ಪ್ರಯಾಗ್ರಾಜ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿಯ ನಾಲ್ಕು ದಿನಗಳ ಸಭೆ ಭಾನುವಾರ ಪ್ರಯಾಗ್ರಾಜ್ನಲ್ಲಿ ಆರಂಭವಾಗಲಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಶ್ರೀ ಸುನಿಲ್ ಅಂಬೇಕರ್ಅವರು ಶನಿವಾರ (15-10-2022) ಪತ್ರಕರ್ತರೊಂದಿಗೆ ಮಾತನಾಡಿ, “ಸಂಘದ ಎಲ್ಲಾ 45 ಪ್ರಾಂತಗಳ ಎಲ್ಲಾ ಪ್ರಾಂತ ಸಂಘಚಾಲಕರು, ಕಾರ್ಯವಾಹರು ಮತ್ತು ಪ್ರಚಾರಕರು ಹಾಗು ಸಹ ಪ್ರಾಂತಕಾರ್ಯವಾಹ, ಸಹ ಪ್ರಾಂತಪ್ರಚಾರಕರು ಈ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು, ಸಹ ಸರಕಾರ್ಯವಾಹರು ಸೇರಿದಂಯೆ ಅಖಿಲ ಭಾರತ ಮಟ್ಟದ ಇತರ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಮಂಡಳಿಯ ಆಹ್ವಾನಿತ ಸದಸ್ಯರು ಬೈಠಕ್ನಲ್ಲಿ ಉಪಸ್ಥಿತರಿರುವರು” ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, “ಈ ವರ್ಷದ ಮಾರ್ಚ್ನಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ರೂಪಿಸಲಾದ ವಾರ್ಷಿಕ ಕಾರ್ಯಯೋಜನೆಯ ಪ್ರಗತಿಯನ್ನೂ ಕೂಡ ಈ ನಾಲ್ಕು ದಿನಗಳ ಸಭೆಯಲ್ಲಿ ಪರಾಮರ್ಶಿಸಲಾಗುವುದು. ಹಾಗು ಸಭೆಯಲ್ಲಿ ಸಂಘಟನಾ ಕಾರ್ಯಗಳ ವಿಸ್ತರಣೆ ಮತ್ತು ಸಂಘ ಶಿಕ್ಷಾ ವರ್ಗದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಇದರ ಜೊತೆಗೆ ದೇಶದ ಪ್ರಮುಖ ಸಮಕಾಲೀನ ಸಮಸ್ಯೆಗಳ ಕುರಿತು ಕೂಡ ಚರ್ಚೆ ನಡೆಯಲಿದೆ” ಎಂದರು.
“ಜೊತೆಗೆ ವಿಜಯದಶಮಿಯ ಸಂದರ್ಭದಲ್ಲಿ ಸರಸಂಘಚಾಲಕರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಮುಖ ವಿಷಯಗಳ ಅನುಷ್ಠಾನದ ಮಾರ್ಗಗಳು ಮತ್ತು ವಿಧಾನಗಳನ್ನು ಕುರಿತಾಗಿ ಸಭೆಯು ಚರ್ಚಿಸುತ್ತದೆ. ಇನ್ನು, RSS ತನ್ನ ನೂರು ವರ್ಷಗಳನ್ನು 2025 ರಲ್ಲಿ ಪೂರ್ಣಗೊಳಿಸಲಿದೆ. ಆದ್ದರಿಂದ, ದೇಶಾದ್ಯಂತ ತನ್ನ ಶಾಖೆಗಳ ಸಂಖ್ಯೆಯನ್ನು ವಿಸ್ತರಿಸುವ ಯೋಜನೆಗಳನ್ನು ಸಭೆ ಪರಿಗಣಿಸುತ್ತದೆ. ಪ್ರಸ್ತುತ 55,000 ಶಾಖೆಗಳಿವೆ ಮತ್ತು ಮಾರ್ಚ್ 2024 ರ ವೇಳೆಗೆ ಅದರ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಏರಿಸುವ ಗುರಿಯನ್ನು RSS ಹೊಂದಿದೆ.”
“ಸಭೆಯು ತೃತೀಯ ವರ್ಷದ ಸಂಘ ಶಿಕ್ಷಾ ವರ್ಗವನ್ನು ನಡೆಸುವ ಕುರಿತಾಗಿ ಚರ್ಚಿಸುತ್ತದೆ, ಇದನ್ನು ನವೆಂಬರ್ 14 ರಿಂದ ಡಿಸೆಂಬರ್ 8 ರವರೆಗೆ ಆಯೋಜಿಸಲಾಗುವುದು. ಈ ವರ್ಷ ನಾಗ್ಪುರದಲ್ಲಿ ಆಯೋಜನೆ ಮಾಡಲಾಗುತ್ತಿದೆ ಹಾಗಯ. ಈ ವರ್ಗವನ್ನು ಈ ಹಿಂದೆ ಕೇವಲ ಮೇ ತಿಂಗಳಲ್ಲಿ ಮಾತ್ರವೇ ನಡೆಸಲಾಗುತ್ತಿತ್ತು”.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ರೀ ಸುನಿಲ್ ಅಂಬೇಕರ್ ಅವರು “ವಿಜಯದಶಮಿಯ ಉತ್ಸವದಲ್ಲಿ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರ ಭಾಷಣದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ, ಸಾಮಾಜಿಕ ಸಮಾನತೆ, ಸಮಾಜದ ಎಲ್ಲ ವರ್ಗದವರಲ್ಲಿ ಸಂವಾದ ಪ್ರಕ್ರಿಯೆ ಮತ್ತು ಮಹಿಳಾ ಸಬಲೀಕರಣದ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುವುದು” ಎಂದರು.
ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿಯ ಸಭೆಯು ಜಿಲ್ಲೆಯ ಟ್ರಾನ್ಸ್ ಯಮುನಾ ಪ್ರದೇಶದ ಗೌಹಾನಿಯಾದ ಬಳಿಯ ವಾತ್ಸಲ್ಯ ಸಂಸ್ಥೆಯಲ್ಲಿ ನಡೆಯುತ್ತಿದೆ. ಹಾಗು ಅಕ್ಟೋಬರ್ 19 ರಂದು ಈ ಸಭೆ ಮುಕ್ತಾಯವಾಗಲಿದೆ.