ಲೇಖನ: ನಾರಾಯಣ ಶೇವಿರೆ
ಆಹಾರ, ವಿಶ್ರಾಂತಿ, ರಕ್ಷಣೆ ಮತ್ತು ಸಂತಾನ ವಿಸ್ತರಣೆ - ಈ ನಾಲ್ಕು ವಿಷಯಗಳಲ್ಲಿ ಮನುಷ್ಯನಿಗೂ ಇತರ ಪ್ರಾಣಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ, ಆದರೆ ಮನುಷ್ಯ ಧರ್ಮಿಷ್ಠನಾಗಿ ಇರಬಲ್ಲನಾದ್ದರಿಂದ ಪ್ರಾಣಿಗಳಿಗಿಂತ ಅಧಿಕ ವಿಶಿಷ್ಟನೆನಿಸಿಕೊಂಡಿದ್ದಾನೆ. ಇದು ಮನುಸ್ಮೃತಿಯ ಅಂಬೋಣ.
ಧಾರ್ಮಿಕ ಮನುಷ್ಯ
ಇತರ ಪ್ರಾಣಿಗಳಿಗಿಂತ ಭಿನ್ನನಿರುವ ಮನುಷ್ಯನ ವಿಶೇಷತೆಯನ್ನು ಸ್ಮೃತಿಕಾರನಿಗೆ ಕಂಡುಕೊಳ್ಳಬೇಕಿತ್ತು. ಸಮಾನವಿರುವ ಅಂಶಗಳನ್ನು ಉಲ್ಲೇಖಿಸಿ ವಿಶೇಷತೆಯನ್ನು ಹೇಳಿದರೆ ಅಂಥದ್ದರ ಮಹತ್ತ್ವ ಹೆಚ್ಚು ಸ್ಪಷ್ಟವಾಗುತ್ತದೆಯಾಗಿ ನಾಲ್ಕು ಸಮಾನಾಂಶಗಳನ್ನು ಹೇಳಿ ಅವುಗಳಿಗಿಂತ ಪೂರ್ತಿ ಭಿನ್ನವಾದ ಮತ್ತು ಅತ್ಯಧಿಕತಮವಾದ ಧರ್ಮವನ್ನು ಉಲ್ಲೇಖಿಸಿ ಮನುಷ್ಯ ತಲಪಬೇಕಾದ ಏರನ್ನು ಆತ ಸೂಚಿಸಿರಬೇಕೆನಿಸುತ್ತದೆ. ಆಸ್ತಿಕ ಆಚರಣೆಗಳ ನೆಲೆಯಲ್ಲಲ್ಲ, ಬದುಕಿನ ನಡತೆಯ ನೆಲೆಯಲ್ಲಿ ಮನುಷ್ಯನಿಗೆ ಧಾರ್ಮಿಕನಾಗಬಲ್ಲ ಸಾಧ್ಯತೆಯಿದೆ. ಅಧಾರ್ಮಿಕನಾಗಬಲ್ಲ ಸಾಧ್ಯತೆಯೂ ಇದೆ. ಈ ಎರಡೂ ಸಾಧ್ಯತೆಗಳಿಲ್ಲದ ಪ್ರಾಣಿಗಳದು ಸಹಜ ಬದುಕು. ಪ್ರಾಣಿಸಹಜ ಬದುಕು. ಮನುಷ್ಯಸಹಜ ಬದುಕು ಇದಕ್ಕಿಂತ ಭಿನ್ನ. ಅಧಾರ್ಮಿಕವಾಗಲಾರವು ಎಂದ ಮಾತ್ರಕ್ಕಾಗಿಯೇ ಪ್ರಾಣಿಗಳಿಗೆ ಧಾರ್ಮಿಕವಾಗಬೇಕಾದ ದರ್ದೂ ಇಲ್ಲ. ಅಧಾರ್ಮಿಕನಾಗಬಲ್ಲ ಎಂಬ ಕಾರಣಕ್ಕಾಗಿಯೇ ಮನುಷ್ಯನಿಗೆ ಧಾರ್ಮಿಕನಾಗಬೇಕಾದ ಅಗತ್ಯವಿದೆ. ಧರ್ಮದ ನೆಲೆಯಲ್ಲಿ ಆತ ಈ ಬಗೆಯಲ್ಲಿ ವಿಶೇಷನೆನಿಸಿಕೊಂಡಿದ್ದಾನೆ. ವಿಶೇಷನೆನಿಸಿಕೊಂಡಿದ್ದಾನೆ ಮಾತ್ರವಲ್ಲ, ಅಧಿಕ ವಿಶೇಷನೆನಿಸಿಕೊಂಡಿದ್ದಾನೆ; ಆದರೆ ಅದನ್ನು ಹೆಚ್ಚೆನಿಸಿಕೊಂಡಿದ್ದಾನೆಂದು ಅರ್ಥೈಸಲಾಗದು. ಯಾಕೆಂದರೆ; ಧಾರ್ಮಿಕನಾದರೆ ಹೆಚ್ಚೆನಿಸಿಕೊಳ್ಳಬಲ್ಲ, ಅಧಾರ್ಮಿಕನಾದರೆ ನಿಕೃಷ್ಟನೆನಿಸಿಕೊಳ್ಳಲೂ ಬಲ್ಲ.
