ಬೆಂಗಳೂರು: ರಾಷ್ಟ್ರ ಸೇವಿಕಾ ಸಮಿತಿ, ಹೊಯ್ಸಳ ಪ್ರಾಂತ ಮತ್ತು ಸುಕೃಪಾ ಟ್ರಸ್ಟ್ (ರಿ), ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಹೆಣ್ಣು ಮಕ್ಕಳಿಗಾಗಿ ಹದಿನೈದು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರ – ಹೊಯ್ಸಳ ಪ್ರಾಂತ ಪ್ರವೇಶ ಮತ್ತು ಪ್ರಬೋಧ ಶಿಕ್ಷಾವರ್ಗದ ಸಮಾರೋಪ ಸಮಾರಂಭ ಬೆಂಗಳೂರಿನ ಸರ್ಜಾಪುರದ ಬಿಕ್ಕನಹಳ್ಳಿಯಲ್ಲಿರುವ ಮಹಾಯೋಗಿ ವೇಮನ ಆಶ್ರಮದಲ್ಲಿ ಭಾನುವಾರ ನಡೆಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ವರ್ಗದಲ್ಲಿ ಕಲಿತ ಘೋಷ್ ವಾದನ, ಸೂರ್ಯ ನಮಸ್ಕಾರ, ಯೋಗಾಸನ , ಆತ್ಮ ರಕ್ಷಣೆಗೆ ದಂಡ, ಯಷ್ಠಿ , ನಿಯುದ್ಧ, ಶಾರೀರಿಕ ಚಟುವಟಿಕೆಗಳಾದ ಯೋಗಛಾಪ್, ಗೋಪುರಗಳ ರಚನೆ ಹಾಗೂ ವ್ಯಾಯಾಮಗಳ ಪ್ರಾತ್ಯಕ್ಷಿಕೆ ನಡೆಯಿತು.
ಮುಖ್ಯ ಅತಿಥಿ ರೇಷ್ಮೆ ಕೃಷಿಕರಾದ ಶ್ರೀಮತಿ ಚಂದ್ರಕಲಾ ಅವರು ಶಿಕ್ಷಾ ವರ್ಗ ಅತ್ಯಂತ ಸ್ಫೂರ್ತಿದಾಯಕವಾಗಿದ್ಹು ಇಲ್ಲಿನ ಶಿಕ್ಷಣದಿಂದ ಇನ್ನಷ್ಟು ಪ್ರೇರಣೆ ಪಡೆದು ಮಾತೆಯರು ಹಾಗೂ ತರುಣಿಯರು ಸಮಾಜ ಹಾಗೂ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ತಿಳಿಸಿದರು.
ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ಶಾಂತಕ್ಕ ಅವರು ಬೌದ್ದಿಕ್ ನಡೆಸಿಕೊಟ್ಟರು. ಅವರು ಮಾತನಾಡುತ್ತಾ ಮಹಾಯೋಗಿ ವೇಮನರು ಯಾವುದೇ ಜಾತಿಭೇದವಿಲ್ಲದೆ ಸಮಾಜದಲ್ಲಿ ಎಲ್ಲರಿಗೂ ನೆರವಾಗಿ ತಮ್ಮ ಸೇವೆ ಸಲ್ಲಿಸಿದರು. ಇಂತಹ ಪುಣ್ಯ ಸ್ಥಳದಲ್ಲಿ ಹದಿನೈದು ದಿನಗಳು ವರ್ಗಗಳು ನಡೆದಿದ್ದು ನಮ್ಮ ಪುಣ್ಯವೇ ಸರಿ ಎಂದು ನುಡಿದರು.
ಸ್ತ್ರೀ ಎಂದರೆ ಕುಟುಂಬದ ಕೇಂದ್ರ ಬಿಂದು. ತನ್ನ ಸಹಜ ಮಾತೃತ್ವ ನೇತೃತ್ವ ಗುಣಗಳಿಂದ ರಾಷ್ಟ್ರ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವಳು. ನಾವು ಮಾತೃತ್ವದಿಂದ ಎಲ್ಲರನ್ನೂ ಕಾಣಬೇಕು ಇದರ ಪ್ರಚಾರ ಹಾಗೂ ಪ್ರಸಾರ ನಿರಂತರವಾಗಲು ವರ್ಗಗಳಲ್ಲಿ ಪಡೆಯುವ ಶಿಕ್ಷಣ ಪೂರಕ. ಜಾಗೃತ ದೇಶಭಕ್ತ ನಾಗರಿಕರಾಗಲು ಇಲ್ಲಿ ಪಡೆಯುವ ಪ್ರಶಿಕ್ಷಣ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವುದು ಎಂದು ಅಭಿಪ್ರಾಯಪಟ್ಟರು.
