-ದೀಕ್ಷಿತ್ ನಾಯರ್, ಮಂಡ್ಯ

(ಕನ್ನಡದ ಹೆಸರಾಂತ ಕಾದಂಬರಿಕಾರ ಬಹುಮುಖ ಪ್ರತಿಭೆ ತ.ರಾ.ಸು ಅವರ ಪುಣ್ಯ ಸ್ಮರಣೆಯ ಈ ದಿನದಂದು ಅವರಿಗಾಗಿ ಪ್ರೀತಿಯ ಅಕ್ಷರಾಂಜಲಿ)

ಅಜಮಾಸು 670 ಪುಟಗಳಿದ್ದ ದುರ್ಗಾಸ್ತಮನ ಕಾದಂಬರಿಯನ್ನು ಮೊದಮೊದಲು ಕೈಯಲ್ಲಿ ಹಿಡಿದಾಗ ನಿಜಕ್ಕೂ ಗಾಬರಿಯಾಗಿದ್ದೆ. ಇಷ್ಟೆಲ್ಲ ನನ್ನಿಂದ ಓದಲು ಸಾಧ್ಯವೇ? ಎನಿಸಿತ್ತು. ನಾನು ಆಗಷ್ಟೇ ಪುಸ್ತಕಗಳ ಓದನ್ನು ಪ್ರಾರಂಭಿಸಿದ್ದೆನಾದರಿಂದ (ನನಗಾಗ ಹದಿಮೂರು ವರ್ಷ) ದುರ್ಗಾಸ್ತಮನ ಪುಸ್ತಕದ ಗಾತ್ರವನ್ನು ನೋಡಿ ಕೊಂಚಮಟ್ಟಿಗೆ ಬೆವತಿದ್ದೆ ಕೂಡ. ಆದರೆ ಕಾದಂಬರಿಯ ಮುನ್ನುಡಿಯಲ್ಲಿದ್ದ “ಚಿತ್ರದುರ್ಗದ ಜನರಿಗೆ ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು” ಈ ಪರಿಣಾಮಕಾರಿ ಸಾಲುಗಳು ನನ್ನಲ್ಲಿ ರೋಮಾಂಚನವನ್ನುಂಟು ಮಾಡಿತ್ತು. ಮುಂದೆ ದುರ್ಗದ ಜನರೊಂದಿಗೆ ಭಾವನಾತ್ಮಕ ಬಂಧವನ್ನು ಬೆಸೆದಿದ್ದ ಕೋಟೆಯನ್ನು ವರ್ಷಗಳ ಕಾಲ ರಕ್ಷಿಸಿ ಶೌರ್ಯ ಪರಾಕ್ರಮ ಮೆರೆದ, ಹೈದರಾಲಿಗೆ ದುಃಸ್ವಪ್ನವಾಗಿ ಕಾಡಿದ ವೀರ ಮದಕರಿ ನಾಯಕನ ಸಾಹಸ ಗಾಥೆಗಳನ್ನು ನಿಶಬ್ದವಾಗಿ ಓದುತ್ತಾ ಹೋದೆ. ಅಲ್ಲಲ್ಲಿ ನನ್ನ ದೇಹ ಕಾವೇರಿತು. ನನ್ನ ಎಳೆಯ ಮೈ ರೋಮಗಳು ಎದ್ದು ನಿಂತವು. ಕೆಲವೆಡೆ ಕಣ್ಣೀರಾದೆ. ಮೌನವಾಗಿ ಮರುಗಿದೆ ಕೂಡ. ಕೊನೆಯಲ್ಲಿ ಮದಕರಿ ನಾಯಕನಿಗೆ ಮತ್ತು ಚಿತ್ರದುರ್ಗಕ್ಕೆ ಕುಳಿತಲ್ಲಿಯೇ ಕೈಮುಗಿದೆ. ಉಫ್! ಎಲ್ಲಿಯೂ ಬೇಸರ ತರಿಸದೆ ಆರಾಮವಾಗಿ ಓದಿಸಿಕೊಂಡು ಹೋದ ಮತ್ತು ಒಂದು ರೀತಿಯ ಫಲಪ್ರದ ಅನುಭವವನ್ನು ಕೊಟ್ಟ ದುರ್ಗಾಸ್ತಮನ ಕೃತಿಯನ್ನು ನಾನು ಬದುಕಿನುದ್ದಕ್ಕೂ ಮರೆಯಲಾರೆ. ಅಂದು ನನ್ನಂತಹ ಅತೀ ಕಿರಿಯ ಪ್ರಾಯದವನಿಗೂ ಓದಿನ ರುಚಿ ಹತ್ತಿಸಿ ಬೆರೆಗು ಮೂಡಿಸಿದ ತ.ರಾ. ಸು ಎಂಬ ಅಭಿಜಾತ ಪ್ರತಿಭೆಯ ಲೇಖಕನಿಗೆ ಬಹುಪರಾಕ್.

