ಬೆಂಗಳೂರು: ದೀನದಯಾಳ್ ಉಪಾಧ್ಯಾಯರೇ ಸ್ವತಃ ಹೇಳುವಂತೆ ಅವರ ಏಕಾತ್ಮ ಮಾನವ ದರ್ಶನದ ಚಿಂತನೆಗಳು ಈ ರಾಷ್ಟ್ರಕ್ಕೆ ಹೊಸತೇನಲ್ಲ. ಆದರೆ ಭಾರತೀಯ ಚಿಂತನೆಗಳು ನೀತಿಯಲ್ಲಿ ಬರಬೇಕು. ನೀತಿಗೆ ಸಂಬಂಧಪಟ್ಟಂತೆ ಸಂರಚನೆ ರೂಪಿತವಾಗಬೇಕು. ಸಂರಚನೆಗೆ ತಕ್ಕಂತೆ ಸಮಾಜದಲ್ಲಿ ವ್ಯಾವಹಾರಿಕ ಬದಲಾವಣೆಯಾಗಬೇಕು ಎನ್ನುವುದು ಅವರ ಧ್ಯೇಯವಾಗಿತ್ತು ಎಂದು ಭಾರತೀಯ ಶಿಕ್ಷಣ ಮಂಡಳಿಯ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಬಿ. ಆರ್. ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರದ ವತಿಯಿಂದ ಬೆಂಗಳೂರಿನ ಜೆ.ಪಿ.ನಗರದ ಆರ್.ವಿ.ಡೆಂಟಲ್ ಕಾಲೇಜಿನಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ 107ನೇ ಜಯಂತಿಯ ಪ್ರಯುಕ್ತ ನಡೆದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾನ್ಯ ಬಡಕುಟುಂಬದಲ್ಲಿ ಜನಸಿದ ದೀನದಯಾಳ್ ಉಪಾಧ್ಯಾಯ ಎಂಬ ಹುಡುಗ ಅಸಮಾನ್ಯ ವ್ಯಕ್ತಿಯಾಗಿ ಬೆಳೆದಿದ್ದೇಗೆ ಎಂಬ ಪ್ರಶ್ನೆ ನಮ್ಮನ್ನು ಚಿಂತನೆಗೆ ಎಡೆಮಾಡಿಕೊಡುತ್ತದೆ. ಭಗವಂತನು ಪ್ರತಿಯೊಬ್ಬನಲ್ಲೂ ಅದ್ವಿತೀಯತೆಯನ್ನು ಕೊಟ್ಟಿರುತ್ತಾನೆ. ಅದನ್ನು ಪ್ರಕಟೀಕರಣಗೊಳಿಸುವುದಕ್ಕೆ ಭಗವಂತನು ಎಲ್ಲರಿಗೂ ನೀಡಿರುವ ಅಸೀಮಾ ಶಕ್ತಿಯನ್ನು ಬಳಸಿಕೊಂಡಾಗ ನಮ್ಮ ಜೀವನ ಸಾರ್ಥಕವಾಗತ್ತದೆ. ಎದುರಾಗುವ ಎಲ್ಲಾ ಕಷ್ಟ, ನಷ್ಟ, ನೋವುಗಳನ್ನು ನಗುತ್ತಾ ಸ್ವೀಕರಿಸಿದಾಗ ಸಮಷ್ಟಿ ಹಿತ ಸಾಧ್ಯವಾಗತ್ತದೆ ಎಂದು ನುಡಿದರು.

ಭಗವಂತನು ಕರ್ಮ ಸ್ವಾತಂತ್ರ್ಯ ಮತ್ತು ಕಲ್ಪನಾ ಸ್ವಾತಂತ್ರ್ಯ ಎಂಬ ಎರಡು ರೀತಿಯ ಶಕ್ತಿಯನ್ನು ನಮಗೆ ನೀಡಿದ್ದಾನೆ. ಹಾಗಾಗಿ ಮನುಷ್ಯ ಯಾವ ಮಟ್ಟಿಗಿನ ಕಲ್ಪನೆಯನ್ನೂ ಮಾಡಿಕೊಳ್ಳಬಲ್ಲ ಮತ್ತು ಕರ್ಮ ಸ್ವಾತಂತ್ರ್ಯವನ್ನು ಬಳಸಿಕೊಂಡು ಅದರ ಸಾಕಾರಗೊಳಿಸಲೂಬಲ್ಲ. ಇದರಿಂದಾಗಿ ವಿನಾಶಗಳೇ ಹೆಚ್ಚಾಗುವುದರಿಂದ ಭಾರತದ ಮನೀಷಿಗಳು ಈ ಎರಡು ಶಕ್ತಿಗೆ ಧರ್ಮ ಎಂಬ ವಿಧಿನಿಷೇಧಗಳನ್ನು ಅಳವಡಿಸಿದರು. ಕಲ್ಪನಾ ಸ್ವಾತಂತ್ರ್ಯ ಮತ್ತು ಕರ್ಮ ಸ್ವಾತಂತ್ರ್ಯ ಧರ್ಮದ ಚೌಕಟ್ಟಿಗೆ ಬಂದಾಗ ವಿವೇಕ ಮತ್ತು ಪುರುಷಾರ್ಥಗಳು ಎಂದು ಕರೆಸಿಕೊಂಡವು.ಈ ಎರಡೂ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡಾಗ ಮನುಷ್ಯ ವ್ಯಷ್ಟಿಯಿಂದ ಸಮಷ್ಟಿಯೆಡೆಗೆ, ಸಮಷ್ಟಿಯಿಂದ ಸೃಷ್ಟಿಯೆಡೆಗೆ, ಸೃಷ್ಟಿಯಿಂದ ಪರಮೇಷ್ಟಿಯೆಡೆಗೆ ಹೋಗುತ್ತಾನೆ ಎಂದರು.

