
ಸಮಾಜದ ಬಗ್ಗೆ ವಿಶ್ವಾಸ, ದೇವರ ಕೃಪೆ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಕೊರೊನಾ ಜಯಿಸಲು ಸಾಧ್ಯ :ಜಗದ್ಗುರು ವಿಜಯೇಂದ್ರ ಸರಸ್ವತಿ
ಸಮಾಜದ ಬಗ್ಗೆ ವಿಶ್ವಾಸ, ದೇವರ ಕೃಪೆ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಕೊರೊನಾ ಜಯಿಸಲು ಸಾಧ್ಯ ಎಂದು ಕಂಚಿ ಕಾಮಕೋಟಿ ಪೀಠಾಧ್ಯಕ್ಷ ಜಗದ್ಗುರು ಶ್ರೀ ವಿಜಯೇಂದ್ರ ಸರಸ್ವತಿ ಅವರು ಹೇಳಿದ್ದಾರೆ.
ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸಮಾಲಿಕೆಯಲ್ಲಿ ಅವರು ಇಂದು ಮಾತನಾಡಿದರು.
ಮತ್ತೊಮ್ಮೆ ಮಹಾಮಾರಿ ಕೊರೊನಾ ನಮಗೆ ತೊಂದರೆ ಕೊಡುತ್ತಿದೆ. ಈ ಸಂಕಟದಿಂದ ಮುಕ್ತಿ ಸಿಗಲು ಎರಡು ರೀತಿಯ ಪ್ರಯತ್ನಗಳ ಅಗತ್ಯವಿದೆ. ಮೊದಲನೆಯದು ಪ್ರಾರ್ಥನೆ, ಭಜನೆ ಇತ್ಯಾದಿಗಳನ್ನು ಮಾಡುವುದು. ಆಯುರ್ವೇದ ಅಥವಾ ಪಾಶ್ಚಾತ್ಯ ಪದ್ಧತಿಯ ಔಷಧ ತೆಗೆದುಕೊಳ್ಳುವುದು ಎರಡನೆಯ ರೀತಿ. ಇವೆರಡೂ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ರಾಮ ಯುದ್ಧ ಮಾಡಿ ಜಯ ಗಳಿಸಿ, ಸೀತೆಯನ್ನು ಕರೆದುಕೊಂಡು ಬಂದ ನಿಜ. ಆದರೆ ಅದಕ್ಕೂ ಮೊದಲು ಸೀತೆಯಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕಿತ್ತು. ಅದಕ್ಕೇ ಹನುಮಂತ ಅಲ್ಲಿಗೆ ಹೋಗಿ ಸೂರ್ಯವಂಶದ ಸ್ತುತಿ ಮಾಡಿದ, ಲಂಕೆಗೆ ಬೆಂಕಿಯಿಟ್ಟ. ಇದನ್ನೆಲ್ಲ ನೋಡಿ, ಸೀತೆಗೆ ಜಯ ನಮ್ಮದೇ ಎಂಬ ವಿಶ್ವಾಸ ಬಂತು. ಭಗವದ್ಗೀತೆಯಲ್ಲೂ ‘ಕ್ಷುದ್ರಮ್ ಹೃದಯದೌರ್ಬಲ್ಯಮ್ ತ್ಯಕ್ತ್ವಾ ಉತ್ತಿಷ್ಠ ಪರಂತಪ’ ಎಂದು ಕೃಷ್ಣ ಅರ್ಜುನನಿಗೆ ಹೇಳಿದ್ದಾನೆ. ನಾವು ಎದೆಗುಂದಬಾರದು. ಯಾವುದೇ ಸವಾಲನ್ನು ಎದುರಿಸಲು ನಾವು ಆತ್ಮವಿಶ್ವಾಸದಿಂದ ಎದ್ದುನಿಲ್ಲಬೇಕಾದದ್ದು ಬಹಳ ಮುಖ್ಯ. ನಮ್ಮ ಸರ್ಕಾರ, ಚಿಕಿತ್ಸೆ, ನಮ್ಮ ಸಮಾಜ ಇವುಗಳ ಮೇಲೆ ವಿಶ್ವಾಸವಿಟ್ಟು ಧೈರ್ಯದಿಂದ ಇದ್ದರೆ ಈ ಮಹಾಮಾರಿಯನ್ನು ಎದುರಿಸಲು ಸಾಧ್ಯ. ವಿದೇಶದಿಂದಲೂ ನಮಗೆ ನೆರವು ಬರುತ್ತಿದೆ. ಎಲ್ಲರ ಸಹಕಾರ ಸಿಗುತ್ತಿದೆ. ದೇವರ ಕೃಪೆಯಿಂದ ನಾವು ಖಂಡಿತಾ ಇದರಿಂದ ಹೊರಗೆ ಬರುತ್ತೇವೆ ಎಂಬ ವಿಶ್ವಾಸವಿರಲಿ. ಸರ್ವೇ ಭವಂತು ಸುಖಿನಃ ಎಂಬಂತೆ, ನಾವು ಮಾತ್ರವಲ್ಲ, ಸಂಪೂರ್ಣ ಜಗತ್ತು ಇದನ್ನು ಎದುರಿಸಿ, ಹೊರಬರಲಿ ಎಂದು ಅವರು ಆಶಿಸಿದರು.