ಬಹುಶಃ ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ ಎಂದರೆ ಬಹುತೇಕರಿಗೆ ತಿಳಿಯುವುದಿಲ್ಲ. ಅವರು ತ.ರಾ.ಸು ಎಂದೇ ಕನ್ನಡ ಸಾಹಿತ್ಯ ಲೋಕದೊಳಗೆ ಚಿರಪರಿಚಿತರು. ಮೂರ್ನಾಲ್ಕು ದಶಕಗಳ ಕಾಲ ಅರಸನಂತೆಯೇ ಸಿಂಹಾಸನದ ಮೇಲೆ ವಿರಾಜಮಾನರಾಗಿ ಕಾದಂಬರಿ ಲೋಕವನ್ನು ಸಮರ್ಥವಾಗಿ ಆಳಿದವರು. ಅವರು ಒಮ್ಮೆಯೂ ಲೇಖನಿ ಕೊಡವಿದವರಲ್ಲ. “ಉಸ್ಸಪ್ಪಾ ಇಂದಿಗೆ ಬರವಣಿಗೆ ಸಾಕು” ಎಂತಲೂ ಅನ್ನಲಿಲ್ಲ. ಅವರ ಪಾಲಿಗೆ ಬರವಣಿಗೆ ತಪಸ್ಸು ಮತ್ತು ಬತ್ತದ ಹುಮ್ಮಸ್ಸು.

ತ.ರಾ.ಸು ಅವರದ್ದು ಧ್ವನಿ ಪೂರ್ಣ ಭಾಷೆಯ ಮಾಂತ್ರಿಕ ಬರಹ. ತಮ್ಮ ಉತ್ಕಟತೆ ಮತ್ತು ಭಾವ ತೀವ್ರತೆಯ ಸಮ್ಮಿಳಿತದ ಶೈಲಿಯಿಂದಲೇ ಓದುಗರಿಗೆ ತೀರಾ ಹತ್ತಿರವಾಗಿದ್ದವರು. ಎಷ್ಟೋ ಬರಹಗಾರರ ಹುಟ್ಟಿಗೆ ಕಾರಣರಾದವರು. ಆ ಕಾಲಕ್ಕೆ ಒಬ್ಬ ಸ್ಟಾರ್ ಗಿರಿಯ ಕಾದಂಬರಿಕಾರನಾಗಿ ಅಪಾರ ಅಭಿಮಾನಿಗಳನ್ನು ತ.ರಾ.ಸು ಸಂಪಾದಿಸಿದ್ದರು.

