ಸ್ವದೇಶಿ ಜಾಗರಣ ಮಂಚ್ ಈ ವರ್ಷ ಸ್ವದೇಶಿ ಸುರಕ್ಷಾ ಅಭಿಯಾನ ಎಂಬ ಹೆಸರಿನಲ್ಲಿ ಭಾರತೀಯರಲ್ಲಿ ಚೀನಾ ದೇಶ ನಮಗೆ ನೀಡುತ್ತಿರುವ ಉಪಟಳವನ್ನು, ನಾವು ಚೀನಾ ಮಾಲುಗಳನ್ನು ಖರೀದಿಸುವುದರಿಂದ ಆ ದೇಶ ಆರ್ಥಿಕವಾಗಿ ಸಬಲವಾಗುವ ಪರಿಸ್ಥಿತಿಯನ್ನು, ನಮ್ಮ ದೇಶದ ಗಡಿ ಕಾಯುವ ಸೈನಿಕರು  ಚೀನಾ ಸೇನೆಯಿಂದ ಅನುಭವಿಸುವ ಕಷ್ಟಗಳನ್ನು ಜನಸಮಾನ್ಯರಿಗೆ ಮುಟ್ಟಿಸುವ ಸಲುವಾಗಿ ಹಲವಾರು ಜಾಗರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ಅಂಥದ್ದೊಂದು ಕಾರ್ಯಕ್ರಮದಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕರು ಹಾಗೂ ಸ್ವದೇಶಿ ಜಾಗರಣ ಮಂಚ್‍ನ ಅಖಿಲ ಭಾರತೀಯ ಸಂಚಾಲಕರಾದ ಪ್ರೊ. ಅಶ್ವನಿ ಮಹಾಜನ್  ಉಪನ್ಯಾಸವನ್ನು ನೀಡಿದರು. ಅವರ ಭಾಷಣದ ಆಯ್ದ ಭಾಗ ಇಲ್ಲಿದೆ.

  • ೧೯೯೧ರಿಂದ ಭಾರತವು ನೂತನ ಆರ್ಥಿಕ ನೀತಿಯನ್ನು ಅನುಸರಿಸಲು ಆರಂಭಿಸಿತು. ಜಾಗತೀಕರಣದೆಡೆಗೆ ನಾವು ಹೊರಳಿದೆವು. ಅಮೆರಿಕಾ, ಯೂರೋಪಿನ ದೇಶಗಳು ಅಭಿವೃದ್ಧಿಯ ವಿಷಯವಾಗಿ ಭಾರತಕ್ಕೆ ಪಾಠ ಮಾಡಲು ಮೂಂದಾದರಲ್ಲದೇ ನಾವು ಹೇಗೆ ನಡೆದುಕೊಳ್ಳಬೇಕೆಂದು ಅವರು ನಿರ್ದೇಶಿಸತೊಡಗಿದರು. ಮುಕ್ತ ಮಾರುಕಟ್ಟೆ (Free trade), ಬಹು ರಾಷ್ಟ್ರೀಯ ಕಂಪನಿಗಳಿಗೆ ಉತ್ತೇಜನ, ವಿದೇಶಿಯರ ನೇರ ಹಣ ಹೂಡಿಕೆ, ವಿದೇಶೀ ಸರಕುಗಳಿಗೆ ನಮ್ಮಲ್ಲಿ ಪ್ರಾಶಸ್ತ್ಯ ಸೇರಿದಂತೆ ನಾವೆಂದೂ ಅಭ್ಯಸಿಸದ ಹತ್ತು ಹಲವು ಮಾರ್ಗಗಳನ್ನು ಹೇಳಿಕೊಟ್ಟರು. ದೇಶದ ನಮ್ಮ ಆರ್ಥಿಕ ಪಂಡಿತರೂ ಇವನ್ನು ಒಪ್ಪಿಕೊಂಡರು. ಅದೇ ನಿಟ್ಟಿನಲ್ಲಿ ಹೊಸ ಸಲಹೆಗಳು ಬರಲಾರಂಭಿಸಿತು. ಇನ್ನು ವಿಶ್ವ ವ್ಯಾಪಾರ ಸಂಸ್ಥೆಯೊಂದಿಗೆ ಒಪ್ಪಂದವನ್ನೂ ಸಹಿ ಹಾಕಿದೆವು. ತತ್ಪರಿಣಾಮವಾಗಿ ಹಿಂದೆ ವಿದೇಶಿ ವಸ್ತುಗಳಿಗಿದ್ದ  ಆಮದು ಶುಲ್ಕ ಕ್ರಮೇಣ ಇಳಿಮುಖವಾಯಿತು. ಹೆಚ್ಚು ವಿದೇಶಿ ವಸ್ತುಗಳು ನಮ್ಮ ದೇಶದೊಳಗೆ ದಾರಿಮಾಡಿಕೊಂಡವು. ಆದರೆ ೨೦೧೭ರ ಹೊತ್ತಿಗೆ ಅದೇ ಅಮೆರಿಕಾ ಆಡುತ್ತಿರುವ ಮಾತಾದರೂ ಏನು? “ಯಾವುದೇ ಕಾರಣಕ್ಕೂ ವಿದೇಶಿ ವಸ್ತುಗಳು ನಮ್ಮ ದೇಶದೊಳಗೆ ಬರಬಾರದು. ಚೀನಾ ವಸ್ತುಗಳು ನಮ್ಮ ದೇಶದೊಳಕ್ಕೆ ಬಂದರೆ ನಮ್ಮ ಜನರಿಗೆ ಉದ್ಯೋಗವಿಲ್ಲದಂತಾಗುತ್ತದೆ” ಎಂಬ ಮಾತಿನ ಭರಾಟೆಯಿಂದಲೇ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆ ಗೆದ್ದನು. ಬ್ರಿಟನ್, ಮುಕ್ತ ಮಾರುಕಟ್ಟೆಗೆಂದೇ ರಚಿಸಲಾಗಿದ್ದ ಯೂರೋಪಿಯನ್ ಒಕ್ಕೂಟದಿಂದ ಹೊರ ಬಂದಿದೆ.

೧೯೯೧ರ ಹೊತ್ತಿಗೆ ರಚಿತವಾದ ಸ್ವದೇಶಿ ಜಾಗರಣ ಮಂಚ್ ಈ ಮುಕ್ತ ಮಾರುಕಟ್ಟೆಯ ವಿರುದ್ಧವಾಗಿಯೇ ಮಾತನಾಡುತ್ತಿತ್ತು. ಯಾವುದೇ ದೇಶಕ್ಕೆ ವಿದೇಶೀ ಸರಕುಗಳ ಹೆಚ್ಚಳವಾದರೆ ಆ ದೇಶಕ್ಕೆ ಮಾರಕವಾಗುತ್ತದೆ. ಆ ದೇಶದ ಆರ್ಥಿಕತೆ ನೆಲಕಚ್ಚುತ್ತದೆ ಎಂದಾಗಲೆಲ್ಲಾ ನಮ್ಮ ಸಂಘಟನೆ ತನ್ನ ಚಿಂತನೆಯಿಂದ ಭಾರತವನ್ನು ಶಿಲಾಯುಗಕ್ಕೆ ಕೊಂಡೊಯ್ಯುತ್ತದೆ ಎಂದು ಮೂದಲಿಸುತ್ತಿದ್ದರು. ನಮ್ಮನ್ನು ಸಂಶಯದ ದೃಷ್ಟಿಯಿಂದ ಕಾಣುತ್ತಿದ್ದರು. ಆದರೆ ಪ್ರತಿ ಅಭಿವೃದ್ಧಿ ಹೊಂದಿದ ದೇಶಗಳೂ ಈಗ ಮುಕ್ತ ಮಾರುಕಟ್ಟೆಯಿಂದ ಹೊರ ಬರುವ ದಾರಿಗಳನ್ನೇ ಅನುಸರಿಸುತ್ತಿವೆ.

