ಪುತ್ತೂರು: 12-01-2013:   ಇಂದು ನಾವು ಕಾಣುವ ಅನೇಕಾನೇಕ ಜಾಗತಿಕ ಸಂಶೋಧನೆಗಳು ಈ ಹಿಂದೆಯೇ ಭಾರತದ ಮಣ್ಣಿನಲ್ಲಿ ಖುಷಿ, ಮಹರ್ಷಿಗಳ ಕಾಲದಲ್ಲಿ ವಿಶಿಷ್ಟ ರೀತಿಯಲ್ಲಿ ಉಕ್ತವಾದಂತಹವುಗಳಾಗಿವೆ. ಪ್ರಸ್ತುತ ಭಾರತ ವಿವಿಧ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಸರ್ವಶಕ್ತ ರಾಷ್ಟ್ರವಾಗಿ ಮೂಡಿಬರುವತ್ತ ದಾಪುಗಾಲಿಡುತ್ತಿದೆ. ಇಂತಹ ದೇಶಕ್ಕೆ ಮಾರ್ಗದರ್ಶನ ಮಾಡಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂದು ಇಸ್ರೋದ ಮಾಜಿ ಅಧ್ಯಕ್ಷ, ಭಾರತ ಸರಕಾರದ ಯೋಜನಾ ಆಯೋಗದ ಸದಸ್ಯ ಪದ್ಮವಿಭೂಷಣ ಡಾ.ಕೆ.ಕಸ್ತೂರಿ ರಂಗನ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಮಹೋತ್ಸವ ಸಮಿತಿಯ ನಿರ್ದೇಶನದಲ್ಲಿ ನಡೆದ ಸ್ವಾಮಿ ವಿವೇಕಾನಂದರ ನೂರೈವತ್ತನೇ ಜಯಂತಿಯ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ವಿವೇಕಾನಂದ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ವಿವೇಕಾನಂದರು ಕೇವಲ ಒಬ್ಬ ಸಂತನಲ್ಲ. ಅವರೊಬ್ಬ ವಿಜ್ಞಾನಿ, ತರ್ಕಶಾಸ್ತ್ರಜ್ಞ ಹಾಗೂ ಚಿಂತಕ. ಮಾತ್ರವಲ್ಲದೆ ಓರ್ವ ಪ್ರಾಮಾಣಿಕ ನಿರ್ಭೀತ ವ್ಯಕ್ತಿ. ಅವರು ಮಾಡಿದ ಘನ ಕಾರ್ಯಗಳು ಸಮಾಜದ ಮಂದಿಯ ಕಣ್ಣು ತೆರೆಸಬಹುದಾದ ಮಾಧ್ಯಮಗಳಾಗಿವೆ. ಅವರ ಸಾಧನೆಗಳನ್ನು ಅರಿಯುವುದಕ್ಕೆ ಒಬ್ಬನ ಜೀವಿತಾವಧಿಯೂ ಸಾಲದು. ವಿವೇಕಾನಂದರು ಭಾರತದ ಸರ್ವಸ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡವರಾಗಿದ್ದರು. ಅಂತಹ ಮಾದರಿ ವ್ಯಕ್ತಿಯ ಹೆಸರಿನಲ್ಲಿ ನಡೆಯುವ ವಿವೇಕಾನಂದ ವಿದ್ಯಾಸಂಸ್ಥೆಗಳು ಸಮಾಜಕ್ಕೆ ಉತ್ತಮ, ಪರಿಪೂರ್ಣ ಶಿಕ್ಷಣ ನೀಡುವುದಕ್ಕೆ ಸಾಧ್ಯ ಎಂದರು.

