ಮಂಗಳೂರು: ಭಾರತದ ರಾಷ್ಟ್ರೀಯ ಭಾವದ ಪ್ರಕಟೀಕರಣ ರಾಮ ಮಂದಿರ. ಇದು ಕೇವಲ 500 ವರ್ಷಗಳ ಹೋರಾಟದ ಕತೆಯಲ್ಲ. ಇಡೀ ದೇಶದ, ಹಿಂದೂ ಸಮಾಜದ ಭಾವನೆಯ ಯಾತ್ರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ಡಾ. ವಾದಿರಾಜ್ ಹೇಳಿದರು.
ಮಂಗಳವಾರ ಕಾವೂರು ಸ್ವಸಹಾಯ ಸಂಘದಲ್ಲಿ ನಡೆದ ‘ಮಂಥನ’ ವೈಚಾರಿಕ ವೇದಿಕೆಯ ಕಾವೂರು ನಗರದ ಮೊದಲ ತಿಂಗಳ ಚೊಚ್ಚಲ ಕಾರ್ಯಕ್ರಮದಲ್ಲಿ ‘ರಾಮ ಮಂದಿರ – ರಾಷ್ಟ್ರ ಮಂದಿರ : ಪ್ರಾಚೀನ ಭಾರತದ ಆಧುನಿಕ ಸಂಕೇತ’ ಎಂಬ ವಿಷಯದ ಕುರಿತು ಮಾತನಾಡಿದರು.
ರಾಮಮಂದಿರ ಜನರ ಪುಣ್ಯಪ್ರಾಪ್ತಿಗೆ, ಭಕ್ತಿಭಾವಗಳ ಪ್ರಕಟೀಕರಣಕ್ಕಾಗಿ ಇರುವ ಮಾತ್ರ ಇರುವ ಮಂದಿರವಲ್ಲ. ಅದು ಮುಂದಿನ ಪೀಳಿಗೆಯ ಭಾರತೀಯ ಯುವ ಜನತೆಗೆ ಒಂದು ದಿಕ್ಸೂಚಿ. ರಾಮನಿಗೆ 14 ವರ್ಷ ವನವಾಸವಾದರೆ ರಾಮ ಭಕ್ತರ 500 ವರ್ಷದ ಕಾಯುವಿಕೆಗೆ ಇಂದು ಮಂದಿರ ಭವ್ಯವಾಗಿ ಪ್ರತಿಷ್ಠಾಪನೆ ಆಗುವುದರ ಮೂಲಕ ಅಂತ್ಯಗೊಂಡಿದೆ. ಸಾಂವಿಧಾನಿಕ ವ್ಯವಸ್ಥೆಯಲ್ಲಿ ನಿರ್ಮಾಣಗೊಂಡ ರಾಮಮಂದಿರದ ಉದ್ಘಾಟನೆಯ ಈ ಶುಭ ಸಂದರ್ಭದಲ್ಲಿ ಭಾರತೀಯರಾದ ನಾವೆಲ್ಲ ‘ಸ್ವ’ತ್ವ ವನ್ನು ಜಾಗೃತಿಗೊಳಿಸಿಕೊಂಡು ರಾಮಮಂದಿರವನ್ನು ಉಳಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಸ್ ಹೆಗಡೆ ವೈದ್ಯಕೀಯ ಕಾಲೇಜಿನ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಸತೀಶ್ ರಾವ್ ಅವರು ವಹಿಸಿದ್ದರು.