ಸಮಾನಾಂಶಗಳಲ್ಲಿ ವಿಭಿನ್ನ ನಡೆ
ಆತ ಪ್ರಾಣಿಗಳ ಜತೆಗೆ ಸಮಾನವಾಗಿ ಹಂಚಿಕೊಂಡಿರುವ ನಾಲ್ಕು ಅಂಶಗಳನ್ನು ಧರ್ಮಾಧರ್ಮಗಳ ನೆಲೆಯಲ್ಲಿ ನೋಡಬೇಕಾಗುತ್ತದೆ. ಆಹಾರ ಮತ್ತು ವಿಶ್ರಾಂತಿಗಳನ್ನು ತಮ್ಮ ಒಂದು ಮೂಲಭೂತ ಆವಶ್ಯಕತೆಯ ನೆಲೆಯಲ್ಲಿ ಪ್ರಾಣಿಗಳು ಪೂರೈಸಿಕೊಳ್ಳುತ್ತವೆ. ಮನುಷ್ಯ ಕೂಡಾ ಅದೇ ರೀತಿ ತೊಡಗಿದರೆ ಪ್ರಾಣಿಯಂತಾಗುತ್ತಾನೆ, ಪ್ರಾಣಿಯಷ್ಟೇ ಆಗುತ್ತಾನೆ ಎಂದು ಮನು ಸ್ವಲ್ಪ ಉದಾರತೆ ತೋರಿದ್ದಾನೆ. ತನ್ನ ಮುಂಪೀಳಿಗೆಯ ಕುರಿತ ಉದಾರತೆ ಇದಿರಬಹುದು. ಆದರೆ ಗೀತಕಾರ ಈ ನಿಟ್ಟಿನಲ್ಲಿ ನಿಷ್ಕೃಷ್ಟವಾಗಿ ಮತ್ತು ಕಠೋರವಾಗಿ ವ್ಯಾಖ್ಯಾನಿಸುತ್ತ ತನಗಾಗಿ ಅಡುಗೆ ಮಾಡುವವ ಉಣ್ಣುವುದು ಅನ್ನವನ್ನಲ್ಲ, ಪಾಪವನ್ನು ಎಂದಿದ್ದಾನೆ. ಮನುಷ್ಯ ತನಗಾಗಿ ಬದುಕಿದರೆ ಆತನ ಬದುಕು ಪಾಪದ ಬದುಕು ಎನ್ನುವುದು ಕೃಷ್ಣನ ಸ್ಪಷ್ಟೋಕ್ತಿ. ಹಾಗಾಗಿ ಪ್ರಾಣಿಗಳ ಜತೆಗೆ ಆಹಾರಾದಿ ನಾಲ್ಕು ಬಗೆಯ ಸಮಾನಾಂಶಗಳನ್ನು ಹೊಂದಿರುವ ಮನುಷ್ಯ ಆ ನಿಟ್ಟಿನಲ್ಲಿ ತೊಡಗಬೇಕಾದುದು ಪ್ರಾಣಿಗಳಂತಲ್ಲ, ಬದಲಾಗಿ ಮನುಷ್ಯನಂತೆ. ಮನುಷ್ಯನಂತೆ ಎಂದರೆ, ಸ್ಮೃತಿಪ್ರಕಾರ ಮನುಷ್ಯವಿಶೇಷ ಎನಿಸಿಕೊಂಡಿರುವ ಧರ್ಮದಂತೆ. ಧರ್ಮವು ಮನುಷ್ಯನಿಗೆ ಸಂಬಂಧಿಸಿದ್ದು. ಮನುಷ್ಯನಿಗೆ ಮಾತ್ರ ಸಂಬಂಧಿಸಿದ್ದು. ಈಗ ಈ ನಿಟ್ಟಿನಲ್ಲಿ, ರಕ್ಷಣೆಯ ಕಡೆಗೆ ಸ್ವಲ್ಪ ದೃಷ್ಟಿ ಹಾಯಿಸುವುದಾದರೆ;
ಪ್ರಾಣಿಗಳ ರಕ್ಷಣಾವ್ಯವಸ್ಥೆ
ಭಯಪಡುವುದು ಮತ್ತು ಭಯವನ್ನು ಹುಟ್ಟಿಸುವುದು ಇವೆರಡೂ ಒಂದೇ ನಾಣ್ಯದ ಇಮ್ಮುಖಗಳಂತೆ ಇರುವ ಸ್ವಭಾವಸ್ಥಿತಿಗಳು. ತನಗಿಂತ ದುರ್ಬಲವಿರುವುದಕ್ಕೆ ಭಯಕಾರಕನಂತೆಯೂ ತನಗಿಂತ ಪ್ರಬಲವಿರುವುದರ ಕುರಿತು ಭಯಪಡುವಂತೆಯೂ ಇರುವುದು ಪ್ರಾಣಿಪ್ರಪಂಚದಲ್ಲಿ ಕಂಡುಬರಬಲ್ಲ ವ್ಯವಹಾರ. ಪರಿಣಾಮದಲ್ಲಿ ಈ ವ್ಯವಹಾರವು ರಕ್ಷಣೆಯ ಕಾರ್ಯವೊಂದನ್ನು ಹುಟ್ಟುಹಾಕುತ್ತದೆ. ಭಯಕ್ಕೆ ಪ್ರತಿಯಾಗಿ ರಕ್ಷಣೆಯ ತಂತ್ರದಲ್ಲಿ ತೊಡಗುವ ಪ್ರಾಣಿಗಳು ವಿವಿಧ ಸಂದರ್ಭಗಳಲ್ಲಿ ವಿಧವಿಧವಾಗಿ ಕಾರ್ಯಶೀಲವಾಗುತ್ತವೆ. ಅಶಕ್ತವೆನಿಸಿದ ಸಣ್ಣ ಎರೆಹುಳ ಕೂಡಾ ತನಗೆ ತೊಂದರೆಯಾದಾಗ ಒಂದು ಪ್ರತಿಭಟನೆಯನ್ನು ಸಲ್ಲಿಸುತ್ತದೆ. ಕಣ್ಣು ಕಾಣದಂತಿರುವ ಸೊಳ್ಳೆಗಳು ರಕ್ತಹೀರಲು ಬಂದಾಗ ಅವನ್ನು ಕೊಲ್ಲಲೆಂದು ಒಂದು ತಯಾರಿ ನಡೆಸಿದರೂ ಸಾಕು, ತಕ್ಷಣವೇ ನಮ್ಮ ಕಣ್ಣು ತಪ್ಪಿಸಿ ಓಡಾಡುತ್ತವೆ. ತಮ್ಮ ಪ್ರಾಣಕ್ಕೆ ಸಂಚಕಾರ ಬರುವುದನ್ನು ಗ್ರಹಿಸುವ ಸೂಕ್ಷ್ಮತೆ ಸೊಳ್ಳೆಗಳಲ್ಲಿದೆ. ಹಾಗೆಯೇ; ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುವ ಸಾಮರ್ಥ್ಯ ಜಿಂಕೆಗಳ ಕಾಲುಗಳಲ್ಲಿದೆ, ಹುಲಿಗಳ ಉಗುರುಗಳಲ್ಲಿದೆ, ಆನೆಗಳ ಸೊಂಡಿಲಿನಲ್ಲಿದೆ..
ತನ್ನ ರಕ್ಷಣೆ ತನ್ನಿಂದಲೇ
ಯಾವುದೇ ಪ್ರಾಣಿ ಅನವಶ್ಯವಾಗಿ ಆಕ್ರಮಣವನ್ನು ಮಾಡುವುದಿಲ್ಲವೆನ್ನುವುದು ಹೌದಾದರೂ ಆಹಾರಕ್ಕಾಗಿ ಆಕ್ರಮಣವನ್ನು ಅನಿವಾರ್ಯವಾಗಿ ಮಾಡಬೇಕಾಗಿ ಬರುತ್ತದೆ. ಮಾತ್ರವಲ್ಲದೆ, ಪ್ರಾಣಭೀತಿಯನ್ನು ಊಹಿಸಿಯೋ ಕಲ್ಪಿಸಿಯೋ ಕೆಲವೊಮ್ಮೆ ರಕ್ಷಣೆಗಾಗಿಯೂ ಆಕ್ರಮಣವನ್ನು ನಡೆಸುವುದಿದೆ. ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುವುದಕ್ಕಾಗಿ ನಿಸರ್ಗವು ಪ್ರಾಣಿಗಳಲ್ಲಿ ಒಂದು ವ್ಯವಸ್ಥೆಯನ್ನು ಕಲ್ಪಿಸಿದೆ. ಅವು ಮಾನಸಿಕವಾಗಿ ಭಯವನ್ನೂ ಪಡುತ್ತವೆ, ಶಾರೀರಿಕವಾಗಿ ರಕ್ಷಣೆಯನ್ನೂ ಮಾಡಿಕೊಳ್ಳುತ್ತವೆ. ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುತ್ತವೆ. ಅವು ರಕ್ಷಣೆಗಾಗಿ ಗುಂಪುಗುಂಪಾಗಿ ಇರುತ್ತವೆ. ಕೆಲವು ಪ್ರಾಣಿಗಳು ತಮ್ಮ ಗುಂಪಿನ ಇತರರ ರಕ್ಷಣೆಗಾಗಿ ಧಾವಿಸುವುದೂ ಇದೆ. ಮರಿಗಳ ರಕ್ಷಣೆಗಾಗಿ ಎಲ್ಲವೂ ದೃಢವಾಗಿ ನಿಲ್ಲುವುದು ಸರ್ವೇಸಾಮಾನ್ಯ. ತಮ್ಮ ಮುಂದಿನ ಸಂತತಿಯ ಕಾಳಜಿ ಅವುಗಳಲ್ಲಿ ದೃಢತರವಾಗಿದೆ. ಆದರೆ, ಅದು ಮರಿಗಳಾಗಿದ್ದಾಗ ಮಾತ್ರ! ಮರಿಗಳ ರಕ್ಷಣೆಯಿರಬಹುದು, ತನ್ನ ಗುಂಪಿನ ಯಾವುದಾದರೂ ಅಪಾಯದಲ್ಲಿರುವ ಸದಸ್ಯನ ರಕ್ಷಣೆಯಿರಬಹುದು; ಎರಡೂ ಸಂದರ್ಭಗಳಲ್ಲಿ ಅವು ತೊಡಗುವುದು ತಮ್ಮ ಪರೋಕ್ಷ ರಕ್ಷಣೆಯ ನೆಲೆಯಲ್ಲಿಯೇ. ಸಾಮಾನ್ಯತಃ ತಮ್ಮ ಪ್ರಾಣಕ್ಕೆ ಹಾನಿಮಾಡಿಕೊಂಡು ಯಾವುದೇ ಪ್ರಾಣಿ ಇನ್ನೊಂದನ್ನು, ಬೇಕಿದ್ದರೆ ತನ್ನದೇ ಮರಿಯನ್ನು ರಕ್ಷಿಸುವ ಸ್ಥೈರ್ಯವನ್ನು ತೋರಲಾರದು. ಇವಿಷ್ಟು, ಸಂಕ್ಷಿಪ್ತವಾಗಿ, ಪ್ರಾಣಿಪ್ರಪಂಚದಲ್ಲಿ ನಡೆಯುವ ರಕ್ಷಣೆಯ ಕುರಿತ ನಡೆ.
ವಿಶಿಷ್ಟ ಮನುಷ್ಯ ಬದುಕು
ತನ್ನ ಬುದ್ಧಿಬಲದ ಕಾರಣದಿಂದ ಮನುಷ್ಯನೂ ರಕ್ಷಣೆಯನ್ನು ಕುರಿತಾಗಿ ಪ್ರಾಣಿಗಳಿಗಿಂತ ಅಧಿಕವಾಗಿಯೇ ಯೋಚಿಸಿದ್ದಾನೆ. ಒಂದಾನೊಂದು ಕಾಲದಲ್ಲಿ ಆತನಿಗೆ ಪ್ರಾಣಿಗಳಿಂದ ರಕ್ಷಣೆ ಹೊಂದಬೇಕಾದ ಅಗತ್ಯ ಇದ್ದಿರಬಹುದು. ಈಗಂತೂ ವ್ಯಾಪಕ ನೆಲೆಯಲ್ಲಿ ಅದಿಲ್ಲ. ಹಿಂಸ್ರಕ ಕಾಡುಪ್ರಾಣಿಗಳ ಪ್ರಮಾಣ ಮತ್ತು ವ್ಯಾಪ್ತಿ ತೀರಾ ದೊಡ್ಡ ಪ್ರಮಾಣದಲ್ಲಿ ಕುಗ್ಗಿದ್ದರಿಂದ ಪ್ರಾಣಿಗಳಿಂದ ಪ್ರಾಣಭಯವೆನ್ನುವುದು ಕನಸಾಗಿಬಿಟ್ಟಿದೆ. ಅದೇ ವೇಳೆ ಮನುಷ್ಯನೇ ಮನುಷ್ಯನಿಗೆ ಭಯಕಾರಕನಿದ್ದಾನೆ ಎನ್ನುವ ಸನ್ನಿವೇಶ ಗಾಢವಾಗುತ್ತಲೂ ಇದೆ. ಮತ್ತು, ಮನುಷ್ಯ ಕಟ್ಟಿಕೊಂಡ ಬದುಕು ಪ್ರಾಣಿಗಳಂತೆ ಕೇವಲ ಜೈವಿಕ ಮಿತಿಗೆ ಸೀಮಿತಗೊಂಡಿಲ್ಲ. ಅಂದರೆ; ಚೆನ್ನಾಗಿ, ನಿರ್ಭಯವಾಗಿ ಉಸಿರಾಡುವುದಷ್ಟೆ ಆತನ ಬದುಕಲ್ಲ. ಆತ ಕಟ್ಟಿಕೊಂಡ ಮನೆ ಬರಿಯ ಆಶ್ರಯತಾಣವಲ್ಲ. ಅದೊಂದು ಪರಂಪರೆಯನ್ನು ಕಟ್ಟಿಕೊಂಡ ಜೀವಂತ ನೆಲೆ. ನಾನಾ ಬಗೆಯಲ್ಲಿ ಇತರರೊಂದಿಗಿರುವ ಆತನ ರಕ್ತಸಂಬಂಧವು ಬರಿಯ ಜೈವಿಕತೆಗೆ ಸೀಮಿತಗೊಳ್ಳದೆ ಪಾರಿವಾರಿಕ ಆಯಾಮವನ್ನು ಕಟ್ಟಿಕೊಟ್ಟಿದೆ. ಗುಣ-ಸ್ವಭಾವದ ನೆಲೆಯಲ್ಲಿ ಆತನದೊಂದು ಸಾಂಸ್ಕೃತಿಕ ಸಮುದಾಯವಿದೆ, ಮಾಡುವ ಕೆಲಸ-ಕಾರ್ಯಗಳಿಂದಾಗಿ ಆತನದೊಂದು ಸಾಂಸ್ಕೃತಿಕ ಸಮುದಾಯವಿದೆ, ತೊಡಗಿದ ಕಲೆ-ಸಾಹಿತ್ಯಾದಿ ಚಟುವಟಿಕೆಗಳಿಂದಾಗಿ ಆತನದೊಂದು ಸಾಂಸ್ಕೃತಿಕ ಸಮುದಾಯವಿದೆ, ಗೈವ ತಾತ್ತ್ವಿಕ-ದಾರ್ಶನಿಕ ಚಿಂತನೆಯ ಆಧಾರದಲ್ಲಿ ಆತನದೊಂದು ಸಾಂಸ್ಕೃತಿಕ ಸಮುದಾಯವಿದೆ...
ಆತ್ಮರೂಪೀ ಸಮಾಜ
ಮನುಷ್ಯರ ಗುಂಪೊಂದು ರಕ್ಷಣೆಯ ಅನಿವಾರ್ಯತೆಯಲ್ಲೋ ವ್ಯಾವಹಾರಿಕ ಅನಿವಾರ್ಯತೆಯಲ್ಲೋ ರಚಿತವಾದ ಒಂದು ಸಮೂಹವಲ್ಲ, ಅದೊಂದು ನಿರ್ದಿಷ್ಟ ಪರಂಪರೆ, ಸಂಸ್ಕೃತಿ ಇತ್ಯಾದಿಗಳ ಆಧಾರದಲ್ಲಿ ರೂಪುಗೊಂಡ ಸಮಾಜ. ಸಾಂಸ್ಕೃತಿಕವಾಗಿ ಹೀಗೆ ಬಹು ಆಯಾಮಗಳಿಂದ ರೂಪುಗೊಂಡ ಸಮಾಜವಾಗಿ ಆತನೊಂದು ನಿರ್ದಿಷ್ಟ ರಾಷ್ಟ್ರವಾಗಿಯೂ ರೂಪುಗೊಂಡಿದ್ದಾನೆ. ಸಮಾಜಕ್ಕೆ ಒಂದು ಸಾಮುದಾಯಿಕವಾದ ಹೊರ ಆಕೃತಿ ಇದ್ದರೆ, ರಾಷ್ಟ್ರಕ್ಕೆ ಭೌಗೋಳಿಕವಾದ ಒಂದು ಹೊರ ಆಕೃತಿ ಇರುತ್ತದೆ. ಈ ಆಕೃತಿಯನ್ನೇ ಸರ್ವಸ್ವವೆಂದುಕೊಂಡಾಗ ಅದರ ಅಂತಃಸತ್ತ್ವವು ಮರೆತು ವಿಕೃತಿ ತಲೆದೋರುವ ಸಾಧ್ಯತೆ ಇರುತ್ತದೆ. ರಾಷ್ಟ್ರದ ಹೊರ ಆಕೃತಿಯನ್ನು ಜೀವಂತ ದೇಹವೆಂದುಕೊಂಡರೆ ಅದು ಆತ್ಮವಸ್ತುವಿರುವಲ್ಲಿಯ ತನಕವಷ್ಟೆ ಜೀವಂತ ದೇಹವೆನಿಸಿಕೊಳ್ಳುತ್ತದೆ. ಮತ್ತು ಒಂದು ರಾಷ್ಟ್ರದ ಆತ್ಮವೆಂದರೆ ಸಾಂಸ್ಕೃತಿಕ ಹಿನ್ನೆಲೆಯನ್ನುಳ್ಳ ಸಮಾಜವೇ. ಹೀಗೆ; ರಾಷ್ಟ್ರ, ಸಮಾಜ, ಸಂಸ್ಕೃತಿ, ಪರಂಪರೆ ಇತ್ಯಾದಿಗಳು