು, ಶಾಸಕರೂ ಬಿಳಿಯರು ಹಾಗಾಗಿ ನೀವು ಅವರ ಪಕ್ಷ ವಹಿಸುತ್ತೀರಿ” ಎಂದು ಗದರಿದನು. ಈ ಘಟನೆಯ ನಂತರ ಬಿರಸನನ್ನು ಮಿಷನರಿ ಶಾಲಯಿಂದ ಹೊರಹಾಕಲಾಯಿತು.

ಬಿರಸಾ ಮುಂದೆ ಆಧ್ಯಾತ್ಮದಲ್ಲಿ ಆಸಕ್ತಿ ತಳೆದು ವೇದ, ರಾಮಾಯಣ, ಮಹಾಭಾರತ, ಉಪನಿಷತ್ ಮುಂತಾದವುಗಳನ್ನು ಅಧ್ಯಯನ ಮಾಡಿದನು. ಚೈತನ್ಯ ಮಹಾಪ್ರಭುಗಳ ಸಂಪರ್ಕಕ್ಕೆ ಬಂದನು. ಈ ಸಾಧನೆಗಳಿಂದ ಅವನ ಜೀವನದಲ್ಲಿ ಮಹತ್ವಪೂರ್ಣ ಬದಲಾವಣೆ ಆಯಿತು. ಅವನು ಇನ್ನಷ್ಟು ಪರಿಪೂರ್ಣ ವ್ಯಕ್ತಿತ್ವ ಹೊಂದಲು ಇದು ಸಹಾಯವಾಯಿತು.

ಬ್ರಿಟೀಷರ ಮತ್ತು ಮಿಷನರಿಗಳ ಪಿತೂರಿ:
1857 ರ ಪ್ರಥಮ ಸ್ವತಂತ್ರ ಸಂಗ್ರಾಮದಿಂದ ಎಚ್ಚೆತ್ತ ಬ್ರಿಟೀಷರು, ಯೂರೋಪಿನಿಂದ ರೋಮನ್ ಕಥೊಲಿಕ್ ಮಿಷನ್ ಮತ್ತು ಜರ್ಮನ್ ಲೂಥರನ್ ಚರ್ಚ್ ಮಿಷನರಿಗಳ ಒಂದು ತಂಡವನ್ನು ಛೋಟಾ ನಾಗಪುರಕ್ಕೆ ಕರೆಸಿಕೊಂಡುರು. ಮುಂಡಾ ಜನಾಂಗವನ್ನು ತಮ್ಮ ವಶದಲ್ಲಿ ಇಡಲು ಮಿಷನರಿಗಳ ಸಹಾಯವನ್ನು ಬ್ರಿಟೀಷರು ಪಡೆದರು. ಮಿಷನರಿಗಳು ಮುಂಡಾ ಹಾಗೂ ಉರಾಂವ್ ಜನರಿಗೆ ಶಿಕ್ಷಣ, ಆಸ್ಪತ್ರೆ ವ್ಯವಸ್ಥೆ, ಸಣ್ಣ ಪುಟ್ಟ ಸಹಾಯವೂ ಮಾಡುತ್ತಾ ಅವರನ್ನು ಮತಾಂತರ ಮಾಡಲಾರಂಭಿಸಿದರು.

ಭಾರತದ ವನ ಸಂಪತ್ತಿನ ಮೇಲೆ ಹಿಡಿತ ಸಾಧಿಸಿ ಹಣ ಸಂಪಾದಿಸಲು 1865 ರಲ್ಲಿ “ಭಾರತೀಯ ವನ ಅಧಿನಿಯಮ” ಎಂಬ ಕಾನೂನನ್ನು ತಂದರು. ಈ ಕಾನೂನಿನಿಂದ ವನವಾಸಿಗಳು ಕಾಡಿನ ಮೇಲಿನ ಅನೇಕ ಅಧಿಕಾರಗಳನ್ನು ಕಳೆದುಕೊಂಡುರು. ಬುಡಕಟ್ಟು ಜನರು ಕ್ರಿಶ್ಚಿಯನ್ ಮತಕ್ಕೆ ಮತಾಂತರವಾದರೆ ಅವರ ಭೂಮಿ ಮತ್ತು ಇತರೆ ಅಧಿಕಾರಗಳು ಸಿಗುವುದಾಗಿ ಮಿಷನರಿಗಳು ನಂಬಿಸಿ ಗ್ರಾಮ ಗ್ರಾಮವೇ ಮಾತಂತರ ಮಾಡಿದರು.
ಕಾಡಿನಲ್ಲಿ ಸಿಗುವ ಗೆಡ್ಡೆ, ಗೆಣಸು, ಜೇನು, ಹಣ್ಣು, ಹಂಪಲು, ಹಾಗೂ ಇನ್ನಿತರ ಕಾಡಿನ ಉಪನ್ನಗಳನ್ನು ಮಾರಾಟಮಾಡಿ ಜೀವನ ನಡೆಸುತ್ತಿದ್ದ ವನವಾಸಿಗಳಿಗೆ ಈ ಕಾನೂನಿನಿಂದ ಜೀವನ ಮಾಡುವುದೇ ಕಷ್ಟವಾಯಿತು. ಬ್ರಿಟೀಷರಿಗೂ ಮುಂಚಿನ ಸಮಯದವರೆಗೂ ಯಾವ ರಾಜರು ವನವಾಸಿಗಳ ಅರಣ್ಯಾಧಿಕಾರಕ್ಕೆ ಚುತಿ ಮಾಡಿರಲಿಲ್ಲ. ಅನೇಕ ವನವಾಸಿಗಳೇ ರಾಜರು ಸಹ ಆಗಿದ್ದರು. ಮಧ್ಯಪ್ರದೇಶದ ಗೊಂಡ ಸಂಸ್ಥಾನ, ಕರ್ನಾಟಕದ ಸುರಪುರದ ಬೇಡ ನಾಯಕರ ಸಂಸ್ಥಾನ ಬಹಳ ಅಚ್ಚುಕಟ್ಟಾಗಿ ರಾಜ್ಯಭಾರ ಮಾಡಿದ್ದರು. ಆದರೆ ಬ್ರಿಟೀಷರ ಆಳ್ವಿಕೆಯಲ್ಲಿ ವನವಾಸಿಗಳ ಜೀವನ ಬರ್ಬರವಾಯಿತು. ಅರಣ್ಯ ಸಂಪತ್ತು ಬ್ರಿಟೀಷರ ಕೈ ಸೇರಿತು. ಇದು ಸಾಲದೆಂಬಂತೆ 1878 ರಲ್ಲಿ ಈ ನಿಯಮಕ್ಕೆ ಮತ್ತಷ್ಟು ತಿದ್ದುಪಡಿ ತಂದು ವನವಾಸಿಗಳು ಅರಣ್ಯ ಸಂಪತ್ತನ್ನು ಸಂಗ್ರಹಿಸದಂತೆ ಮಾಡಿದರು. ಹೀಗೆ ವನವಾಸಿಗಳು ಮಿಷನರಿ, ಬ್ರಿಟೀಷ್ ಮತ್ತು ವ್ಯಾಪಾರಿಗಳ ಮಧ್ಯೇ ತತ್ತರಿಸಿದರು.

ಇದರ ಜೊತೆಗೆ ಇಂಗ್ಲಿಷ್ ಪ್ರಚಾರ ಪ್ರಸಾರ ಹೆಚ್ಚಾಯಿತು. ಎಲ್ಲಾ ಪತ್ರಗಳು ಇಂಗ್ಲಿಷ್ನಲ್ಲಿಯೇ ಬರಲಾರಂಭಿಸಿದವು. ಇಂಗ್ಲಿಷ್ ಬಾರದ ಮುಂಡಾ ಜನಾoಗದವರು ಮೋಸಹೋದರು. ಮಿಷನರಿಗಳ ಶಾಲೆಯಲ್ಲಿ ಮುಂಡಾ ಜನರ ಭಾಷೆ , ಸಂಸ್ಕೃತಿ, ಪದ್ದತಿ, ಸಮಾಜ ವ್ಯವಸ್ಥೆಗಳ ಬಗ್ಗೆ ಕೀಳರಿಮೆ ಬರುವಂತೆ ಭೋದಿಸಲಾಯಿತು.
ಇತ್ತ ಮಿಷನರಿಗಳು ನೀಡಿದ ಭೂಮಿ ಮತ್ತು ಅಧಿಕಾರದ ಆಶ್ವಾಸನೆಗಳು ಸುಳ್ಳಾದವು. ವನವಾಸಿಗಳ ಸಹನೆ ಮಿತಿ ಮೀರಿತ್ತು. ಮತಾಂತರಗೊಂಡ ಮುಂಡಾ ಸಮುದಾಯದವರು ಪಾದ್ರಿಯನ್ನು ಪ್ರಶ್ನಿಸಲಾರಂಭಿಸಿದರು. ಅನೇಕ ಕುಟುಂಭಗಳು ಮರಳಿ ಮಾತೃಧರ್ಮಕ್ಕೆ ಬಂದರು. ಬಿರಸಾ ನ ಕುಟುಂಭವೂ 1890 ರಲ್ಲಿ ಪುನಃ ಮಾತೃಧರ್ಮಕ್ಕೆ ಬಂದರು.