ಇಂದು ಅನಾಮತ್ತಾಗಿ ಬಿದ್ದಿರುವ ಕೋಟೆ ಮತ್ತು ಕರ್ರಗೆ ಹೊಳೆಯುತ್ತಿರುವ ಕಲ್ಲುಗಳ ಮೂಲಕವೇ ಅದೆಷ್ಟೋ ವೀರರ ರೋಚಕ ಮತ್ತು ದುರಂತ ಇತಿಹಾಸವನ್ನು ಹೇಳುವ ಚಿತ್ರದುರ್ಗ ತ.ರಾ.ಸು ಅವರ ಮೂಲ ನೆಲೆ. ತ.ರಾ.ಸು ಬಾಲ್ಯದಿಂದಲೂ ಸಾಹಿತ್ಯದ ವಾತಾವರಣದಲ್ಲಿಯೇ ಬೆಳೆದವರು ಮತ್ತು ಸಾಹಿತ್ಯದೊಂದಿಗೆಯೇ ಬೆರೆತವರು. ಇವರ ತಂದೆ ರಾಮಸ್ವಾಮಿ ಸಾಹಿತ್ಯದಲ್ಲಿ ಪಾಂಡಿತ್ಯವನ್ನು ಸಾಧಿಸಿದ್ದವರು. ದೊಡ್ಡಪ್ಪ ಟಿ. ಎಸ್ ವೆಂಕಣ್ಣಯ್ಯ(ಕನ್ನಡದ ಶ್ರೇಷ್ಠ ಕವಿ ಕುವೆಂಪು ಅವರ ಗುರುಗಳು) ಕನ್ನಡದ ವಿದ್ವಾಂಸರಾಗಿ ಅಪಾರ ಹೆಸರುಗಳಿಸಿದ್ದವರು. ಚಿಕ್ಕಪ್ಪ ತ.ಸು ಶಾಮರಾಯರು ಖ್ಯಾತ ವಿಮರ್ಶಕರಾಗಿ ಪ್ರಸಿದ್ಧಿಯಾಗಿದ್ದವರು. ಹಾಗಾಗಿಯೇ ತ.ರಾ.ಸು ಅವರಲ್ಲೂ ಸಾಹಿತ್ಯದ ಬೀಜ ಮೊಳಕೆಯೊಡೆದಿತ್ತು. ಬಹು ಮುಖ್ಯವಾಗಿ ಇವರ ಮನೆಯ ಮಾತೃಭಾಷೆ ತೆಲುಗುವಾದರೂ ಪ್ರತಿಯೊಬ್ಬರು ಅಸ್ಖಲಿತವಾಗಿ ಕನ್ನಡವನ್ನು ಮಾತನಾಡುತ್ತಿದ್ದರು. ಕನ್ನಡವನ್ನು ಭಕ್ತಿ ಭಾವದಿಂದ ಆರಾಧಿಸುತ್ತಿದ್ದರು. ತ. ರಾ.ಸು ಅವರು ಹೇಳುವಂತೆಯೇ ಕನ್ನಡ ಅವರಿಗೆ ಅನ್ನವಿಟ್ಟ ಭಾಷೆ. ಒಲವು ಮತ್ತು ಗೆಲುವು ಕೊಟ್ಟ ಭಾಷೆ.

