“ಸ್ವಾಸ್ತ್ಯವೆಂದರೆ ಕೇವಲ ಅನಾರೋಗ್ಯದಿಂದ ಮುಕ್ತವಾಗಿರುವುದಲ್ಲ. ನಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಂಡು, ನಿರಂತರ ಸುಧಾರಣೆ ತರುವುದೇ ಸ್ವಾಸ್ಥ್ಯ ” – ಈ ಉನ್ನತ ಚಿಂತನೆಯ ಆಧಾರದ ಮೇಲೆ ನೂತನವಾಗಿ ಆರಂಭವಾಗಲಿರುವ ‘ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ’ ಡಿಸೆಂಬರ್ ೫ರಂದು ಉದ್ಘಾಟನೆಗೊಳ್ಳಲಿದೆ.
ರಾಜ್ಯದ ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆಗಳಲ್ಲೊAದಾದ ‘ರಾಷ್ಟ್ರೋತ್ಥಾನ ಪರಿಷತ್’ (ಪ್ರಾರಂಭ: ೧೯೬೫) ಇಂದು ‘ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣ’ದ ಗುರಿಯೊಂದಿಗೆ ಸೇವೆ, ಆರೋಗ್ಯ, ಶಿಕ್ಷಣ ಮತ್ತು ಸಾಹಿತ್ಯ ಸಂಬಂಧಿತ ಹತ್ತಾರು ಸಮಾಜಮುಖಿ ಚಟುವಟಿಕೆಗಳ ಮೂಲಕ ರಾಜ್ಯಾದ್ಯಂತ ವ್ಯಾಪಿಸಿದೆ.
ಸೇವೆಯ ಜಗತ್ತನ್ನು ಸ್ವೀಕರಿಸಿರುವ ರಾಷ್ಟ್ರೋತ್ಥಾನ ಪರಿಷತ್ ಕಳೆದ ೩ ದಶಕಗಳಿಂದ ರಕ್ತ ಕೇಂದ್ರ, ‘ಸಂರಕ್ಷಾ’ (ತಲಸ್ಸೆಮಿಯಾ ಮಕ್ಕಳ ಆರೈಕೆ ಕೇಂದ್ರ) ಮುಂತಾದ ಆರೋಗ್ಯಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಮಾಜದ ಎಲ್ಲ ಸ್ತರದ ಜನರಿಗೆ ಗುಣಮಟ್ಟದ ಆರೋಗ್ಯಸೇವೆ ಒದಗಿಸುವ ಕಾಯಕದಲ್ಲಿ ನಿರತವಾಗಿವೆ. ಇದೀಗ ‘ರಾಷ್ಟ್ರೋತ್ಥಾನ ಆಸ್ಪತ್ರೆ’ಯ ಮೂಲಕ ಇನ್ನಷ್ಟು ಜನರಿಗೆ ಆರೋಗ್ಯಸೇವೆಯನ್ನು ಒದಗಿಸುವ ಪ್ರಯತ್ನಕ್ಕೆ ಮುಂದಾಗಿದ್ದೇವೆ.
ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವೃತ್ತಿಪರ ಗುಣಮಟ್ಟದ ಆರೋಗ್ಯಸೇವೆ ನೀಡುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ‘ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ’ವನ್ನು ಪ್ರಾರಂಭಿಸುತ್ತಿದೆ. ಈ ರಾಷ್ಟ್ರೋತ್ಥಾನ ಆಸ್ಪತ್ರೆಯು ಒಂದೇ ಸೂರಿನಡಿ ಆಧುನಿಕ ವೈದ್ಯಪದ್ಧತಿ (ಅಲೋಪತಿ), ಆಯುರ್ವೇದ, ಹೋಮಿಯೋಪತಿ, ಯೋಗ, ನ್ಯಾಚುರೋಪತಿ ಮೊದಲಾದ ಚಿಕಿತ್ಸಾ ಸೌಲಭ್ಯಗಳನ್ನು ಒಳಗೊಂಡಿರುವ ಒಂದು ‘ಸಮಗ್ರ ಚಿಕಿತ್ಸೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯಾಗಿ ಸೇವೆ ಸಲ್ಲಿಸಲಿದೆ.
೧೯೬೫ರಲ್ಲಿ ಪ್ರಾರಂಭಗೊAಡ ರಾಷ್ಟ್ರೋತ್ಥಾನ ಪರಿಷತ್ತನ್ನು ಪ್ರಾರಂಭದ ದಿನಗಳಿಂದಲೂ ಕಟ್ಟಿ ಬೆಳೆಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ಸ್ವರ್ಗೀಯ ಮೈ.ಚ. ಜಯದೇವರ ಹೆಸರಿನಲ್ಲಿ ಈ ಆಸ್ಪತ್ರೆಯು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯಸೇವೆಯನ್ನು ಒದಗಿಸಲಿದೆ.
