
೨೬ ಜನವರಿ ೨೦೧೯: ತ್ಯಾಗ ಮತ್ತು ಸೇವೆಯ ಮೂಲಕ ದೇಶ ಕಟ್ಟುವ ಕೆಲಸದಲ್ಲಿ ಮಹಿಳೆಯರು ಕೈ ಜೋಡಿಸಬೇಕು ಹಾಗೂ ನಮ್ಮ ದೇಶದ ಅಸ್ಮಿತಿಯನ್ನು, ಸಂಸ್ಕೃತಿಯನ್ನು ಅರಿತುಕೊಳ್ಳಬೇಕು ಎಂದು ರಾಷ್ಟ್ರಸೇವಿಕಾ ಸಮಿತಿಯ ಬೆಂಗಳೂರು ವಿಭಾಗದ ಸಂಪರ್ಕ ಪ್ರಮುಖರಾದ ಶ್ರೀಮತಿ ಪರಿಮಳಾ ಮೂರ್ತಿ ಕರೆ ನೀಡಿದರು. ಸುಳ್ಯ ತಾಲೂಕಿನಲ್ಲಿ ಗಣರಾಜ್ಯೋತ್ಸವದ ದಿನದಂದು ನಡೆದ ಆಕರ್ಷಕ ಪಥಸಂಚಲನದ ನಂತರದ ಬೌದ್ಧಿಕ್ ನಲ್ಲಿ ಅವರು ಮಾತನಾಡುತ್ತಿದ್ದರು.
ಆಧ್ಯಾತ್ಮವೇ ನಮ್ಮ ಆತ್ಮ, ಆಧ್ಯಾತ್ಮವಿಲ್ಲದಿದ್ದರೆ ಆತ್ಮವಿಲ್ಲದ ದೇಹದಂತೆ ಎಂದು ಹೇಳಿದ ಅವರು ನಮ್ಮ ಗುರುಕುಲ ವ್ಯವಸ್ಥೆ, ಸ್ವಾಭಿಮಾನ, ಅಸ್ಮಿತೆಯನ್ನು ನಾಶಪಡಿಸಿ ವಿದೇಶಿ ಶಿಕ್ಷಣವನ್ನು ಜಾರಿಗೆ ತರುವ ಮೂಲಕ ನಮ್ಮನ್ನು ದಾಸ್ಯಕ್ಕೊಳಪಡಿಸಿದರು. ಸ್ವಾತಂತ್ರ್ಯಾನಂತರ ನಮ್ಮ ಮಹಿಳೆಯರು ದಾಸ್ಯದ ಸಂಸ್ಕೃತಿಗೆ ಒಳಗಾಗದೆ ಸ್ವಾಭಿಮಾನದಿಂದ ಬದುಕುವಂತೆ ಮಾಡಲು ರಾಷ್ಟ್ರಸೇವಿಕಾ ಸಮಿತಿಯನ್ನು ಸ್ಥಾಪಿಸಲಾಯಿತು. ಇದೀಗ ಶಾಖೆಗಳ ಮೂಲಕ ಮಹಿಳೆಯರು ಸಬಲರಾಗುತ್ತಿದ್ದಾರೆ ಎಂದು ಅವರು ಹೇಳಿದರು.
ರಾಷ್ಟ್ರ ಸೇವಿಕಾ ಸಮಿತಿಯ ೬೫೦ಕ್ಕೂ ಹೆಚ್ಚು ಸೇವಿಕೆಯರು ಪೂರ್ಣಗಣವೇಶದಲ್ಲಿ ಸಂಚಲನದಲ್ಲಿ ಭಾಗವಹಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ವಹಿಸಿದ್ದರು. ಸಮಿತಿಯ ಶಕುಂತಳಾ, ಶ್ರೀದೇವಿ ಭಟ್ ಉಪಸ್ಥಿತರಿದ್ದರು.
ಸುದ್ದಿ ಕೃಪೆ: ಹೊಸ ದಿಗಂತ ಪತ್ರಿಕೆ
ಚಿತ್ರ ಕೃಪೆ : ಶಿವಕೃಷ್ಣ + ಅಂತರ್ಜಾಲ