ಡಾ. ವಿಕ್ರಂ ಸಾರಾಭಾಯಿ ಅವರು ಭಾರತದ ಖ್ಯಾತ ಭೌತಶಾಸ್ತ್ರಜ್ಞ, ವಿಜ್ಞಾನಿ , ಉದ್ಯಮಿ , ಸಂಶೋಧಕ ಹಾಗೂ ಇಸ್ರೋ ಸ್ಥಾಪಪನೆಯ ಮೂಲಕ ಭಾರತದ ಬಾಹ್ಯಾಕಾಶ ಸಾಧನೆಗೆ ಮುನ್ನಡಿ ಬರೆದವರು . ಅವರು ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಭಾರತ ಇಂದು ಬಾಹ್ಯಾಕಾಶದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಯ ಹಿಂದಿನ ಶಕ್ತಿ ವಿಕ್ರಮ ಸಾರಾಭಾಯಿ. ಇಂದು ಅವರು ಪುಣ್ಯಸ್ಮರಣೆ.


ಪರಿಚಯ
ವಿಕ್ರಮ್ ಅಂಬಲಾಲ್ ಸಾರಾಭಾಯಿ ಅವರು ಆಗಸ್ಟ್ 12, 1919 ರಂದು ಅಹಮದಾಬಾದ್ನಲ್ಲಿ ಜನಿಸಿದರು. ತಂದೆ ಅಂಬಾಲಾಲ್ ಸಾರಾಭಾಯಿ ಹಾಗೂ ಅವರ ತಾಯಿ ಸರಳಾದೇವಿ. ಚಿಕ್ಕಂದಿನಿಂದಲೇ ವಿಕ್ರಮ್ ಸಾರಾಭಾಯಿ ಚುರುಕು ಬುದ್ಧಿಯ ವಿದ್ಯಾರ್ಥಿಯಾಗಿದ್ದರು.


1940ರ ದಶಕದಲ್ಲಿ ಅವರು ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ನಡೆಸಿದರು. ಅಲ್ಲಿ ಅವರು ನ್ಯಾಚುರಲ್ ಸೈನ್ಸ್ ಅಧ್ಯಯನ ನಡೆಸಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅವರು ಭಾರತಕ್ಕೆ ಮರಳುವಂತಾಯಿತು. ಆದರೆ ಅವರ ಅಧ್ಯಯನದ ಆಸಕ್ತಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಆದ್ದರಿಂದ ಅವರು ಭಾರತದಲ್ಲಿ ಕಾಸ್ಮಿಕ್ ಕಿರಣಗಳ ಕುರಿತ ಸಂಶೋಧನೆ ಆರಂಭಿಸಿದರು. ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ನಲ್ಲಿ ಭೌತಶಾಸ್ತ್ರಜ್ಞ ಸರ್ ಚಂದ್ರಶೇಖರ್ ವೆಂಕಟ ರಾಮನ್ ಅವರ ಮಾರ್ಗದರ್ಶನ ಪಡೆಯುತ್ತಿದ್ದರು.


ಅವರು 1945ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಪದವಿ ಪಡೆದು, “ಕಾಸ್ಮಿಕ್ ರೇ ಇನ್ವೆಸ್ಟಿಗೇಷನ್ಸ್ ಇನ್ ಟ್ರಾಪಿಕಲ್ ಲ್ಯಾಟಿಟ್ಯೂಡ್ಸ್” ಎಂಬ ಮಹಾಪ್ರಬಂಧ ರಚಿಸಿದರು. ಅವರು ಭಾರತಕ್ಕೆ ಮರಳಿದ ನಂತರ ಅಹಮದಾಬಾದ್ನಲ್ಲಿ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ ಆರಂಭಿಸಿದರು.