ಸಾಹಿತ್ಯವನ್ನು ತ.ರಾ.ಸು ಅವರು ಅಪಾರ ಶ್ರದ್ಧೆಯಿಂದಲೇ ಒಲಿಸಿಕೊಂಡು ತೀರಾ ಚಿಕ್ಕ ವಯಸ್ಸಿನಲ್ಲಿಯೇ ಬರವಣಿಗೆಯನ್ನು ಪ್ರಾರಂಭಿಸಿದರು. “ರೂಪಸಿ” ತರಾಸು ಅವರ ಮೊದಲ ಪ್ರಕಟಿತ ಕಥಾ ಸಂಕಲನ. ಮುಂದೆ ತಮ್ಮ ಮೊದಲ “ಮನೆಗೆ ಬಂದ ಮಹಾಲಕ್ಷ್ಮಿ” ಕಾದಂಬರಿಯನ್ನು ಪ್ರಕಟಿಸಿದರು. ಕೃತಿ ಚೌರ್ಯ ಎಂಬ ಪೊಳ್ಳು ಆಪಾದನೆಯನ್ನು ಹೊತ್ತುಕೊಂಡು ನೋವನ್ನುಂಡರು. ಆಗ ಅವರ ಬೆನ್ನಿಗೆ ನಿಂತವರು ಕನ್ನಡದ ಮತ್ತೋರ್ವ ಶ್ರೇಷ್ಠ ಕಾದಂಬರಿಕಾರ ಅ.ನ ಕೃಷ್ಣರಾಯರು. ಕೃಷ್ಣರಾಯರು ತುಂಬಿದ ಭರವಸೆ ಮತ್ತು ಕೊಟ್ಟ ಮಾರ್ಗದರ್ಶನದಿಂದ ತ.ರಾ.ಸು ಮತ್ತೆ ಮೈ ಕೊಡವಿ ದಣಿವರಿಯದಂತೆ ಬರೆದರು. ಅ.ನ.ಕೃ. ಅವರನ್ನು ತಮ್ಮ ಗುರುವಾಗಿ ಸ್ವೀಕರಿಸಿ ಗೌರವಿಸಿದರು. ಗುರುವನ್ನೂ ಮೀರಿದ ಶಿಷ್ಯರಾಗಿ ಬೆಳೆದರು. ತಮ್ಮ ವಿಭಿನ್ನ ಬರಹದ ಕಸುಬುಗಾರಿಕೆಯಿಂದ ತ.ರಾ.ಸು ಸೃಷ್ಟಿಸಿದ್ದು ಬರೋಬ್ಬರಿ 90ಕ್ಕೂ ಹೆಚ್ಚು ಕೃತಿಗಳು. ಪ್ರತಿಯೊಂದು ಕೃತಿಗಳು ಕೂಡ ಗಾಢ ಮತ್ತು ನಿಗೂಢ ಎಂಬುದನ್ನು ಯಾರೊಬ್ಬರೂ ತಳ್ಳಿ ಹಾಕುವಂತಿಲ್ಲ. ಪ್ರೀತಿ, ಪ್ರೇಮ ಮತ್ತು ಅಂದಿನ ಕಾಲಕ್ಕೆ ಸಮಾಜವನ್ನು ಬಾಧಿಸುತ್ತಿದ್ದ ಒಂದಿಷ್ಟು ಸಮಸ್ಯೆಗಳನ್ನೇ ಕಾದಂಬರಿಯ ವಸ್ತುವಾಗಿಸಿಕೊಂಡು ತ.ರಾ.ಸು ಶ್ರೀಸಾಮಾನ್ಯರ ಲೇಖಕರಾಗಿಯೂ ಗುರುತಿಸಿಕೊಂಡಿದ್ದರು. ತ.ರಾ.ಸು ಅವರು ಬರೆದ ಐತಿಹಾಸಿಕ ಕಾದಂಬರಿಗಳು ಅವರಿಗೆ ಹೆಚ್ಚಿನ ಹೆಸರು ತಂದುಕೊಟ್ಟಿತ್ತು ಎಂಬುದು ಕೂಡ ಅಷ್ಟೇ ಸತ್ಯ .

ತ. ರಾ. ಸು ಅವರ ಕುರಿತಾಗಿ ಇನ್ನಷ್ಟು ಮಾಹಿತಿ

ತ.ರಾ. ಸು ಅವರು ಏಪ್ರಿಲ್ 21, 1920 ರಂದು ಚಿತ್ರದುರ್ಗದಲ್ಲಿ ಜನಿಸಿದರು. ಇವರ ತಂದೆ ರಾಮಸ್ವಾಮಯ್ಯ. ತ.ರಾ.ಸು ಹೆಚ್ಚು ಓದಿದವರಲ್ಲ. ತಮ್ಮ ಇಂಟರ್ ಮೀಡಿಯಟ್ ಶಿಕ್ಷಣ ಮುಗಿದೊಡನೆ ಓದಿಗೆ ಕೈಮುಗಿದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ದೇಶದ ಸ್ವತಂತ್ರಕ್ಕಾಗಿ ಸಿಟ್ಟಿಗೆದ್ದು ಮತ್ತು ಸಿಡಿದೆದ್ದು ತ.ರಾ.ಸು ಕೆಲ ಕಾಲ ಸೆರೆಮನೆ ವಾಸವನ್ನೂ ಅನುಭವಿಸಿದ್ದರು. ಮುಂದೆ ಪತ್ರಕರ್ತರಾಗಿ ಕೆಲ ಕಾಲ ದುಡಿದು ತಮ್ಮೊಳಗಿನ ಸಾಹಿತಿಯ ಕೃಪಾಕಟಾಕ್ಷದಿಂದಲೇ ಬದುಕನ್ನು ಕಟ್ಟಿಕೊಂಡರು. ಅಂಬುಜ ಇವರ ಬಾಳ ಸಂಗಾತಿ.
ಅಪಾರ ಶಿಸ್ತು, ಛಲ ಮತ್ತು ನಿಷ್ಠೂರತೆ ಇವರ ಪುರುಷಾರ್ಥಗಳಾಗಿದ್ದವು.