ಒಂದಕ್ಕೊಂದು ಬೆಸೆದುಕೊಂಡಿರುವ, ಯಾವುದೇ ರೀತಿಯಲ್ಲಿ ಪ್ರತ್ಯೇಕಿಸಲಾಗದ ಪಾರಸ್ಪರಿಕ ಅಸ್ತಿತ್ವಗಳು. ಪ್ರಸ್ತುತ ನಾವೊಂದು ಸಮಾಜವಾಗಿ; ಪಶ್ಚಿಮದ ಗುಲಾಮಗಿರಿಗೆ ತುತ್ತಾಗಿ, ಅಲ್ಲಿಯ ವಿಚಾರಭ್ರಮೆಯಿಂದ ಕೀಳರಿಮೆಗೀಡಾಗಿ, ರಿಲಿಜನ್ ಮತ್ತು ಆಧುನಿಕ ವಿಜ್ಞಾನ ಆಧಾರಿತ ಅಪಕಲ್ಪನೆಗಳ ರಾಷ್ಟ್ರ ಮತ್ತಿತರ ವಾದವೈಭವಕ್ಕೆ ಮತಿವಿಭ್ರಮಿತವಾಗಿ ನಮ್ಮೀ ಮೂಲಚಿಂತನೆಗಳಿಂದ ದೂರವಾಗಿದ್ದೇವಷ್ಟೆ. ಹಾಗಾಗಿ, ನಾವು ರಕ್ಷಣೆಯ ಕುರಿತು ಯೋಚಿಸುವಾಗ ಈಯೆಲ್ಲ ನೆಲೆಗಳಿಂದ ಯೋಚಿಸಬೇಕೆನಿಸುತ್ತದೆ.
ರಕ್ಷಣೆಯ ಸಮಗ್ರದೃಷ್ಟಿ
ಮನುಷ್ಯನ ಭೀತಿಗೆ ಜೈವಿಕ ಆಯಾಮ ಇದ್ದೇ ಇದೆ ಎನ್ನೋಣ. ಆತ ಆ ಆಯಾಮದಿಂದಷ್ಟೆ ಚಿಂತಿಸಿ ರಕ್ಷಣೆಗೆ ತೊಡಗಿದರೆ ಪ್ರಾಣಿಗಳಿಗಿಂತ ಖಂಡಿತಾ ಭಿನ್ನನಾಗಲಾರ. ಆತನ ವ್ಯಕ್ತಿತ್ವಕ್ಕೆ ಕುಟುಂಬದಿಂದ ತೊಡಗಿ ರಾಷ್ಟ್ರೀಯತೆಯವರೆಗೆ ಒಂದು ಸಮಷ್ಟಿ ಆಯಾಮವಿದೆ. ಇದಕ್ಕೆ ಎದುರಾಗಬಲ್ಲ ಸವಾಲುಗಳನ್ನು ನಿಷ್ಕ್ರೃಷ್ಟವಾಗಿ ಚಿಂತಿಸಿ ಸಮರ್ಥವಾಗಿ ನಿರ್ವಹಿಸಿದಾಗಷ್ಟೆ ಆತನ ಜೈವಿಕ ಅಸ್ತಿತ್ವಕ್ಕೊಂದು ಧನ್ಯತೆ. ಇಲ್ಲದಿರೆ; 'ಉತ್ತಮ ಗುಣಮಟ್ಟದ ಬದುಕ'ನ್ನು ಬದುಕುವ ಮನುಷ್ಯನೂ ಒಂದೇ, ಮಾಂಸ-ಸೊಪ್ಪುಗಳನ್ನು ತಿಂದು ಉಸಿರಾಡುವ ಪ್ರಾಣಿಯೂ ಒಂದೇ. ಈಗ ನಮ್ಮದೇ ನೆಲೆಯಲ್ಲಿ ನಿಂತು ನೋಡುವುದಾದರೆ; ಇಲ್ಲಿ ಲಾಗಾಯ್ತಿನಿಂದ ನಾವೊಂದು ಸಮಾಜವಾಗಿದ್ದೇವೆ. ಬಹುಶಃ ಸುದೀರ್ಘ ಕಾಲದ ಸಮಾಜ ಜೀವನದ ಕಾರಣದಿಂದಾಗಿ ಅದರಲ್ಲಿ ಒಂದಷ್ಟು ಜಾತೀಯತೆ - ಅಸ್ಪೃಶ್ಯತೆ ಇತ್ಯಾದಿ ಅನಿಷ್ಟ ಕೊಳೆ ಅಂಟಿಕೊಂಡಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೆಂದರೆ ಈ ಕೊಳೆಯಿಂದ ಮುಕ್ತರಾಗುವುದೆನ್ನುವುದೂ ಹೌದು.
