ಬೆಂಗಳೂರು: ಪ್ಲಾಸ್ಟಿಕ್‌ಗೆ ಸರ್ಕಾರ ನಿಷೇಧ ಹೇರಿದರೂ ಬಳಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ ಜನರಿಗೆ ಅರಿವು ಮೂಡಿಸಲು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮಂದಿರಗಳಲ್ಲೂ ಪೂಜಾ ಸಾಮಾಗ್ರಿಗಳ ಮೂಲಕ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು ಅವುಗಳಿಗೆ ಕಡಿವಾಣವನ್ನು ಹಾಕಲು ಅನೇಕ ಮಂದಿರಗಳ ಆಡಳಿತ ಮಂಡಳಿಗಳು ನಿರ್ಧರಿಸಿವೆ. ಭಾರತದ ಸಾಂಸ್ಕೃತಿಕ ರಾಜಧಾನಿಯೆಂದು ಗುರುತಿಸಲ್ಪಡುವ ಅಯೋಧ್ಯೆಯಲ್ಲೂ ಇದರ ಕುರಿತಾಗಿ ಹೆಚ್ಚಿನ ಕಾಳಜಿ ವಹಿಸಿದ್ದು ಪ್ಲಾಸ್ಟಿಕ್ ಮುಕ್ತ ಅಯೋಧ್ಯೆವಾಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಹೇಳಿದರು.

ಪರಿಸರ ಸಂರಕ್ಷಣೆ ಗತಿವಿಧಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ಸಭಾಂಗಣದಲ್ಲಿ ಆಯೋಜಿಸಿದ ‘ಪಾಲಿಥೀನ್ ಮುಕ್ತ ಅಯೋಧ್ಯೆಯತ್ತ ನಮ್ಮ ಚಿತ್ತ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆಯನ್ನು ನಿಮಿತ್ತವಾಗಿಸಿಕೊಂಡು ರಾಷ್ಟçವ್ಯಾಪಿ ಪರಿಸರದ ಕುರಿತು ಜಾಗೃತಿಗೆ ಹೊಸತೊಂದು ಯೋಜನೆಗೆ ನಾವು ಸಿದ್ಧರಾಗಬೇಕಿದೆ. ಜನವರಿ 22ರಂದು ನಮ್ಮ ಗ್ರಾಮಗಳು ಅಯೋಧ್ಯೆಯಾಗಿ, ಇಲ್ಲಿನ ಮಂದಿರಗಳು ರಾಮಮಂದಿರವಾಗಿ ರಾಮನ ಆರಾಧನೆ ನಡೆಯುತ್ತದೆ. ಈ ಸಂದರ್ಭದಲ್ಲಿ ನಾವು ಅಯೋಧ್ಯೆಗೆ ಹೋಗಬೇಕಾದರೆ ಪರಿಸರಕ್ಕೆ ಪೂರಕವಾದ ನಮ್ಮ ನಡವಳಿಕೆ ಹೇಗಿರಬೇಕು, ನಮ್ಮ ಗ್ರಾಮದ ಮಂದಿರಗಳು ಪ್ಲಾಸ್ಟಿಕ್ ಮುಕ್ತವಾಗಿಸುವುದಕ್ಕೆ ನಾವೇನು ಮಾಡಬೇಕು ಹಾಗೂ ನಮ್ಮ ದಿನನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವುದು ಹೇಗೆ ಎನ್ನುವುದರ ಕುರಿತು ಮಾಹಿತಿಯನ್ನು ನೀಡಬಹುದು. ಪಣವಿದೋ ರಾಮನ ಮೇಲಾಣೆ, ಮಂದಿರವಲ್ಲೇ ಕಟ್ಟುವೆವು ಎಂಬ ಧ್ಯೇಯವನ್ನು ಹೊಂದಿ ಮಂದಿರ ಕಟ್ಟಿದ್ದಾಗಿದೆ. ಇನ್ನು ಮುಂದೆ ಪಣವಿದೋ ರಾಮನ ಮೇಲಾಣೆ, ರಾಮರಾಜ್ಯದ ಸಂಕಲ್ಪ ಮಾಡುವೆವು ಎನ್ನುವುದು ನಮ್ಮ ಘೋಷವಾಕ್ಯವಾಗಬೇಕು ಎಂದು ನುಡಿದರು.

