ಅಶ್ವತ್ಥನಾರಾಯಣ, ಮೈಸೂರು
ರಾಮನದೂತನು ಅಂಜನೆಪುತ್ರನು
ಶೂರಾಗ್ರಣಿಯಿವ ಹನುಮಂತ|
ನಾಮವ ಜಪಿಸಲು ತಾಮಸ ಕಳೆವನು
ಕರುಣಾಸಾಗರ ಧೀಮಂತ||
ಲಂಕಾ ದಹನವ ಮಾಡಿದ ಧೀರನು
ಪಾಪವಿನಾಶಕ ವಾಯುಸುತ|
ಶಂಕೆಯು ಇಲ್ಲದೆ ಭಕ್ತರ ಪೊರೆವನು
ಹನುಮನು ಶರಣರ ವರದಾತ||
ವಾನರ ಮುಖ್ಯನು ಕೇಸರಿ ಸುತನಿವ
ಲಂಕಿಣಿಭಂಜನ ಬಲಭೀಮ|
ಗಾನವ ಪಾಡುತ ರಾಮನ ಭಜಿಸುವ
ಸಿದ್ಧಿಯ ಸಾಧಕ ಜಿತಕಾಮ||
ಪಿಂಗಲ ನೇತ್ರನು ಭಕ್ತರ ವತ್ಸಲ
ಸಂಕಟಹರಣನು ಶಕ್ತಿಧರ|
ಮಂಗಳಮೂರ್ತಿಯು ಪಾವನನಾಗಿಹ
ಸಮೀರ ತನಯನು ಪಾಪಹರ||
ಖೇಚರನಾಗುತ ಸಾಗರ ದಾಟುವ
ರಾಮನ ಭಕ್ತನು ಕಪೀಶನು|
ಯಾಚನೆ ಮಾಡುತ ಭಕ್ತಿಯ ತೋರಲು
ಪ್ರೀತಿಯ ನೀಡುತ ಕಾಯುವನು||