ತ.ರಾ.ಸು ಅವರ ಮಹತ್ವದ ಕೃತಿಗಳು

ಕಂಬನಿಯ ಕುಯಿಲು
ರಕ್ತರಾತ್ರಿ
ಹಂಸಗೀತೆ
ದುರ್ಗಾಸ್ತಮನ
ನಾಗರಹಾವು
ಬೇಡದ ಮಗು
ಮಸಣದ ಹೂವು
ಚಂದನದ ಗೊಂಬೆ
ಚಕ್ರ ತೀರ್ಥ
ಸಾಕು ಮಗಳು
ರಾಜ್ಯ ದಾಹ
ಕಸ್ತೂರಿ ಕಂಕಣ
ವಿಜಯೋತ್ಸವ

ಹೀಗೆ ಈಗಾಗಲೇ ಹೇಳಿದಂತೆ 90ಕ್ಕೂ ಹೆಚ್ಚು ಕೃತಿಗಳನ್ನು ತರಾಸು ರಚಿಸಿದ್ದರು.

ಚಲನಚಿತ್ರವಾದ ತ.ರಾ.ಸು. ಕೃತಿಗಳು

ತರಾಸು ಅವರ ಅದೆಷ್ಟೋ ಅದ್ಭುತ ಕಾದಂಬರಿಗಳು ಸಿನಿಮಾವಾಗಿ ಚಿತ್ರ ರಸಿಕರನ್ನು ಗೆದ್ದಿದೆ. 70ರ ದಶಕದ ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಲನಚಿತ್ರ ತ.ರಾ.ಸು ಅವರ ಕಾದಂಬರಿ ಆಧಾರಿತ. ಅಷ್ಟೇ ಅಲ್ಲ ಗಾಳಿಮಾತು, ಮಸಣದ ಹೂವು(ವೇಶ್ಯೆಯ ಸಮಸ್ಯೆಯ ಕುರಿತಾದ ತ.ರಾ.ಸು ಅವರ ಈ ಕಾದಂಬರಿ ಚಲನಚಿತ್ರವಾಗಿ ಮೂಡಿ ಬಂದ ಮೇಲೆ ಅಂದಿನ ಕಾಲಕ್ಕೆ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು). ಚಂದವಳ್ಳಿಯ ತೋಟ, ಬೆಂಕಿಯ ಬಲೆ, ಹಂಸಗೀತೆ(ಈ ಚಲನಚಿತ್ರ ಕನ್ನಡ ನಾಡಿನಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ಪ್ರಸಾರವಾಗಿ ಜನಪ್ರಿಯತೆಗಳಿಸಿತು). ಬಿಡುಗಡೆಯ ಬೇಡಿ ಸೇರಿದಂತೆ ಇನ್ನು ಹತ್ತಾರು ಸಿನಿಮಾಗಳು ತ.ರಾ. ಸು ಅವರ ಕಾದಂಬರಿಯನ್ನು ಆಧರಿಸಿದೆ.
ತ.ರಾ.ಸು ಅವರು ಸಾಹಿತ್ಯ ಕ್ಷೇತ್ರದಂತೆಯೇ ಚಲನಚಿತ್ರ ಕ್ಷೇತ್ರದಲ್ಲಿಯೂ ಮಿನುಗಿದರು.