ಬಿರಸಾ ತನ್ನ ಸಮುದಾಯದ ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ , ಪರಂಪರೆಯ ಪುನರುತ್ಥಾನಕ್ಕೆ ಸಂಕಲ್ಪ ಮಾಡಿ ಯುವಜನರನ್ನು ಸಂಘಟಿಸಿ ಬ್ರಿಟೀಷರ ವಿರುದ್ಧ ಹೋರಾಡಲು ಅವರಲ್ಲಿ ಚೈತನ್ಯ ತುಂಬಲು ತನನ್ನು “ದೇವರ ಅವತಾರ” ಎಂದು ಘೋಷಿಸಿದ. “ಬ್ರಿಟೀಷರು ಹಾಗೂ ಮಿಷನರಿಗಳು ಒಂದೇ ಅವರು ನಮ್ಮ ಸಮಾಜವನ್ನು ದುರ್ಬಲ ಗೊಳಿಸುತ್ತಿದ್ದಾರೆ. ಅವರು ಮೊದಲು ನಮ್ಮ ಹೆಸರು ಬದಲಿಸಿ ನಮ್ಮ ಜುಟ್ಟು ಕತ್ತರಿಸಿ ಶಿಲುಬೆಯನ್ನು ಹಾಕುತ್ತಾರೆ ನಂತರ ನಮ್ಮ ಉಡುಗೆತೊಡುಗೆ ಬದಲಾಗುತ್ತದೆ. ಹೀಗೆ ಆದರೆ ಮುಂಡಾ ಜನಾಂಗ ಈ ಭೂಮಿಯಿಂದ ಮಾಯವಾಗುತ್ತದೆ” ಎಂದು ತನ್ನ ಪ್ರವಚನದಲ್ಲಿ ಹೇಳಿ ಎಚ್ಚರಿಸುತ್ತಿದ್ದನು.

ಬ್ರಿಟಿಷರಿಗೆ ಬಿಸಿ ಮಟ್ಟಿಸಿದ್ದು:

1894 ರಲ್ಲಿ ಬರಗಾಲ ಬಂದಿತ್ತು. ಆದರೆ ಬ್ರಿಟೀಷ ಶಾಸನ ಮತ್ತೊಂದು ಆದೇಶ ಹೊರಡಿಸಿ, ಕಾಡುಗಳನ್ನು ರಕ್ಷಿತ ಅರಣ್ಯ ಎಂದು ಘೋಷಿಸಿತು. ಈ ನೀತಿಯ ವಿರುದ್ಧ ಬಿರಸಾ ತನ್ನ ಎಲ್ಲಾ ಜನಪ್ರಿಯತೆ ಬಳಸಿ ಸ್ವತಂತ್ರ ಸಂಗ್ರಾಮವನ್ನು ಹಬ್ಬಿಸಿದ. “ಅಬುವ ರಾಜ್ ಹಾರೆ ಜಾನಾ ಓರೊ ಮಹಾರಾಣಿ ರಾಜ್ ಟಂಡು ಜಾನಾ”
ಅಂದರೆ ನಮ್ಮ ಶಾಸನ ಬಂದಿದೆ , ಮಹಾರಾಣಿ ಎಲಿಜಿಬತ್ ಶಾಸನ ಹೋಗಿದೆ ಎಂದು ಹೇಳುತ್ತಿದ್ದನು.
19 ವರ್ಷದ ಯುವ ನೇತಾರ ಬಿರಸಾ ಮುಂಡಾ ನ ಮಾತಿನಿಂದ ಪ್ರೇರಣೆ ಪಡೆದು ಅನೇಕ ಕಡೆ ಬ್ರಿಟೀಷರ ವಿರುದ್ಧ ಆಂದೋಲನಗಳು ನಡೆದವು.