‘ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ’ದಲ್ಲಿ ಪ್ರಸ್ತುತ ೧೯ ಜನರಲ್ ವಾರ್ಡ್ಗಳು, ೭೨ ಸೆಮಿ ಪ್ರೈವೇಟ್ ವಾರ್ಡ್ಗಳು, ೧೧ ಎಮರ್ಜೆನ್ಸಿ ವಾರ್ಡ್ಗಳು ಹಾಗೂ ೧೭ ಪ್ರೈವೇಟ್ ವಾರ್ಡ್ಗಳು ಸೇರಿದಂತೆ ಒಟ್ಟು ೧೬೦ ಹಾಸಿಗೆಗಳನ್ನು ಹೊಂದಿರುವ ಸಮಗ್ರ ಆಧುನಿಕ ವೈದ್ಯಕೀಯ ಮೂಲಸೌಕರ್ಯಗಳು ಲಭ್ಯವಿದೆ. ಅತ್ಯಾಧುನಿಕ ವೈದ್ಯಕೀಯ ಮೂಲಸೌಕರ್ಯ, ಉತ್ತಮ ತಂತ್ರಜ್ಞಾನ, ತಜ್ಞ ವೈದ್ಯರು ಹಾಗೂ ಸೇವಾಮನೋಭಾವದ ವೈದ್ಯಕೀಯ ಸಿಬ್ಬಂದಿಗಳನ್ನು ಈ ಆಸ್ಪತ್ರೆ ಹೊಂದಿದೆ. ಅಗತ್ಯ ಇರುವವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಆಸ್ಪತ್ರೆಯ ಗುರಿಯಾಗಿದೆ.
ವೈದ್ಯಕೀಯ ಚಿಕಿತ್ಸಾ ವಿಭಾಗಗಳು: ಜನರಲ್ ಮೆಡಿಸಿನ್, ಕಾರ್ಡಿಯಾಲಜಿ, ಆರ್ಥೋಪೆಡಿಕ್ಸ್, ನ್ಯೂರಾಲಜಿ, ಗೈನಕಾಲಜಿ, ಗ್ಯಾಸ್ಟ್ರೋಎಂಟರಾಲಜಿ, ಪೀಡಿಯಾಟ್ರಿಕ್ಸ್, ಆಯುರ್ವೇದ, ಹೋಮಿಯೋಪತಿ, ಯೋಗ ಮತ್ತು ನ್ಯಾಚುರೋಪತಿ.
ಲಭ್ಯ ಸೇವೆಗಳು/ ಸೌಲಭ್ಯಗಳು: ತುರ್ತು ಚಿಕಿತ್ಸಾ ಘಟಕ, ಡಯಾಲಿಸಿಸ್, ಓಟಿ, ಐ.ಸಿ.ಯು., ಡಯಾಗ್ನೋಸ್ಟಿಕ್ ಸೇವೆಗಳು, ಇತ್ಯಾದಿ.
ಇದೇ ಡಿಸೆಂಬರ್ ೫ರ ಸಂಜೆ ೬ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈಸೂರಿನ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜೀಗಳು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಇನ್ಫೋಸಿಸ್ ಫೌಂಡೇಷನ್‌ನ ಸಂಸ್ಥಾಪಕರಾದ ಶ್ರೀಮತಿ ಸುಧಾಮೂರ್ತಿ, ನಾರಾಯಣ ಹೆಲ್ತ್ನ ಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ದಿ. ಶ್ರೀ ಮೈ.ಚ. ಜಯದೇವ ಅವರ ಹೆಸರಿನಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಅವರ ಪರಿಚಯ ಸಮಾಜದ ಅನೇಕ ಜನರಿದೆ.
ಮೈ.ಚ. ಜಯದೇವ ಅವರು ಒಂದು ಉನ್ನತ ಧ್ಯೇಯಕ್ಕೆ ಎಲೆಮರೆಯ ಕಾಯಿಯಂತೆ ದುಡಿದು, ಸಮಾಜಕ್ಕಾಗಿ ಇಡೀ ಜೀವನ ಸಮರ್ಪಿಸಿ, ನಮ್ಮ ನಡುವೆ ಇದ್ದಂತಹ ಸಂತಪುರುಷ, ದಾರ್ಶನಿಕ ಪುರುಷ, ವ್ಯವಸ್ಥಾಕೌಶಲದ ಚಾಣಾಕ್ಷ, ಸಂಘಟನೆಯ ರೂವಾರಿ, ಸಂಸ್ಥೆಗಳ ಶಿಲ್ಪಿ, ಕಾರ್ಯಕರ್ತರ ಆತ್ಮೀಯ ಅಣ್ಣ.
೧೯೩೨ರಲ್ಲಿ ಮೈಸೂರಿನಲ್ಲಿ ಜನಿಸಿದ ಮೈಸೂರು ಚನ್ನಬಸಪ್ಪ ಜಯದೇವ್ (೧೯೩೨-೨೦೧೭) ಅವರು ಕಾಲೇಜು ದಿನಗಳಲ್ಲೇ ರಾಷ್ಟ್ರೀಯ ವಿಚಾರಧಾರೆಗಳಿಂದ ಪ್ರಭಾವಿತರಾಗಿ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ಸ್ವಯಂಸೇವಕರಾದರು. ಆನಂತರದ ೬ ದಶಕಗಳ ಕಾಲ ತಮ್ಮ ಸಂಪೂರ್ಣ ಜೀವನವನ್ನು ಸಂಘಕಾರ್ಯಕ್ಕೆ ಸಮರ್ಪಿಸಿಕೊಂಡರು. ಸಂಘದಲ್ಲಿ ಅಖಿಲ ಭಾರತ ಮಟ್ಟದವರೆಗೆ ವಿವಿಧ ಸ್ತರದ ಜವಾಬ್ದಾರಿಗಳನ್ನು ವಹಿಸಿಕೊಂಡು ಕ್ಲಿಷ್ಟಕರ ಸನ್ನಿವೇಶದಲ್ಲಿ ಸಂಘಕಾರ್ಯವನ್ನು ಮುನ್ನಡೆಸಿ, ಬೆಳೆಸಿದರು. ೧೯೭೫ರ ತುರ್ತುಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಭಾಗವಹಿಸಿ ಬಂಧಿಸಲ್ಪಟ್ಟು, ೧೮ ತಿಂಗಳು ಸೆರೆಮನೆವಾಸವನ್ನೂ ಅನುಭವಿಸಿದ್ದರು.
ಇಂದು ರಾಜ್ಯದ ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆಗಳಲ್ಲೊಂದಾಗಿ ಗುರುತಿಸಿಕೊಂಡಿರುವ ‘ರಾಷ್ಟ್ರೋತ್ಥಾನ ಪರಿಷತ್’ನ್ನು ಆರಂಭದ ದಿನಗಳಿಂದಲೂ ಕಟ್ಟಿ ಬೆಳೆಸಿದವರು ಮೈ.ಚ. ಜಯದೇವ ಅವರು.
ರಾಷ್ಟ್ರೋತ್ಥಾನ ಪರಿಷತ್ ಜೊತೆಗೆ ಹಲವಾರು ಸಾಮಾಜಿಕ ಸಂಘಟನೆಗಳನ್ನು ಕಟ್ಟಿಬೆಳೆಸಿದ ಮೈ.ಚ. ಜಯದೇವರನ್ನು ಈ ರೀತಿಯ ಸಮಾಜಿಕ ‘ಸಂಸ್ಥೆಗಳ ಶಿಲ್ಪಿ’ ಎಂದರೂ ಉತ್ಪ್ರೇಕ್ಷೆಯಲ್ಲ. ಮಿಥಿಕ್ ಸೊಸೈಟಿ, ಅನಾಥ ಶಿಶು ನಿವಾಸ, ಅಬಲಾಶ್ರಮ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ವನವಾಸಿ ಕಲ್ಯಾಣ ಆಶ್ರಮ ಮುಂತಾದ ಅನೇಕ ಸಂಸ್ಥೆಗಳ ಬೆಳವಣಿಗೆಗೆ ಜಯದೇವ ಅವರು ಮಾರ್ಗದರ್ಶಕ ಹಾಗೂ ಪ್ರೇರಕಶಕ್ತಿಯಾಗಿದ್ದರು. ಸಂಸ್ಥೆಗಳನ್ನು ಕಟ್ಟುವುದರ ಜೊತೆಗೆ ಆಯಾ ಸಂಸ್ಥೆಗಳನ್ನು ಮುಂದುವರಿಸಿಕೊಂಡು ಹೋಗುವ ಸಮರ್ಥ ಯುವಪೀಳಿಗೆಯ ತಂಡವನ್ನೂ ರೂಪಿಸಿದವರು ಅವರು.