ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಕುರಿತು ಸಹಸರಕಾರ್ಯವಾಹ ಡಾ. ಮನಮೋಹನ್ ವೈದ್ಯ ಸುದ್ದಿಗೋಷ್ಠಿ

ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ರೇಶಮ್ ಬಾಗ್ ನ ಸ್ಮೃತಿಭವನದಲ್ಲಿ ನಡೆಯುತ್ತಿದ್ದು, ಪ್ರಾರಂಭದ ದಿನ ಸಹಸರಕಾರ್ಯವಾಹ ಡಾ. ಮನಮೋಹನ್‌ ವೈದ್ಯ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್, ಸಹ ಪ್ರಚಾರ ಪ್ರಮುಖರಾದ ನರೇಂದ್ರ ಕುಮಾರ್ ಮತ್ತು ಆಲೋಕ್ ಕುಮಾರ್ ಉಪಸ್ಥಿತರಿದ್ದರು.

ಡಾ. ಮನಮೋಹನ್ ವೈದ್ಯ ಅವರು ಮಾತನಾಡುತ್ತ “ಸಂಘಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ಹೇಳಿದಂತೆ ‘ಸಂಘ ಸಂಪೂರ್ಣ ಸಮಾಜದ ಸಂಘಟನೆ’. ಅದರ ಅನುಭವವನ್ನು ನಾವು ಕಳೆದ 99 ವರ್ಷಗಳಲ್ಲಿ ಪಡೆದಿದ್ದೇವೆ. 2017ರಿಂದ 2024ರವರೆಗಿನ ಸಂಘಕಾರ್ಯದ ವ್ಯಾಪ್ತಿಯನ್ನು ಗಮನಿಸಿದರೆ ಅದರ ವ್ಯಾಪಕತೆ ಅರಿವಿಗೆ ಬರುತ್ತದೆ. ಏಕೆಂದರೆ ರಾಷ್ಟ್ರದ ಶೇ.99 ಜಿಲ್ಲೆಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ತಲುಪಿದೆ” ಎಂದರು.

“ಅಖಿಲ ಭಾರತೀಯ ಪ್ರತಿನಿಧಿ ಸಭಾ ಪ್ರತಿವರ್ಷವು ನಡೆಯುತ್ತದೆ. ಈ ವರ್ಷ ಅಖಿಲ ಭಾರತ ಮಟ್ಟದ ಹಾಗೂ ಪ್ರಾಂತ ಮಟ್ಟದ ಅಧಿಕಾರಿಗಳು ಸೇರಿದಂತೆ ಸಂಘದ ಎಲ್ಲಾ 45 ಪ್ರಾಂತಗಳಿಂದ 1500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದಾರೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಾಗಪುರದಲ್ಲಿ ಈ ಸಭೆ ನಡೆಯುತ್ತದೆ. ಈ ವರ್ಷ ಸಂಘದ ಜವಾಬ್ದಾರಿಗಳ ಚುನಾವಣೆಯ ವರ್ಷವಾಗಿದ್ದು ಬೈಠಕ್ ನಲ್ಲಿ ಸರಕಾರ್ಯವಾಹ, ಕ್ಷೇತ್ರೀಯ ಸಂಘಚಾಲಕರುಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತದೆ” ಎಂದು ನುಡಿದರು.

ಸಂಘದ ಕಾರ್ಯವಿಸ್ತಾರದ ಕುರಿತು ತಿಳಿಸುತ್ತ, “ಸಂಘದಲ್ಲಿ ಪ್ರಾಂತ, ವಿಭಾಗ, ಜಿಲ್ಲೆ, ಖಂಡ ಎಂಬ ರಜನೆ ಇದೆ. ಅದರನ್ವಯ 45 ಪ್ರಾಂತಗಳ, 922 ಜಿಲ್ಲೆಗಳ, 6597 ಖಂಡಗಳ, 27720 ಮಂಡಲಗಳಲ್ಲಿ (12-15 ಗ್ರಾಮಗಳನ್ನೊಳಗೊಂಡ ಒಂದು ಸಮೂಹ ಮಂಡಲ) 73117 ಶಾಖೆಗಳು ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷಕ್ಕಿಂತ 4464 ಶಾಖೆಗಳ ಸಂಖ್ಯೆ ವೃದ್ಧಿಸಿದೆ. ಈ ಶಾಖೆಗಳಲ್ಲಿ ಶೇ. 60ರಷ್ಟು ವಿದ್ಯಾರ್ಥಿಗಳು, ಶೇ. 40 ರಷ್ಟು ಉದ್ಯೋಗಿಗಳಿದ್ದಾರೆ. ಸಾಪ್ತಾಹಿಕ ಮಿಲನ್ ಗಳ ಸಂಖ್ಯೆ 27717. ಕಳೆದ ವರ್ಷಕ್ಕಿಂತ ಈ ಬಾರಿ 840 ಸಾಪ್ತಾಹಿಕ ಮಿಲನ್ ಗಳ ಸಂಖ್ಯೆ ಹೆಚ್ಚಾಗಿದೆ. ತಿಂಗಳಿಗೊಮ್ಮೆ ನಡೆಯುವ ಸಂಘ ಮಂಡಲಿಗಳ ಸಂಖ್ಯೆ 10567. ನಗರ ಮತ್ತು ಮಹಾನಗರಗಳಲ್ಲಿರುವ 10000 ಬಸ್ತಿಗಳಲ್ಲಿ 43000 ಪ್ರತ್ಯಕ್ಷ ಶಾಖೆಗಳಿವೆ” ಎಂದು ತಿಳಿಸಿದರು.