ಅರ್ಥೈಸಿ ಉತ್ತರಿಸಬೇಕಾದ ಬಾಹ್ಯ ಸವಾಲು
ಪಶ್ಚಿಮದಿಂದ ಇಲ್ಲಿಗೆ, ಇಲ್ಲಿಗೆ ಸಲ್ಲದ ರೀತಿರಿವಾಜುಗಳ, ಇಲ್ಲಿಯ ಶ್ರದ್ಧೆಗೆ ಅವಿಧೇಯವಾಗಿ ಅಪಾಯಕಾರಿಯಾಗಿ ನಡಕೊಳ್ಳುವ ರಿಲಿಜನ್ನುಗಳು ಬಂದಿವೆ. ವಿಶ್ವದ ಯಾವುದೇ ಸಮುದಾಯವನ್ನು ತನ್ನಂತೆ ಮಾಡುವ ಸ್ವಭಾವವಿಕೃತಿಯುಳ್ಳ ಆ ರಿಲಿಜನ್ನುಗಳು ನಮ್ಮ ಸಮಾಜದ ಒಂದಷ್ಟು ಭಾಗವನ್ನು ಮತಾಂತರದ ಮೂಲಕವೋ ಭಯೋತ್ಪಾದನೆಯ ಮೂಲಕವೋ ಆಪೋಷಣ ತಗೊಂಡಿವೆ. ಇಂಥ ಬಾಹ್ಯ ಸವಾಲುಗಳನ್ನು ಕೂಡ ಯಾವುದೇ ವಿಚಾರವಿಕೃತಿ ಇಲ್ಲದೆ ಚಿಂತಿಸಿ, ಮಾಡಬೇಕಾದ ಸರಿಯಾದ ನಿಭಾವಣೆಯು ರಕ್ಷಣೆಯ ಪಟ್ಟಿಯಲ್ಲಿ ಆದ್ಯವಾಗಿಯೇ ಬರಬೇಕಾದುದು. ಈ ಬಗೆಯಲ್ಲಿ, ನಮ್ಮ ಸಮಷ್ಟಿವ್ಯಕ್ತಿತ್ವದ ರಕ್ಷಣೆಯನ್ನು ಅವಶ್ಯ ಮಾಡಬೇಕಾಗಿದೆ. ಮತ್ತು ದಿನೇದಿನೇ ನಮ್ಮೀ ವ್ಯಕ್ತಿತ್ವಕ್ಕೆ ಎದುರಾಗುವ ಸವಾಲುಗಳೂ ವಿಶಿಷ್ಟವೂ ವಿಪರೀತವೂ ಆಗಿ ವಕ್ಕರಿಸುತ್ತಿವೆ. ಅವುಗಳ ನೈಜ ಪರಿಚಯವನ್ನು ಮಾಡಿಕೊಳ್ಳುವಲ್ಲಿ ಪಶ್ಚಿಮದ ಭಿನ್ನ ಭಿನ್ನ ಬಗೆಯ ಪ್ರಭಾವಕ್ಕೊಳಗಾದ ನಮಗೆ ತುಸು ತ್ರಾಸೂ ಆಗುತ್ತಿದೆ. ಮುಖ್ಯವಾಗಿ, ಪಶ್ಚಿಮದ ತದ್ವಿರುದ್ಧವೆನಿಸಬಲ್ಲ ಎಲ್ಲ ಸಿದ್ಧಾಂತಗಳೂ ಮೂಲತಃ ವ್ಯಕ್ತಿವಾದವನ್ನು ಆತುಕೊಂಡವು. ನಮ್ಮೆಲ್ಲ ಚಿಂತನೆಗಳು ಸಮಷ್ಟಿಗತವಾಗಿ ತೊಡಗುವಂಥವು. ನಮ್ಮ ವ್ಯಕ್ತಿತ್ವವನ್ನೂ ಸಮಷ್ಟಿಗತವಾಗಿ ಉಳಿಸಿ ವಿಕಾಸಗೊಳಿಸಬೇಕಾದಂತಹದು.
