ಕೊರೊನಾದಿಂದ ಸಂಕಷ್ಟಕ್ಕೊಳಗಾದವರ ಸೇವೆಯಿಂದ ಮನೋಬಲ ವೃದ್ಧಿ : ಶ್ರೀ ಶ್ರೀ ರವಿಶಂಕರ್ ಗುರೂಜಿ

ಶ್ರೀ ಶ್ರೀ ರವಿಶಂಕರ್ ಗುರೂಜಿ

ಕೊರೊನಾದಿಂದ ಬಳಲುತ್ತಿರುವವರ ಬಗ್ಗೆ ಕರುಣೆ ನಮ್ಮಲ್ಲಿರಲಿ. ಅಂತಹವರ ಸೇವೆ ಮಾಡುವುದರಿಂದ ನಮ್ಮ ಮನೋಬಲವೂ ಹೆಚ್ಚುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ, ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ. ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡುತ್ತಿದ್ದರು.

ವಿಶ್ವವನ್ನೇ ತಲ್ಲಣಿಸಿರುವ ಕೋವಿಡ್ ಮಹಾಮಾರಿಯಿಂದಾಗಿ ಅನೇಕರ ಮಾನಸಿಕ ಸ್ಥೈರ್ಯ ಕುಸಿಯುವುದು ಸಹಜ. ಆಸ್ಪತ್ರೆಯಲ್ಲಿ ವೈದ್ಯರು ಶಾಂತಚಿತ್ತರಾಗಿ ಎಲ್ಲವನ್ನೂ ಧೈರ್ಯದಿಂದ ನಿಭಾಯಿಸುವಂತೆ ಗಂಭೀರ ಪರಿಸ್ಥಿತಿಯಲ್ಲೂ ನಾವು ಧೈರ್ಯ ತಾಳಬೇಕು. ಅಲ್ಲದೇ, ನಮ್ಮ ಕುಟುಂಬದಲ್ಲಿನ ಇತರರಿಗೂ ಧೈರ್ಯ ತುಂಬಬೇಕು ಎಂದು ಹೇಳಿದರು.

ಮನುಕುಲದ ಅತ್ಯಂತ ದೊಡ್ಡ ಪರೀಕ್ಷೆ ಇದೆ. ಇದನ್ನು ಎದುರಿಸುವ ಶಕ್ತಿಯನ್ನು ಭಗವಂತ ನಮಗೆ ಕೊಡುತ್ತಾನೆ ಎಂಬ ವಿಶ್ವಾಸವಿರಲಿ. ಯೋಗ, ಪ್ರಾಣಾಯಾಮ, ಧ್ಯಾನಗಳನ್ನು ಅಭ್ಯಾಸ ಮಾಡುವುದರಿಂದ ನಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ಆರೋಗ್ಯಕರ ಜೀವನಶೈಲಿ, ಉತ್ತಮ ಆಹಾರದಿಂದ ಮನಸ್ಸಿಗೂ ದೇಹಕ್ಕೂ ಒಳ್ಳೆಯದು. ನಕಾರಾತ್ಮಕ ಚಿಂತನೆಗಳಿಂದ ದೂರವಿರೋಣ. ಆಯುರ್ವೇದದ ಔಷಧಿಗಳನ್ನು ಪ್ರತಿನಿತ್ಯ ಉಪಯೋಗಿಸೋಣ. ಇದೇ ಈ ಕಠಿಣ ಸಂದರ್ಭವನ್ನು ಯಶಸ್ವಿಯಾಗಿ ಎದುರಿಸಲು ಇರುವ ಪರಿಹಾರ ಎಂದು ಸಲಹೆ ನೀಡಿದರು.