ಕ್ರಿಯಾಶಿಲ ಮತ್ತು ಸೃಜನಶೀಲ ವಿಜ್ಞಾನಿಗಳನ್ನು ಭಾರತ ಹೊಂದಿದೆ. ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅದೆಷ್ಟೋ ಮಂದಿಗಳು ನಮ್ಮಲ್ಲಿರುವುದು ದೇಶದ ಉತ್ಕೃಷ್ಟತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯೆನಿಸಿದೆ. ಪ್ರತಿಯೊಬ್ಬ ವ್ಯಕ್ತಿಯೂ ನಿರ್ದಿಷ್ಟ ಗುರಿಯನ್ನು ಹೊಂದಿ ನಿರಂತರ ಪ್ರಯತ್ನವನ್ನು ಧಾರೆಯೆರೆದಲ್ಲಿ ಯಶಸ್ಸು ಖಚಿತ. ಕಾಲೇಜು ಜೀವನದಿಂದ ಸಮಾಜಕ್ಕೆ ಅಡಿಯಿಟ್ಟಂದಿನಿಂದ ನಿಜವಾದ ಅಧ್ಯಯನ ವಿಧಾನ ಜಾರಿಗೆ ಬರುತ್ತದೆ ಎಂದು ತಿಳಿಸಿದರು.

ಭಾರತದಲ್ಲಿ ಸಾಧನೆಗೆ ಅಪಾರ ಅವಕಾಶಗಳಿವೆ. ಪ್ರಯತ್ನಿಸಿದರೆ ಅಸಾಧ್ಯವಾದದ್ದು ಇಲ್ಲಿ ಯಾವುದೂ ಇಲ್ಲ. ಹಾಗಾಗಿ ಭವಿಷ್ಯದ ಮಂದಿಯನ್ನು ಅದ್ಭುತ ಸಾಧ್ಯತೆಗಳು ಸ್ವಾಗತಿಸಲಿವೆ ಎಂದರಲ್ಲದೆ ಪಶ್ಚಿಮ ಕರಾವಳಿಯ ಈ ಪ್ರದೇಶ ಅಸಾಮಾನ್ಯ ಭೂಭಾಗವಾಗಿದೆ ಎಂದು ಅಭಿಪ್ರಾಯಿಸಿದರು.

ದಿಕ್ಸೂಚಿ ಭಾಷಣ ಮಾಡಿದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಬೌದ್ಧಿಕ್ ಪ್ರಮುಕ್ ವಿ.ನಾಗರಾಜ್ ಮಾತನಾಡಿ ಸಮಾಜದಲ್ಲಿ ಕ್ಷಾತ್ರವರ್ಚಸ್ಸು ಕಳೆಗುಂದಿದ್ದ 19ನೇ ಶತಮಾನದಲ್ಲಿ ಜನ್ಮತಾಳಿದ ಸ್ವಾಮಿ ವಿವೇಕಾನಂದರು ಆಧುನಿಕ ಭಾರತದ ಕನಸನ್ನು ಕಂಡ ಮಹಾನ್ ಚೇತನ. ಭಾರತವನ್ನು ಸಶಕ್ತಗೊಳಿಸುವ ಸಾಧ್ಯತೆ ಇರುವುದು ಯುವಜನರಲ್ಲಿ. ಹಾಗಾಗಿ ಯುವಜನರನ್ನು ಪ್ರೇರೇಪಿಸುವ ಶಿಕ್ಷಣ ಅಗತ್ಯ ಎಂದು ಮನಗಂಡವರು ವಿವೇಕಾನಂದರು ಎಂದರು.