ಪ್ರಾರ್ಥನೆ, ಧನಾತ್ಮಕ ಚಿಂತನೆಗಳಿಂದ ಕೊರೊನಾ ಎದುರಿಸಲು ಸಾಧ್ಯ
ತಾನು ಕೊರೊನಾ ಎದುರಿಸಿದ ಅನುಭವ ಹಂಚಿಕೊಂಡ ನೃತ್ಯ ಕಲಾವಿದೆ
ಪದ್ಮವಿಭೂಷಣ ಸೋನಾಲ್ ಮಾನ್ ಸಿಂಗ್
ಉಪನ್ಯಾಸ ಸರಣಿಯಲ್ಲಿ ಮಾತನಾಡಿದ ಖ್ಯಾತ ನೃತ್ಯ ಕಲಾವಿದೆ ಪದ್ಮವಿಭೂಷಣ ಸೋನಾಲ್ ಮಾನ್ ಸಿಂಗ್ ಅವರು ಪ್ರಾರ್ಥನೆ ಮತ್ತು ಧನಾತ್ಮಕ ಚಿಂತನೆಗಳಿಂದ ತಾನು ಕೊರೊನಾದಿಂದ ಹೊರಬಂದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಶ್ರಮ ಹಾಕಿ ಕೆಲಸ ಮಾಡುತ್ತಿದ್ದೇವೆ. ರಾಷ್ಟ್ರಪತಿ, ಪ್ರಧಾನಿಯಿಂದ ಹಿಡಿದು ಎಲ್ಲರೂ ಶಕ್ತಿಮೀರಿ ಪ್ರಯತ್ನ ಹಾಕುತ್ತಿದ್ದಾರೆ. ಸ್ವತಃ ನಾನೇ ಈ ಬಾರಿ ಕೊರೊನಾ ಪೀಡಿತಳಾಗಿದ್ದೆ. ಆದರೆ, ನಾನು ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ನನ್ನ ಜೊತೆಗೆ ಬೇರೆ ಯಾರೂ ಇರಲಿಲ್ಲ. ಒಬ್ಬಳೇ ಇದ್ದದ್ದರಿಂದ ನನಗೂ ಹೆದರಿಕೆಯಾಗಿತ್ತು. ಈ ಮೊದಲು ನನಗೆ ಅಪಘಾತವಾದಾಗ ಹಲವು ದಿನಗಳು ಅನುಭವಿಸಿದ ನೋವು ನೆನಪಾಯಿತು. ಆದರೆ, ನಾನು ಮಾಡಬೇಕಾದ ಕೆಲಸ ಇನ್ನೂ ಇದೆ. ಹಾಗಾಗಿ ನಾನು ಬದುಕಬೇಕು ಎಂಬ ಆಶೆ ಹಾಗೂ ವಿಶ್ವಾಸ ಇತ್ತು. ಹಾಗಾಗಿ ನಾನು ಪುನಃ ಮೊದಲಿನಂತಾದೆ. ಈ ಬಾರಿಯೂ ನಾನು ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ನಾನು ಬೇಗ ಗುಣವಾಗಿ ಹೊರಬಂದೆ.
ಹಾಗಾಗಿ, ಯಾರೂ ಹೆದರುವ ಅಗತ್ಯವಿಲ್ಲ. ಒಳ್ಳೆಯ ವಿಷಯಗಳ ಬಗ್ಗೆ ಚಿಂತಿಸೋಣ. ಪ್ರಾರ್ಥನೆ ಮಾಡೋಣ. ಧನಾತ್ಮಕ ಚಿಂತನೆಗಳೇ ನಮ್ಮಲ್ಲಿ ತುಂಬಿದ್ದರೆ, ಉತ್ಸಾಹವನ್ನು ಕಳೆದುಕೊಳ್ಳದಿದ್ದರೆ, ಎಲ್ಲ ಕೆಟ್ಟ ಯೋಚನೆಗಳು ಓಡಿ ಹೋಗುತ್ತವೆ. ನಮ್ಮ ಮನಸ್ಸು ಗಟ್ಟಿಯಾಗಿದ್ದರೆ, ಅದರ ಮುಂದೆ ಕೊರೊನಾ ಒಂದು ದೊಡ್ಡ ಖಾಯಿಲೆಯೇ ಅಲ್ಲ. ಅದನ್ನು ಸುಲಭವಾಗಿ ಜಯಿಸಬಹುದು. ಭಾರತೀಯರಾದ ನಾವು ಎಲ್ಲವನ್ನೂ ಜಯಿಸಿ ಇನ್ನೂ ಶಕ್ತಿಶಾಲಿಯಾಗಿ ಬೆಳಗಳಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವರದಿ : ರಾಧಾಕೃಷ್ಣ ಹೊಳ್ಳ