ಜೈಲುವಾಸ :

ಶಾಸನದ ವಿರುದ್ಧ ಎತ್ತಿ ಕಟ್ಟಿದ ಆರೋಪದ ಮೇಲೆ ಬಿರಸಾ ಗೆ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿತು ಬ್ರಿಟೀಷ ಸರಕಾರ. ಕೇವಲ 20 ವರ್ಷದ ವಯಸಿನ್ನಲ್ಲಿ ಬಿರಸಾ ಒಬ್ಬ ಮಹಾಪುರುಷನಾಗಿ ಪರಿಗಣಿಸಲ್ಪಟ್ಟ . “ವಿಶ್ವದ ತಂದೆ ಭಗವಾನ್ ಬಿರಸಾ ” ಎಂಬ ಘೋಷಣೆ ಎಲ್ಲೆಲ್ಲೂ ಮೊಳಗ ತೊಡಗಿತು.

ಸಶಸ್ತ್ರ ಹೋರಾಟ:

30 ನವೆಂಬರ್ 1897 ಜೈಲಿನಿಂದ ಹೊರಬಂದ ಬಿರಸಾ ಹೋರಾಟದ ರೂಪವನ್ನೇ ಬದಲಿಸಿದ. ಭೂಗತನಾಗಿ ಸಶಸ್ತ್ರ ಹೋರಾಟಕ್ಕೆ ಮುಂದಾದ. ಗೆರಿಲ್ಲಾ ಸೈನಿಕರ ಪಡೆಯನ್ನು ಕಟ್ಟಿದ, 2 ವರುಷ ತನ್ನ ಸೈನ್ಯದ ತರಬೇತಿಗೆ ಮೀಸಲಿಟ್ಟ. 1899 ಡಿಸೇಂಬೆರ್ ನಲ್ಲಿ ಬ್ರಿಟೀಷರ ವಿರುದ್ಧ ಬಂಡಾಯದ ಕರೆ ನೀಡಿದ. ಬ್ರಿಟೀಷರ ಕಛೇರಿ, ಕಟ್ಟಡಗಳು ಮತ್ತು ಬ್ರಿಟೀಷರನ್ನು ಬೆಂಬಲಿಸುವ ಜನರ ಮನೆಗಳ ಮೇಲೆ ಬಿರಸಾ ಗೆರಿಲ್ಲಾ ಸೈನಿಕರು ಧಾಳಿ ಮಾಡಿದರು. “ಉಲಗುಲಾನ್” (ಕ್ರಾಂತಿಯ ಕಹಳೆ) ಗುಪ್ತ ಸಂಕೇತ ಬಿರಸಾ ಸೈನಿಕರಿಗೆ ಮಾತ್ರವೇ ತಿಳಿದಿತ್ತು. 24 ಡಿಸೆಂಬರ್ 1899 ಸುಮಾರು 7000 ಸೈನಿಕರೊಂದಿಗೆ 550 ಚದುರ ಮೀಟರ್ ಕ್ಷೀತ್ರದ ಬ್ರಿಟೀಷ್ ಅಧಿಕಾರಿಗಳ ಮನೆಗಳು, ಕ್ಲಬ್ ಗಳು, ಪೊಲೀಸ್ ಠಾಣೆಗಳು, ಕ್ರಿಶ್ಚಿಯನ್ ಮಿಷನರಿಗಳ ಮೇಲೆ ಬಿರಸಾ ಸೈನಿಕರುಬಾಣಗಾಳ ಮಳೆ ಸುರಿಸಿದರು. ಮರುದಿನ ಬ್ರಿಟೀಷರಿಗೆ ಯಾರು ಮಾಡಿದ್ದು, ಯಾರನ್ನು ಬಂದಿಸಬೇಕು ಎಂಬುದೇ ತಿಳಿಯಲಿಲ್ಲ. ಈ ಹೋರಾಟದ ಪರಿಣಾಮ ಮುಂಡಾ ಸಮುದಾಯಕ್ಕೆ ತಮ್ಮ ಹಕ್ಕನ್ನು ತೆಗೆದು ಕೊಳ್ಳುವ ಬಗೆ ತಿಳಿಯಿತು. ಮುಂಡಾ ಸಮುದಾಯ ಮತ್ತೆ ಸ್ವಾಭಿಮಾನದಿಂದ ತಲೆ ಎತ್ತಿ ನಿಂತಿತು. ಜೆನವರಿ 8 1900 ರಂದು ಮತ್ತೆ ಬ್ರಿಟಿಷರ ಮೇಲೆ ಆಕ್ರಮಣ ಮಾಡಿತು ಬಿರಸಾ ಸೈನ್ಯ. ಈ ಬಾರಿ 4000 ಹೆಚ್ಚು ಪುರುಷರು, ಮಕ್ಕಳೂ, ಮಹಿಳೆಯರೂ ಹೋರಾಟದಲ್ಲಿ ಸೇರಿದರು. ಬ್ರಿಟೀಷ್ ಸರಕಾರ ಈ ಬಾರಿ ಹೆಚ್ಚು ಸೈನ್ಯ ಕರೆಸಿತ್ತು ಮತ್ತು ಗೋಲಿಬಾರ್ ಗೆ ಆದೇಶ ನೀಡಿದ ಕಾರಣ ಅನೇಕ ಜನ ಹುತಾತ್ಮರಾದರು. ಬಿರಸಾ ನನ್ನು ಕಾಪಾಡಿ ಅವನ ಸೈನಿಕರು ಕರೆದೊಯ್ದರು. ಬಿರಸಾನ ಸುಳಿವು ನೀಡಿದವರಿಗೆ 500 ರೂ ಬಹುಮಾನ ಘೋಷಿಸಿದರು ಬ್ರಿಟೀಷರು . ಗುಪ್ತಚರರ ಸಹಾಯದಿಂದ ಮಾರ್ಚ್ 3 1900 ರಂದು ಬಿರಸಾನನ್ನು ಬಂಧಿಸಲಾಯಿತು. ಬಿರಸಾ ಮುಂಡಾ ಬ್ರಿಟೀಷರ ಭಯಂಕರ ಯಾತನೆಯನ್ನು ತಾಳಲಾರದೆ ಅವನ ಆರೋಗ್ಯ ಹದಗೆಟ್ಟಿತು. ಕೇವಲ 25 ವರ್ಷದ ಬಿರಸಾ ಮುಂಡಾ ಜೂನ್ 9 1900 ರಂದು ತನ್ನ ಜನರಿಗೆ ಮತ್ತು ಇಡೀ ಭಾರತಕ್ಕೆ ಸ್ವಾಭಿಮಾನದ ಪಾಠವನ್ನೇ ಕಲಿಸಿ ತನ್ನ ಜೀವನವನ್ನು ಸಾರ್ಥಕ ಮಾಡಿ ಹುತಾತ್ಮನಾದ. ಬಿರಸಾ ನ ಜೇವನ ನಮೆಲ್ಲರಿಗೆ ಪ್ರೇರಣೆ.