ಅಯೋಧ್ಯೆ ಶ್ರೀರಾಮಲಲಾ ಪ್ರಾಣಪ್ರತಿಷ್ಠಾಪನೆ

ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಐತಿಹಾಸಿಕ ರಾಮಲಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಇಡೀ ದೇಶದ ಜನರು ಸಂಭ್ರಮದಿಂದ ಕೈಜೋಡಿಸಿದ್ದರು. ರಾಮಲಲಾನ ಪ್ರಾಣಪ್ರತಿಷ್ಠಾಪನೆಗೂ ಮೊದಲು ಸಂಘದ ಕಾರ್ಯಕರ್ತರು ಮನೆ ಮನೆಗೆ ಮಂತ್ರಾಕ್ಷತೆಯನ್ನು ವಿತರಿಸಿದರು. ಈ ಅಭಿಯಾನದಲ್ಲಿ 5 ಲಕ್ಷದ 98 ಸಾವಿರದ, 778 ಗ್ರಾಮಗಳನ್ನು ಸಂಪರ್ಕಿಸಲಾಗಿದ್ದು, 44 ಲಕ್ಷ 98 ಸಾವಿರ ಪ್ರತಿನಿಧಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು. ದೇಶಾದ್ಯಂತ 19 ಕೋಟಿ 38 ಲಕ್ಷ ಕುಟುಂಬಗಳನ್ನು ಸಂಪರ್ಕಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಿದ್ದರು. ದೇಶಾದ್ಯಂತ 9 ಲಕ್ಷ 85 ಸಾವಿರ ದೇವಾಲಯ ಕೇಂದ್ರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮಗಳಲ್ಲಿ 27 ಕೋಟಿ 81 ಲಕ್ಷ 54 ಸಾವಿರಕ್ಕೂ ಹೆಚ್ಚು ಜನರ ಭಾಗವಹಿಸಿದ್ದರು ಎಂದರು.


ಮಹಿಳಾ ಸಮನ್ವಯ
ಮಹಿಳಾ ಸಮನ್ವಯದ ಕೆಲಸದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಮೂಲಕ 44 ರಾಜ್ಯಗಳಲ್ಲಿ 460 ಮಹಿಳಾ ಸಮ್ಮೇಳನಗಳು ನಡೆದಿವೆ. ಇದರಲ್ಲಿ 5 ಲಕ್ಷ 61 ಸಾವಿರ ಮಹಿಳೆಯರು ಭಾಗವಹಿಸಿದ್ದರು. ಭಾರತೀಯ ಚಿಂತನೆ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು ಎಂದು ತಿಳಿಸಿದರು.

ಮೇ 2024 ರಿಂದ ಮೇ 2025ರ ನಡುವೆ ಅಹಲ್ಯಾಬಾಯಿ ಹೋಳ್ಕರ್ ಅವರ ಮುನ್ನೂರನೇ ವರ್ಷದ ಜಯಂತಿಯನ್ನು ಆಚರಿಸಲಾಗುತ್ತದೆ. ದೇವಾಲಯಗಳ ಪುನರುಜ್ಜೀವನಕ್ಕೆ ಹಾಗೂ ಶೋಷಿತರ ಆರ್ಥಿಕ ಸ್ವಾವಲಂಬನೆಗೆ ಶ್ರಮವಹಿಸಿದ ಮಹಾನ್ ಮಹಿಳೆ ಅಹಲ್ಯಾಬಾಯಿ ಹೋಳ್ಕರ್ ಅವರ ಕುರಿತು ಸಮಾಜಕ್ಕೆ ಸ್ವಲ್ಪ ತಿಳಿದಿದೆ. ಹಾಗಾಗಿ ಅಹಲ್ಯಾಬಾಯಿ ಹೋಳ್ಕರ್ ಅವರ ಕೊಡುಗೆಯನ್ನು ಜನತೆಗೆ ತಲುಪಿಸುವ ಸಲುವಾಗಿ ಶ್ರಮಿಸಲಾಗುತ್ತದೆ.

