ಜೈಪುರ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ರಾಜಸ್ಥಾನದ ಜೈಪುರದಲ್ಲಿ ನಡೆದ ಮೂರನೆಯ ರಾಷ್ಟ್ರೀಯ ಸೇವಾ ಸಂಗಮ 2023ರಲ್ಲಿ ಭಾಗವಹಿಸಿ ಮಾತನಾಡಿದರು.
ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಸಂಘದ ಸ್ವಯಂಸೇವಕರು ಸೇವಾ ಕಾರ್ಯದಲ್ಲಿ ಎಂದಿಗೂ ಮುಂದಿದ್ದಾರೆ. ಸಮಾಜಕ್ಕೆ ಅಗತ್ಯ ಬಿದ್ದಾಗಲೆಲ್ಲ ತಮ್ಮ ಶಕ್ತಿ ಬುದ್ಧಿಯಾನುಸಾರ ಸೇವೆ ಸಲ್ಲಿಸುತ್ತಿದ್ದಾರೆ. ಡಾಕ್ಟರ್ಜೀಯವರ ಜನ್ಮಶತಾಬ್ದಿಯಲ್ಲಿ ಇದಕ್ಕೊಂದು ರೂಪ ಕೊಡುವ ನಿಟ್ಟಿನಲ್ಲಿ ಸೇವಾ ವಿಭಾಗವೂ ಔಪಚಾರಿಕವಾಗಿ ಆರಂಭವಾಯಿತು. ನಮ್ಮ ದೇಶದಲ್ಲಿ ಸೇವೆ ಎನ್ನುವುದು ಅನೇಕ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಸೇವೆ ಸ್ಪರ್ಧೆಯಲ್ಲ. ಸೇವೆ ಮನುಷ್ಯನ ಸ್ವಾಭಾವಿಕ ಅಭಿವ್ಯಕ್ತಿ. ಸಂವೇದನೆ ಎಲ್ಲರಿಗೂ ಇದೆ, ಪ್ರಾಣಿಗಳೂ ಇದಕ್ಕೆ ಹೊರತಲ್ಲ. ಆದರೆ ಆ ಕುರಿತು ಮನುಷ್ಯ ಕೆಲಸ ಮಾಡುತ್ತಾನೆ. ಅದಕ್ಕೆ ಕರುಣೆ ಎನ್ನುತ್ತಾರೆ. ಕರುಣೆಯನ್ನೂ ಜಾಗತೀಕರಣಗೊಳಿಸುವ ಅಗತ್ಯವಿದೆ” ಎಂದರು.
ಮುಂದುವರೆದು, “ಸತ್ಯ ಎಂದರೆ ನಾವೆಲ್ಲರೂ ಒಂದೇ ತತ್ತ್ವದಿಂದ ಆದವರು ಎಂಬ ಪ್ರಜ್ಞೆ. ನಾವು ಇನ್ನೊಬ್ಬರು ನೋವಲ್ಲಿರುವಾಗ ಹೇಗೆ ಸಂತೋಷವಾಗಿರಲು ಸಾಧ್ಯ? ಸೇವೆ ಎನ್ನುವುದು ಸತ್ಯದ ಪ್ರತ್ಯಕ್ಷ ಅನುಭೂತಿ. ಇದೇ ಭಾವದಿಂದ ಸೇವೆ ನಡೆಯಬೇಕು. ಇದೇ ಸಮರಸತೆ. ಆಗ ಮಾತ್ರ ಸಮಾಜ ಎದ್ದು ನಿಲ್ಲಲು ಸಾಧ್ಯ. ನಾವೆಲ್ಲರೂ ಹಾಗೆ ಒಟ್ಟಿಗೆ ನಿಲ್ಲಬೇಕು. ಆದರೆ ಪರಿಸ್ಥಿತಿ ಹಾಗಿಲ್ಲ. ಅದನ್ನು ಸರಿ ಮಾಡಿ ಸಂವೇದನೆಯಿಂದ ನಡೆದುಕೊಳ್ಳುವುದು ಸಮಾಜದ ಕರ್ತವ್ಯ. ಹೇಗೆ ಕಾಲಿಗೆ ಮುಳ್ಳು ಚುಚ್ಚಿದರೆ ಇಡೀ ಶರೀರದ ಧ್ಯಾನ ಅತ್ತ ಕಡೆಯೇ ಹೋಗುವುದೋ ಹಾಗೆ ಸಮಾಜದ ಒಂದು ಅಂಗಕ್ಕೆ ನೋವಾದರೆ ಇಡೀ ಸಮಾಜ ಅತ್ತ ಗಮನ ಹರಿಸಬೇಕಿದೆ. ಹೀಗಾದಾಗ ಮಾತ್ರವೇ ಸಮಾಜ ಸಮರ್ಥವಾಗಲು ಸಾಧ್ಯ. ಸಮಾಜದಲ್ಲಿ ಯಾರನ್ನೂ ದುರ್ಬಲ, ಅಶಕ್ತನನ್ನಾಗಿ ಇರಲು ನಾವು ಅವಕಾಶ ಮಾಡಿಕೊಡಬಾರದು” ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಾತ್ರದ ಬಗ್ಗೆಯೂ ಮಾತನಾಡಿದ ಅವರು “ನಾವು ಸಾಮರಸ್ಯಕ್ಕೆ ಪ್ರಯತ್ನ ಆರಂಭಿಸಿದ್ದೇವೆ. ಇಂದಲ್ಲ ನಾಳೆ ಯಶಸ್ವಿಯಾಗುತ್ತೇವೆ. ಸೇವೆ ಮಾಡುತ್ತಾ ಇದನ್ನು ನಾವು ಸಾಧಿಸಬೇಕಿದೆ. ಸೇವೆಯಿಂದ ನಾವು ನಮ್ಮ ಅಹಂಕಾರವನ್ನು ಕಳೆದುಕೊಳ್ಳಲು ಸಾಧ್ಯ. ಸೇವೆಯಿಂದ ಸಂಕಲ್ಪ ಗಟ್ಟಿಯಾಗುತ್ತದೆ. ನಮ್ಮ ಸಮಾಜ ಇಂತಹ ಸ್ಥಿತಿಯಲ್ಲಿದೆ ಎಂಬುದು ನಮಗೆ ಶೋಭೆ ನೀಡುವ ವಿಚಾರವೇನಲ್ಲ. ಎಲ್ಲರನ್ನೂ ಸೇವೆಯ ಮೂಲಕ ಸಶಕ್ತರನ್ನಾಗಿಸಬೇಕಿದೆ. ನಮಗೆ ಸಮಾಜದಿಂದ ಸಿಕ್ಕಿರುವುದನ್ನು ಸಮಾಜಕ್ಕೆ ನೀಡಬೇಕಿದೆ” ಎಂದರು.
ಸೇವಾ ಸಂಗಮದ ಆಶಯವನ್ನು ವ್ಯಕ್ತಪಡಿಸಿದ ಅವರು “ನಮ್ಮ ಸಮಾಜದಲ್ಲಿ ಸಂವೇದನೆಯೂ ಕರುಣೆಯೂ ಒಟ್ಟೊಟ್ಟಿಗೆ ಒಡಮೂಡುತ್ತಿದೆ. ಈ ರೀತಿಯ ಸೇವಾ ಸಂಗಮವು ನಮ್ಮ ಕಾರ್ಯದ ದೃಷ್ಟಿಯನ್ನು ವಿಸ್ತಾರ ಮಾಡುವ ಸಾಧನವಾಗಲಿ. ನಾವು ತಲುಪದ ಹೊಸ ಆಯಾಮಗಳು ನಮ್ಮೆದುರು ಬರಲಿ. ನಮ್ಮ ಸಮಾಜದಲ್ಲಿ ಅಲೆಮಾರಿಗಳ ರೂಪದಲ್ಲಿ ಇನ್ನೂ ಅನೇಕ ಸಮುದಾಯಗಳಿವೆ. ಇಂದು ಅವರಿಗೆ ಸೇವೆಯ ಅಗತ್ಯವಿದೆ. ಸೇವೆಯ ವ್ಯಾಪ್ತಿ ದೊಡ್ಡದಾಗಲಿ, ಇನ್ನೂ ಅನೇಕ ಕೆಲಸಗಳು ಸೇವೆಯಿಂದಲೇ ನಡೆಯಬೇಕಿದೆ. ಇಡಿಯ ವಿಶ್ವವನ್ನು ಒಂದು ಕುಟುಂಬವೆನ್ನುವ ಭಾರತ ದೇಶವನ್ನು ಕಟ್ಟುವ ಸಮಾಜ, ಸರ್ವಾಂಗ ಸುಂದರ ಸಮಾಜ, ಸರ್ವ ಸಂಪನ್ನ ಸಮಾಜ ಮೇಲೇಳಲಿ. ಅದು ಸ್ವತಃ ತನ್ನ ಸವಾಲುಗಳನ್ನು ಎದುರಿಸಿ ಸಂಪೂರ್ಣ ವಿಶ್ವಕ್ಕೆ ಜ್ಞಾನ, ಭಕ್ತಿ, ಕರ್ಮದ ಉದಾಹರಣೆಯಾಗಿ ನಿಲ್ಲಲಿ” ಎಂದರು.
ಸೇವಾ ಸಂಗಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ, ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾದ ಭೈಯ್ಯಾಜಿ ಜೋಷಿ, ಸಹಸರಕಾರ್ಯವಾಹ ಶ್ರೀ ಮುಕುಂದ, ವಿಶ್ವಗುರು ಮಹಾಮಂಡಲೇಶ್ವರ್ ಪರಮಹಂಸ ಸ್ವಾಮಿ ಮಹೇಶ್ವರಾನಂದ ಮಹಾರಾಜರು, ವಿಶ್ವ ಜಾಗೃತಿ ಮಿಷನ್ನ ಸಂಸ್ಥಾಪಕ ಆಚಾರ್ಯ ಸುಧಾಂಶು ಮಹಾರಾಜರೂ ಸೇರಿದಂತೆ ಪ್ರಮುಖ ಸಂತರು ಮತ್ತು ಸೇವಾಕಾರ್ಯನಿರತರು ಉಪಸ್ಥಿತರಿದ್ದರು.