ವಿಷ್ಣುವಿನ 7ನೇ ಅವತಾರ ಶ್ರೀರಾಮ. ತನ್ನ ವ್ಯಕ್ತಿತ್ವದ ಕಾರಣಕ್ಕಾಗಿ ಭಾರತೀಯ ಜೀವನ ಮೌಲ್ಯಗಳ ಪರಮೋಚ್ಚ ಆದರ್ಶ ಎಂದೆನಿಸಿಕೊಂಡವನು. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ರಾಮ ಜನಿಸಿದ ಕಾರಣ ಪ್ರತಿ ವರ್ಷ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮನವಮಿ ಆಚರಿಸಲಾಗುತ್ತದೆ.


ರಾಮನವಮಿ ಹಬ್ಬವು ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾದ ಭಗವಾನ್ ರಾಮನ ಅವತಾರವನ್ನೂ, ಆತನ ಅವತಾರ ಸಾರಿದ ಆದರ್ಶಗಳ ಮಹತ್ವವನ್ನೂ ತಿಳಿಸುತ್ತದೆ. ಧರ್ಮ, ಸನ್ನಡತೆ ಮತ್ತು ಸದ್ಗುಣಗಳಿಗಾಗಿ ಅವನನ್ನು ಪ್ರಶಂಸಿಸಲಾಗುತ್ತದೆ.  ರಾಮನು ಆಪ್ತರು, ಪ್ರಜೆಗಳು, ಸ್ನೇಹಿತರು ಹಾಗೂ ವಿರೋಧಿಗಳನ್ನೂ ಧರ್ಮದ ದೃಷ್ಟಿಯಿಂದ ನೋಡುತ್ತಿದ್ದ. ತತ್ವಪ್ರಧಾನವಾಗಿ ನೋಡುವ ದೃಷ್ಟಿಯ ನಿರ್ಲಿಪ್ತತೆ, ರಾಮನಲ್ಲಿ ಕಾಣಬಹುದು.  

ರಾಮನ ಆದರ್ಶಗಳು


ಯುವಕರಿಗೆ ಸ್ಫೂರ್ತಿ : ರಾಮನು ಬಾಲ್ಯದಿಂದಲೇ ಸವಾಲುಗಳನ್ನು ಎದುರಿಸಲು ಅಣಿಯಾದವನು. ತಾಟಕಿ-ಮಾರೀಚ-ಸುಬಾಹು ವಧೆ, ಚಿಕ್ಕಮ್ಮ ಕೈಕೇಯಿಯ ಕಾರಣದಿಂದಾಗಿ ದಶರಥನ‌ ಆಜ್ಞೆಯಂತೆ ಪಿತೃವಾಕ್ಯ ಪರಿಪಾಲನೆಗಾಗಿ 14 ವರ್ಷ ವನವಾಸ, ವನವಾಸದ ಅವಧಿಯಲ್ಲಿ ಅನೇಕ ರಕ್ಕಸರ ವಧೆ, ಲಂಕಾಧಿಪತಿ ರಾವಣನಿಂದ ಸೀತಾಪಹಾರ, ಮಡದಿಯನ್ನು ಹುಡುಕಿ ಸಾವಿರ ಸಾವಿರ ಮೈಲುಗಳ ತಿರುಗಾಟ, ಕಪಿಸೇನೆ ಕಟ್ಟುವ ಅನಿವಾರ್ಯತೆ, ಸಮುದ್ರ ದಾಟಬೇಕಾದ ಸವಾಲು, ಮಾಯಾವಿಗಳ ಜತೆ ಘನಘೋರ ಕದನ ಹೀಗೆ ಹಲವಾರು ಸವಾಲುಗಳಿಗೆ ರಾಮ ಕುಗ್ಗದೆ ಶಾಂತಚಿತ್ತನಾಗಿ ಸಮರ್ಥವಾಗಿ ಧೈರ್ಯದಿಂದ ಎದುರಿಸಿದವನು. ಹೀಗಾಗಿ ಯುವಪೀಳಿಗೆಗಳಿಗೆ ರಾಮ ಸದಾ ಸ್ಫೂರ್ತಿಯ ಸೆಲೆ.


ಧರ್ಮದ ಪ್ರತೀಕ : ಎಷ್ಟೇ ಸಂದಿಗ್ಧ ಪರಿಸ್ಥಿತಿ ಬಂದರೂ ಶ್ರೀರಾಮನು ಧರ್ಮವನ್ನು ಅನುಸರಿಸುತ್ತಿದ್ದನು. ಹಾಗಾಗಿಯೇ ರಾಮೋ ವಿಗ್ರಹವಾನ್ ಧರ್ಮಃ ಎಂದರೆ ಧರ್ಮ ಎಂದೆನಿಸಿದ ಎಲ್ಲಾ ಸದಾಚಾರಗಳ ಮೂರ್ತರೂಪ ಶ್ರೀರಾಮ ಎಂದು ಗುರುತಿಸಲಾಗಿದೆ.

