ಇಂದು ಜಯಂತಿ

‘ಕನ್ನಡದ ವರಕವಿ’ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ದ.ರಾ ಬೇಂದ್ರೆ ಅವರು. ಕನ್ನಡದ ಖ್ಯಾತ ಬರಹಗಾರರಾಗಿ ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ದಿ ಹೊಂದಿದರು. ದ.ರಾ ಬೇಂದ್ರೆ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಇಂದು ಅವರ ಜಯಂತಿ.


ಪರಿಚಯ:
ದ.ರಾ ಬೇಂದ್ರ ಅವರು ಜನವರಿ 31, 1886 ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ತಂದೆ ರಾಮಚಂದ್ರ ಬೇಂದ್ರೆ, ತಾಯಿ ಅಂಬವ್ವ. ಧಾರವಾಡದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಬೇಂದ್ರೆಯವರು ಮಹಾರಾಷ್ಟ್ರದ ಪುಣೆಯಲ್ಲಿ ಪದವಿ ಪೂರೈಸಿದರು. ನಂತರ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಪಡೆದರು.


ವೃತ್ತಿ:
ದ.ರಾ ಬೇಂದ್ರೆ ಅವರು ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ನಂತರ 1944 ಸೋಲಾಪುರ ಡಿಎವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಆರಂಭಿಸಿದರು. ಬಳಿಕ ಅವರು 1956 ರಲ್ಲಿ ಧಾರವಾಡದಲ್ಲಿ ಆಕಾಶವಾಣಿಯ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ..


ದ.ರಾ ಬೇಂದ್ರೆ ಅವರು ಎಳವೆಯಲ್ಲೇ ಸಾಹಿತ್ಯದ ಬಗ್ಗೆ ಹೆಚ್ಚು ಒಲವು ಹೊಂದಿದ್ದರು. ಅವರು ಕಾಲೇಜಿನಲ್ಲಿದ್ದಾಗಲೇ ಸಾಕಷ್ಟು ಕವಿತೆಗಳನ್ನು ಬರೆಯುತ್ತಿದ್ದರು. 1918 ರಲ್ಲಿ ಪ್ರಭಾತ ಎಂಬ ಮೊದಲ ಕವನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. 1925 ರಲ್ಲಿ ಪ್ರಕಟವಾದ ಕೃಷ್ಣಕುಮಾರಿ ಅವರ ಮೊದಲ ಕವನಸಂಕಲನವಾಗಿತ್ತು. ನಂತರ ದ.ರಾ ಬೇಂದ್ರೆ ಅವರು ಮುಂಬೈಯಲ್ಲಿ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾದರು. 1930 ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೇಖಕಗೋಷ್ಠಿಯಲ್ಲಿ ಭಾಗವಹಿಸಿದ್ದರು. 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಹವರ್ತಿಯಾಗಿ ಸೇವೆ ಸಲ್ಲಿಸಿದರು. ಜಯಕರ್ನಾಟಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.


ಸಾಹಿತ್ಯ ಕ್ಷೇತ್ರದ ಕೊಡುಗೆ:

ದ.ರಾ ಬೇಂದ್ರೆ ಅವರು ಬರೆದಂತಹ ಕವನಗಳು ಇಂದಿಗೂ ಹೆಚ್ಚು ಪ್ರಚಲಿತದಲ್ಲಿವೆ. ಅಂಬಿಕಾತನಯದತ್ತ’ನಾಗಿ ಕನ್ನಡ ಕಾವ್ಯಕ್ಕೊಂದು ಹೊಸ ಶೋಭೆ ತಂದುಕೊಟ್ಟವರು. “ಗರಿ”, “ಕಾಮಕಸ್ತೂರಿ”, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ”, “ಸಖೀಗೀತ”, “ಅರಳು ಮರಳು” “ಮೇಘದೂತ”, “ಶ್ರಾವಣ ಬಂತು” ಒಲವೇ ನಮ್ಮ ಬದುಕು, ಬಾಲಬೋಧೆ ಪ್ರತಿಬಿಂಬಗಳು ಸೇರಿದಂತೆ ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು.
ಅಷ್ಟೇ ಅಲ್ಲದೆ ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳು ಹಾಡುಗಳಾಗಿಯೂ ಮೂಡಿಬಂದಿವೆ . ಇವರು ಬರೆದ ಇಳಿದು ಬಾ ತಾಯಿ ಹಾಗೂ ಹಿಂದ ನೋಡದ ಗೆಳತಿ ಕವನಗಳು ಇಂದಿಗೂ ಸಹ ಜನಪ್ರಿಯತೆಗೊಂಡಿವೆ.

ಪ್ರಶಸ್ತಿ:

1958 ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. 1965 ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ ಬಂದಿದೆ. 1968 ರಲ್ಲಿ ಪದ್ಮಶ್ರೀ ಪ್ರಶಸ್ತಿ, 1973 ರಲ್ಲಿ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ, ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಲಭಿಸಿವೆ.

ದ.ರಾ. ಬೇಂದ್ರೆಯವರು ಅಕ್ಟೋಬರ್ 26 , 1982 ರಲ್ಲಿ ಮುಂಬೈನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.