ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮೀಣ ಅಭಿವೃದ್ಧಿಗಾಗಿ ಮಾಡಲಾಗಿರುವ ಮೂರು ಹಂತದ ರಚನೆಯನ್ನು ವ್ಯಾಪಕವಾಗಿ ಪಂಚಾಯತ್ ರಾಜ್ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯ ಪ್ರಾಥಮಿಕ ಗುರಿಯು ದೇಶದ ಹಲವಾರು ಗ್ರಾಮಗಳು, ವಲಯಗಳು ಮತ್ತು ಜಿಲ್ಲೆಗಳ ಸ್ಥಳೀಯ ಸರ್ಕಾರಗಳ ಅಭಿವೃದ್ಧಿಯಾಗಿದೆ. ಸಂವಿಧಾನದ 73ನೇ ತಿದ್ದುಪಡಿ ಕಾಯ್ದೆಯನ್ನು ಏಪ್ರಿಲ್‌ 24, 1993 ರಂದು ಜಾರಿಗೆ ತರಲಾಗಿತ್ತು. ಈ ಕಾರಣಕ್ಕಾಗಿ ಮಹತ್ವದ ದಿನವನ್ನು ಗುರುತಿಸುವ ಸಲುವಾಗಿ ಏಪ್ರಿಲ್‌ 24 ರಂದು ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನವನ್ನಾಗಿ ಆಚರಿಸಲಾಗುತ್ತದೆ.


ಇತಿಹಾಸ

ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಪ್ರಾಚೀನ ಯುಗದಿಂದಲೂ ಅಸ್ತಿತ್ವದಲ್ಲಿದೆ. ಸಂಸ್ಕೃತ ಪದ “ಪಂಚ್” ಎಂದರೆ ಐದು ಮತ್ತು “ಆಯತ್” ಎಂದರೆ ಸಭೆ. ಸಮಕಾಲೀನ ಭಾರತದಲ್ಲಿ ಭಾರತೀಯ ಸಂವಿಧಾನದ 73 ನೇ ತಿದ್ದುಪಡಿ ಕಾಯ್ದೆಯನ್ನು 1992 ರಲ್ಲಿ ಅಂಗೀಕರಿಸಲಾಯಿತು. ನಂತರ ಏಪ್ರಿಲ್‌  24, 1993  ರಂದು ಅದನ್ನು ಜಾರಿಗೆಗೊಳಿಸಲಾಯಿತು. ಈ ಕಾಯ್ದೆಯು ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ (ಪಿಆರ್‌ ಐ) ರಚನೆಗೆ  ಕಾರಣವಾಯಿತು.


ಮೊದಲ ರಾಷ್ಟ್ರೀಯ ಪಂಚಾಯತ್ ರಾಜ್ ದಿನ
2010ರ ಏಪ್ರಿಲ್ 24ರಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊದಲ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸಿದರು. ಭಾರತದಲ್ಲಿ 2.39 ಲಕ್ಷ ಗ್ರಾಮ ಪಂಚಾಯಿತಿಗಳು, 589 ಜಿಲ್ಲಾ ಪಂಚಾಯಿತಿಗಳು ಮತ್ತು 6904 ಬ್ಲಾಕ್ ಪಂಚಾಯಿತಿಗಳು ಸೇರಿದಂತೆ 2.51 ಲಕ್ಷ ಪಂಚಾಯಿತಿಗಳಿವೆ. ಅದರಂತೆ ಭಾರತ ಸರ್ಕಾರವು ರಾಜ್ಯಗಳೊಂದಿಗೆ ಸಮಾಲೋಚಿಸಿ ಪಂಚಾಯತ್ ರಾಜ್ ದಿನವನ್ನು ಆಚರಿಸಲು ನಿರ್ಧರಿಸಿತು.