ಸ್ನೇಹಕ್ಕೆ ಮಾದರಿ: ರಾಮನ ಪರಮ ಭಂಟ ಹನುಮಂತ. ಶ್ರೀರಾಮನ ಸೇವೆಗಾಗಿ ಹನುಮಂತನು ಮಾಡಿದ ಲೀಲೆಯನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಇಂದಿಗೂ ಸಹ ಶ್ರೀರಾಮ ಎಂದು ತಕ್ಷಣವೇ ಹನುಮಂತ ನೆನಪಿಗೆ ಬರುತ್ತಾರೆ. ಅದಕ್ಕೆ ಕಾರಣ ಅವರಿಬ್ಬರ ನಡುವಿನ ಸ್ನೇಹ. ಹಾಗೆಯೇ ಶ್ರೀರಾಮ ಮುಕ್ತ ಮನಸ್ಸಿನಿಂದ ಸ್ನೇಹವನ್ನು ಬಿಗಿದಪ್ಪುವ ವ್ಯಕ್ತಿತ್ವ. ನಿಷಾಧ ರಾಜ ಗುಹಾ, ಸುಗ್ರೀವ, ವಿಭೀಷಣ, ಜಟಾಯು ಹೀಗೇ ರಾಮಾಯಣದಲ್ಲಿ ಬರುವ ಅನೇಕ ಪಾತ್ರಗಳು ಮತ್ತು ಅವರೊಡನೆ ರಾಮನ ಸ್ನೇಹ ಸಾರ್ವಕಾಲಿಕವಾಗಿ ಸ್ನೇಹಕ್ಕೆ ನಿದರ್ಶನವಾಗುವಂತದ್ದು.

ಅಖಂಡತೆಯ ಸಂಕೇತ: ಶ್ರೀರಾಮ ರಾಷ್ಟ್ರದ ಅಖಂಡತೆಯ ಸಂಕೇತವೂ ಹೌದು. ಭಾರತವನ್ನು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೂ ಭೌಗೋಳಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಬೆಸೆದ ಶಕ್ತಿ ಶ್ರೀರಾಮ. ಆತ ನಡೆದ ಹಾದಿಯೇ ರಾಮಾಯಣ. ಹಾಗಾಗಿ ರಾಮಾಯಣ ಭಾರತದ ಅಖಂಡತೆಯ ಪ್ರತೀಕವೂ ಹೌದು.

ಮೇಲ್ಪಂಕ್ತಿ: ರಾಮನು ಮಗನಾಗಿ, ಪತಿಯಾಗಿ, ಸಹೋದರನಾಗಿ, ರಾಜನಾಗಿ, ಸ್ನೇಹಿತನಾಗಿ ಉದಾತ್ತ ಆದರ್ಶಗಳ ಮೇಲ್ಪಂಕ್ತಿ. ತನ್ನ ಚಾರಿತ್ರ್ಯದ ಮೂಲಕವೇ ಚರಿತ್ರೆಯಲ್ಲಿ ಜೀವನ ಮೌಲ್ಯಗಳ ಆದರ್ಶವಾಗಿ ನಿಂತ ಮಹಾನ್ ಪುರುಷ.

ರಾಮಮಂದಿರ: ಈ ಮೇಲಿನ ಎಲ್ಲಾ ಕಾರಣಗಳಿಂದಾಗಿ ಈ ನಾಡಿನ ಅಸ್ಮಿತೆಯೇ ಆದ ಶ್ರೀರಾಮನ ಜನ್ಮಸ್ಥಳದಲ್ಲಿ ಆತನ ಮಂದಿರಕ್ಕಾಗಿ ಶತಮಾನಗಳ ಕಾಲ ಹೋರಾಟಗಳು ನಡೆದಿವೆ. ಐತಿಹಾಸಿಕ ಯುದ್ಧಗಳು, ಆಂದೋಲನಗಳು ಮತ್ತು ಸಾಂವಿಧಾನಾತ್ಮಕ ಹೋರಾಟಗಳೆಲ್ಲದರ ಫಲವಾಗಿ ಇಂದು ಭವ್ಯ ರಾಮಮಂದಿರದಲ್ಲಿ ರಾಮಲಲಾ (ಬಾಲರಾಮ) ವಿರಾಜಮಾನನಾಗಿದ್ದಾನೆ‌.

Leave a Reply

Your email address will not be published.

This site uses Akismet to reduce spam. Learn how your comment data is processed.