ಕುಟುಂಬ ಪ್ರಬೋಧನ್, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ನಾಗರಿಕ ಕರ್ತವ್ಯ, ಸ್ವದೇಶಿ ಜೀವನಶೈಲಿ ಎಂಬ ಪಂಚ ಪರಿವರ್ತನೆಗಾಗಿ ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಬೇಕಿದೆ. ಅದರ ಭಾಗವಾಗಿ ಸಂಘದ ಸ್ವಯಂಸೇವಕರು ಶೇ. 100 ರಷ್ಟು ಮತದಾನವನ್ನು ಮಾಡಿಸುವ ನಿಟ್ಟಿನಲ್ಲಿ ಮನೆಮನೆ ಸಂಪರ್ಕವನ್ನು ಮಾಡಲಿದ್ದಾರೆ.


ಸಂಘ ಶಿಕ್ಷಣಕ್ಕೆ ಹೊಸ ಪಠ್ಯಕ್ರಮ

ಸಂಘ ಶಿಕ್ಷಾ ವರ್ಗದ ಸಂಯೋಜನೆಯಲ್ಲಿ ಹೊಸ ಪಠ್ಯಕ್ರಮವನ್ನು ಸೇರಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಸಂಘ ಶಿಕ್ಷಾ ವರ್ಗದ ಸಂಯೋಜನೆಯಲ್ಲಿ ಮೊದಲು 7 ದಿನಗಳ ಪ್ರಾಥಮಿಕ ಶಿಕ್ಷಾ ವರ್ಗ, 20 ದಿನಗಳ ಪ್ರಥಮ ವರ್ಷ ಸಂಘ ಶಿಕ್ಷಾ ವರ್ಗ, 20 ದಿನಗಳ ದ್ವಿತೀಯ ವರ್ಷ ಸಂಘ ಶಿಕ್ಷಾ ವರ್ಗ ಮತ್ತು ನಾಗಪುರದಲ್ಲಿ ನೆಡೆಯುತ್ತಿದ್ದ ತೃತೀಯ ವರ್ಷ ಸಂಘ ಶಿಕ್ಷಾ ವರ್ಗ 25 ದಿನಗಳ ಕಾಲ ನಡೆಯುತ್ತಿದ್ದವು. ಈಗ ಹೊಸ ಪಠ್ಯಕ್ರಮದಲ್ಲಿ ಮೊದಲು 3 ದಿನಗಳ ಪ್ರಾರಂಭಿಕ ವರ್ಗ, ನಂತರ 7 ದಿನಗಳ ಪ್ರಾಥಮಿಕ ಶಿಕ್ಷಾ ವರ್ಗ ಇರುತ್ತದೆ. ಇದರ ನಂತರದಲ್ಲಿ 15 ದಿನಗಳ ಸಂಘ ಶಿಕ್ಷಣ ವರ್ಗ, 20 ದಿನಗಳ ಕಾರ್ಯಕರ್ತ ವಿಕಾಸ ವರ್ಗ -1 ಮತ್ತು 25 ದಿನಗಳ ಕಾರ್ಯಕರ್ತ ವಿಕಾಸ ವರ್ಗ – 2 ಕ್ರಮವಾಗಿ ಇರುತ್ತದೆ. ಈ ತರಗತಿಗಳು ವಿಶೇಷ ಪ್ರಾಯೋಗಿಕ ತರಬೇತಿಯನ್ನು ಸಹ ಒಳಗೊಂಡಿರುತ್ತವೆ ಎಂದು ಮಾಹಿತಿ ನೀಡಿದರು.

https://www.rss.org/hindi/Encyc/2024/3/15/ABPS-Nagpur-Sangh-is-the-organization-of-the-entire-society.html

ಸುದ್ದಿಗೋಷ್ಠಿಯ ವಿಡಿಯೋ ಲಿಂಕ್:

Leave a Reply

Your email address will not be published.

This site uses Akismet to reduce spam. Learn how your comment data is processed.