ವೇದಾಂತ ಹಾಗೂ ಸಿದ್ಧಾಂತಗಳನ್ನು ಸಮನ್ವಯಗೊಳಿಸಿ ರಾಷ್ಟ್ರ ಭಕ್ತಿಯನ್ನು ಸಮಾಜದಲ್ಲಿ ಭಿತ್ತಿದ ವಿವೇಕಾನಂದರು ತಮ್ಮ ಭಾಷಣದ ಮೂಲಕ ಇಡೀ ದೇಶದಲ್ಲಿ ಸಂಚಲನವನ್ನು ಉಂಟುಮಾಡಿದವರು. ಅಪ್ರತಿಮ ರಾಷ್ಟ್ರಭಕ್ತರಾಗಿ, ಅದ್ಭುತ ಹಿಂದೂ ಚಿಂತಕರಾಗಿ ಜಗತ್ತಿಗೇ ವಿಸ್ಮಯ ಮೂಡಿಸಿದವರು ಎಂದು ನುಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಅಧ್ಯಕ್ಷತೆ ವಹಿಸಿ ಈ ವರ್ಷ ವಿವೇಕಾನಂದ 150ನೇ ಜನ್ಮಜಯಂತಿಯ ಅಂಗವಾಗಿ ವಿದ್ಯಾವರ್ಧಕ ಸಂಘವು ಕೈಗೊಳ್ಳಲಿರುವ ಕಾರ್ಯಗಳ ಬಗೆಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ವಿದ್ಯಾವರ್ಧಕ ಸಂಘದ ಮಾರ್ಗದರ್ಶಕ ಕೆ.ರಾಮ ಭಟ್, ಕಾರ್ಯದರ್ಶಿ ಇ.ಶಿವಪ್ರಸಾದ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವೇಕಾನಂದ ಜಯಂತಿಯ ಪ್ರಯುಕ್ತ ವಿವೇಕಾನಂದ ಪದವಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಂತೆಯೇ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಆಂತರಿಕವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೂ ಬಹುಮಾನ ವಿತರಣೆ ನಡೆಯಿತು. ಅಲ್ಲದೆ ರಾಮ ಭಟ್ ರಚಿಸಿದ ‘ವಿವೇಕಾನಂದರ ಕನಸು ನನಸಾಗಿಸುವಾ, ಭವ್ಯಭಾರತ ನಿರ್ಮಿಸುವಾ..’ ಕಾವ್ಯವನ್ನು ಪ್ರಸ್ತುತಪಡಿಸಲಾಯಿತು.    ಪತ್ರಿಕೋದ್ಯಮ ವಿದ್ಯಾರ್ಥಿಗಳು ರೂಪಿಸಿದ ವಿಕಸನ ಪತ್ರಿಕೆಯನ್ನು ವಿತರಿಸಲಾಯಿತು.

ವಿದ್ಯಾರ್ಥಿನಿಯರಾದ ಶ್ರೇಯಾ ಕೊಳತ್ತಾಯ, ಅದಿತಿ, ರಶ್ಮಿ ಹಾಗೂ ನಂದಿನಿ ಪ್ರಾರ್ಥಿಸಿದರು. ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ರಾಧಾಕೃಷ್ಣ ಭಕ್ತ ಸ್ವಾಗತಿಸಿದರು. ಅಧ್ಯಕ್ಷ ವಿ.ವಿ.ಭಟ್, ಐಎಎಸ್ ಪ್ರಸ್ತಾವನೆಗೈದರು. ಪದವಿ ಕಾಲೇಜು ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ವಿವೇಕಾನಂದ ಜಯಂತಿ ಸ್ಪರ್ಧೆಗಳ ಬಗೆಗೆ ಮಾಹಿತಿ ನೀಡಿದರು. ಪ್ರೊ.ವೆಂಕಟ್ರಮಣ ಭಟ್ ಹಾಗೂ ಡಾ.ದಿನೇಶ್ಚಂದ್ರ ವಿಜೇತರ ಪಟ್ಟಿ ವಾಚಿಸಿದರು. ಡಾ.ತಾಳ್ತಜೆ ವಸಂತಕುಮಾರ್ ವಂದಿಸಿದರು. ಉಪನ್ಯಾಸಕರುಗಳಾದ ಡಾ.ಶ್ರೀಶಕುಮಾರ್, ರಾಕೇಶ್ ಕುಮಾರ್ ಕಮ್ಮಜೆ ಹಾಗೂ ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ಬಳಿಕ ಡಾ.ಕಸ್ತೂರಿ ರಂಗನ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ನೂತನ ಕಟ್ಟಡದ ಉದ್ಘಾಟನೆ: ಕಾರ್ಯಕ್ರಮಕ್ಕೂ ಮೊದಲು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಇದರ ನೂತನ ಮೆಕ್ಯಾನಿಕಲ್ ಮತ್ತು ಸಿವಿಲ್ ಪ್ರಯೋಗಾಲಯದ ಸಂಕೀರ್ಣವನ್ನು ಪದ್ಮವಿಭೂಷಣ ಡಾ.ಕೆ.ಕಸ್ತೂರಿ ರಂಗನ್ ಉದ್ಘಾಟಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.