ಘನ ತ್ಯಾಜ್ಯ ನಿರ್ವಹಣೆ ತಜ್ಞ ರಾಮಪ್ರಸಾದ ಮಾತನಾಡಿ ಪಾಲಿಥೀನ್‌ಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮರುಬಳಕೆ, ಕಡಿಮೆ ಬಳಕೆ ಮತ್ತು ಬಳಕೆಯ ನಿರಾಕರಣೆಯ ಕುರಿತು ಹೇಳಲಾಗುತ್ತದೆ. ಆದರೆ ನಮ್ಮ ಮೊದಲ ಪ್ರಾಧಾನ್ಯತೆ ಪಾಲಿಥೀನ್‌ಗಳ ನಿರಾಕರಣೆ ಆಗಬೇಕು. ಆಗ ಮಾತ್ರ ಪಾಲಿಥೀನ್‌ಗಳ ಸಮಸ್ಯೆಗಳಿಂದ ಬಿಡುಗಡೆ ಸಿಗಬಹುದು ಎಂದರು.

ಬೆಂಗಳೂರಿನಲ್ಲಿ ಮಾತ್ರ 6200 ಟನ್ ಕಸವನ್ನು ಉತ್ಪಾದಿಸಲಾಗುತ್ತಿದೆ. ಇದರಲ್ಲಿ 2100 ಟನ್ ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕೇತರ ಕಸವನ್ನು ಒಳಗೊಂಡಿದೆ. ಇದಕ್ಕೆ ಪ್ರಮುಖ ಕಾರಣ ಯೂಸ್ ಆ್ಯಂಡ್ ಥ್ರೋ ಪದ್ಧತಿಯಾಗಿದೆ. ಮಕ್ಕಳು ಚಿಕ್ಕವರಿರುವಾಗಲೇ ಯೂಸ್ ಆ್ಯಂಡ್ ಥ್ರೋ ಪದ್ಧತಿ ಅವರಿಗೆ ಪರಿಚಯವಾಗುತ್ತಿದ್ದು, ದೊಡ್ಡವರಾದ ಮೇಲೆ ಹೆತ್ತವರ ಮೇಲೂ ಅದೇ ಪದ್ಧತಿಯನ್ನು ಉಪಯೋಗಿಸಿ ಅವಾಂತರಗಳಿಗೆ ಕಾರಣೀಭೂತರಾಗುತ್ತಿದ್ದಾರೆ. ಯೂಸ್ ಅಂಡ್ ಥ್ರೋ ಪದ್ಧತಿ ಎಲ್ಲಿಯವರೆಗೆ ಬಳಕೆಯಲ್ಲಿರುತ್ತದೆಯೋ ಅಲ್ಲಿಯವರೆಗೂ ಪ್ಲಾಸ್ಟಿಕ್ ಕಸದಿಂದ ಮುಕ್ತಿ ಸಿಗಲು ಸಾಧ್ಯವೇ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಹ್ಮರ್ಷಿ ಆನಂದ ಪೀಠದ ಸಂಸ್ಥಾಪಕ ಡಾ. ಆನಂದ ಗೂರೂಜಿ ಅವರು ಪಾಲಿಥೀನ್‌ನಿಂದ ಆಗುತ್ತಿರುವ ಸಮಸ್ಯೆಗಳನ್ನು ಅನೇಕ ವರ್ಷಗಳಿಂದ ಗುರುತಿಸಲಾಗುತ್ತಿದೆ. ಆದರೆ ಪ್ಲಾಸ್ಟಿಕ್ ಬಳಕೆ ನಮ್ಮ ದಿನನಿತ್ಯದ ಜೀವನದಲ್ಲಿ ಅತ್ಯಗತ್ಯವೆಂಬಂತೆ ಬಳಸುತ್ತಿರುವುದರಿಂದ ಅವುಗಳಿಗೆ ಸೂಕ್ತ ಪರಿಹಾರವನ್ನು ಹುಡುಕುವಲ್ಲಿ ವ್ಯವಸ್ಥೆಗಳು ಸಫಲವಾಗಲಿಲ್ಲ. ಇದರ ದುಷ್ಪರಿಣಾಮ ಶ್ರದ್ಧಾಕೇಂದ್ರಗಳಾದ ಮಂದಿರವೂ ಪ್ಲಾಸ್ಟಿಕ್ ಮಯವಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಇಂದು ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಮೂಲಕ ಮುಂದೆ ರಾಮರಾಜ್ಯವೂ ನಿರ್ಮಾಣಗೊಳ್ಳುತ್ತದೆ ಎಂಬ ಭರವಸೆ ಇದೆ. ಅದಕ್ಕೆ ಪೂರಕವಾಗಿ ಜನರೂ, ಸರ್ಕಾರಗಳೂ ಪ್ಲಾಸ್ಟಿಕ್ ಕುರಿತು ಎಚ್ಚರಿಕೆವಹಿಸಬೇಕು. ಅಯೋಧ್ಯೆಗೆ ಹೋಗುವ ಯಾತ್ರಿಗಳು ಪ್ಲಾಸ್ಟಿಕ್‌ಮಯಗೊಂಡ ಕೆಲವು ಪೂಜೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಸುವುದಕ್ಕಿಂತ ಸುಂದರವಾದ ರಾಮನನ್ನು ಕಣ್ತುಂಬಿಕೊAಡು, ಅಲ್ಲಿ ಕೊಡುವ ಮಹಾಪ್ರಸಾದ ಸ್ವೀಕರಿಸಿದರೆ ಅದಕ್ಕಿಂತ ಪವಿತ್ರ ಕಾರ್ಯ ಮತ್ತೊಂದಿಲ್ಲ. ಈ ಆಲೋಚನೆಗಳಾಧಾರಿತವಾಗಿ ಹಿಂದೂಗಳು ಗಮನವಹಿಸಿದರೆ ಹಲವು ಸಮಸ್ಯೆಗಳು ತಾನಾಗಿಯೇ ಸರಿಹೋಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪತ್ರಕರ್ತೆ ಶ್ರೀಲಕ್ಷ್ಮೀ ರಾಜ್‌ಕುಮಾರ್ ಮಾತನಾಡಿ, ಮಾಧ್ಯಮಗಳು ಪರಿಸರಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಂದು ವೈಜ್ಞಾನಿಕ ವಿಚಾರವೆಂದಷ್ಟೇ ಪರಿಗಣಿಸದೆ, ಅದಕ್ಕೆ ಮಹತ್ವದ ಸ್ಥಾನ ನೀಡಬೇಕಿದೆ. ಪರಿಸರದ ಕುರಿತು ಜನತೆಗೂ ಕಾಳಜಿ ಹೆಚ್ಚಾದಾಗ, ಸರ್ಕಾರಗಳು ಆಡಳಿತದಲ್ಲಿ ಅದರ ಕುರಿತು ನೀತಿ ನಿಯಮಗಳನ್ನು ತರುತ್ತವೆ. ಸರ್ಕಾರದ ಗಮನ ಪರಿಸದ ಕಾಳಜಿಯ ಕುರಿತು ಹೋದಾಗ ಮಾಧ್ಯಮಗಳು ಖಂಡಿತವಾಗಿ ಅವುಗಳನ್ನು ಪ್ರಸಾರ ಮಾಡುತ್ತದೆ. ಪರಿಸರವನ್ನು ಉಳಿಸುವ ಜಾಗೃತಿಯ ಕಾರ್ಯಕ್ರಮ ಸಮಷ್ಟಿಯ ಮೂಲಕ ಆಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣಾ ಗತಿವಿಧಿ ಕರ್ನಾಟಕ ಸಂಯೋಜಕ ಜಯರಾಮ್ ಬೊಳ್ಳಾಜೆ ಮಾತನಾಡಿ ಧರ್ಮ ಗೊತ್ತಿದ್ದರೂ, ಅದನ್ನು ಪಾಲಿಸುವುದಿಲ್ಲ, ಅಧರ್ಮ ಏನು ಎನ್ನುವುದು ತಿಳಿದಿದ್ದರೂ ಅದನ್ನು ಬಿಡಲು ಮನಸಿಲ್ಲ ಎಂಬ ದುರ್ಯೋಧನನ ಮನಸ್ಥಿತಿಯು ಪರಿಸರವನ್ನು ನಾಶ ಮಾಡುತ್ತಿದೆ. ಇಂತಹ ಸ್ವಭಾವಗಳಲ್ಲಿ ಬದಲಾವಣೆ ತರಲು ದೀರ್ಘಕಾಲದ ಪ್ರಯತ್ನಗಳಾಗಬೇಕು. ಆ ದೃಷ್ಟಿಯಿಂದಲೇ ಪರಿಸರ ಸಂರಕ್ಷಣಾ ಗತಿವಿಧಿ ನಿರಂತರವಾಗಿ ಪರಿಸರಕ್ಕೆ ಪೂರಕವಾದ ಸ್ವಭಾವವನ್ನು ಜನರಲ್ಲಿ ರೂಢಿಸುವ ಪ್ರಯತ್ನದಲ್ಲಿ ನಿರತವಾಗಿದೆ ಎಂದು ತಿಳಿಸಿದರು.

ಸಂವಾದ ಕಾರ್ಯಕ್ರಮವನ್ನು ಕರ್ನಾಟಕ ದಕ್ಷಿಣ ಪ್ರಾಂತ ಪರಿಸರ ಸಂರಕ್ಷಣೆ ಗತಿವಿಧಿಯ ಜನ ಸಂವಾದ ಪ್ರಮುಖರಾದ ಸಹನಾ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿಗಳು, ಚಿಂತಕರು, ಪರಿಸರ ಸಂರಕ್ಷಣೆ ಹೋರಾಟಗಾರರು ಭಾಗವಹಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.