ಶ್ರೀನಿವಾಸ ರಾಮಾನುಜನ್ ಅವರು ಭಾರತೀಯ ಗಣಿತಶಾಸ್ತ್ರಜ್ಞರಾಗಿ ಪ್ರಸಿದ್ಧಿ ಹೊಂದಿದವರು. ಗಣಿತದ ವಿವಿಧ ಕ್ಷೇತ್ರಗಳಿಗೆ ಅವರು ನೀಡಿರುವಂತಹ ಕೊಡುಗೆ ಅಪಾರ. ಅವರ ಕೆಲಸಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ ಸಾರ್ವಕಾಲಿಕ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ಶ್ರೀನಿವಾಸ ರಾಮಾನುಜನ್ ಅವರು ಡಿಸೆಂಬರ್ 22, 1887 ರಂದು ತಮಿಳುನಾಡಿನ ಈರೋಡ್ನಲ್ಲಿ ಜನಿಸಿದರು. ಇವರ ತಂದೆ ಕೆ. ಶ್ರೀನಿವಾಸ ಅಯ್ಯಂಗಾರ್, ತಾಯಿ ಕೋಮಲತಮ್ಮಾಳ್. ರಾಮಾನುಜನ್ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮದ್ರಾಸ್ ನಲ್ಲಿ ಮುಗಿಸಿದರು. ಬಾಲ್ಯದಿಂದಲೇ ಅವರು ಗಣಿತದ ಬಗ್ಗೆ ಆಸಕ್ತಿ ಹೊಂದಿದ್ದರಿಂದ ಸ್ನಾತಕೋತ್ತರದಲ್ಲಿ ಗಣಿತ ವಿಷಯವನ್ನು ಅಧ್ಯಯನ ಮಾಡಿದರು. 1900ರಲ್ಲಿ ಅವರು ರೇಖಾಗಣಿತ ಮತ್ತು ಅಂಕಗಣಿತ ಸರಣಿಗಳನ್ನು ಸಂಕ್ಷಿಪ್ತಗೊಳಿಸುವ ಗಣಿತಶಾಸ್ತ್ರದ ಮೇಲೆ ತಮ್ಮದೇ ಆದ ಕೆಲಸವನ್ನು ಪ್ರಾರಂಭಿಸಿದರು. 1911ರಲ್ಲಿ ಜರ್ನಲ್ ಆಫ್ ದಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯಲ್ಲಿ ಬರ್ನೌಲಿ ಸಂಖ್ಯೆಗಳ ಬಗ್ಗೆ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದರು.
1912ರಲ್ಲಿ ರಾಮಾನುಜನ್ ಅವರು ಮದ್ರಾಸ್ ಅಂಚೆ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಗಣಿತಶಾಸ್ತ್ರದ ಸಂಶೋಧನೆಯಲ್ಲೂ ತೊಡಗಿಕೊಂಡಿದ್ದರು. ಈ ಸಮಯದಲ್ಲಿ ಅವರು ಬರೆದಂತಹ ಕೃತಿಗಳನ್ನು ಗಣಿತಜ್ಞರಿಗೆ ಕಳುಹಿಸಿದರು. ಆಗ ಅವರು ಪ್ರಸಿದ್ಧ ಗಣಿತಜ್ಞ ಜಿ.ಎಚ್. ಹಾರ್ಡಿ ಅವರನ್ನು ಭೇಟಿಯಾದರು. 1913ರಲ್ಲಿ ಅವರು ತಮ್ಮ 120 ಪ್ರಮೇಯಗಳನ್ನು ಪ್ರಸಿದ್ಧ ಗಣಿತಜ್ಞ ಜಿ.ಎಚ್. ಹಾರ್ಡಿ ಅವರಿಗೆ ತೋರಿಸಿದರು. ನಂತರ ಜಿ.ಎಚ್. ಹಾರ್ಡಿ ಅವರು ರಾಮಾನುಜನ್ ಅವರ ಕೆಲಸವನ್ನು ವಿಶ್ಲೇಷಿಸಿದರು. ಅಲ್ಲಿಂದ ಅವರು ಜಗತ್ತಿಗೆ ಗಣಿತ ಮೇಧಾವಿಯಾಗಿ ಹೊರಹೊಮ್ಮಿದರು. ಈ ವಿಷಯಗಳ ಆಧಾರದ ಮೇಲೆ ಹೆಚ್ಚು ಕೆಲಸ ಮಾಡಲು ಅವರು ಇಂಗ್ಲೆಂಡಿಗೆ ತೆರಳಿದ್ದರು. ಅಲ್ಲಿ ಅವರು ಹಾರ್ಡಿ ಅವರ ಸಹಾಯದಿಂದ ಸುಮಾರು 32 ಉತ್ತಮ ಲೇಖನಗಳನ್ನು ಪ್ರಕಟಿಸಿದರು.
ರಾಮಾನುಜನ್ ಅವರು ಗಣಿತಜ್ಞ ಜಿ. ಎಚ್. ಹಾರ್ಡಿ ಸಹಯೋಗದಿಂದ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರು. ಕೇಂಬ್ರಿಡ್ಜ್ನಲ್ಲಿದ್ದ ಸಮಯದಲ್ಲಿ ರಾಮಾನುಜನ್ “ಮಾಕ್ ಥೀಟಾ ಫಂಕ್ಷನ್ಸ್” ಎಂದು ಕರೆಯಲ್ಪಡುವ ಹೊಸ ವರ್ಗದ ಸಂಖ್ಯೆಗಳನ್ನು ಒಳಗೊಂಡಂತೆ ಹಲವಾರು ಪ್ರಮುಖ ಆವಿಷ್ಕಾರಗಳನ್ನು ಮಾಡಿದರು. ಹೈಪರ್ಜಿಯೊಮೆಟ್ರಿಕ್ ಸರಣಿಗಾಗಿ ಸುಧಾರಿತ ಸೂತ್ರಗಳನ್ನು ಅಭಿವೃದ್ಧಿಪಡಿಸಿದರು. ಜೊತೆಗೆ ವಿವಿಧ ಸರಣಿಗಳ ನಡುವಿನ ಸಂಬಂಧಗಳನ್ನು ಕಂಡುಹಿಡಿದರು.ರಾಮಾನುಜನ್ ಅವರ ಕೆಲಸವು ಗಣಿತದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದೆ.
ಪ್ರಶಸ್ತಿ
ರಾಮಾನುಜನ್ ಅವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. 1918ರಲ್ಲಿ ರಾಯಲ್ ಸೊಸೈಟಿಯ ಫೆಲೋ ಪ್ರಶಸ್ತಿ ಹಾಗೂ 1918ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನ ಫೆಲೋ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ರಾಮಾನುಜನ್ ಅವರ ಜನ್ಮದಿನದಂದು ಗಣಿತ ದಿನವನ್ನಾಗಿ ಆಚರಿಸಲಾಗುವುದು ಎಂದು 2012ರಲ್ಲಿ ಭಾರತ ಸರ್ಕಾರ ಘೋಷಿಸಿತು.
1919ರಲ್ಲಿ ರಾಮಾನುಜನ್ ಅವರು ಆರೋಗ್ಯದ ಸಮಸ್ಯೆಯಿಂದ ಭಾರತಕ್ಕೆ ವಾಪಸ್ ಆದ ಅವರಿಂದ ಏಪ್ರಿಲ್ 26, 1920 ರಂದು ಅನಾರೋಗ್ಯದ ಸಮಸ್ಯೆಯಿಂದ ತಮ್ಮ 32ನೇ ವಯಸ್ಸಿನಲ್ಲಿ ನಿಧನರಾದರು.