

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಗಾಗಿ ಕೇಂದ್ರ ಸರ್ಕಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
ಈ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ, ಮನಮೋಹನ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರು, ಲೋಕಸಭಾ ಸ್ಪೀಕರ್ ಸದಸ್ಯರುಗಳಾಗಿರುತ್ತಾರೆ.
ಈ ಸಮಿತಿಯು 2021ರ ಜನವರಿ 23 ರಿಂದ ಒಂದು ವರ್ಷಗಳ ಕಾಲ ನೇತಾಜಿ ಸ್ಮರಣಾರ್ಥ ಭಾರತ ಹಾಗೂ ಜಗತ್ತಿನ ಹಲವು ದೇಶಗಳಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಿದೆ. ನೇತಾಜಿ ನೀಡಿದ ಅಪಾರ ಕೊಡುಗೆಗೆ ಕೃತಜ್ಞತೆಯ ಸಂಕೇತವಾಗಿ ಈ ಕಾರ್ಯಕ್ರಮಗಳು ನಡೆಯಲಿದೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರು ಅತೀ ದೊಡ್ಡ ಶಕ್ತಿ. ಬ್ರಿಟೀಷರ ವಿರುದ್ಧದ ಸಶಸ್ತ್ರ ಹೋರಾಟಕ್ಕಿಳಿದ ನೇತಾಜಿ ಅವರ ಧೈರ್ಯ, ಅಪರಾ ಕೂಡುಗೆಗೆಯನ್ನು ಭಾರತ ಸ್ಮರಿಸಲೇಬೇಕು. ನೇತಾಜಿ ಆದರ್ಶ ಈಡೇರಿಸಲು ಹಾಗೂ ಭವ್ಯ ಭಾರತ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಈ ಉನ್ನತ ಮಟ್ಟದ ಸಮಿತಿಯಲ್ಲಿ ಇತಿಹಾಸಕಾರರು, ತಜ್ಞರು, ಲೇಖಕರು, ನೇತಾಜಿ ಸುಭಾಸ್ ಚಂದ್ರ ಬೋಸ್ ಕುಟುಂಬ ಸದಸ್ಯರು ಮತ್ತು ಆಜಾದ್ ಹಿಂದ್ ಫೌಜ್ ಸಂಬಂಧಿಸಿದ ಪ್ರಖ್ಯಾತ ವ್ಯಕ್ತಿಗಳು ಇರಲಿದ್ದಾರೆ.
2015-16ರಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 130ಕ್ಕೂ ಅಧಿಕ ಕಡತಗಳನ್ನು ಡಿಜಿಟಲ್ ಸ್ವರೂಪದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿರಿಸಿದ್ದರು. ನೇತಾಜಿ ಮೊತ್ತಮೊದಲಿಗೆ ತ್ರಿವರ್ಣ ಧ್ವಜ ಹಾರಿಸಿದ 75ನೇ ವರ್ಷಾಚರಣೆ ಪ್ರಯುಕ್ತ 2018ರಲ್ಲಿ ಅಂಡಮಾನ್ ನಿಕೋಬಾರ್ ಗೆ ಭೇಟಿ ನೀಡಿ ರೋಸ್ ಲ್ಯಾಂಡ್ ದ್ವೀಪವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಧ್ವೀಪವೆಂದೂ, ನೈಲ್ ದ್ವೀಪವನ್ನು ಶಹೀದ್ ದ್ವೀಪವೆಂದೂ ಹ್ಯಾವ್ಲಾಕ್ ದ್ವೀಪವನ್ನು ಸ್ವರಾಜ್ಯ ದ್ವೀಪವೆಂದು ಮರುನಾಮಕರಣಗೊಳಿಸಿದ್ದರು. 2019ರಲ್ಲಿ ಕೆಂಪುಕೋಟೆಯಲ್ಲಿ ನೇತಾಜಿ ಸಂಗ್ರಹಾಲಯವನ್ನು ಉದ್ಘಾಟಿಸಿದ್ದರು. ಜೊತೆಗೆ 2019ರ ಗಣರಾಜ್ಯೋತ್ಸವದಂದು 4 ಮಂದಿ ಐಎನ್ಎ ಸೈನಿಕರನ್ನು ಗುರುತಿಸಿ ಗೌರವಿಸಿರುವುದುನ್ನು ಇಲ್ಲಿ ಸ್ಮರಿಸಬಹುದು.