ಕೋವಿಡ್ ಸಂಕಟದ ಈ ಸಂದರ್ಭದಲ್ಲಿ ಸಮಾಜದ ದುರ್ಬಲವರ್ಗಗಳ ರಕ್ಷಣೆಯ ಹೊಣೆ ನಮ್ಮ ಮೇಲಿದೆ : ಅಜೀಮ್ ಪ್ರೇಮ್ ಜೀ

ಅಜೀಮ್ ಪ್ರೇಮ್ ಜೀ

ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಮ್ ಪ್ರೇಮ್ ಜೀ ಅವರು ಕೋವಿಡ್ ಸಂಕಟದ ಈ ಸಂದರ್ಭದಲ್ಲಿ ಸಮಾಜದ ದುರ್ಬಲವರ್ಗಗಳ ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಪರಿಸ್ಥಿತಿಯನ್ನು ಎದುರಿಸಲು ನಾವು ಬಹಳ ವೇಗವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಹಾಗೆಯೇ, ನಮ್ಮ ಎಲ್ಲ ಭೇದಗಳನ್ನು ಮರೆತು ನಾವು ಒಂದಾಗಿ ಕೆಲಸ ಮಾಡಬೇಕಾದ ಕಾಲ ಇದು. ಪರಸ್ಪರ ದೂಷಣೆಗಳಿಂದ ಏನೂ ಪ್ರಯೋಜನವಿಲ್ಲ. ನೋಂದವರಿಗೆ ಸಹಾಯ ಮಾಡುವುದಲ್ಲದೇ, ಆರ್ಥಿಕತೆಯನ್ನು ಸರಿದಾರಿಗೆ ತರುವ ಕೆಲಸವೂ ನಮ್ಮ ಮೇಲಿದೆ. ಸಮಾಜದ ಎಲ್ಲ ವರ್ಗಗಳ ಶ್ರೇಯಸ್ಸನ್ನು ಗಮನದಲ್ಲಿಟ್ಟುಕೊಂಡು ಈ ಕೆಲಸವನ್ನು ನಾವು ಮಾಡಬೇಕಿದೆ ಎಂದು ಅವರು ಹೇಳಿದರು.

ಕೊರೊನಾ ಒಂದು ಸವಾಲು ಮಾತ್ರವಲ್ಲ, ಅವಕಾಶವೂ ಹೌದು : ಪದ್ಮಶ್ರೀ ನಿವೇದಿತಾ ರಘುನಾಥ್ ಭಿಡೆ

ನಿವೇದಿತಾ ರಘುನಾಥ್ ಭಿಡೆ

ಇಂದು ನಮಗೆ ಒದಗಿರುವುದು ಸವಾಲಿನ ರೂಪದಲ್ಲಿರುವ ಒಂದು ಅವಕಾಶ. ಅದನ್ನು ನಾವು ಸರಿಯಾಗಿ ಬಳಸಿಕೊಳ್ಳೋಣ ಎಂದು ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ನಿವೇದಿತಾ ರಘುನಾಥ್ ಭಿಡೆ ಅವರು ಹೇಳಿದರು.

ನಮ್ಮ ಮುಂದೆ ಐದು ಅಂತಹ ಅವಕಾಶಗಳಿವೆ. ಮೊದಲನೆಯದು ನಮ್ಮ ಪ್ರಾಣಶಕ್ತಿಯನ್ನು ಗಟ್ಟಿಗೊಳಿಸುವುದು. ಹೆಚ್ಚು ಉಸಿರನ್ನು ಹೊರಗೆ ಬಿಟ್ಟಷ್ಟೂ ಶ್ವಾಸವನ್ನು ಒಳಗೆ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಹಾಗೆಯೇ, ಓಂಕಾರದ ಉಚ್ಚಾರ ಮಾಡುವುದದಿಂದ ನಮ್ಮ ಶರೀರದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ. ಬೆಳಗ್ಗೆ ಮತ್ತು ಸಂಜೆ ಎರಡೂ ಬಾರಿ ಇದನ್ನು ಮಾಡುವುದರಿಂದ ಬಹಳ ಲಾಭವಿದೆ. ಇದೆಲ್ಲರಿಂದ ನಮ್ಮ ಪ್ರಾಣಶಕ್ತಿ ಬಲವಾಗುತ್ತದೆ.

ಎರಡನೆಯದು, ಸುಪ್ತ ಮನಸ್ಸಿನ ಶಕ್ತಿಯನ್ನು ಬಳಸಿಕೊಳ್ಳುವುದು. ಮನಸ್ಸಿನಲ್ಲಿ ಧನಾತ್ಮಕ ವಿಚಾರಗಳನ್ನು ತುಂಬಿಕೊಂಡರೆ, ಎಂತಹ ಸವಾಲೇ ಇರಲಿ, ರೋಗವೇ ಇರಲಿ ಅದನ್ನು ಎದುರಿಸುವುದು ಸಾಧ್ಯ.