  • ಈ ಮುಕ್ತ ಮಾರುಕಟ್ಟೆಯ ಅತಿದೊಡ್ಡ ಫಲಾನುಭವಿಗಳು ಚೀನಾ ದೇಶ. ಇದರಿಂದಲೇ ಎಷ್ಟೋ ದೇಶಗಳ ಕಾರ್ಖಾನೆಗಳು ಮುಚ್ಚಿ ಹೋಗಿವೆ. ಟ್ರಂಪ ತನ್ನ ದೇಶದ ಕಾರ್ಖಾನೆಗಳು ತುಕ್ಕು ಹಿಡಿಯುತ್ತಿವೆ ಎಂದು ನುಡಿಯುತ್ತಾನೆ. ಭಾರತದ ಕಾರ್ಖನೆಗಳು, ಕೃಷಿ ೨೫ ವರ್ಷಗಳಿಂದ ಯಾವುದೇ ಅಭಿವೃದ್ಧಿ ಹೊಂದಿಲ್ಲ. ಎಲ್ಲವೂ ಇಳಿಮುಖವಾಗಿವೆ. ಹಲವು ಮುಚ್ಚಿಹೋಗಿವೆ. ದೇಶದ ಜಿಡಿಪಿ ಬರುತ್ತಿರುವುದು ಕೇವಲ ಸೇವಾ ಕ್ಷೇತ್ರದಿಂದ ಮಾತ್ರ. ೨೦೧೫-೬೧ರ ಲೆಕ್ಕಗಳ ಪ್ರಕಾರ ೪,೨೦,೦೦೦ ಕೋಟಿಯಷ್ಟು ಸರಕುಗಳನ್ನು ಚೀನಾದಿಂದ ನಾವು ನಮ್ಮ ದೇಶದೊಳಗೆ ಆಮದು ಮಾಡಿಕೊಂಡಿದ್ದೇವೆ. ಅವುಗಳಲ್ಲಿ ರಸಗೊಬ್ಬರ, ಕೀಟನಾಶಕಗಳು, ವಿದ್ಯುನ್ಮಾನ ಉಪಕರಣಗಳು, ಮೊಬೈಲುಗಳು ಸೇರಿದಂತೆ ನಿತ್ಯ ಜೀವನದಲ್ಲಿ ಭಾರತದ ಎಲ್ಲಾ ವರ್ಗಗಳಿಗೂ ಬೇಕಾಗುವ ಎಲ್ಲವೂ ಆಮದು ಮಾಡಿಕೊಳ್ಳುತ್ತಿದ್ದೇವೆ. ಅಂದರೆ, ಭಾರತದ ೨೪ಶೇಕಡಾ ತಯಾರಿಕಾ ಉತ್ಪತ್ತಿಯಷ್ಟು. ಆದರೆ ಇದು ಸರಕಾರದ ಕಣ್ಣುಗಳಿಗೆ ನೇರ ಕಾಣುವ ಲೆಕ್ಕ. ಆದರೆ ಚೀನಾದಿಂದ ಭಾರತದೊಳಕ್ಕೆ ಲೆಕ್ಕವಿಲ್ಲದಷ್ಟು ಲಾರಿಗಳಿಂದ ಚೀನಾ ಸರಕುಗಳು ಅನೈತಿಕವಾಗಿ ಬರುತ್ತಿವೆ. ಸಾಮಾನ್ಯ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಬರುತ್ತಿರುವುದನ್ನು ಗಮನಿಸಿದರೆ ನಮ್ಮಲ್ಲಿ ತಯಾರಾಗುವ ಉತ್ಪನ್ನಗಳ ಬಹುಪಟ್ಟು ಚೀನಾದಿಂದ ನಾವು ಆಮದುಮಾಡಿಕೊಳ್ಳುತ್ತಿದ್ದೇವೆ. ಈ ಕಡಿಮೆ ವೆಚ್ಚದಲ್ಲಿ ಬರುತಿರುವ ಸರಕನ್ನು ನಾವು Dumping ಎಂದು ಕರೆಯುತ್ತೇವೆ.