ಪರಮೇಷ್ಟಿಯ ಗುರಿಯ ಸಾಧನೆಗೆ ಇರುವ ಮಾರ್ಗಗಳು ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ, ಸನ್ಯಾಸ. ಈ ದೃಷ್ಟಿಯನ್ನು ನಮ್ಮ ಪೂರ್ವಜರು ತಮ್ಮ ಹಲವು ವರ್ಷಗಳ ಅನುಭವದ ಆಧಾರದ ಮೇಲೆ ವೈಜ್ಞಾನಿಕ ನೆಲೆಗಟ್ಟಿನಲ್ಲೇ ನೀಡಿದ್ದಾರೆ. ಅವುಗಳು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಪೂರ್ಣತೆಯ ಕಡೆಗೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಮನುಷ್ಯನನ್ನು ಹೇಗೆ ನೋಡಬೇಕು ಎಂಬ ದೃಷ್ಟಿಯಲ್ಲಿ ದೋಷ ಬಂದಿರುವುದರಿಂದ ಪತನ ಎನ್ನುವುದು ಆರಂಭವಾಗಿದೆ. ಜೊತೆಗೆ ಈ ಶಬ್ದಗಳ ಅರ್ಥವನ್ನು ವಿಕೃತಗೊಳಿಸಲಾಗಿದೆ. ವಿಕೃತಗೊಳಿಸಲಾದ ಅವಸ್ಥೆಯಿಂದ ಸಮಾಜವನ್ನು ಹೊರಗಡೆ ತಂದು ಅದರ ನಿಜಾರ್ಥದಲ್ಲಿ ಬದುಕುವಂತೆ ಮಾಡಬೇಕು. ಚಿಂತನೆಯಲ್ಲಿರುವ ಒಳ್ಳೆಯ ಸಂಗತಿಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ನುಡಿದರು.

ಭಾರತೀಯ ಚಿಂತನೆಯ ಯುಗಾನುಕೂಲ ರೂಪವೇ ಏಕಾತ್ಮ ಮಾನವ ದರ್ಶನ ಎಂದು ದೀನದಯಾಳ್ ಉಪಾಧ್ಯಾಯ ಅವರೇ ಸ್ವತಃ ತಿಳಿಸಿದ್ದಾರೆ. ಭಾರತ ನಿಜವಾಗಿಯೂ ಸ್ವಾತಂತ್ರ್ಯವಾಗಬೇಕಾದರೆ ಏಕಾತ್ಮ ಮಾನವ ದರ್ಶನ ಭಾರತದ ಜನಮಾನಸದಿಂದ ಪ್ರಕಟವಾಗಬೇಕು. ಭಾರತೀಯ ಚಿಂತನೆಗಳು ಸಾಮೂಹಿಕವಾಗಿ ಸಮಾಜದ ಜನರ ಬದುಕಿನಲ್ಲಿ ಪರಿವರ್ತನೆ ತರಬೇಕಾದರೆ ಹತ್ತಿರದ ಆದರ್ಶಗಳನ್ನು ಜನರ ಮುಂದಿಡಬೇಕು. ಸಮಾಜಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುವ ವ್ಯಕ್ತಿಗಳನ್ನು ನಿರ್ಮಿಸಬೇಕು. ಅಂತಹ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿದೆ. ದೀನದಯಾಳರ ಚಿಂತನೆಗಳು ನೀತಿಯಲ್ಲಿ ಬರಬೇಕು. ನೀತಿಗಳು ವ್ಯವಸ್ಥೆಯಲ್ಲಿ ಬರದೆ ಇದ್ದರೆ ಪರಿವರ್ತನೆ ತರುವುದು ಕಷ್ಟ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗುವುದು ಪ್ರತಿಯೊಬ್ಬರು ಈ ನೆಲೆಗಟ್ಟಿನಲ್ಲಿ ಕೆಲಸ ಮಾಡಿದಾಗ ಮಾತ್ರ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.