ಮಹತ್ವ
ಮಹಾತ್ಮ ಗಾಂಧಿಯವರ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಸ್ಥಳೀಯ ಸ್ವಾಯತ್ತತೆಯನ್ನು ಸಮನ್ವಯಗೊಳಿಸುವ ದೃಷ್ಟಿಯಿಂದ ಭಾರತೀಯ ಸರ್ಕಾರಿ ಆಡಳಿತವು ಆಧುನಿಕ ವ್ಯವಸ್ಥೆ ತರಲು ನಿರ್ಧರಿಸಿತು. ಅದರ ಫಲವಾಗಿ ರೂಪುಗೊಂಡಿದ್ದೇ ಪಂಚಾಯತ್ ರಾಜ್. ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸ್ಥಳೀಯ ಸರ್ಕಾರದಲ್ಲಿ ಜನರ ಹೆಚ್ಚಿನ ಭಾಗವಹಿಸುವಿಕೆ ಉದ್ದೇಶವನ್ನು ಹೊಂದಿದೆ.

  1. ಪಂಚಾಯತ್ ರಾಜ್ ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುತ್ತದೆ. ಇದು ಸಮಾಜದ ದುರ್ಬಲ ವರ್ಗಗಳಾದ ಪರಿಶಿಷ್ಟ ಪಂಗಡಗಳು, ಪರಿಶಿಷ್ಟ ಜಾತಿಗಳು, ಇತರ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಒದಗಿಸುತ್ತದೆ.
  2. ವ್ಯವಸ್ಥೆ ನಿರ್ವಹಣೆ: ಗ್ರಾಮ ಪಂಚಾಯತ್ ನೀರಿನ ಮೂಲಗಳು, ಗ್ರಾಮದ ಬಾವಿಗಳು, ಟ್ಯಾಂಕ್ ಗಳು ಮತ್ತು ಪಂಪ್ ಗಳು, ಬೀದಿ ದೀಪಗಳು ಮತ್ತು ಒಳಚರಂಡಿ ವ್ಯವಸ್ಥೆಯನ್ನು ನಿರ್ವಹಿಸುತ್ತದೆ.
  3. ಸಮುದಾಯಗಳ ಸಬಲೀಕರಣ: ಇದು ಗ್ರಾಮಸ್ಥರಿಗೆ ತಮ್ಮ ಕಾಳಜಿಗಳು, ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ನೇರವಾಗಿ ತಮ್ಮ ಚುನಾಯಿತ ಪ್ರತಿನಿಧಿಗಳಿಗೆ ವ್ಯಕ್ತಪಡಿಸಲು ವೇದಿಕೆಯನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುತ್ತದೆ.
  4. ಸ್ಥಳೀಯ ಅಭಿವೃದ್ಧಿಯನ್ನು ಹೆಚ್ಚಿಸುವುದು: ಬಡತನ, ನೈರ್ಮಲ್ಯ ಮತ್ತು ಪರಿಸರ ನಾಶದಂತಹ ಸ್ಥಳೀಯ ಸವಾಲುಗಳನ್ನು ಎದುರಿಸಲು ಸಕ್ರಿಯವಾಗಿ ಕೆಲಸ ಮಾಡಲು ಸಹಾಯ ಮಾಡಲಾಗುತ್ತದೆ.
  5. ನಾವೀನ್ಯತೆಯನ್ನು ಉತ್ತೇಜಿಸುವುದು: ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸೇವೆಗಳನ್ನು ಒದಗಿಸಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ನವೀನ ವಿಧಾನಗಳು ಮತ್ತು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಇದು ಪಿಆರ್‌ ಐಗಳನ್ನು ಪ್ರೋತ್ಸಾಹಿಸುತ್ತದೆ.
  6. ಬದ್ಧತೆಯನ್ನು ನೆನಪಿಸುತ್ತದೆ: ಇದು ಪಂಚಾಯತ್ ರಾಜ್ ಅನ್ನು ಬಲಪಡಿಸುವ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ನೆನಪಿಸುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.