ವೃತ್ತಿ ಜೀವನ
ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (ಪಿಆರ್ ಎಲ್) 1947ರಲ್ಲಿ ಅವರ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿ ವಿಕ್ರಂ ಸಾರಾಭಾಯಿ ಕಾಸ್ಮಿಕ್ ಕಿರಣಗಳ ಅಧ್ಯಯನ ನಡೆಸುತ್ತಿದ್ದರು. 1947, ನವೆಂಬರ್ 11ರಂದು ಆ ಸಂಸ್ಥೆ ಎಂ ಜಿ ಸೈನ್ಸ್ ಇನ್ಸ್ಟಿಟ್ಯೂಟ್ ಎಂಬ ಹೆಸರಿನಿಂದ ಸ್ಥಾಪಿಸಲ್ಪಟ್ಟಿತು. ಅದು ಕರ್ಮಕ್ಷೇತ್ರ ಎಜುಕೇಶನ್ ಫೌಂಡೇಶನ್ ಮತ್ತು ಅಹಮದಾಬಾದ್ ಎಜುಕೇಶನ್ ಫೌಂಡೇಶನ್ ಜೊತೆ ಸಹಯೋಗ ಹೊಂದಿತ್ತು. ಸಂಸ್ಥೆ ಕಾಸ್ಮಿಕ್ ಕಿರಣಗಳ ಲಕ್ಷಣಗಳು ಮತ್ತು ಮೇಲಿನ ವಾತಾವರಣದ ಕುರಿತು ಸಂಶೋಧನೆ ನಡೆಸಿತ್ತು. ಮುಂದಿನ ದಿನಗಳಲ್ಲಿ ಸಂಶೋಧನಾ ಕೇಂದ್ರ ಸೈದ್ಧಾಂತಿಕ ಭೌತಶಾಸ್ತ್ರ ಮತ್ತು ರೇಡಿಯೋ ಭೌತಶಾಸ್ತ್ರದ ಕುರಿತು ಸಂಶೋಧನೆ ನಡೆಸಿತು. ಇದಕ್ಕಾಗಿ ಅಣುಶಕ್ತಿ ಆಯೋಗ ಅನುದಾನ ಒದಗಿಸಿತ್ತು.


ವಿಕ್ರಂ ಸಾರಾಭಾಯಿ ಅವರ ಸಾಧನೆ
ವಿಕ್ರಂ ಸಾರಾಭಾಯಿ ಆಪರೇಶನ್ಸ್ ರಿಸರ್ಚ್ ಗ್ರೂಪ್ (ಓಆರ್ ಜಿ) ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದ್ದರು. ಅದು ಭಾರತದ ಪ್ರಥಮ ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾಗಿತ್ತು.
ಭೌತಶಾಸ್ತ್ರಜ್ಞ ಆಗಿರುವುದರ ಜೊತೆಗೆ, ಉದ್ಯಮ ಕ್ಷೇತ್ರವೂ ವಿಕ್ರಂ ಸಾರಾಭಾಯಿ ಅವರ ಆಸಕ್ತಿಯ ಕ್ಷೇತ್ರವಾಗಿತ್ತು. ಅವರು ಅಹಮದಾಬಾದ್ ಜವಳಿ ಉದ್ಯಮದ ಸಂಶೋಧನಾ ಸಂಸ್ಥೆಯನ್ನು 1947ರಲ್ಲಿ ಆರಂಭಿಸಿದರು. ಭಾರತದಲ್ಲಿ ನಿರ್ವಹಣಾ ಶಾಸ್ತ್ರದ ಕುರಿತ ಉನ್ನತ ಶಿಕ್ಷಣ ಒದಗಿಸಬೇಕೆಂಬ ಅವರ ಕನಸಿನ ಪರಿಣಾಮವಾಗಿ ವಿಕ್ರಂ ಸಾರಾಭಾಯ್ 1962ರಲ್ಲಿ ಅಹಮದಾಬಾದ್‌ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಥಾಪಿಸಿದರು.
ಅವರು 1962ರಲ್ಲಿ ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ ಸ್ಥಾಪಿಸಲು ಮಹತ್ತರದ ಪಾತ್ರ ವಹಿಸಿದ್ದರು. ಅದೇ ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಿ ರೂಪುಗೊಂಡಿದೆ.


ಸರ್ಕಾರ ಬಾಹ್ಯಾಕಾಶ ಯೋಜನೆಗೆ ಒಪ್ಪಿಗೆ ಸಿಕ್ಕಾಗ ಡಾ. ವಿಕ್ರಮ್ ಸಾರಾಭಾಯಿ ಅವರಿಗೆ ಬೆಂಬಲವಾಗಿ ನಿಂತಿದ್ದು, ಖ್ಯಾತ ಪರಮಾಣು ವಿಜ್ಞಾನಿ ಡಾ. ಹೋಮಿ ಜಹಾಂಗೀರ್ ಬಾಬಾ. ಕೇರಳದ ತಿರುವನಂತಪುರದಲ್ಲಿ 1963 ರಲ್ಲಿ ದೇಶದ ಮೊದಲ ಉಡಾವಣಾ ಕೇಂದ್ರವನ್ನು ಸ್ಥಾಪಿಸಲಾಯಿತು.


ಪ್ರಶಸ್ತಿ
ಡಾ. ವಿಕ್ರಂ ಸಾರಾಭಾಯಿ ಅವರಿಗೆ 1966 ರಲ್ಲಿ ಪದ್ಮಭೂಷಣ ಮತ್ತು 1972 ರಲ್ಲಿ ಮರಣೋತ್ತರವಾಗಿ ಪದ್ಮವಿಭೂಷಣ ನೀಡಲಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.