 

  • ನಮ್ಮ ದೇಶದ ಕಾರ್ಖಾನೆಗಳು ಉಳಿಯಬೇಕಾದರೆ, ನಮ್ಮ ಯುವ ಜನತೆಗೆ ಉದ್ಯೋಗಾವಕಾಶಗಳು ದೊರೆಯಬೇಕಾದರೆ ನಮ್ಮ ಮುಂದಿರುವ ಆಯ್ಕೆ ಚೀನಾ ವಸ್ತುಗಳ ಆಮದನ್ನು ನಿಲ್ಲಿಸುವುದು. ಹಾಗೂ ಅಲ್ಲಿಯ ವಸ್ತುಗಳನ್ನು ಬಹಿಷ್ಕರಿಸುವುದು. ಇದರಿಂದ ಏನಾದರೂ ಉಪಯೋಗವಿದೆಯೇ? ಚೀನಾ ದೊಡ್ಡದೇಶವಾದ್ದರಿಂದ ಅವರಿಗೆ ಯಾವುದೇ ನಷ್ಟವಾಗುವುದಿಲ್ಲ. ನಮಗೂ ಯಾವುದೇ ಲಾಭವಾಗುವುದಿಲ್ಲ ಎಂದು ಸಿನಿಕತೆಯಿಂದ ಮಾತನಾಡುವವರು ನಮ್ಮಲ್ಲಿ ಸಿಗುತ್ತಾರೆ. ಕಳೆದ ವರ್ಷ ಚೀನಾದ ಪಟಾಕಿಗಳನ್ನು ಬಹಿಷ್ಕರಿಸುವ ಕರೆಯನ್ನು ಸ್ವದೇಶಿ ಜಾಗರಣ ಮಂಚ್ ಕೊಟ್ಟಾಗ ಅದರಿಂದ ನಷ್ಟ ಅನುಭವಿಸಿದ್ದರಿಂದಲೇ ಚೀನಾ ದೂತಾವಾಸ ಕಚೇರಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿತ್ತು – ’ಈ ತರಹದ ಬಹಿಷ್ಕಾರದಿಂದ ಭಾರತ ಚೀನಾ ಸಂಬಂಧಗಳು ಹಳಸುತ್ತವೆ’ ಎಂದು. ಪ್ರಾಯಶಃ ಈ ಪ್ರಕಟಣೆಯೇ ಸಿನಿಕ ಮಾತುಗಳಿಗೆ ಕೊಡಬಹುದಾದ ಉತ್ತರ.

 

  • ಚೀನಾ ಮಾಡುವ ಒಂದು ಕುತಂತ್ರವನ್ನು ಭಾರತೀಯರು ಅರಿಯಲೇಬೇಕು. ಚೀನಾದಲ್ಲಿನ ಒಬ್ಬ ವಸ್ತುವೊಂದನ್ನು ತಯಾರಿಸಿ ಮಾರುವುದು ಅಲ್ಲಿಯ ಪಿಎಸ್‍ಯುಗಳಿಗೆ. ೧೦೦ ರೂಪಾಯಿಯ ಆ ವಸ್ತುವನ್ನು ಪಿಎಸ್‍ಯು ಖರೀಧಿಸಿ ಇತರೆ ದೇಶಗಳಿಗೆ ೮೦ ರೂಪಾಯಿಯ ಬೆಲೆಗೆ ಮಾರುತ್ತದೆ. ಇಲ್ಲಿ ಆಗುವ ೨೦ ರೂಪಾಯಿ ನಷ್ಟವನ್ನು ಚೀನಾ ಸರಕಾರ ಭರಿಸುತ್ತದೆ. ಚೀನಾ ಸರಕಾರ ಅಮೆರಿಕಾದ ಅರ್ಧದಷ್ಟು ಜಿಡಿಪಿ ಇಟ್ಟುಕೊಂಡೂ, ತಾನು ರಫ್ತು ಮಾಡಿ ಹಣ ಮಾಡುತ್ತಿರುವುದರಿಂದ ಹೆಚ್ಚು ಹಣವನ್ನು ಮುದ್ರಿಸಿ ನಾಟಕೀಯವಾಗಿ ತನ್ನ ದೇಶದ ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿದೆ ಎಂದು ತೋರಿಸಿಕೊಳ್ಳುತ್ತಿದೆ. ಸರಕಾರ ಬಿಡುಗಡೆ ಮಾಡುವ ಈ ಅಂಕಿಅಂಶಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಕಾರಣ ಅಲ್ಲಿರುವುದು ದೈತ್ಯ ಕಮ್ಯುನಿಸ್ಟ ಸರಕಾರ.

 

  • ಭಾರತ ಸರ್ಕಾರದ ಇತ್ತೀಚಿಗಿನ ಉತ್ತಮ ಬೆಳವಣಿಗೆಯೆಂದರೆ ಚೀನಾದಿಂದ ಡಂಪ್ ಆಗುತ್ತಿದ್ದ ೯೩ ವಸ್ತುಗಳ ಮೇಲೆ Anti Dumping ಶುಲ್ಕ ಹೇರಲಾಗಿದೆ. ಈ ಪ್ರಕ್ರಿಯೆಯನ್ನು ಸರಕಾರ ಸುಖಾಸುಮ್ಮನೆ ಮಾಡಲಾಗುವುದಿಲ್ಲ. ಸರಕಾರಕ್ಕೆ ಸ್ಥಳೀಯ ಕಾರ್ಖಾನೆಗಳು, ಉತ್ಪಾದಕರು ನೀಡುವ ದೂರನ್ನು ಪರಿಗಣಿಸಿ ಈ Anti Dumping duty ವಿಧಿಸಬಹುದಾಗಿದೆ. ಇಲ್ಲಿನ ಉತ್ಪಾದಕರು ಸಾಮಾನ್ಯವಾಗಿ ತಗಲುವ ವೆಚ್ಚಕಿಂತ ಕಡಿಮೆ ಬೆಲೆಯ ವಸ್ತುಗಳು ಚೀನಾದಿಂದ ಬರುತ್ತಿರುವ (Dump ಆಗುತ್ತಿರುವ) ಬಗ್ಗೆ ದೂರು ನೀಡಿದ್ದರಿಂದಲೇ ಕ್ರಮ ತೆಗೆದುಕೊಳ್ಳಬಹುದಾಗಿದೆ. ಕಳೆದ ವರ್ಷ ಸ್ಟೀಲ್, ರಾಸಾಯನಿಕ ವಸ್ತುಗಳ, ರಸಗೊಬ್ಬರಗಳ ಉತ್ಪಾದಕರು ನೀಡಿದ ದೂರಿನಿಂದ  ಚೀನಾದಿಂದ ಡಂಪ್ ಆಗುತಿದ್ದ ವಸ್ತುಗಳು ಇಳಿಮುಖವಾಯಿತು. ಚೀನಾದ ಸ್ಟೀಲ್ ರಪ್ತು ಒಂದರಿಂದಲೇ ೪೩ ಶೇಕಡ ಕಡಿಮೆಯಾಗಿದೆ. ಯಾವುದೇ ಸರಕಾರಗಳು ಬಂದರೂ ಚೀನಾದ ಸರಕುಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ಅಸಾಧ್ಯ. ಅವುಗಳಿಗೆ ಅಂತಾರಾಷ್ಟ್ರೀಯ ಬಾಧ್ಯತೆಗಳಿರುತ್ತವೆ. ಸರಕಾರದ ನಡೆಯನ್ನು ಮತ್ತೊಂದು ತರಹದಲ್ಲಿ ಅರ್ಥೈಸಿ ಮತ್ತೇನೋ ಹಾನಿ ದೇಶಕ್ಕೆ ಬಂದೊದಗಬಹುದು. ಜೊತೆಗೆ ಸರಕಾರವು ನಮ್ಮ ದೇಶದ ಕಾರ್ಖಾನೆಗಳಿಗೆ, ಅದರಿಂದ ಹೊರಬರುವ ಉತ್ಪನ್ನಗಳಿಗೆ ಗುಣಮಟ್ಟವನ್ನು ಕಾಪಾಡಬೇಕೆಂದು ಇತ್ತೀಚೆಗೆ ಸೂಚಿಸಿದೆ. ಇದರಿಂದ ಆಗಬಹುದಾದ ಬಹುದೊಡ್ಡ ಲಾಭವೆಂದರೆ ಮುಂದೊಂದು ದಿನ ಚೀನಾದಿಂದ ಬರುವ ಕಳಪೆ ದರ್ಜೆಯ ಉತ್ಪನ್ನಗಳನ್ನು ಸರಕಾರವೇ ಬಹಿಷ್ಕರಿಸಬಹುದಾಗಿದೆ. ಅಲ್ಲದೇ ಸರಕಾರವು ತನ್ನೆಲ್ಲಾ ಸಂಸ್ಥೆಗಳಲ್ಲಿ ಭಾರತೀಯ ಕಾರ್ಖಾನೆಗಳಲ್ಲಿ ತಯಾರಾದ ವಸ್ತುಗಳನ್ನೇ, (೨೦ಶೇಕಡ ಹೆಚ್ಚು ಖರ್ಚಾಗುವುದಿದ್ದರೂ) ಖರೀದಿಸಬೇಕು ಎಂದು ತಾಕೀತು ಮಾಡಿದೆ. ಇವೆಲ್ಲವೂ ಸಧ್ಯವಾಗಿರುವುದು ಸರಕಾರದ ಜೊತೆಗಿನ ಜನರ ಸಂಬಂಧ ಹಾಗೂ ಸರಕಾರವು ಈ ವಿಷಯವಾಗಿ ತೋರುತ್ತಿರುವ ಆಸ್ಥೆಯಿಂದಾಗಿಯೇ. ಆದಕಾರಣ ಜನರೇ ಸಂಘಟಿತರಾಗಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವ, ದೂರು ದಾಖಲಿಸುವ ಕೆಲಸವನ್ನು ಮಾಡಬೇಕಿದೆ. ಇದರಿಂದ ನಮ್ಮ ಕರ್ಖಾನೆಗಳು ಪುನರುಜ್ಜೀವಗೊಳ್ಳುತ್ತವೆ, ನಮ್ಮ ಯುವಕರಿಗೆ ಉದ್ಯೋಗ ಅವಕಾಶಗಳು ಹೆಚ್ಚುತ್ತವೆ. ದೇಶದ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗುವುದರಲ್ಲೂ ಯಾವುದೇ ಸಂಶಯವಿಲ್ಲ.

’ಸ್ವಾಭಿಮಾನ, ಸ್ವಾವಲಂಬನೆ, ಸಾರ್ವಭೌಮತ್ವಗಳನ್ನು ದೇಶದಲ್ಲಿ ಪುನಃ ಸ್ಥಾಪಿಸುವುದು ಇಂದಿನ ಅಗತ್ಯ. ಆ ನಿಟ್ಟಿನಲ್ಲಿ ಗ್ರಾಮ ವಿಕಾಸ, ನೈತಿಕ ಮೌಲ್ಯಗಳನ್ನು ಜನರಲ್ಲಿ ಹೆಚ್ಚಿಸುವುದೇ ಸ್ವದೇಶಿ ಜಾಗರಣ ಮಂಚ್ ಕೇಳಿಕೊಂಡುಬರುತ್ತಿರುವುದು. ಜಾಗತೀಕರಣದಿಂದಾಗಿ ಒಂದೇ ಅಂಗಿ  ಎಲ್ಲರಿಗೂ ಅನ್ವಯ ಎಂಬಂತೆ ನಮ್ಮ ನಾಯಕರು ಅಮೆರಿಕಾ, ಯೂರೋಪ್ ದೇಶಗಳು ತುಳಿದ ಹಾದಿಯನ್ನೇ ನಡೆಯಬೇಕೆಂದು ತಪ್ಪು ಹೆಜ್ಜೆಯಿಟ್ಟಿದ್ದಾರೆ. ಆ ಮಾದರಿಯನ್ನು ಧಿಕ್ಕರಿಸಿ ನಮ್ಮದೇ ದೇಶದ ಮಾದರಿಯನ್ನೊಮ್ಮೆ  ಅವಲೋಕಿಸಿದರೆ, ಹಿಂದೊಮ್ಮೆ ವ್ಯವಸ್ಥಿತವಾಗಿತ್ತು ಎಂಬುದು ತಿಳಿದುಬರುತ್ತದೆ. ಎಲ್ಲಾ ದೇಶಗಳಿಗಿಂತಲೂ ಹೆಚ್ಚು ಜಿಡಿಪಿ ನಮ್ಮದೇ ಆಗಿತ್ತು ಎಂಬುದೂ ಸತ್ಯ.’ ಎಂದು ಸ್ವದೇಶಿ ಜಾಗರಣ ಮಂಚ್‍ನ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕೆ ಪ್ರಾಸ್ತಾವಿಕವಾಗಿ ನುಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.