ಪಾರಸ್ಪರಿಕ ರಕ್ಷಾತತ್ತ್ವ
ಪ್ರಾಣಿಗಳಿಂದ ಪ್ರಾರಂಭಿಸಿದೆವಲ್ಲ, ಅಲ್ಲಿಗೇ ತೆರಳಿ ಮುಗಿತಾಯಕ್ಕೆ ಬರುವುದಾದರೆ; ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವುದು ಪ್ರಾಣಿಪ್ರಪಂಚಕ್ಕೆ ಸಹಜ. ಧಾರ್ಮಿಕನೆನಿಸಬೇಕಾದ ಮನುಷ್ಯನದು ಭಿನ್ನ ದಾರಿ. ಆತ ತನ್ನ ರಕ್ಷಣೆಯನ್ನು ತಾನಲ್ಲ, ಇತರರ ರಕ್ಷಣೆಯನ್ನು ತಾನು ಮಾಡಬೇಕಾದವ. ಮಹಾಭಾರತದ ಶಾಂತಿಪರ್ವದಲ್ಲಿ ಬರುವ ಕೃತಯುಗದ ಕಲ್ಪನೆಯೂ ಇದನ್ನೇ ಧ್ವನಿಸುತ್ತದೆ. ಅದರ ಪ್ರಕಾರ; ಆ ಯುಗದಲ್ಲಿ ರಾಜರೂ ಇರಲಿಲ್ಲ, ರಾಜ್ಯಗಳೂ ಇರಲಿಲ್ಲ, ಅಪರಾಧಿಯೂ ಇರಲಿಲ್ಲ, ಶಿಕ್ಷಿಸುವವನೂ ಇರಲಿಲ್ಲ, ಪರಸ್ಪರ ರಕ್ಷಿಸಿಕೊಂಡು ಜನ ಧರ್ಮದಿಂದ ಬದುಕುತ್ತಿದ್ದರು. ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳಬೇಕಾದ ಸ್ಥಿತಿ ಅಧಾರ್ಮಿಕವಾದುದು. ಪರಸ್ಪರರ ರಕ್ಷಣೆಯನ್ನು ಮಾಡಿಕೊಳ್ಳುವ ಸ್ಥಿತಿ ಧಾರ್ಮಿಕವಾದುದು. ಪರಸ್ಪರರ ರಕ್ಷಣೆ ಮಾಡಿಕೊಳ್ಳುವುದು ಎಂದರೆ ಯಾರೂ ರಕ್ಷಣೆ ಮಾಡುವ ಕ್ರಿಯೆಯಿಂದ ಮುಕ್ತರಾಗದಿರುವುದೂ ಹೌದು, ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳದಿರುವುದೂ ಹೌದು. ಅದೇ ವೇಳೆ ಅದು ನಾನಾ ಮುಖಗಳಲ್ಲಿ ಸಾಗಬೇಕಾದುದು. ದೃಷ್ಟಾಂತಕ್ಕೆ; ಬೌದ್ಧಿಕ ಸಮರ್ಥರು ಇತರರ ರಕ್ಷಣೆಯನ್ನು ಬೌದ್ಧಿಕವಾಗಿ ಮಾಡಿದರೆ, ದೈಹಿಕ ಸಮರ್ಥರು ಅದನ್ನು ಶಾರೀರಿಕವಾಗಿ ಮಾಡಬಲ್ಲರು. ಸವಾಲುಗಳು ಹಲವು ಮುಖಗಳಲ್ಲಿರಲು ರಕ್ಷಣೆಯೂ ಬಹುಮುಖಗಳಲ್ಲಿ ಆಗಬೇಕಾದುದು ಅವಶ್ಯ. ನಮ್ಮ ಸಮಷ್ಟಿವ್ಯಕ್ತಿತ್ವದ ರಕ್ಷಣೆಗೆ ಇದಕ್ಕಿಂತ ಇನ್ನ್ಯಾವ ಸಮ್ಯಕ್ ದಾರಿ ಇದ್ದೀತು! ಮತ್ತು, ಶ್ರಾವಣ ಹುಣ್ಣಿಮೆಯಂದು ನಾವೆಲ್ಲ ಆಚರಿಸುವ ರಕ್ಷಾಬಂಧನಕ್ಕೆ ನಿರ್ದಿಷ್ಟವಾಗಿ ಒಂದಷ್ಟು ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆಗಳು ಇದ್ದೇ ಇವೆ. ಜತೆಗೆ, ಅದನ್ನು ಈ ನೆಲೆಯಲ್ಲಿಯೂ ಗ್ರಹಿಸಬಹುದೆಂಬುದು ಇಲ್ಲಿಯ ಭಿನ್ನಹ.
(ಇಂದು ರಕ್ಷಾಬಂಧನ. ತನ್ನಿಮಿತ್ತ ಕಳೆದ ವಾರದ ವಿಕ್ರಮದಲ್ಲಿ ಪ್ರಕಟಗೊಂಡ ಲೇಖನ.)