ಮೂರನೆಯದು, ನಾವೆಲ್ಲ ಇಂದು ಮನೆಯೊಳಗೆ ಒಟ್ಟಿಗೆ ಇರಬೇಕಾದ ಅನಿವಾರ್ಯತೆಯಿದೆ. ಟಿವಿಯಲ್ಲಿ ಬರುವ ಕೋವಿಡ್ ಸುದ್ದಿಗಳನ್ನು ನೋಡುತ್ತಾ ಸಮಯ ಹಾಳು ಮಾಡದೇ, ಯಾವುದಾದರೂ ಉಪಯುಕ್ತ ಕೆಲಸ ಮಾಡುವುದು, ಸಂಸ್ಕೃತವೋ ಅಥವಾ ನಮಗೆ ಬರದೇ ಇರುವ ಒಂದು ಹೊಸ ಭಾಷೆ ಕಲಿಯಬಹುದು. ಸೂರ್ಯ ನಮಸ್ಕಾರ ಮಾಡುವುದು, ಎಲ್ಲರೂ ಸೇರಿ ಆಟವಾಡುವುದು, ಕಥೆ ಹೇಳುವುದು, ಎಲ್ಲರೂ ಸೇರಿ ಅಡುಗೆ ಮಾಡುವುದು ಹೀಗೆ ಸಮಯದ ಸದುಪಯೋಗ ಮಾಡಿಕೊಳ್ಳುವುದರಿಂದ ನಮ್ಮ ಬಾಂಧವ್ಯವೂ ಗಟ್ಟಿಯಾಗುತ್ತದೆ ಎಂದರು.

ನಾಲ್ಕನೆಯದು, ಸೇವೆ ಮಾಡುವ ಅವಕಾಶ. ಹೊರಗೆ ಹೋಗಲು ಸಾಧ್ಯವಿಲ್ಲದಿದ್ದರೆ, ನಮ್ಮ ಮನೆಯ ಸಮೀಪವಿರುವ ಕೊರೊನಾಪೀಡಿತರಿಗೆ ಅಡುಗೆ ಮಾಡಿ ಕೊಡುವುದೂ ಒಂದು ದೊಡ್ಡ ಸೇವೆಯೇ. ಮನೆಯಲ್ಲಿಯೇ, ಎಲ್ಲ ರೋಗಪೀಡಿತರಿಗಾಗಿ ಪ್ರಾರ್ಥನೆ, ಭಜನೆ ಮಾಡಬಹುದು.

ಐದನೆಯದು, ಮರಣದ ಭಯದಿಂದ ಮುಕ್ತವಾಗುವುದು. ನಮ್ಮ ಸಂಸ್ಕೃತಿಯಲ್ಲಿ ಸಾವೆನ್ನುವುದನ್ನು ಪೂರ್ಣ ವಿರಾಮವೆಂದು ಭಾವಿಸಿಲ್ಲ, ಇದು ಕೇವಲ ಅಲ್ಪವಿರಾಮ. ಕೇವಲ ದೇಹಕ್ಕೆ ಸಾವೇ ಹೊರತು, ನನಗಲ್ಲ ಎಂಬ ಭಾವ ನಮ್ಮಲ್ಲಿದ್ದರೆ, ಮರಣಭಯವನ್ನು ನಾವು ಜಯಿಸಿ ಮೃತ್ಯುಂಜಯರಾಗಬಹುದು ಎಂದು ಅವರು ಹೇಳಿದರು.

ಬೇರೊಬ್ಬರು ಕಷ್ಟದ ಪರಿಸ್ಥಿತಿಯಲ್ಲಿರುವ ಈ ಅವಕಾಶವನ್ನು ದುರುಪಯೋಗ ಮಾಡಿಕೊಂಡು ಹಣ ಮಾಡುವುದು ಖಂಡಿತಾ ಸಲ್ಲ, ಅದು ಪಾಪಕರ ಎಂದು ಅವರು ಎಚ್ಚರಿಸಿದರು.

ವರದಿ: ರಾಧಾಕೃಷ್ಣ ಹೊಳ್ಳ

Leave a Reply

Your email address will not be published.

This site uses Akismet to reduce spam. Learn how your comment data is processed.