ಪ್ರಶಸ್ತಿಗಳು

ತರಾಸು ಅಂತಹ ಅತ್ಯದ್ಭುತ ಕಾದಂಬರಿಕಾರ ಮತ್ತು ಅಸಾಧಾರಣ ಪ್ರತಿಭೆಯನ್ನು ಅಷ್ಟಾಗಿ ಯಾವ ಪ್ರಶಸ್ತಿಗಳು ಅರಸಿಕೊಂಡು ಬರಲಿಲ್ಲ. ತ.ರಾ.ಸು ಪ್ರಶಸ್ತಿಗಳನ್ನು ಬಯಸಿದವರೂ ಅಲ್ಲ. ತಮ್ಮ ಸಮಕಾಲಿನ ಲೇಖಕರಿಗೆ ಪ್ರಶಸ್ತಿಗಳು ಬಂದರೆ ಅಸೂಯೆ ಪಟ್ಟುಕೊಳ್ಳದೆ ಮನಸಾರೆ ಮೆಚ್ಚಿಕೊಂಡು ಶುಭಾಶಯ ತಿಳಿಸುತ್ತಿದ್ದರು. ಅವರ ಪಾಲಿಗೆ ಅಪಾರ ಓದುಗರು ಕೊಟ್ಟ ನಿರ್ವಾಜ್ಯ ಪ್ರೀತಿಯೇ ಎಲ್ಲಾ ಪ್ರಶಸ್ತಿಗಳನ್ನು ಮೀರಿದ್ದಾಗಿತ್ತು. ಆದರೂ ತರಾಸು ಅವರ ಸೃಷ್ಟಿಯ ದುರ್ಗಾಸ್ತಮನ ಕೃತಿಗೆ ಮರಣೋತ್ತರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1985) ಲಭಿಸಿತು.

ಕನ್ನಡವನ್ನು ಉತ್ತುಂಗಕ್ಕೆ ಏರಿಸಿದ ಮೇರು ಲೇಖಕ ತ.ರಾ.ಸು ಏಪ್ರಿಲ್ 10,1984 ರಂದು ನಿಧನರಾದರು.
ಇಂದು ಅವರ ಪುಣ್ಯ ಸ್ಮರಣೆ. ತ.ರಾ.ಸು ಅವರಿಗೆ ಇಲ್ಲಿಂದಲೇ ಕೈ ಮುಗಿಯೋಣ.

ತ.ರಾ.ಸು ಕೃತಿಗಳನ್ನು ಎದ್ದು ಬಿದ್ದು ಓದುವ ಕನ್ನಡ ಪುಸ್ತಕ ಪ್ರೇಮಿಗಳಿಗೆ ಹೃದಯಸ್ಪರ್ಶೀ ನಮನ. ಒಬ್ಬ ಲೇಖಕನ ಕೃತಿಗಳು ಅವನಿಲ್ಲದ ಕಾಲದಲ್ಲಿಯೂ ಓದಿಸಿಕೊಂಡರೆ ಅದಕ್ಕಿಂತ ಸಾರ್ಥಕತೆ ಮತ್ಯಾವುದೂ ಇಲ್ಲ ಎಂದು ಭಾವಿಸಿದ್ದೇನೆ.

ತ.ರಾ.ಸು ನಮ್ಮಲ್ಲಿ ಹುಟ್ಟಿಸಿದ ರೋಮಾಂಚನಕ್ಕೆ, ಓದಿನ ದಾಹ ಹೆಚ್ಚಿಸಿದ ಕಾರಣಕ್ಕೆ, ಅವರು ನಮಗೆ ದಾಟಿಸಿದ ಅರಿವಿಗೆ ಮತ್ತು ನಮ್ಮಲ್ಲಿ ಬಿತ್ತಿದ ಅಕ್ಷರಕ್ಕಾಗಿ ಹೃದ್ಯ ವಂದನೆ.

Leave a Reply

Your email address will not be published.

This site uses Akismet to reduce spam. Learn how your comment data is processed.