ಬಹು ಮುಖ್ಯವಾಗಿ ಸ್ವಧರ್ಮ ಅಂದರೆ ನಮ್ಮ ವ್ಯಕ್ತಿಗತ ಕರ್ತವ್ಯ ಮರೆಯಬಾರದು. ರಾಷ್ಟ್ರ ಧರ್ಮವಾದ ಹಿಂದೂ ಧರ್ಮದ ರಕ್ಷಣೆಗೆ ನಾವು ಸನ್ನದ್ಧರಾಗಬೇಕು. ಸ್ವಾಮಿ ವಿವೇಕಾನಂದರು ನುಡಿದಂತೆ ಕಣವೊಂದು ಚಲಿಸಿದರೆ ತನ್ನೊಡನೆ ಎಲ್ಲವನ್ನೂ ಚಲಿಸುವಂತೆ ಮಾಡುವ ಏಕಾತ್ಮ ಭಾವನೆಯಿದ್ದಲ್ಲಿ ಪ್ರಪಂಚವೇ ನಮ್ಮ ಕುಟುಂಬ ಎನ್ನುವ ಶ್ರೇಷ್ಠ ಭಾವ ನಮ್ಮದಾಗುತ್ತದೆ ಎಂದರು.
ಸ್ವದೇಶಿ ಚಿಂತನೆ ಅಂದರೆ ಸ್ವದೇಶಿ ವಸ್ತುಗಳ ಬಳಕೆ ಹಾಗೂ ಅತಿಥಿ ಸತ್ಕಾರದಂತಹ ಮೂಲ ಚಿಂತನೆ ಸದಾ ನಾವು ಪಾಲಿಸಬೇಕು. ನಮ್ಮ ರಾಷ್ಟ್ರದ ಸಂಸ್ಕೃತಿ ಸಂರಕ್ಷಣೆ ಎಲ್ಲಾ ನಾಗರಿಕರ ಕರ್ತವ್ಯ ಎಂದು ನುಡಿದರು.
ಸಮಾಜವೇ ಒಂದು ಶ್ರೇಷ್ಠ ಸಂಪತ್ತು. ಇದರೊಂದಿಗೆ ನಮ್ಮ ಭೂಮಿ, ಜಲ, ಪರಿಸರ ರಕ್ಷಣೆಗೆ ನಾಗರೀಕರು ಕರ್ತವ್ಯ ಪರರಾಗಬೇಕು. ನಮ್ಮ ಶಾಖೆಗಳಲ್ಲಿ ಸಿಗುವ ಸರ್ವತೋಮುಖ ಶಿಕ್ಷಣದಿಂದ ಇದು ಸಾಧ್ಯ. ಭಾರತವನ್ನು ಭ್ರಷ್ಟಾಚಾರ ರಹಿತ ಮಾಡಲು ಪ್ರಾಮಾಣಿಕ ಪ್ರಯತ್ನದೊಂದಿಗೆ ಸಚ್ಚಾರಿತ್ರದ ನಿರ್ಮಾಣವಾಗಬೇಕು. ಬಹು ಮುಖ್ಯವಾಗಿ ಇಂದಿನ ತರುಣಿಯರು ಈ ವರ್ಗಗಳಿಂದ ಪ್ರೇರಣೆ ಪಡೆದು ನಮ್ಮ ಮೂಲ ಧ್ಯೇಯವಾದ ತೇಜಸ್ವೀ ರಾಷ್ಟ್ರದ ಪುನರ್ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹಿಕಾ ಸಾವಿತ್ರಿ ಸೋಮಯಾಜಿ, ಪ್ರಾಂತ ಕಾರ್ಯವಾಹಿಕಾ ಹಾಗೂ ಪ್ರಬೋಧ್ ವರ್ಗಾಧಿಕಾರಿ ವಸಂತಾ ಸ್ವಾಮಿ ಪ್ರಬೋಧ್ ವರ್ಗ ಹಾಗೂ ಪ್ರವೇಶ್ ವರ್ಗಾಧಿಕಾರಿ ಬೆಂಗಳೂರು ವಿಭಾಗದ ಕಾರ್ಯವಾಹಿಕಾ ಜಯಾ ಭಟ್ ಪ್ರವೇಶ್ ವರ್ಗದ ವರದಿ ನೀಡಿದರು.
ಪ್ರಾಂತ ಬೌದ್ಧಿಕ್ ಪ್ರಮುಖ್ ಅನಸೂಯ, ಪ್ರಾಂತ ಶಾರೀರಿಕ್ ಪ್ರಮುಖ್ ಶಿಲ್ಪಾ, ಪ್ರಾಂತ ಪ್ರಚಾರ್ ಪ್ರಮುಖ್ ಮಯೂರಲಕ್ಷ್ಮಿ , ಪ್ರಾಂತ ತರುಣಿ ಪ್ರಮುಖ್ ಸುಮಂಗಲಾ ಬಾಪಟ್ ಉಪಸ್ಥಿತರಿದ್ದರು.