ಬಿರಸಾನಂತಹ ಅನೇಕ ವನವಾಸಿಗಳ ಶೌರ್ಯ ಪರಾಕ್ರಮವನ್ನು ನಮ್ಮಿಂದ ಮುಚ್ಚಿಡಲಾಗಿದೆ ಏಕೆ ? ಈ ವ್ಯಕ್ತಿಗಳು ನಮ್ಮ ಪಠ್ಯಪುಸ್ತಕದಲಿಲ್ಲ ಏಕೆ ? ಬ್ರಿಟೀಷರು ತಮಗೆ ಬೇಕಾದಹಾಗೆ ನಮ್ಮ ಚರಿತ್ರೆ ಬರೆಯಿಸಿದರು. ಹಾಗಾಗಿ ನಮಗೆ ವನವಾಸಿ ಸ್ವತಂತ್ರ ಹೋರಾಟಗಾರರ ಮಾಹಿತಿ ಇಲ್ಲ. ನಮ್ಮ ಸರಕಾರಗಳು ಸ್ವಾತಂತ್ರದ ನಂತರ ಈ ಕೆಲಸ ಮಾಡಬೇಕಿತ್ತು. ಯಾವ ಮುಖ್ಯ ಮಾಧ್ಯಮಗಳು ಇದರ ಬಗ್ಗೆ ಆಳವಾಗಿ ಅಧ್ಯಯನ ಮಾಡಲಿಲ್ಲ ಮತ್ತು ಈ ವರಗೆ ಕಥೆ, ಸಿನಿಮಾಗಳು ಬರಲಿಲ್ಲ. ವನವಾಸಿಗಳ ಸಾಹಸ, ಸ್ವಾಭಿಮಾನ ಮತ್ತು ಶೌರ್ಯದ ಕಥೆಗಳು ಬೆಳಕಿಗೆ ಬಂದಿಲ್ಲ. ವನವಾಸಿಗಳಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ವನವಾಸಿಗಳಿಗೆ ಸೂಕ್ತವಾದ ಅನುಕೂಲತೆಗಳನ್ನು ಮಾಡಿಕೊಡಲು ಸರಕಾರಗಳು ವಿಫಲವಾಗಿದೆ. ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಇಂದಿಗೂ ಮಿಷನರಿಗಳು ಅವ್ಯಾಹತವಾಗಿ ಮತಾಂತರ ಮಾಡುತ್ತಿದ್ದಾರೆ. “India Is land of diversity” ನಮ್ಮ ದೇಶ ವಿವಿಧತೆಗೆ ಹೆಸರುವಾಸಿ. ಅದರಲ್ಲೂ ವನವಾಸಿಗಳ ಸಂಸ್ಕೃತಿ, ಪರಂಪರೆ, ಕಲೆ, ಜೀವನ ಪದ್ಧತಿ, ಸಾಮಾಜಿಕ ವ್ಯವಸ್ಥೆ ವಿಶಿಷ್ಟವಾಗಿದೆ. ಇಂತಹವರನ್ನು ಮತಾಂತರಿಸಿ ಒಂದೇ ಅಚ್ಚಿನೊಳಗೆ ಹಾಕುವುದು ಎಷ್ಟು ಸರಿ? ಇದರ ಮಧ್ಯೆ ಆಶಾಕಿರಣದಂತೆ ಕೆಲವು ಸಂಸ್ಥೆಗಳು ವನವಾಸಿಗಳ ಮಧ್ಯೆ ಸೇವಾ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ಆರೋಗ್ಯ, ವಿದ್ಯಾಭ್ಯಾಸ, ಗುಡಿಕೈಗಾರಿಕೆ ಹೀಗೆ ವನವಾಸಿಗಳ ಮೂಲ ಸಂಸ್ಕೃತಿಯನ್ನು ಅಳಿಸದೇ ಸೇವೆಮಾಡುತ್ತಿರುವ ಸಂಸ್ಥೆಗಳಲ್ಲಿ ಅಗ್ರಮಾನ್ಯವಾದದ್ದು “ವನವಾಸಿ ಕಲ್ಯಾಣ ಆಶ್ರಮ”. ಸ್ವಾಭಿಮಾನಿ ಹಾಗು ಆತ್ಮ ನಿರ್ಭರ ವನವಾಸಿಗಳನ್ನಾಗಿ ಮಾಡುತ್ತಿರುವ ಈ ಸಂಸ್ಥೆಗೆ ನನ್ನ ಅಭಿನಂಧನೆಗಳು. ಇದು ಭಗವಾನ್ ಬಿರಸಾ ತೋರಿಸಿದ ದಾರಿಯೇ ಆಗಿದೆ. ವನವಾಸಿಗಳ ಸ್ವತಂತ್ರ ಹೋರಾಟಗಾರರ ಗೌರವಾರ್ಥವಾಗಿ ಹಾಗು ಭಗವಾನ್ ಬಿರಸಾ ಮುಂಡಾ ಜಯಂತಿಯ ಅಂಗವಾಗಿ ನವೆಂಬರ್ 15 “ಗಿರಿಜನ ಸ್ವಾಭಿಮಾನ ದಿನ” ಎಂದು ಆಚರಿಸಲಾಗುತ್ತಿದೆ. ಬನ್ನಿ ಸ್ವಾಭಿಮಾನಿ ವನವಾಸಿಗಳಿಗೆ ಶುಭಕೋರೋಣ, ಪ್ರೇರಣೆ ಪಡೆಯೋಣ.

ಸತ್ಯಪ್ರಕಾಶ: ಸಾಫ್ಟ್ ವೇರ್ ತಂತ್ರಜ್ಞರು, ಸಾಮಾಜಿಕ ಕಾರ್ಯಕರ್ತರು

Leave a Reply

Your email address will not be published.

This site uses Akismet to reduce spam. Learn how your comment data is processed.